ಸೋಮವಾರ, 20 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಾಯಕನಹಟ್ಟಿ: ವಿಜಯ ವೀರಭದ್ರಸ್ವಾಮಿ ರಥೋತ್ಸವ

Published 23 ಏಪ್ರಿಲ್ 2024, 14:34 IST
Last Updated 23 ಏಪ್ರಿಲ್ 2024, 14:34 IST
ಅಕ್ಷರ ಗಾತ್ರ

ನಾಯಕನಹಟ್ಟಿ: ಪಟ್ಟಣದ ಪುರಾತನ ವಿಜಯ ವೀರಭದ್ರಸ್ವಾಮಿ ದೇವರ ವಾರ್ಷಿಕ ಜಾತ್ರಾ ಮಹೋತ್ಸವ ಮಂಗಳವಾರ ಶಾಸ್ತ್ರ ಸಂಪ್ರದಾಯದಂತೆ ಅದ್ದೂರಿಯಾಗಿ ನೆರವೇರಿತು.

ಮಂಗಳವಾರ ಸಕಲ ಪೂಜಾ ವಿಧಿವಿಧಾನಗಳ ಮೂಲಕ ವಿಜಯ ವೀರಭದ್ರಸ್ವಾಮಿ ದೇವರ ಜಾತ್ರೆಗೆ ಸಿದ್ಧತೆ ಕೈಗೊಳ್ಳಲಾಗಿತ್ತು. ಸಂಜೆ 4 ಗಂಟೆಗೆ ಜಾತ್ರೆಗಾಗಿ ರಥವನ್ನು ಸಿಂಗರಿಸಿ ಶಾಸ್ತ್ರೋಕ್ತವಾಗಿ ದೇವರ ಉತ್ಸವ ಮೂರ್ತಿಯನ್ನು ಪ್ರತಿಷ್ಠಾಪಿಸಲಾಯಿತು. ನಂತರ ಮುಕ್ತಿಬಾವುಟ ಹರಾಜು ಪ್ರಕ್ರಿಯೆಯಲ್ಲಿ ಮನುಮೈನಹಟ್ಟಿ ಗ್ರಾಮದ ಮಂಜುನಾಥ ಅವರು ₹ 20,200ಕ್ಕೆ ಮುಕ್ತಿಬಾವುಟವನ್ನು ತಮ್ಮದಾಗಿಸಿಕೊಂಡರು.

ನಂತರ ಮಹಾಮಂಗಳಾರತಿ ಕಾರ್ಯ ನೆರವೇರಿಸಿ ರಥವನ್ನು ಎಳೆಯಲಾಯಿತು. ರಥೋತ್ಸವದಲ್ಲಿ ಸಾಂಪ್ರದಾಯಿಕ ವಾದ್ಯಗಳು, ವೀರಗಾಸೆ ಕುಣಿತ ನೋಡುಗರ ಕಣ್ಮನ ಸೆಳೆಯಿತು. ಸಂಜೆ 7ಕ್ಕೆ ರಥವನ್ನು ದೇವಾಲಯದ ಬಳಿ ತಂದು ನಂತರ ದೇವರನ್ನು ಗುಡಿದುಂಬಿಸಲಾಯಿತು.

ದೇವಾಲಯದ ಇತಿಹಾಸ: ನಾಯಕನಹಟ್ಟಿ ನಿರ್ಮಾತೃ ಹಟ್ಟಿಮಲ್ಲಪ್ಪನಾಯಕ ದೊರೆಯು ಆನೆಗೊಂದಿಯ ನರಪತಿ ದೊರೆಯ ಆಸ್ಥಾನದಲ್ಲಿ ರಾಮಜಟ್ಟಿ, ಭೀಮಜಟ್ಟಿ ಎಂಬ ಜಗಜಟ್ಟಿಗಳೊಂದಿಗೆ ಮಲ್ಲಯುದ್ಧದಲ್ಲಿ ಹೋರಾಡಿ ಅವರನ್ನು ಸೋಲಿಸಿದನು. ಆಗ ನರಪತಿ ದೊರೆಯು ಹಟ್ಟಿಮಲ್ಲಪ್ಪನಾಯಕರಿಗೆ ನಾಯಕನಹಟ್ಟಿಯನ್ನು ಕಟ್ಟುವ ಮೊದಲು ವಿಜಯ ವೀರಭದ್ರಸ್ವಾಮಿಯ ದೇವಾಲಯವನ್ನು ನಿರ್ಮಿಸಿ ನಂತರ ಹಟ್ಟಿಯನ್ನು ಕಟ್ಟಬೇಕು. ಮುಂಬರುವ ದಿನಗಳಲ್ಲಿ ವಿಜಯಶಾಲಿಯಾಗುತ್ತೀಯ ಎಂದು ಆಜ್ಞೆ ಹೊರಡಿಸುತ್ತಾರೆ. ಅದರ ಸವಿನೆನಪಿಗಾಗಿ ವಿಜಯನಗರದ ಅರಸರು ವೀರಭದ್ರಸ್ವಾಮಿಯ 5 ಅಡಿ ವಿಗ್ರಹವನ್ನು ಕೊಡುಗೆಯಾಗಿ ನೀಡಿ ಗ್ರಾಮದಲ್ಲಿ ಪ್ರತಿಷ್ಠಾಪಿಸುವಂತೆ ಹೇಳುತ್ತಾರೆ.

ಅಂದಿನಿಂದ ವಿಜಯ ವೀರಭದ್ರಸ್ವಾಮಿ ಪಟ್ಟಣದ ಆರಾಧ್ಯ ದೈವವಾಗುತ್ತದೆ. ಪ್ರತಿ ವರ್ಷ ಹಂಪಿ ಹುಣ್ಣಿಮೆಯ ದಿನ ಪಟ್ಟಣದಲ್ಲಿ ವಿಜಯ ವೀರಭದ್ರಸ್ವಾಮಿ ಉತ್ಸವ ಆಚರಿಸಲಾಗುವುದು. ಅಂದಿನಿಂದ ವಿಜಯ ವೀರಭದ್ರಸ್ವಾಮಿಯು ಶಕ್ತಿಯುತ ದೇವರು ಎಂಬ ಪ್ರತೀತಿ ಇದೆ. ನಿತ್ಯ ದೇವಾಲಯದಲ್ಲಿ ವಿಶೇಷ ಪೂಜೆಗಳು ಜರುಗುತ್ತವೆ. ಪ್ರತಿ ತಿಂಗಳೂ ಆಶ್ಲೇಷಬಲಿ ಪೂಜೆ ಪ್ರಸಿದ್ಧಿಯಾಗಿದ್ದು, ಸುತ್ತಮುತ್ತಲ ಭಕ್ತರನ್ನು ಆಕರ್ಷಿಸಿದೆ.

ರಥೋತ್ಸವದ ನಿಮಿತ್ತ 20 ಅಡಿ ಎತ್ತರದ ರಥವನ್ನು ವಿವಿಧ ಬಣ್ಣದ ಹೂವುಗಳಿಂದ ಅಲಂಕರಿಸಲಾಗಿತ್ತು. ಕನಕಾಂಬರ, ಮಲ್ಲಿಗೆ, ಸೇವಂತಿ ಸೇರಿ ವಿವಿಧ ಹೂವುಗಳ ಉತ್ಸವಮೂರ್ತಿ ಅಲಂಕಾರ ಗಮನ ಸೆಳೆಯಿತು. ದೇವಾಲಯದ ಅರ್ಚಕ ಬಸವರಾಜ್ ಉತ್ಸವಮೂರ್ತಿಯನ್ನು ವಿಶೇಷ ಪೂಜೆಯೊಂದಿಗೆ ರಥದಲ್ಲಿ ಪ್ರತಿಷ್ಠಾಪಿಸಿದರು. ದೇವಾಲಯವನ್ನು ವಿಶೇಷವಾಗಿ ಅಲಂಕರಿಸಲಾಗಿತ್ತು.

ರಥವನ್ನು ಉತ್ಸವ ಬೀದಿಯಲ್ಲಿ ಎಳೆಯಲಾಯಿತು. ಚಿಕ್ಕಮಗಳೂರಿನ ವೀರಗಾಸೆ ತಂಡ ವೀರಭದ್ರನ ಒಡಪುಗಳನ್ನು ಪ್ರದರ್ಶಿಸಿದರು. ರಥೋತ್ಸವದ ನಂತರ ಭಕ್ತರಿಗೆ ಪ್ರಸಾದ ವಿತರಿಸಲಾಯಿತು.

ಉತ್ಸವದಲ್ಲಿ ಡಾ.ವಿಜಯ್‌ಕುಮಾರ್, ಎಂಜಿನಿಯರ್ ಎಂ.ಟಿ.ವಿಜಯ್‌ಕುಮಾರ್, ಪಟ್ಟಣ ಪಂಚಾಯಿತಿ ಸದಸ್ಯ ಜೆ.ಆರ್.ರವಿಕುಮಾರ್, ಗ್ರಾಮಸ್ಥರಾದ ವಿ.ತಿಪ್ಪೇಸ್ವಾಮಿ, ಎಸ್.ಸತೀಶ್, ವಕೀಲ ಕೆ.ಎಂ.ನಾಗರಾಜ್, ಮಹೇಶ್ವರಪ್ಪ, ಎಂ.ವೈ.ಟಿ.ಸ್ವಾಮಿ, ಕೆ.ಎಂ.ಭರತ್, ಕೆ.ಟಿ.ನಾಗರಾಜ್, ಎಸ್.ಚಂದ್ರಶೇಖರಪ್ಪ, ಎಚ್.ಶಿವಕುಮಾರ್ ಭಂಡಾರಿ, ಭೋಗೇಶ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT