ಸೋಮವಾರ, ಏಪ್ರಿಲ್ 6, 2020
19 °C

ಕಾಡುಗೊಲ್ಲರ ಗಣೆ ಸಂಸ್ಕೃತಿಯ ಪ್ರಚಾರಕ ವೀರಣ್ಣ

ವಿ.ವೀರಣ್ಣ ಧರ್ಮಪುರ Updated:

ಅಕ್ಷರ ಗಾತ್ರ : | |

Prajavani

ಧರ್ಮಪುರ: ಶ್ರೀಕೃಷ್ಣನಿಗೆ ಪಾಂಚಜನ್ಯ ಎಷ್ಟು ಮುಖ್ಯವೋ ಬುಡಕಟ್ಟು ಜನಾಂಗದ ಕಾಡುಗೊಲ್ಲರಿಗೆ ಗಣೆಯೂ ಅಷ್ಟೇ ಮುಖ್ಯ. ದೈವೀ ಶಕ್ತಿಯ ಪ್ರತಿರೂಪ ಎಂದು ನಂಬಿರುವ ಕಾಡುಗೊಲ್ಲರು ಕರಿಯ ಕಂಬಳಿ ಹೊದ್ದು ಗದ್ದುಗೆ ಮೇಲೆ ಗಣೆಯನ್ನು ಇಟ್ಟು ಪೂಜಿಸಿದರೆ ಎಲ್ಲಾ ಸಾಂಸ್ಕೃತಿಕ ವೀರರು ಗಣೆಯನ್ನು ಪ್ರತಿನಿಧಿಸುತ್ತಾರೆ ಎಂಬ ನಂಬಿಕೆ ಇದೆ.

ಸಾಂಸ್ಕೃತಿಕ ನೆಲಗಟ್ಟಿನ ಮೇಲೆ ಬದುಕು ಸಾಗಿಸುತ್ತಿರುವ ಕಾಡುಗೊಲ್ಲ ಸಮುದಾಯ ವಾಸಿಸುತ್ತಿರುವ ಹಟ್ಟಿಗಳು ಇಂದಿಗೂ ಜನಪದ ಕಲೆಗಳ ಮಹಾ ಕಣಜಗಳು. ಜನಪದ ಕಲೆಗಳು ನಶಿಸುತ್ತಿರುವ ಇಂದಿನ ದಿನಗಳಲ್ಲಿ ಗಣೆ ನುಡಿಸುತ್ತಾ, ಸಂಸ್ಕೃತಿಯನ್ನು ಪಸರಿಸುತ್ತಿರುವ ಸಮೀಪದ ವೇಣುಕಲ್ಲುಗುಡ್ಡ ಗ್ರಾಮದ ಯತ್ತಪ್ಪ ದೇವರ ಪೂಜಾರಿ ವೀರಣ್ಣ ಎಲ್ಲರಿಗೂ ಮಾದರಿ. ಯುವಪೀಳಿಗೆಗೆ ಪಾರಂಪರಿಕ ಕಲೆಯನ್ನು ತಿಳಿಸಿಕೊಡುವತ್ತ ಶ್ರಮಿಸುತ್ತಿದ್ದಾರೆ. ಜಾತ್ರೆ, ಉತ್ಸವಗಳಲ್ಲಿ ಯಾವುದೇ ಫಲಾಪೇಕ್ಷೆ ಇಲ್ಲದೆ ಗಣೆ ನುಡಿಸುತ್ತಾ ಜನಪದ ಕಲೆ ಉಳಿಸುವಲ್ಲಿ ತಮ್ಮದೇ ರೀತಿಯಲ್ಲಿ ಶ್ರಮಿಸುತ್ತಿದ್ದಾರೆ. ತಮ್ಮ ಅನುಭವ ಕುರಿತು ‘ಪ್ರಜಾವಾಣಿ’ ಯೊಂದಿಗೆ ಮಾತನಾಡಿದ್ದಾರೆ.

* ಗಣೆ ಊದುಲು ಮೊದಲು ನಿಮಗೆ ಆಸಕ್ತಿ ಬೆಳೆದಿದ್ದು ಹೇಗೆ?

ಮೂರನೇ ತರಗತಿಗೇ ತಂದೆ ನನ್ನನ್ನು ಶಾಲೆ ಬಿಡಿಸಿದರು. ಇದರಿಂದ ಹೆಚ್ಚಿನ ವಿದ್ಯಾಭ್ಯಾಸ ಪಡೆಯಲು ಆಗಲಿಲ್ಲ. ನಾನು ಚಿಕ್ಕವನಿದ್ದಾಗಲೇ ಕುರಿ, ಮೇಕೆ ಕಾಯಲು ಹೋಗುತ್ತಿದ್ದೆ. ಆಗ ಕೊಳಲು ನುಡಿಸಲು ಆರಂಭಿಸಿದೆ. ನಮ್ಮ ಊರಿನ ಹಿರಿಯರಾದ ಗಣೆ ಈರಜ್ಜ ಮತ್ತು ಚಿತ್ತಪ್ಪ ಅವರು ನಮ್ಮೂರಿನ ದೇವರಾದ ಯತ್ತಪ್ಪ, ಚಿತ್ರಲಿಂಗ, ಕದ್ರಿ ನರಸಿಂಹಸ್ವಾಮಿ ದೇವಸ್ಥಾನದ ಹತ್ತಿರ ಗಣೆ ಊದಿ ಜನರ ಕಷ್ಟಗಳಿಗೆ ಸ್ಪಂದಿಸುತ್ತಿದ್ದುದು ನನ್ನನ್ನು ಇದರತ್ತ ಬರುವಂತೆ ಪ್ರೇರೇಪಿಸಿತು.

* ಗಣೆಯಿಂದ ನಿಮಗಾದ ಅನುಭವ?

ನಾನು 20 ವರ್ಷ ವಯಸ್ಸಿನವನಿದ್ದಾಗ ಗಣೆ ಊದಲು ಪ್ರಾರಂಭಿಸಿದೆ. ಯತ್ತಪ್ಪ ದೇವಸ್ಥಾನದ ಹತ್ತಿರ ಊದಲು ಆರಂಭಿಸಿದಾಗ ದೈವಿ ಪ್ರಭಾವವಾಯಿತು. ಈಗ ನನಗೆ 62 ವರ್ಷ. 40 ವರ್ಷಗಳಿಂದ ಜಾತ್ರೆ, ಹಬ್ಬ, ಉತ್ಸವಗಳಲ್ಲಿ ಗಣೆ ಊದುತ್ತಿದ್ದೇನೆ. ಮಕ್ಕಳಿಗೆ ಬರುವ ಬಾಲಗ್ರಹ, ಕೊಳವೆಬಾವಿ ಕೊರೆಸಲು ನೀರಿನ ಪಾಯಿಂಟ್ ಸೇರಿ ನನ್ನಿಂದ ಆಗುವ ಕಾರ್ಯ ಮಾಡುತ್ತೇನೆ. ಈ ಮೂಲಕ ಜನರಿಗೆ ಕೈಲಾದಷ್ಟು ಸಹಾಯ ಮಾಡುತ್ತಾ ಬಂದಿದ್ದೇನೆ.

* ಗಣೆ ಊದಲು ನೀವು ಎಲ್ಲೆಲ್ಲಿಗೆ ಹೋಗುತ್ತೀರಿ?

ಯತ್ತಪ್ಪ ದೇವರಿಗೆ ನನ್ನನ್ನು ಪಟ್ಟದ ಪೂಜಾರಿ ಮಾಡಿದ ಮೇಲೆ ನಿರಂತರವಾಗಿ ದೇವಸ್ಥಾನಗಳಲ್ಲಿ ಗಣೆ ಊದಿಕೊಂಡು ಬಂದಿದ್ದೇನೆ. ಕಾಡುಗೊಲ್ಲರ ಸಾಂಸ್ಕೃತಿಕ ವೀರರಾದ ಜುಂಜಪ್ಪ, ಯತ್ತಪ್ಪ, ಕರಡಿ ಬುಳ್ಳಪ್ಪ ಅವರ ಕಾವ್ಯಗಳನ್ನು ಹಾಡುವಾಗ ಹಿಮ್ಮೇಳವಾಗಿ ಗಣೆ ಊದುತ್ತೇನೆ. ಶಿರಾ, ಹಿರಿಯೂರು, ಚಳ್ಳಕೆರೆ ಮೊದಲಾದ ಭಾಗಗಳಲ್ಲಿರುವ ಜುಂಜಪ್ಪನ ಉತ್ಸವ ಮತ್ತು ಜಾತ್ರೆಗಳನ್ನು ಸುತ್ತಿ ಬಂದಿದ್ದೇನೆ.

* ಗಣೆ ಊದುವ ಸಂಸ್ಕೃತಿಯ ಬಗ್ಗೆ ಈಗಿನ ಯುವಕರ ಮನಸ್ಥಿತಿ ಬಗ್ಗೆ ನಿಮ್ಮ ಅಭಿಪ್ರಾಯ?

ನಮ್ಮ ಪೂರ್ವಜರ ಕಾಲದಿಂದಲೂ ಗಣೆ ದೈವೀ ಶಕ್ತಿಯ ಪ್ರತಿರೂಪವಾಗಿದೆ. ಆದರೆ, ಇತ್ತೀಚಿನ ದಿನಗಳಲ್ಲಿ ಆಧುನಿಕತೆಯ ಸೋಗಿನಲ್ಲಿ ನಮ್ಮ ಸಂಸ್ಕೃತಿ ಮರೆಯುತ್ತಿದ್ದಾರೆ. ಯುವಕರಲ್ಲಿ ಗಣೆ ಬಗ್ಗೆ ನಿರಾಸಕ್ತಿ ಇದೆ. ಮೊಬೈಲ್ ಬಳಕೆಯಿಂದ ಎಲ್ಲವನ್ನು ಮರೆಯುತ್ತಿದ್ದಾರೆ. ನಮ್ಮ ಜನಪದ ಸಂಸ್ಕೃತಿ ಮುಂದಿನ ಪೀಳಿಗೆಗೆ ಮರೀಚಿಕೆಯಾಗಬಹುದು. ಯುವಕರು ಗ್ರಾಮೀಣ ಕಲೆ, ಸಾಧನಗಳ ಬಗ್ಗೆ ಆಸಕ್ತಿ ಬೆಳೆಸಿಕೊಂಡು ತಾವೂ ಬೆಳೆಯಬೇಕು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು