ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಬಿಸಿಲ ಜತೆ ಸ್ಪರ್ಧೆಗೆ ಬಿದ್ದ ಸೊಪ್ಪು ತರಕಾರಿ

ಗ್ರಾಹಕರ ಜೇಬಿಗೆ ತಟ್ಟಿದ ಬೆಲೆ ಏರಿಕೆ ಬಿಸಿ; ಪೂರೈಕೆ ಕುಸಿತ
ಕೆ.ಪಿ.ಓಂಕಾರ ಮೂರ್ತಿ
Published 3 ಮೇ 2024, 6:39 IST
Last Updated 3 ಮೇ 2024, 6:39 IST
ಅಕ್ಷರ ಗಾತ್ರ

ಚಿತ್ರದುರ್ಗ: ದಿನದಿಂದ ದಿನಕ್ಕೆ ಬಿಸಿಲಿನ ತೀವ್ರತೆ ಹೆಚ್ಚಾಗುತ್ತಿದ್ದರೆ ಇತ್ತ ತಾಪಮಾನದ ಜತೆಗೆ ಸ್ಪರ್ಧೆಗೆ ಬಿದ್ದಂತೆ ಗ್ರಾಹಕರ ಜೇಬಿಗೆ ಬಿಸಿ ಮುಟ್ಟಿಸುವ ಹಾದಿ ತುಳಿದಿದೆ ಸೊಪ್ಪು, ತರಕಾರಿ ಬೆಲೆ. ಒಂದು ಹಂತಕ್ಕೆ ಸೂರ್ಯನ ಝಳ ತಡೆದುಕೊಂಡರೂ ಬೆಲೆ ಏರಿಕೆಗೆ ಸುಸ್ತಾಗುವ ಸ್ಥಿತಿ ಎದುರಾಗಿದೆ.

ಮಳೆ ಕೊರತೆಯಿಂದಾಗಿ ಸೊಪ್ಪು, ತರಕಾರಿ ಬೆಳೆಯುವ ಪ್ರಮಾಣವೂ ಕಡಿಮೆಯಾಗುತ್ತಿದೆ. ಬೆಳೆದವರಿಗೆ ಸರಿಯಾದ ಇಳುವರಿ ಸಿಗದ ಕಾರಣ, ಮಾರುಕಟ್ಟೆಗೆ ಪೂರೈಕೆಯಾಗುತ್ತಿರುವ ಪ್ರಮಾಣದಲ್ಲೂ ವ್ಯತ್ಯಯ ಉಂಟಾಗಿದೆ. ಪರಿಣಾಮವಾಗಿ ತರಕಾರಿ ಮತ್ತು ಸೊಪ್ಪಿನ ಬೆಲೆ ಹೆಚ್ಚಾಗಿದೆ.

ಕಳೆದ ಕೆಲ ದಿನಗಳ ಹಿಂದೆ ಕೆಲವು ಭಾಗಗಳಲ್ಲಿ ಮಳೆಯಾಗಿದ್ದರೂ  ಬಿಸಿಲಿನ ತೀವ್ರತೆ ಕಡಿಮೆಯಾಗಿಲ್ಲ. ಕೊಳವೆ ಬಾವಿಗಳು ಸರಣಿಯೋಪಾದಿಯಲ್ಲಿ ಸ್ಥಗಿತವಾಗುತ್ತಿವೆ. ಇದರಿಂದ ನೀರಿನ ಕೊರತೆ ಮುಂದುವರಿದಿದೆ. ಮಾರುಕಟ್ಟೆಯ ಬೇಡಿಕೆಗೆ ತಕ್ಕಂತೆ ತರಕಾರಿ ಪೂರೈಕೆಯಾಗುತ್ತಿಲ್ಲ. ಬೇಡಿಕೆ ಹೆಚ್ಚಾದ ಕಾರಣ ಸಹಜವಾಗಿ ಕೆಲ ತರಕಾರಿಗಳ ಬೆಲೆಯಲ್ಲಿ ಏರಿಕೆಯಾಗಿದೆ.

ನಗರದ ಸಂತೆಹೊಂಡ, ಖಾಸಗಿ ಬಸ್‌ ನಿಲ್ದಾಣ ಸಮೀಪದ ಸಂತೆ ಮಾರುಕಟ್ಟೆ, ತ್ಯಾಗರಾಜ ಬೀದಿಯ ಸಣ್ಣ ಮಾರುಕಟ್ಟೆಯಲ್ಲಿ ಹೆಚ್ಚಿನ ತರಕಾರಿ, ಸೊಪ್ಪು ಮಾರಾಟ ಮಾಡಲಾಗುತ್ತದೆ. ಇದರ ಜತೆ ಜೋಗಿಮಟ್ಟಿ ರಸ್ತೆ, ಚಳ್ಳಕೆರೆ ಟೋಲ್‌ ಗೇಟ್‌, ತಿಪ್ಪಜ್ಜಿ ಸರ್ಕಲ್‌, ತುರವನೂರು ರಸ್ತೆಯ ಬ್ಯಾಂಕ್‌ ಕಾಲೊನಿ, ಮೇದೆಹಳ್ಳಿ ರಸ್ತೆ, ದಾರುಕ ಬಡಾವಣೆ, ಐಯುಡಿಪಿ ಲೇಔಟ್‌, ಹೊಳಲ್ಕೆರೆ ರಸ್ತೆ, ಭೀಮಸಮುದ್ರ ರಸ್ತೆ, ಕೆಎಸ್‌ಆರ್‌ಟಿಸಿ ಬಡಾವಣೆ, ಚಿಕ್ಕಪೇಟೆ, ಬುರುಜನಹಟ್ಟಿ, ಜೆಸಿಆರ್‌ ವೃತ್ತ, ಉಮಾಪತಿ ಕಲ್ಯಾಣ ಮಂಟಪ ಸಮೀಪ, ಹಳೆ ವೈಶಾಲಿ ಮುಂಭಾಗ ಹೀಗೆ ಪ್ರತಿ ಬಡಾವಣೆಗಳಲ್ಲಿ ಹೆಜ್ಜೆಗೊಬ್ಬರು ತರಕಾರಿ ಮಾರಾಟಗಾರರಿದ್ದಾರೆ. ಆದರೆ ಮುಖ್ಯ ಮಾರುಕಟ್ಟೆಗೆ ಹೋಲಿಕೆ ಮಾಡಿದರೆ ಈ ಸ್ಥಳಗಳಲ್ಲಿ ಕೆಜಿಗೆ ಒಂದೆರಡು ರೂಪಾಯಿ ಹೆಚ್ಚಿರುವುದು ಮಾಮೂಲಿ.

‘ಮಧ್ಯರಾತ್ರಿಯಿಂದಲೇ ಜಿಲ್ಲೆಯ ಗ್ರಾಮೀಣ ಪ್ರದೇಶ, ಬೆಂಗಳೂರು, ತುಮಕೂರು, ದಾವಣಗೆರೆ, ಬಳ್ಳಾರಿ ಸೇರಿ ವಿವಿಧ ಭಾಗಗಳಿಂದ ತರಕಾರಿ ಚಿತ್ರದುರ್ಗ ಮಾರುಕಟ್ಟೆಗೆ ಬರುತ್ತಿತ್ತು. ಆದರೆ, ಕೆಲ ತಿಂಗಳಿನಿಂದ ಕೋಲಾರ, ಬೆಂಗಳೂರು, ಆಂಧ್ರಪ್ರದೇಶ, ಬೆಳಗಾವಿಯಿಂದ ಮಾತ್ರ ಬರುತ್ತಿದೆ. ಸ್ಥಳೀಯವಾಗಿ ಬದನೆಕಾಯಿ ಬಿಟ್ಟರೆ ಬೇರೆ ಯಾವುದೇ ತರಕಾರಿ ಬರುತ್ತಿಲ್ಲ’ ಎನ್ನುತ್ತಾರೆ ಸಂತೆಹೊಂಡದ ತರಕಾರಿ ವ್ಯಾಪಾರಿಗಳು.

‘ಚಿಕ್ಕಬಳ್ಳಾಪುರ, ಕೋಲಾರ, ಕುಣಿಗಲ್, ತುಮಕೂರು ಮತ್ತು ತಮಿಳುನಾಡಿನಿಂದ ಮಾರುಕಟ್ಟೆಗೆ ಬರುತ್ತಿದ್ದ ಬೀನ್ಸ್‌ ಪ್ರಮಾಣ ಕಡಿಮೆಯಾಗಿದೆ. ಇದರಿಂದ ಬೆಲೆಯೂ ಹೆಚ್ಚಾಗಿದೆ. ಗ್ರಾಹಕರಿಗೆ ಮತ್ತು ಮದುವೆ ಮತ್ತಿತರ ಸಮಾರಂಭ ಆಯೋಜಿಸುವವರಿಗೆ ಸ್ವಲ್ಪ ತೊಂದರೆಯಾಗಿದೆ. ಮತ್ತೊಂದೆಡೆ ಸಮರ್ಪಕ ಇಳುವರಿ ಬಾರದ ಕಾರಣ ರೈತರಿಗೂ ಹೆಚ್ಚಿನ ಲಾಭವಾಗುತ್ತಿಲ್ಲ’ ಎನ್ನುತ್ತಾರೆ ಸಂತೆ ಮಾರುಕಟ್ಟೆ ವ್ಯಾಪಾರಿಗಳು.‌

ತೀವ್ರ ಬೆಲೆ ಏರಿಕೆ ಕಂಡಿರುವ ಪರಿಣಾಮ ತಳ್ಳೋಗಾಡಿಯವರು ಸಹ ಹೆಚ್ಚಿನ ಆಸಕ್ತಿ ತೋರುತ್ತಿಲ್ಲ. ನಾಳೆ ದರ ಇಳಿಕೆ ಕಾಣಬಹುದು ಎಂಬ ಆಶಾಭಾವನೆಯಲ್ಲಿ ಗ್ರಾಹಕರು ಸಹ ಸಂತೆ, ಅಂಗಡಿಗಳಲ್ಲಿ ಕಾಲು ಕೆ.ಜಿ ತರಕಾರಿ ಖರೀದಿಸುವುದು ಕಂಡು ಬರುತ್ತಿದೆ.

ಹೋಟೆಲ್‌ಗಳಲ್ಲಿ ಪುಲಾವ್‌, ಸಾಂಬಾರ್‌, ಪಲ್ಯಕ್ಕೆ ನಿಗದಿತ ಪ್ರಮಾಣದಲ್ಲಿ ತರಕಾರಿ ಹಾಕಬೇಕು. ಇಲ್ಲವಾದಲ್ಲಿ ರುಚಿ ಬರುವುದಿಲ್ಲ. ಗ್ರಾಹಕರ ವಿಶ್ವಾಸ ಉಳಿಸಿಕೊಳ್ಳುವ ಸಲುವಾಗಿ ದರ ಏರಿಕೆ ನಡುವೆಯೂ ಎಲ್ಲವನ್ನು ನಿಭಾಯಿಸಬೇಕಾಗಿದೆ. ಮನೆಗಳಲ್ಲಿ ಬೇಸಿಗೆ ಬಿಸಿಲು, ದರ ಏರಿಕೆ ಕಾರಣಕ್ಕೆ ಮಜ್ಜಿಗೆ ಹುಳಿ, ತಿಳಿಸಾರು ಕೊಂಚ ಮುನ್ನಲೆಗೆ ಬಂದಿವೆ.

ಬಿಸಿಲಿನಿಂದ ಸೊಪ್ಪು ರಕ್ಷಿಸಿಕೊಳ್ಳಲು ಸಂತೆಹೊಂಡದ ಮಾರುಕಟ್ಟೆಯಲ್ಲಿ ನೀರು ಚಿಮುಕಿಸುತ್ತಿರುವ ಸೊಪ್ಪಿನ ವ್ಯಾಪಾರಿ.
ಪ್ರಜಾವಾಣಿ ಚಿತ್ರ: ವಿ.ಚಂದ್ರಪ್ಪ
ಬಿಸಿಲಿನಿಂದ ಸೊಪ್ಪು ರಕ್ಷಿಸಿಕೊಳ್ಳಲು ಸಂತೆಹೊಂಡದ ಮಾರುಕಟ್ಟೆಯಲ್ಲಿ ನೀರು ಚಿಮುಕಿಸುತ್ತಿರುವ ಸೊಪ್ಪಿನ ವ್ಯಾಪಾರಿ. ಪ್ರಜಾವಾಣಿ ಚಿತ್ರ: ವಿ.ಚಂದ್ರಪ್ಪ
ಎಲ್‌.ಎನ್‌.ನಾಗದೀಪು
ಎಲ್‌.ಎನ್‌.ನಾಗದೀಪು
ಎಚ್‌.ಕಮಲನಾಯ್ಕ್‌
ಎಚ್‌.ಕಮಲನಾಯ್ಕ್‌
ಟಿ.ಶರಣಪ್ಪ
ಟಿ.ಶರಣಪ್ಪ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT