ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಚಳ್ಳಕೆರೆ: ಶುದ್ಧ ಕುಡಿಯುವ ನೀರು ಸಮರ್ಪಕ ಪೂರೈಕೆಗೆ ಆಗ್ರಹ-ಮಹಿಳೆಯರ ಪ್ರತಿಭಟನೆ

Published 20 ಮೇ 2024, 15:18 IST
Last Updated 20 ಮೇ 2024, 15:18 IST
ಅಕ್ಷರ ಗಾತ್ರ

ಚಳ್ಳಕೆರೆ: ಶುದ್ಧ ಕುಡಿಯುವ ನೀರು ಸಮರ್ಪಕ ಪೂರೈಕೆಗೆ ಆಗ್ರಹಿಸಿ ತಾಲ್ಲೂಕಿನ ನನ್ನಿವಾಳ ಗ್ರಾಮ ಪಂಚಾಯಿತಿ ವ್ಯಾಪ್ತಿಯ ವರವಿನೋರಹಟ್ಟಿ ಗ್ರಾಮದ ಮಹಿಳೆಯರು ಖಾಲಿಕೊಡ ಪ್ರದರ್ಶಿಸಿ ಸೋಮವಾರ ಪ್ರತಿಭಟಿಸಿದರು.

ಗಡ್ಡದಾರಹಟ್ಟಿ ಹಾಗೂ ವರವಿನೋರಹಟ್ಟಿ ಗ್ರಾಮಗಳಿಗೆ ಪ್ರತ್ಯೇಕವಾಗಿ ಕೊಳವೆಬಾವಿ ಕೊರೆಯಿಸಲು ಉದಾಸೀನ ಮಾಡುತ್ತಿರುವ ಕಾರಣ ಇಲ್ಲಿನ ಜನರಿಗೆ ಕುಡಿಯುವ ನೀರಿನ ಅಭಾವ ಉಂಟಾಗಿದೆ ಎಂದು ಪ್ರತಿಭಟನೆ ನೇತೃತ್ವ ವಹಿಸಿದ್ದ ತಾಲ್ಲೂಕು ಪಂಚಾಯಿತಿ ನಾಮ ನಿರ್ದೇಶನ ಮಾಜಿ ಸದಸ್ಯ ದೊರೆ ನಾಗರಾಜ ಆರೋಪಿಸಿದರು.

ಗ್ರಾಮದಿಂದ 3-4 ಕಿ.ಮೀ. ದೂರದ ಸೋಮನಕೆರೆ ಬಳಿ ಕೊರೆಯಿಸಿರುವ ಒಂದೇ ಕೊಳವೆಬಾವಿಯಿಂದ ಎರಡೂ ಗ್ರಾಮಗಳಿಗೆ ನೀರು ಸರಬರಾಜು ಮಾಡಲಾಗುತ್ತಿದೆ. ವರವಿನೋರಹಟ್ಟಿ ಗ್ರಾಮದಲ್ಲಿ 90ಕ್ಕೂ ಹೆಚ್ಚು ಕುಟುಂಬಗಳಿವೆ. ಜನ–ಜಾನುವಾರು ಕುಡಿಯುವ ನೀರು ಪೂರೈಕೆಗೆ ನಿರ್ಮಿಸಿರುವ ನಾಲ್ಕು ಮಿನಿಟ್ಯಾಂಕ್‍ಗಳಲ್ಲಿ ಒಂದು ಟ್ಯಾಂಕಿಗೆ ಮಾತ್ರ ನೀರು ಸರಬರಾಜು ಆಗುತ್ತಿದ್ದು, ಇನ್ನುಳಿದ ಮೂರು ಟ್ಯಾಂಕ್ ಖಾಲಿ ಇರುತ್ತವೆ. ಹಾಗಾಗಿ ಒಂದೆರೆಡು ತಿಂಗಳಿಂದ ನೀರಿನ ಸಮಸ್ಯೆ ಎದುರಿಸುತ್ತಿದ್ದೇವೆ ಎಂದು ಗ್ರಾಮದ ಮಹಿಳೆ ಚಂದ್ರಮ್ಮ ಅಳಲು ತೋಡಿಕೊಂಡರು.

ಗ್ರಾಮದ ಕುಡಿಯುವ ನೀರಿನ ಪಂಪ್‍ಸೆಟ್‍ಗಳಿಗೆ ನಿರಂತರ ಜ್ಯೋತಿ ಸೌಲಭ್ಯ ಕಲ್ಪಿಸದ ಕಾರಣ ವಿದ್ಯುತ್ ಸಮಸ್ಯೆಯಿಂದ ಕುಡಿಯುವ ನೀರು ಸಂಗ್ರಹಿಸಿಕೊಳ್ಳಲು ಇಡೀ ರಾತ್ರಿ ನಿದ್ದೆಗಟ್ಟಿ ಕೊಡ ಹಿಡಿದು ನಿಲ್ಲಬೇಕಾಗಿದೆ ಎಂದು ಪಾಲಕ್ಕ ಬೇಸರ ವ್ಯಕ್ತಪಡಿಸಿದರು.

ಕುಡಿಯುವ ನೀರಿನ ಸಮಸ್ಯೆ ವಿಷಯ ಗ್ರಾಮಾಭಿವೃದ್ಧಿ ಅಧಿಕಾರಿಗಳ ಗಮನಕ್ಕೆ ತಂದರೂ ಪ್ರಯೋಜವಾಗಿಲ್ಲ ಎಂದು ಗ್ರಾಮ ಪಂಚಾಯಿತಿ ಸದಸ್ಯ ಉಜ್ಜಿನಯ್ಯ ದೂರಿದರು.

ಆಯಾ ಗ್ರಾಮಕ್ಕೆ ಪ್ರತ್ಯೇಕ ಕೊಳವೆಬಾವಿ ಕೊರೆಯಿಸಬೇಕು. ಪಂಪ್‌ಸೆಟ್‌ಗಳಿಗೆ ನಿರಂತರ ಜ್ಯೋತಿ ಸೌಲಭ್ಯ ಒದಗಿಸಲು ತುರ್ತು ಕ್ರಮ ಕೈಗೊಳ್ಳಬೇಕು ಎಂದು ಗ್ರಾಮದ ಮುಖಂಡ ದೊಡ್ಡಬೋರಯ್ಯ ಜಿಲ್ಲಾ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಅವರನ್ನು ಒತ್ತಾಯಿಸಿದರು.

ಮಹಿಳಾ ಸಂಘದ ಪ್ರತಿನಿಧಿ ಸುಜಾತಾ, ಬೈಯಮ್ಮ, ದಡ್ಲಮ್ಮ, ಶಾರದಮ್ಮ, ಗೀತಾ, ಓಬಕ್ಕ, ಮುಖಂಡ ಬೋರಯ್ಯ, ಚಿನ್ನಯ್ಯ ಪಾಲ್ಗೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT