ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಹೊಸದುರ್ಗ | ವಿಠಲ ದೇವಾಲಯ: ಯಥಾಸ್ಥಿತಿ ಕಾಪಾಡಲು ಹೈಕೋರ್ಟ್ ಆದೇಶ

Published 28 ಫೆಬ್ರುವರಿ 2024, 15:48 IST
Last Updated 28 ಫೆಬ್ರುವರಿ 2024, 15:48 IST
ಅಕ್ಷರ ಗಾತ್ರ

ಹೊಸದುರ್ಗ: ‘ದೇವಸ್ಥಾನದ ಹೆಸರಿಗಿದ್ದ ಖಾತೆಯನ್ನು ಕೆಲವರು ಬದಲಿಸಿ, ಟ್ರಸ್ಟ್ ಹೆಸರಿಗೆ ಮಾಡಿಕೊಂಡಿದ್ದರು. ಆದರೆ, ಇದೀಗ ವಿಠ್ಠಲ ದೇವಾಲಯದ ಖಾತೆಯನ್ನು ಮತ್ತೆ ಸಮಾಜಕ್ಕೆ ವರ್ಗಾಯಿಸಿ, ಯಥಾಸ್ಥಿತಿ ಕಾಪಾಡಬೇಕು ಎಂದು ಹೈಕೋರ್ಟ್ ಆದೇಶಿಸಿದೆ. 14 ವರ್ಷಗಳ ಹೋರಾಟಕ್ಕೆ ಜಯ ಸಿಕ್ಕಿದೆ’ ಎಂದು ಭಾವಸಾರ ಕ್ಷತ್ರಿಯ ಸಮಾಜದ ಮುಖಂಡ ಉಮೇಶ್ ಗುಜ್ಜಾರ್ ಹೇಳಿದರು.

ಪಟ್ಟಣದ ಪ್ರವಾಸಿ ಮಂದಿರದಲ್ಲಿ ಬುಧವಾರ ಆಯೋಜಿಸಿದ್ದ ಸಮಾಜದ ಸಭೆಯಲ್ಲಿ ಅವರು ಮಾತನಾಡಿದರು.

‘1948ರಲ್ಲಿ ವಿಠ್ಠಲ ದೇವಾಲಯವನ್ನು ನಿರ್ಮಿಸಲಾಗಿದೆ. ಕೆಲವರು ದೇವಸ್ಥಾನ ಅಭಿವೃದ್ಧಿ ಪಡಿಸಲಾಗುವುದು ಎಂದು ದೇವರ ಹೆಸರಿಗಿದ್ದ ಖಾತೆಯನ್ನು 2001ರಲ್ಲಿ ಬದಲಾಯಿಸಿ, ಭಾವಸಾರ ಕ್ಷತ್ರಿಯ ಸಮಾಜ ಟ್ರಸ್ಟ್ ಹೆಸರಿಗೆ ಮಾಡಿಕೊಂಡಿದ್ದರು. 2019ರಲ್ಲಿ ಪುರಸಭೆಯಿಂದ ತಮ್ಮ ಹೆಸರಿಗೆ ದೇವಾಲಯದ ಆಸ್ತಿಯನ್ನು ಇ- ಸ್ವತ್ತು ಮಾಡಿಕೊಂಡಿದ್ದಾರೆ. 2001ರಿಂದ 2024ರವರೆಗೆ ದೇವಾಲಯದ ಲೆಕ್ಕಪತ್ರಗಳನ್ನು ಕೇಳಿದರೂ ನೀಡಿಲ್ಲ’ ಎಂದು ಆರೋಪಿಸಿದರು.

ಹೈಕೋರ್ಟ್ ಆದೇಶದಂತೆ ಈಗಾಗಲೇ ಟ್ರಸ್ಟ್ ಹೆಸರಿಗಿದ್ದ ಖಾತೆಯನ್ನು ವಿಠಲ ದೇವಾಲಯದ ಹೆಸರಿಗೆ ಪುನರ್ ಸ್ಥಾಪಿಸಲಾಗಿದೆ. ಇನ್ನೂ ದೇವಾಲಯಕ್ಕೆ ಸಂಬಂಧಪಟ್ಟ ಮಳಿಗೆಗಳು ಮತ್ತು ಸಮುದಾಯ ಭವನದ 24 ವರ್ಷದ ಬಾಡಿಗೆಯ ಲೆಕ್ಕಪತ್ರ, ಹುಂಡಿಯ ಕಾಣಿಕೆ ಮತ್ತು ದೇವರ ಚಿನ್ನಾಭರಣವನ್ನು ಜಿಲ್ಲಾಧಿಕಾರಿ ಮತ್ತು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ದೇವಾಲಯಕ್ಕೆ ಕೊಡಿಸಬೇಕು ಎಂದು ಒತ್ತಾಯಿಸಿದರು.

‘ವ್ಯಕ್ತಿಯೊಬ್ಬರು ದೇವಾಲಯದ ಆಸ್ತಿಯನ್ನು ಅಕ್ರಮವಾಗಿ ತಮ್ಮ ಹೆಸರಿಗೆ ಮಾಡಿಕೊಂಡಿದ್ದಾರೆ. ದೇವಾಲಯಕ್ಕೆ ₹ 6 ಕೋಟಿಯಿಂದ ₹ 8 ಕೋಟಿ ವಂಚಿಸಿದ್ದಾರೆ. ಈ ಬಗ್ಗೆ ನಮ್ಮಲ್ಲಿ ದಾಖಲೆಗಳಿವೆ. ಅವರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ’ ಎಂದು ಮುಖಂಡ ಮೋಹನ್ ಗುಜ್ಜಾರ್ ಹೇಳಿದರು.

ಮುಖಂಡರಾದ ಮುಕುಂದರಾವ್, ಸುರೇಶ್ ಬಾಬು, ವಾಸುದೇವರಾವ್, ರವಿ ಕಿಶನ್, ಗಣೇಶ್, ಹರೀಶ್ ಮಹಳತ್ಕರ್, ರಾಮಚಂದ್ರ ಮತ್ತು ರಾಘು ಮಹಳತ್ಕರ್ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT