ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿ.ವಿ. ಸಾಗರ ಜಲಾಶಯ ಮಟ್ಟ ಹೆಚ್ಚಳ: ಗ್ರಾಮಗಳಿಗೆ ನುಗ್ಗಿದ ನೀರು

Last Updated 6 ಸೆಪ್ಟೆಂಬರ್ 2022, 5:01 IST
ಅಕ್ಷರ ಗಾತ್ರ

ಹೊಸದುರ್ಗ (ಚಿತ್ರದುರ್ಗ): ವಾಣಿವಿಲಾಸ ಜಲಾಶಯದ ನೀರಿನ ಮಟ್ಟ 132 ಅಡಿ ತಲುಪಿದ್ದು, ಹಿನ್ನೀರು ಪ್ರದೇಶದ ಹಲವು ಗ್ರಾಮಗಳಿಗೆ ನೀರು ನುಗ್ಗಿದ್ದು, ಜನಜೀವನ ಅಸ್ತವ್ಯಸ್ತಗೊಂಡಿದೆ.

ಹೊಸದುರ್ಗ ತಾಲ್ಲೂಕಿನ ಮಾಡದಕೆರೆ ಹೋಬಳಿಯ ಪೂಜಾರಹಟ್ಟಿಯ 10 ಕ್ಕೂ ಹೆಚ್ಚು ಮನೆಗಳು ಜಲಾವೃತಗೊಂಡಿದ್ದು, ಜನರು ಅತಂತ್ರ ಸ್ಥಿತಿಯಲ್ಲಿದ್ದಾರೆ. ವಿ.ವಿ ಸಾಗರದ ನೀರು ಇನ್ನಷ್ಟು ಹೆಚ್ಚಳವಾದರೆ ಗ್ರಾಮ ಸಂಪೂರ್ಣ ಜಲಾವೃತ ಆಗಲಿದ್ದು, ಜನರು ಆತಂಕದಲ್ಲಿದ್ದಾರೆ.

'ಮನೆಗೆ ನೀರು ನುಗ್ಗಿರುವ ಕಾರಣ ಶಾಲೆಗೆ ಸ್ಥಳಾಂತರಿಸಲಾಗಿದೆ. ಇದೇ ರೀತಿ ಮಳೆಯಾದರೆ ಇನ್ನೆರಡು ದಿನಗಳಲ್ಲಿ ಶಾಲೆ ಮತ್ತು ಅಂಗನವಾಡಿ ಮುಳುಗುವ ಸಾಧ್ಯತೆಯಿದೆ. ಹಲವು ವರ್ಷಗಳಿಂದ ನೆಮ್ಮದಿಯಿಂದ ಜೀವನ ನಡೆಸುತ್ತಿದ್ದ ನಮಗೆ ಇಂದು ಅಸ್ತವ್ಯಸ್ತತೆ ಕಾಡುತ್ತಿದೆ. ಮಕ್ಕಳು, ವೃದ್ಧರ ರಕ್ಷಣೆ ಕಷ್ಟವಾಗಿದೆ' ಎನ್ನುತ್ತಾರೆ ಪೂಜಾರಹಟ್ಟಿಯ ದಾಸಪ್ಪ.

ತಾಲ್ಲೂಕಿನ ತಾರೀಕೆರೆ ಗ್ರಾಮದ ಹಲವು ಮನೆಗಳಿಗೆ ನೀರು ನುಗ್ಗಿದೆ. ಹುಣಸೇಕಟ್ಟೆ ಹಾಗೂ ಲಕ್ಷ್ಮೀ ದೇವರಹಳ್ಳಿ ಸುತ್ತಲೂ ನೀರು ಆವರಿಸಿದ್ದು, ಸಂಪರ್ಕವಿಲ್ಲದೇ ದ್ವೀಪದಂತಾಗಿವೆ. ಮಳೆ ಮುಂದುವರಿದರೆ ಮತ್ತೋಡು ಹೋಬಳಿಗೆ ಸಂಪರ್ಕ ಕಡಿತಗೊಳ್ಳುವ ಸಾಧ್ಯತೆ ಹೆಚ್ಚಿದೆ.

ವಿ.ವಿ.ಸಾಗರ ಜಲಾಶಯದ ಗರಿಷ್ಠ ನೀರಿನ ಮಟ್ಟ 135 ಅಡಿ. ಮಂಗಳವಾರ 132 ಅಡಿ ನೀರು ಸಂಗ್ರಹವಾಗಿದೆ. ಚಿಕ್ಕಮಗಳೂರು ಜಿಲ್ಲಾ ವ್ಯಾಪ್ತಿಯಲ್ಲಿ ಅಪಾರ ಪ್ರಮಾಣದ ಮಳೆ ಬೀಳುತ್ತಿದ್ದು, ವೇದಾವತಿ ನದಿ ಮೈದುಂಬಿ ಹರಿಯುತ್ತಿದೆ. ಜಲಾಶಯಕ್ಕೆ 7 ಸಾವಿರ ಕ್ಯೂಸೆಕ್ ಒಳಹರಿವು ಇದ್ದು, ಇಷ್ಟೇ ಪ್ರಮಾಣದ ನೀರು ಹೊರಹರಿವು ಇದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT