ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋವಿಡ್‌ ಅವ್ಯವಹಾರ ಆರೋಪ | ನ್ಯಾಯಾಂಗ ತನಿಖೆಗೆ ವಿ.ಎಸ್‌.ಉಗ್ರಪ್ಪ ಒತ್ತಾಯ

‘ರಾಜ್ಯ ಲೂಟಿ ಹೊಡೆದ ಸರ್ಕಾರ’ ಎಂದು ಟೀಕೆ
Last Updated 2 ಆಗಸ್ಟ್ 2020, 10:47 IST
ಅಕ್ಷರ ಗಾತ್ರ

ಚಿತ್ರದುರ್ಗ: ಕೋವಿಡ್‌–19 ನಿರ್ವಹಣೆಯ ಹೆಸರಿನಲ್ಲಿ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರ ₹ 2 ಸಾವಿರ ಕೋಟಿಗೂ ಹೆಚ್ಚು ಹಣವನ್ನು ಲೂಟಿ ಹೊಡೆದಿದ್ದು, ಸತ್ಯಾಸತ್ಯತೆ ಪರಿಶೀಲನೆಗೆ ಹೈಕೋರ್ಟ್‌ ನ್ಯಾಯಮೂರ್ತಿಗಳಿಂದ ನ್ಯಾಯಾಂಗ ತನಿಖೆ ಮಾಡಿಸಬೇಕು ಎಂದು ಕಾಂಗ್ರೆಸ್‌ ಮುಖಂಡ ವಿ.ಎಸ್‌.ಉಗ್ರಪ್ಪ ಒತ್ತಾಯಿಸಿದರು.

ಭಾನುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಈ ಬಗ್ಗೆ ಚರ್ಚಿಸಲು ಕೂಡಲೇ ವಿಧಾನಮಂಡಲದ ಅಧಿವೇಶನ ಕರೆಯಬೇಕು ಎಂದು ಆಗ್ರಹಿಸಿದರು.

‘ರಾಜ್ಯದಲ್ಲಿ ಕೋವಿಡ್‌ ನಿರ್ವಹಣೆಗೆ ₹ 4,167 ಕೋಟಿ ವೆಚ್ಚ ಮಾಡಲಾಗಿದೆ. ₹ 324 ಕೋಟಿ ಮಾತ್ರ ಖರ್ಚು ಮಾಡಲಾಗಿದೆ ಎಂದು ಸಚಿವರೊಬ್ಬರು ಹೇಳಿಕೆ ನೀಡಿದ್ದಾರೆ. ಮತ್ತೊಬ್ಬ ಸಚಿವರು ₹ 780 ಕೋಟಿ ವೆಚ್ಚವಾಗಿದೆ ಎಂಬ ಮಾಹಿತಿಯನ್ನು ಮಾಧ್ಯಮಕ್ಕೆ ನೀಡಿದ್ದಾರೆ. ಆದರೆ, ಸರ್ಕಾರ ₹ 2,128 ಕೋಟಿಗೆ ಲೆಕ್ಕ ನೀಡಿದೆ. ಹಾಗಾದರೆ ಕೋವಿಡ್‌ ನಿರ್ವಹಣೆಗೆ ಖರ್ಚು ಮಾಡಿದ ನೈಜ ಹಣವೆಷ್ಟು’ ಎಂದು ಪ್ರಶ್ನಿಸಿದರು.

‘ಕೇಂದ್ರ ಸರ್ಕಾರ ₹ 4 ಲಕ್ಷಕ್ಕೆ ಒಂದರಂತೆ 50 ಸಾವಿರ ವೆಂಟಿಲೇಟರ್‌ಗಳನ್ನು ಖರೀದಿಸಿದೆ. ತಮಿಳುನಾಡು ಸರ್ಕಾರ ಪ್ರತಿ ವೆಂಟಿಲೇಟರ್‌ಗೆ ₹ 4.78 ಲಕ್ಷ ವೆಚ್ಚ ಮಾಡಿದೆ. ಕರ್ನಾಟಕದಲ್ಲಿ ₹ 18 ಲಕ್ಷ ನೀಡಿ ವೆಂಟಿಲೇಟರ್‌ ಖರೀದಿಸಲಾಗಿದೆ. ಇದನ್ನು ಭ್ರಷ್ಟಾಚಾರವೆಂದು ಹೇಳಿದರೆ ಬಿಜೆಪಿ ನೋಟಿಸ್‌ ನೀಡುತ್ತದೆ. ಧೈರ್ಯವಿದ್ದರೆ ಸರ್ಕಾರದ ಮುಖ್ಯಕಾರ್ಯದರ್ಶಿ ನೋಟಿಸ್‌ ನೀಡಲಿ’ ಎಂದು ಸವಾಲು ಎಸೆದರು.

‘ಪಿಪಿಇ ಕಿಟ್‌ ಖರೀದಿಯಲ್ಲಿ ಆರೋಗ್ಯ ಇಲಾಖೆ ಅವ್ಯವಹಾರ ನಡೆಸಿದೆ. ₹ 330 ಬೆಲೆಯ ಪಿಪಿಇ ಕಿಟ್‌ಗೆ ₹ 2,117 ಬಿಲ್‌ ಮಾಡಿದೆ. ₹ 50 ಕ್ಕೆ ಸಿಗುವ ಮಾಸ್ಕ್‌ಗೆ 150 ದರ ನೀಡಲಾಗಿದೆ. ಆಮ್ಲಜನಕ ಪೂರೈಕೆ ಉಪಕರಣವನ್ನು ಕೇರಳ ಸರ್ಕಾರ ₹ 2.6 ಲಕ್ಷಕ್ಕೆ ಖರೀದಿಸಿದೆ. ಕರ್ನಾಟಕ ಸರ್ಕಾರ ಇದೇ ಉಪಕರಣಕ್ಕೆ ₹ 4.36 ಲಕ್ಷ ನೀಡಿದೆ. ₹ 650ಕ್ಕೆ ಸಿಗುವ ಥರ್ಮಲ್‌ ಸ್ಕ್ಯಾನರ್‌ಗೆ ₹2,200 ಬೆಲೆ ತೆತ್ತಿದೆ. ಸಮಾಜಕಲ್ಯಾಣ ಇಲಾಖೆ ಥರ್ಮಲ್‌ ಸ್ಕ್ಯಾನರ್‌ ಒಂದಕ್ಕೆ ₹ 9 ಸಾವಿರ ವೆಚ್ಚ ತೋರಿಸಿದೆ. ಇದು ಕೋವಿಡ್‌ ನೆಪದಲ್ಲಿ ಮಾಡಿದ ಲೂಟಿ ಅಲ್ಲವೇ’ ಎಂದು ಕೇಳಿದರು.

ಶ್ರೀರಾಮುಲು ಸುತ್ತ ಹೈದರಾಬಾದ್‌‌ ಗುಂಪು

ಆರೋಗ್ಯ ಸಚಿವ ಬಿ.ಶ್ರೀರಾಮುಲು ಸುತ್ತ ಹೈದರಾಬಾದ್‌ ಗುಂಪೊಂದು ನಿರ್ಮಾಣವಾಗಿದೆ. ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಪ್ರತಿ ವ್ಯವಹಾರವನ್ನು ಈ ಗುಂಪು ನಿರ್ವಹಿಸುತ್ತದೆ ಎಂದು ಉಗ್ರಪ್ಪ ಆರೋಪಿಸಿದರು.

‘ಜನರ ಆರೋಗ್ಯ ಕಾಪಾಡುವಲ್ಲಿ ಸಚಿವರು ಸಕ್ರಿಯರಾಗಿ ಕೆಲಸ ಮಾಡಬೇಕಿತ್ತು. ಆದರೆ, ಅವರು ಅನ್ಯ ಕೆಲಸದಲ್ಲಿ ತಲ್ಲೀನರಾಗಿದ್ದಾರೆ. ಮೊಳಕಾಲ್ಮುರು ಕ್ಷೇತ್ರದ ಜನರನ್ನು ನಿರ್ಲಕ್ಷ್ಯ ಮಾಡಿದ್ದಾರೆ. ಕಾನೂನು ಸುವ್ಯವಸ್ಥೆ ಕಾಪಾಡುವ ಬದಲು ಜನರನ್ನು ಬೆದರಿಸುವ ಪ್ರಯತ್ನ ಮಾಡುತ್ತಿದ್ದಾರೆ. ಆಪ್ತ ಸಹಾಯಕ ಮಹೇಶ್‌ ರೆಡ್ಡಿ ಸಾವಿಗೆ ಇನ್ನೂ ಸ್ಪಷ್ಟನೆ ನೀಡಿಲ್ಲ’ ಎಂದು ದೂರಿದರು.

ಕಾಲೇಜು ಸ್ಥಳಾಂತರಕ್ಕೆ ವಿರೋಧ

ಚಿತ್ರದುರ್ಗ ತಾಲ್ಲೂಕಿನ ತುರುವನೂರು ಪ್ರಥಮ ದರ್ಜೆ ಕಾಲೇಜನ್ನು ಬೆಳಗಾವಿ ನಿಪ್ಪಾಣಿಗೆ ಸ್ಥಳಾಂತರ ಮಾಡಿರುವುದಕ್ಕೆ ವಿರೋಧ ವ್ಯಕ್ತಪಡಿಸಿದ ಶಾಸಕ ಟಿ.ರಘುಮೂರ್ತಿ, ಆ.6ರಂದು ಜಿಲ್ಲಾಧಿಕಾರಿ ಕಚೇರಿ ಎದುರು ಧರಣಿ ನಡೆಸುವುದಾಗಿ ಎಚ್ಚರಿಕೆ ನೀಡಿದರು.

‘ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ಕಾಲೇಜು ಮಂಜೂರಾಗಿತ್ತು. ಕಾಲೇಜು ಕಟ್ಟಡ ನಿರ್ಮಾಣ ಹಂತದಲ್ಲಿದೆ. ಇಂತಹ ಸಂದರ್ಭದಲ್ಲಿ ಕಾಲೇಜು ಸ್ಥಳಾಂತರ ಮಾಡುವುದು ಸಲ್ಲದು. ನನ್ನ ರಾಜಕೀಯ ಜೀವನ ಅಂತ್ಯವಾದರೂ ಸರಿಯೇ, ಕಾಲೇಜು ಉಳಿಸಿಕೊಳ್ಳಲು ಹೋರಾಟ ನಡೆಸುತ್ತೇನೆ’ ಎಂದು ರಘುಮೂರ್ತಿ ಹೇಳಿದರು.

ಮಾಜಿ ಸಚಿವ ಎಚ್‌.ಆಂಜನೇಯ, ಮಾಜಿ ಸಂಸದ ಬಿ.ಎನ್‌.ಚಂದ್ರಪ್ಪ, ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಶಶಿಕಲಾ, ಕಾಂಗ್ರೆಸ್‌ ಜಿಲ್ಲಾ ಘಟಕದ ಅಧ್ಯಕ್ಷ ಎಂ.ಕೆ.ತಾಜ್‌ಪೀರ್‌, ಮಾಜಿ ಶಾಸಕರಾದ ಬಿ.ಜಿ.ಗೋವಿಂದಪ್ಪ, ಜಯಮ್ಮ, ಮುಖಂಡರಾದ ಜಿ.ಎಸ್‌.ಮಂಜುನಾಥ್‌, ಡಾ.ಯೋಗೇಶ್‌ ಬಾಬು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT