ವಿದ್ಯಾರ್ಥಿಗಳ ಹೋರಾಟಕ್ಕೆ ಜಯ: ಆರಂಭಗೊಂಡ ಶಾಲೆ

7
ಭರಮಸಾಗರ, ಆಲಘಟ್ಟ ಶಾಲೆಗಳ ಮಕ್ಕಳ ಹರ್ಷ

ವಿದ್ಯಾರ್ಥಿಗಳ ಹೋರಾಟಕ್ಕೆ ಜಯ: ಆರಂಭಗೊಂಡ ಶಾಲೆ

Published:
Updated:
Prajavani

ಭರಮಸಾಗರ: ಸರ್ಕಾರದ ಎರಡೆರಡು ಆದೇಶಗಳಿಂದ ಸ್ಥಗಿತಗೊಂಡಿದ್ದ ಶಾಲೆಗಳು ಮತ್ತೆ ಆರಂಭಗೊಂಡು ಸರ್ಕಾರಿ ಶಾಲೆ ವಿದ್ಯಾರ್ಥಿಗಳು ಸಂತಸಗೊಂಡಿದ್ದಾರೆ.

ವಿದ್ಯಾರ್ಥಿಗಳು, ಪೋಷಕರ ಹೋರಾಟಕ್ಕೆ ಮಣಿದ ಸರ್ಕಾರ ಆದೇಶ ವಾಪಸ್‌ ಪಡೆದು ಆದೇಶ ವಾಪಸ್‌ ಪಡೆದಿದೆ. ಪ್ರಸಕ್ತ ಶೈಕ್ಷಣಿಕ ವರ್ಷದಲ್ಲಿ ಶಾಲೆ ಆರಂಭವಾಗಿದ್ದು, ಪೋಷಕರು, ಗ್ರಾಮಸ್ಥರು ಸಂತಸಗೊಂಡಿದ್ದಾರೆ.

ಹೋಬಳಿಯ ಆಲಘಟ್ಟ ಗ್ರಾಮದ ಸರ್ಕಾರಿ ಪ್ರೌಢಶಾಲೆಯನ್ನು ಕಡಿಮೆ ವಿದ್ಯಾರ್ಥಿಗಳ ಕಾರಣ ನೀಡಿ ಭರಮಸಾಗರಕ್ಕೆ ಸ್ಥಳಾಂತರಗೊಳಿಸಲಾಗಿತ್ತು. ಇದರಿಂದ ಶಿಕ್ಷಣ ಮೊಟಕುಗೊಳಿಸುವ ಆತಂಕ ಎದುರಾಗಿದ್ದರಿಂದ ಆ ಶಾಲೆಯ 40 ವಿದ್ಯಾರ್ಥಿಗಳು ಸಮವಸ್ತ್ರ, ಬ್ಯಾಗ್ ಸಹಿತ ಗ್ರಾಮಸ್ಥರೊಂದಿಗೆ ಬೆಂಗಳೂರಿಗೆ ತೆರಳಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರನ್ನು ಭೇಟಿಯಾಗಿ ಶಾಲೆಯನ್ನು ಗ್ರಾಮದಲ್ಲಿಯೇ ಮುಂದುವರಿಸುವಂತೆ ಮನವಿ ಮಾಡಿದ್ದರು.

ಮನವಿಗೆ ಸ್ಪಂದಿಸಿದ ಮುಖ್ಯಮಂತ್ರಿ ಶಾಲೆ ಸ್ಥಳಾಂತರ ಆದೇಶ ರದ್ದುಪಡಿಸುವಂತೆ ಸೂಚಿಸಿದರು.

ಇತ್ತ ಭರಮಸಾಗರದಲ್ಲಿ ಬಹುದಿನಗಳ ಬೇಡಿಕೆ ಆಧರಿಸಿ, ಆಲಘಟ್ಟದ ಶಾಲೆಯೂ ಸ್ಥಳಾಂತರಗೊಂಡ ಕಾರಣ ಸರ್ಕಾರಿ ಪ್ರೌಢಶಾಲೆಯನ್ನು ಶಾಸಕ ಎಂ. ಚಂದ್ರಪ್ಪ ಉದ್ಘಾಟಿಸಿದ್ದರು. ಒಂದು ವಾರಗಳ ಕಾಲ ಶಾಲೆ ನಿರಾಂತಂಕವಾಗಿ ನಡೆದಿತ್ತು. ಆದರೆ ಆಲಘಟ್ಟದ ಶಾಲೆ ಸ್ಥಳಾಂತರ ರದ್ದುಪಡಿಸಿ ಯಥಾಸ್ಥಿತಿ ಕಾಯುವಂತೆ ಸರ್ಕಾರದ ಆದೇಶ ಮಾಡಿತು. ಈ ಕಾರಣ ಶಾಲೆಯನ್ನು ದಿಢೀರ್ ರದ್ದು ಪಡಿಸಲಾಯಿತು. ಸುಮಾರು 125ಕ್ಕೂ ಹೆಚ್ಚು ವಿದ್ಯಾರ್ಥಿಗಳು ಶಾಲೆಯಿಂದ ಹೊರಗುಳಿಯುವಂತಾಯಿತು. ಇದು ಪೋಷಕರ ಆಕ್ರೋಶಕ್ಕೆ ಕಾರಣವಾಯಿತು.

ಆಕ್ರೋಶಗೊಂಡ ಪೋಷಕರು ಹಾಗೂ ವಿದ್ಯಾರ್ಥಿಗಳು ಹನ್ನೊಂದು ದಿನಗಳು ವಿವಿಧ ರೀತಿಯ ಪ್ರತಿಭಟನೆ ನಡೆಸಿದರು.
ಶಾಲಾ ಸಮಸ್ಯೆಯನ್ನು ಶಾಸಕ ಎಂ. ಚಂದ್ರಪ್ಪ ಸದನದಲ್ಲಿ ಶೂನ್ಯ ವೇಳೆಯಲ್ಲಿ ಚರ್ಚಿಸಿ ಶಿಕ್ಷಣ ಸಚಿವರ ಗಮನಕ್ಕೆ ತಂದರು. ಈ ಬಗ್ಗೆ ಕ್ರಮ ಜರುಗಿಸಿದ ಸರ್ಕಾರ ಭರಮಸಾಗರಕ್ಕೆ ನೂತನ ಉನ್ನತೀಕರಿಸಿದ ಸರ್ಕಾರಿ ಪ್ರೌಢಶಾಲೆ ಮುಂಜೂರು ಮಾಡಿತು.

ಅಲ್ಲದೇ ಶಾಲೆ ಸಮಸ್ಯೆ ವಿವರಿಸಿ ವಿದ್ಯಾರ್ಥಿಗಳು ಪ್ರಧಾ‌ನಿ ನರೇಂದ್ರ ಮೋದಿ ಅವರಿಗೂ ಟ್ವೀಟ್ ಮಾಡಿದ್ದರು. ಪ್ರಧಾನಿ ಕಾರ್ಯಾಲಯ ಕ್ರಮ ಕೈಗೊಳ್ಳುವಂತೆ ರಾಜ್ಯ ಸರ್ಕಾರಕ್ಕೆ ಸೂಚನೆ ನೀಡಿತ್ತು.

ಇದರಿಂದ ಎರಡೂ ಶಾಲೆಗಳ ಹೋರಾಟಕ್ಕೆ ಜಯ ಸಿಕ್ಕಿತು.

ಈಗ ಆರು ತಿಂಗಳಿಂದ ಎರಡೂ ಶಾಲೆಗಳಲ್ಲಿ ವಿದ್ಯಾರ್ಥಿಗಳು ನಿರಾತಂಕವಾಗಿ ವ್ಯಾಸಂಗ ಮುಂದುವರಿಸಿದ್ದಾರೆ.
ಇದರಿಂದ ಖಾಸಗಿ ಶಾಲೆಯತ್ತ ಮುಖಮಾಡಿದ್ದ ಹಾಗೂ ಶಾಲೆಯಿಂದ ಹೊರಗುಳಿಯುತ್ತಿದ್ದ ಮಕ್ಕಳಿಗೆ ಮರು ಅವಕಾಶ ದೊರೆತಂತಾಗಿದೆ.

ಆಲಘಟ್ಟ ಶಾಲೆ 25 ವರ್ಷಗಳಿಂದ ಕಾರ್ಯನಿರ್ವಹಿಸುತ್ತಿದೆ. ಪ್ರಸಕ್ತ ಶೈಕ್ಷಣಿಕ ವರ್ಷದಲ್ಲಿ 8ನೇ ತರಗತಿಯಿಂದ ಎಸ್‌ಎಸ್‌ಎಲ್‌ಸಿಯ ವರೆಗೆ 33 ವಿದ್ಯಾರ್ಥಿಗಳಿದ್ದಾರೆ ಮುಖ್ಯಶಿಕ್ಷಕರು ಸೇರಿ 8 ಶಿಕ್ಷಕರಿದ್ದಾರೆ, ಬಸ್ ಸಂಪಕ ಸಮರ್ಪಕವಾಗಿಲ್ಲದ ಕಾರಣ ಶಾಲೆಯನ್ನು ಇಲ್ಲಿಯೇ ಉಳಿಸಬೇಕು. ಇಲ್ಲಿ ವಿದ್ಯಾರ್ಥಿನಿಯರೇ ಹೆಚ್ಚಿದ್ದು ದೂರದ ಶಾಲೆಗೆ ಹೋಗಲು ಸಾಧ್ಯವಿಲ್ಲ ಎಂದು ಗ್ರಾಮಸ್ಥರು ಮನವಿ ಮಾಡಿದ್ದರು.

ಗ್ರಾಮದಲ್ಲಿಯೇ ಶಾಲೆ ಮುಂದುವರಿಸಲು ಹಾಗೂ ವಿದ್ಯಾರ್ಥಿಗಳ ಪ್ರವೇಶಾವಕಾತಿ ಯಾವುದೇ ಕಾರಣಕ್ಕೂ ಕಡಿಮೆಯಾಗಬಾರದೆಂದು ಸರ್ಕಾರ ಆದೇಶ ಹೊರಡಿಸಿದೆ. ಸಿಬ್ಬಂದಿ ಕೊರತೆ ಇಲ್ಲ ಎಂದು ಮುಖ್ಯಶಿಕ್ಷಕ ಡಿ.ರಮೇಶ್ ಮಾಹಿತಿ ನೀಡಿದರು.

ಭರಮಸಾಗರ ಪ್ರಾಥಮಿಕ ಶಾಲೆಯನ್ನು ಪ್ರಸಕ್ತ ಸಾಲಿನಿಂದ ಅನ್ವಯವಾಗುವಂತೆ ಉನ್ನತೀಕರಿಸಲಾಗಿದೆ.
ಇರುವ ಮೂಲ ಸೌಲಭ್ಯ ಹಾಗೂ ಇರುವ ಶಿಕ್ಷಕರ ಸೇವೆ ಬಳಸಿಕೊಂಡು ಯಾವುದೇ ಆರ್ಥಿಕ ಹೊರೆಯಾಗದಂತೆ ಮಂಜೂರಾತಿ ನೀಡಿದೆ. ಈಗ 8 ಮತ್ತು 9ನೇ ತರಗತಿ ಶಾಲೆ ನಡೆಯುತ್ತಿವೆ. 190 ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ ಎಂದು ಮುಖ್ಯಶಿಕ್ಷಕ ಮಹೇಶ್ ತಿಳಿಸಿದರು.

ಸುಮಾರು 45 ದಿನಕ್ಕೂ ಹೆಚ್ಚುಕಾಲ ವ್ಯರ್ಥವಾದ ದಿನದ ಪಾಠ ಪ್ರವಚನವನ್ನು ಮಾಡಿ ಸರಿದೂಗಿಸಲಾಗಿದೆ. ಉತ್ತಮ ಫಲಿತಾಂಶಕ್ಕಾಗಿ ಮಕ್ಕಳನ್ನು ತಯಾರು ಮಾಡುತ್ತಿದ್ದೇವೆ ಎನ್ನುತ್ತಾರೆ ಇಲ್ಲಿಯ ಶಿಕ್ಷಕರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !