ಗುರುವಾರ , ಮಾರ್ಚ್ 23, 2023
31 °C
ಭದ್ರಾ ಜಲಾಶಯದಿಂದ ವಾಣಿವಿಲಾಸ ಜಲಾಶಯದ ಕಡೆ ಹರಿದ ನೀರು

ಸಿಹಿ ಹಂಚಿ ಸಂಭ್ರಮಿಸಿದ ಅಚ್ಚುಕಟ್ಟು ರೈತರು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಹಿರಿಯೂರು: ಸೆ. 20 ರಿಂದ ಭದ್ರಾ ಜಲಾಶಯದಿಂದ ವಾಣಿವಿಲಾಸಕ್ಕೆ ನಾಲೆಗಳ ಮೂಲಕ ನೀರು ಹರಿಸಲಾಗುತ್ತದೆ ಎಂದು ಕಾತರದಿಂದ ಕಾಯುತ್ತಿದ್ದ ರೈತರಿಗೆ ಶನಿವಾರ ರಾತ್ರಿ ಬೆಟ್ಟದ ತಾವರಕೆರೆ ಪಂಪ್‌ಹೌಸ್‌ನಿಂದ ನಾಲೆಗಳಿಗೆ ನೀರನ್ನು ಪಂಪ್ ಮಾಡುವ ಕಾರ್ಯ ಆರಂಭವಾಗಿದೆ ಎಂದು ತಿಳಿದಾಕ್ಷಣ ಅಚ್ಚುಕಟ್ಟು ಪ್ರದೇಶದ ಹತ್ತಾರು ಹಳ್ಳಿಗಳಲ್ಲಿ ರೈತರು ಸಿಹಿ ಹಂಚಿ ಸಂಭ್ರಮಿಸಿದರು.

ತಾಲ್ಲೂಕಿನ ಆರನಕಟ್ಟೆ ಮತ್ತು ಲಕ್ಷ್ಮೀಪುರ ಗ್ರಾಮಗಳಲ್ಲಿ ರೈತ ಮುಖಂಡರನ್ನು ಸನ್ಮಾನಿಸಲಾಯಿತು.

ರೈತ ಮುಖಂಡ ಕಸವನಹಳ್ಳಿ ರಮೇಶ್, ‘ಪೂರ್ಣಿಮಾ ಅವರು ಶಾಸಕರಾಗಿ ಎದುರಿಸಿದ ಮೊದಲ ಅಧಿವೇಶನದಲ್ಲಿಯೇ ಭದ್ರಾ ಮೇಲ್ದಂಡೆ ಯೋಜನೆಯ ಪ್ರಸ್ತಾಪ ಮಾಡಿದ್ದರು. ತದನಂತರ ಹಲವು ಬಾರಿ ವಿಶ್ವೇಶ್ವರಯ್ಯ ನೀರಾವರಿ ನಿಗಮದ ಎಂ.ಡಿ ಅವರನ್ನು ರೈತರೊಂದಿಗೆ ಭೇಟಿ ಮಾಡಿ ಯೋಜನೆ ಜಾರಿಗೆ ಒತ್ತಡ ಹಾಕಿದ್ದರು. ಜಿಲ್ಲೆಯ ಶಾಸಕರು, ಸಂಸದರ ಜತೆಗೆ ಯಡಿಯೂರಪ್ಪ ಅವರನ್ನು ಭೇಟಿ ಮಾಡಿ ಪರ್ಯಾಯ ಮಾರ್ಗದ ಮೂಲಕ ವಾಣಿವಿಲಾಸಕ್ಕೆ ನೀರು ಹರಿಯುವಂತೆ ಮಾಡುವಲ್ಲಿ ಸಫಲರಾಗಿದ್ದರು. ಅದರ ಮುಂದುವರಿದ ಭಾಗವಾಗಿ ಎರಡನೇ ಬಾರಿಗೆ ಭದ್ರೆಯ ನೀರು ನಮ್ಮ ಜಲಾಶಯಕ್ಕೆ ಬರುತ್ತಿದೆ’ ಎಂದರು.

ದೂರವಾಣಿ ಮೂಲಕ ಮಾತನಾಡಿದ ಶಾಸಕಿ ಪೂರ್ಣಿಮಾ, ‘ಸಂಸದ ನಾರಾಯಣಸ್ವಾಮಿ, ನಮ್ಮ ಜಿಲ್ಲೆಯ ಹಾಗೂ ಯೋಜನೆ ವ್ಯಾಪ್ತಿಗೆ ಬರುವ ಚಿಕ್ಕಮಗಳೂರು ಜಿಲ್ಲೆಯ ಶಾಸಕರ ಪ್ರಯತ್ನದ ಫಲವಾಗಿ ಎರಡನೇ ಬಾರಿಗೆ ಜಲಾಶಯಕ್ಕೆ ನೀರು ಹರಿದು ಬರುತ್ತಿದೆ. ನಮ್ಮ ಮನವಿಗೆ ಸ್ಪಂದಿಸಿದ ಮುಖ್ಯಮಂತ್ರಿ, ಜಲಸಂಪನ್ಮೂಲ ಸಚಿವ ರಮೇಶ್ ಜಾರಕಿಹೊಳಿ ಅವರಿಗೆ, ಯೋಜನೆ ಜಾರಿಗೆ ನಿರಂತರ ಹೋರಾಟ ನಡೆಸಿದ ರೈತರಿಗೆ ಇದರ ಯಶಸ್ಸು ಸಲ್ಲುತ್ತದೆ. ತುಂಗಾದಿಂದ ಭದ್ರಾಕ್ಕೆ ನೀರು ಪೂರೈಸುವ ಮೊದಲ ಪ್ಯಾಕೇಜ್ ಕಾಮಗಾರಿ, ಧರ್ಮಪುರ ಕೆರೆಗೆ ನೀರು ಹರಿಸುವ ಯೋಜನೆಗೆ ಸಿಎಂ ಮತ್ತು ನೀರಾವರಿ ಸಚಿವರು ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ’ ಎಂದರು.

ಹಿರಿಯ ರೈತ ಹೋರಾಟಗಾರರಾದ ಮಹಲಿಂಗಪ್ಪ, ಬಸವರಾಜಪ್ಪ, ಕೆ.ರಮೇಶ್, ವೆಂಕಟೇಶ್, ತಿಮ್ಮಣ್ಣ, ರವೀಂದ್ರನಾಥ್, ಪಿಟ್ಲಾಲಿ ಶ್ರೀನಿವಾಸ್, ಕೃಷ್ಣಮೂರ್ತಿ ಅವರನ್ನು ಸನ್ಮಾನಿಸಲಾಯಿತು. ತಿಪ್ಪೇಸ್ವಾಮಿ, ಮುತ್ತಣ್ಣ, ದ್ಯಾಮಣ್ಣ, ಜಗದೀಶ್, ಸ್ವಾಮಿನಾಥನ್, ವಿಶ್ವನಾಥ್, ರಘು, ರಂಗಸ್ವಾಮಿ, ಸತೀಶ್, ಮೋಹನಗೌಡ, ಮಂಜುನಾಥ್ ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು