ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೈದುಂಬಿ ಹರಿಯುತ್ತಿರುವ ವೇದಾವತಿ

ಹೊಸದುರ್ಗ: ನದಿ ವೀಕ್ಷಣೆಗೆ ಹರಿದು ಬಂದ ಜನಸಾಗರ,
Last Updated 18 ಆಗಸ್ಟ್ 2018, 19:30 IST
ಅಕ್ಷರ ಗಾತ್ರ

ಹೊಸದುರ್ಗ: ತಾಲ್ಲೂಕಿನ ಜೀವನಾಡಿ ಕೆಲ್ಲೋಡಿನ ವೇದಾವತಿ ನದಿ ಬ್ಯಾರೇಜ್‌ ಶನಿವಾರ ಸಂಪೂರ್ಣ ತುಂಬಿ ಹರಿಯುತ್ತಿದೆ.

ಚಿಕ್ಕಮಗಳೂರು ಜಿಲ್ಲೆಯ ಐಯ್ಯನಕೆರೆ ಹಾಗೂ ಹಾಸನ ಜಿಲ್ಲೆಯ ಅಣಜಿ ಡ್ಯಾಂ ಭರ್ತಿಯಾಗಿವೆ. ಅಲ್ಲಿನ ಕೋಡಿ ನೀರು ವೇದಾವತಿ ನದಿ ಮಾರ್ಗವಾಗಿ ಭಾರಿ ಪ್ರಮಾಣದಲ್ಲಿ ಹರಿದು ಬರುತ್ತಿದ್ದು, ಇಲ್ಲಿನ ಬ್ಯಾರೇಜ್‌ ಭರ್ತಿಯಾಗಿದೆ. ಇದರಿಂದ ಕಾರೇಹಳ್ಳಿ ಸಮೀಪದ ಮತ್ತೊಂದು ಬ್ಯಾರೇಜ್‌ಗೆ ನೀರು ಹರಿಯುತ್ತಿದೆ.

ಪಟ್ಟಣದ ಜನರ ಕುಡಿಯುವ ನೀರಿನ ಅನುಕೂಲಕ್ಕಾಗಿ ಕೆಲ್ಲೋಡಿನ ಬಳಿ ವೇದಾವತಿಗೆ ಅಡ್ಡಲಾಗಿ ನಿರ್ಮಿಸಿರುವ ಬ್ಯಾರೇಜ್‌ ಭರ್ತಿಯಾಗಿರುವುದನ್ನು ನೋಡಲು ತಾಲ್ಲೂಕಿನ ನಾನಾ ಭಾಗಗಳಿಂದ ಜನರು ಬರುತ್ತಿದ್ದಾರೆ. ಕೆಲವರು ಬಾಗಿನ ಅರ್ಪಿಸಿದರು.

‘ಈ ಬಾರಿ ಮುಂಗಾರು ಮಳೆ ಕೈಕೊಟ್ಟಿದ್ದರಿಂದ ಹನಿ ನೀರಿಲ್ಲದೆ ವೇದಾವತಿ ನದಿ ಒಡಲು ಸಂಪೂರ್ಣ ಬತ್ತಿ ಹೋಗಿತ್ತು. ಇದರಿಂದ ನದಿ ಪಾತ್ರದೆಲ್ಲೆಡೆ ಅಕ್ರಮ ಮರಳುಗಾರಿಕೆ ದಂಧೆ ಅವ್ಯಾಹತವಾಗಿ ನಡೆದಿತ್ತು. ಆದರೆ ನೆರೆಯ ಜಿಲ್ಲೆ ವ್ಯಾಪ್ತಿಯಲ್ಲಿ ಸುರಿದ ಮಳೆಯಿಂದ ವೇದಾವತಿ ತನ್ನ ಒಡಲಿನಲ್ಲಿ ನೀರು ತುಂಬಿಕೊಂಡಿದೆ. ಇದರಿಂದ ಅಂತರ್ಜಲ ವೃದ್ಧಿಯಾಗಿ ಕೊಳವೆ ಬಾವಿಗಳಲ್ಲಿ ನೀರು ಸಂಗ್ರಹವಾಗುತ್ತದೆ’ ಎನ್ನುತ್ತಾರೆ ಕೆಲ್ಲೋಡು ಮಂಜುನಾಥ್‌, ಬಸವರಾಜು.

ಈ ಬಾರಿಯೂ ಬರಗಾಲದ ಭೀತಿ ಎದುರಿಸುತ್ತಿದ್ದ ತಾಲ್ಲೂಕಿನ ಜನರಿಗೆ ಶ್ರಾವಣ ಮಾಸ ಆರಂಭವಾಗುತ್ತಿದ್ದಂತೆ, ವೇದಾವತಿ ನದಿ ಪಾತ್ರದ ಕೊರಟಿಕೆರೆ, ಕಂಗುವಳ್ಳಿ, ಬಲ್ಲಾಳಸಮುದ್ರ, ಕರ್ಲಮಾವಿನಹಳ್ಳಿ ಬಳಿಯ ಚೆಕ್‌ ಡ್ಯಾಂ, ಬ್ಯಾರೇಜ್‌ ಕಂ ಬ್ರಿಡ್ಜ್‌ ಭರ್ತಿಯಾಗಿ ಹರಿಯುತ್ತಿರುವುದು ಹರ್ಷವನ್ನುಂಟು ಮಾಡಿದೆ. ಪಟ್ಟಣದ ಜನರಿಗೆ ಕಳೆದ ಒಂದು ವರ್ಷದಿಂದ ತಲೆನೋವಾಗಿ ಪರಿಣಮಿಸಿದ್ದ ಕುಡಿಯುವ ನೀರಿನ ಸಮಸ್ಯೆ ನಿವಾರಣೆಗೆ ಕೆಲ್ಲೋಡಿನ ಬ್ಯಾರೇಜ್‌ ಭರ್ತಿಯಾಗಿರುವುದು ಸಹಕಾರಿಯಾಗಿದೆ.

ಈಗಲಾದರೂ ಪುರಸಭೆ ಆಡಳಿತ ನೀರು ಪೋಲಾಗುವುದನ್ನು ತಡೆಗಟ್ಟಿ, ನಲ್ಲಿಗಳಿಗೆ ಸಮರ್ಪಕವಾಗಿ ನೀರು ಪೂರೈಸಲು ಕ್ರಮ ಕೈಗೊಳ್ಳಬೇಕು ಎಂದು ಮಂಜುನಾಥ್‌, ಬಸವರಾಜು ಒತ್ತಾಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT