ಬುಧವಾರ, ಸೆಪ್ಟೆಂಬರ್ 22, 2021
23 °C
42 ಕೆರೆಗಳಿಗೆ ನೀರುಣಿಸುವ ಮಾತೃ ಕೆರೆ l ಚರಂಡಿ ನೀರು ಬೇರೆಡೆ ಹರಿಸಲು ಒತ್ತಾಯ

ಭರಮಸಾಗರ: ಕೆರೆಯ ಒಡಲು ಸೇರುತ್ತಿದೆ ತ್ಯಾಜ್ಯ ನೀರು

ನಾಡಿಗೇರ್ ಭರಮಸಾಗರ Updated:

ಅಕ್ಷರ ಗಾತ್ರ : | |

Prajavani

ಭರಮಸಾಗರ: ಇತಿಹಾಸ ಪ್ರಸಿದ್ಧ ಜೋಡಿ ಕೆರೆಯಲ್ಲೊಂದಾದ ಇಲ್ಲಿನ ದೊಡ್ಡಕೆರೆಯ ಒಡಲಿಗೆ ಪಟ್ಟಣದ ಚರಂಡಿ ನೀರು, ತ್ಯಾಜ್ಯ ಸೇರುತ್ತಿದೆ.

₹ 565 ಕೋಟಿ ವೆಚ್ಚದಲ್ಲಿ ತುಂಗಭದ್ರಾ ಏತನೀರಾವರಿ ನೀರು ತುಂಬಿಸುವ ಪೈಪ್‌ಲೈನ್ ಹಾಗೂ ಜಾಕ್‌ವೆಲ್ ಕಾಮಗಾರಿ ಭರದಿಂದ ಸಾಗಿದೆ. ಇನ್ನು ಕೆಲದಿನದಲ್ಲಿಯೇ ನದಿ ನೀರು ಈ ಕೆರೆಗೆ ಹರಿದು 42 ಕೆರೆಗಳಿಗೆ ನೀರುಣಿಸುವ ಮಾತೃ ಕೆರೆಯಾಗಲಿದೆ. ಕೆರೆಯ ಸುತ್ತಲಿನ ತೋಟ, ಜಮೀನಿಗೆ ಅಂತರ್ಜಲ ಹೆಚ್ಚಲು ಕುಡಿಯುವ ನೀರಿಗೂ, ಪಶು ಪ್ರಾಣಿ ಪಕ್ಷಿಗಳಿಗೂ ಅನುಕೂಲವಾಗಲಿದೆ.

ನೀರಿಲ್ಲದೆ ಬರಿದಾಗಿದ್ದ ಕೆರೆಗೆ ಜೀವಕಳೆ ಬರಲಿದೆ. 40 ವರ್ಷಗಳ ಹಿಂದೆ ಈ ಕೆರೆಯಲ್ಲಿ ಹಕ್ಕಿಗಳ ಕಲರವ ಇತ್ತು. ಕೆರೆ ಏರಿಯಲ್ಲಿ ನಿಂತು ಕೆರೆ ಸೌಂದರ್ಯ ನೋಡಲು ಪರಿಸರ ಪ್ರಿಯರಿಗೆ ಮುದ ಕೊಡಲಿದೆ.

ಆದರೆ, ಇಂತಹ ಅಪರೂಪದ ಕೆರೆಗೆ ಇಲ್ಲಿನ ದೊಡ್ಡಪೇಟೆ, ಚಿಕ್ಕಪೇಟೆ, ಇಂದಿರಾ ಕಾಲೊನಿ, ಎಸ್‌ಜೆಎಂ ಬಡಾವಣೆ, ತರಳಬಾಳು ಬಡಾವಣೆಯಿಂದ ಹರಿಯುವ ಚರಂಡಿ ನೀರು ಹಾಗೂ ಘನ, ದ್ರವ, ತ್ಯಾಜ್ಯ ಇನ್ನಿತರ ವಸ್ತುಗಳು ಕೆರೆಯ
ಒಡಲು ಸೇರುತ್ತಿದೆ.

ಕೆರೆಯಲ್ಲಿ ಕುರಿ, ಕೋಳಿ, ತ್ಯಾಜ್ಯ ಸೇರಿ ಕೊಳೆತ ಅಡಿಕೆ ಸಿಪ್ಪೆಯನ್ನು ರಾತ್ರೋ ರಾತ್ರಿ ಕೆರೆಗೆ ಎಸೆಯಲಾಗುತ್ತಿದೆ. ಇದರಿಂದ ಕೆರೆಯ ವಾತಾವರಣ ಕುಲುಷಿತ
ಗೊಂಡು ದುರ್ವಾಸನೆ ಬೀರುತ್ತಿದೆ. ಕೆರೆ ಏರಿ ಅಂಚಿನಲ್ಲಿ ಸಾಗುವ ಜನ ಮೂಗುಮುಚ್ಚಿ ಸಾಗುವ ಪರಿಸ್ಥಿತಿ ಇದೆ.

ಇದರಿಂದಾಗಿ ನೀರು ಕುಲುಷಿತಗೊಳ್ಳುತ್ತಿದೆ. 42 ಕೆರೆಗಳಿಗೂ ಇದೇ ನೀರು ಹರಿದು ವಿಷಯುಕ್ತ ನೀರಾಗುತ್ತದೆ ಎಂಬುದು ಸ್ಥಳೀಯರ ಆತಂಕ.

ಕೆರೆಗೆ ಪ್ರಾಣಿ ಪಕ್ಷಿಗಳು ನೀರು ಕುಡಿಯಲು ಬರುತ್ತವೆ. ಕುಲುಷಿತ ನೀರನ್ನು ಕುಡಿದರೆ ಅವುಗಳ ಪ್ರಾಣಕ್ಕೂ ಕಂಟಕ ಎದುರಾಗುತ್ತದೆ. ತ್ಯಾಜ್ಯ ವಿಲೇವಾರಿಗೆ ಗ್ರಾಮ ಪಂಚಾಯಿತಿ ಕ್ರಮವಹಿಸಬೇಕು. ಕೆರೆಗೆ ನದಿ ನೀರು ಬರುವುದರ ಒಳಗಾಗಿ ಮುಖ್ಯ ಚರಂಡಿಗಳ ನೀರನ್ನು ಬೇರೆ ಕಡೆಗೆ ಹರಿಯಲು ಚರಂಡಿ ವ್ಯವಸ್ಥೆ ಮಾಡಬೇಕು. ಕೆರೆಯಲ್ಲಿ ಶುದ್ಧ ನೀರು ನಿಲ್ಲಲು ಕ್ರಮ ವಹಿಸಬೇಕು ಎಂದು ಒತ್ತಾಯಿಸುತ್ತಾರೆ ನಾಗಭೂಷಣ ರಾವ್.

ಈಗಾಗಲೇ ನದಿ ನೀರು ತುಂಬಿಸಲು ಕಾಮಗಾರಿ ನಡೆದಿದೆ. ಮುಂದೊಂದು ದಿನ ಭರಮಸಾಗರದ ಕೆರೆ ಸೂಳೆಕೆರೆಯಷ್ಟೇ ಹೆಸರು ಪಡೆಯುತ್ತದೆ.  ‌ಚರಂಡಿ ನೀರು ಬೇರೆಡೆ ಹರಿಯಲು ಕ್ರಮವಹಿಸಬೇಕು ಎಂದು ಆಗ್ರಹಿಸುತ್ತಾರೆ ಅವರು.

ಕೆಲವೇ ದಿನದಲ್ಲಿ ಕೆರೆಗೆ ಒಂದು ಟಿಎಂಸಿ ಅಡಿ ನೀರು ಹರಿಯಲಿದೆ. ‌ಚರಂಡಿ ನೀರು ಬೇರೆಡೆ ಹರಿಯಲು ಕ್ರಮ ಕೈಗೊಳ್ಳಬೇಕು ಎಂದು ಶೈಲೇಶ್ ಕುಮಾರ್ ಚೌಲೀಹಳ್ಳಿ
ಒತ್ತಾಯಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.