ಬುಧವಾರ, 24 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಧರ್ಮಪುರ | ಕೆರೆಗೆ ಹರಿದ ನೀರು; ಕುಣಿದು, ಕುಪ್ಪಳಿಸಿದ ಜನ

ಶತಮಾನದ ಕನಸು ನನಸು: ಪಟಾಕಿ ಸಿಡಿಸಿ, ಸಿಹಿ ಹಂಚಿ ಸಂಭ್ರಮಿಸಿದ ಸಾರ್ವಜನಿಕರು
ವಿ.ವೀರಣ್ಣ ಧರ್ಮಪುರ
Published 29 ಜೂನ್ 2024, 6:23 IST
Last Updated 29 ಜೂನ್ 2024, 6:23 IST
ಅಕ್ಷರ ಗಾತ್ರ

ಧರ್ಮಪುರ: ಐತಿಹಾಸಿಕ ಧರ್ಮಪುರ ಕೆರೆಗೆ ಹೊಸಹಳ್ಳಿ ಬ್ಯಾರೇಜ್‌ನಿಂದ ಪ್ರಯೋಗಾರ್ಥವಾಗಿ ಶುಕ್ರವಾರ ನೀರು ಹರಿದು ಬರುತ್ತಿದ್ದಂತೆ ಸಾರ್ವಜನಿಕರು ಆನಂದದಿಂದ ಕುಣಿದು ಕುಪ್ಪಳಿಸಿದರು. ಮಕ್ಕಳು, ಮಹಿಳೆಯರು ಕೂಡ ಹರ್ಷ ವ್ಯಕ್ತಪಡಿಸಿದರು.

ಕೆರೆಗೆ ನೀರು ಹರಿಯುತ್ತಿದೆ ಎಂಬ ಸುದ್ದಿ ತಿಳಿದ ತಕ್ಷಣ ಅದನ್ನು ಕಣ್ತುಂಬಿಕೊಳ್ಳಲು ಗ್ರಾಮದ ನೂರಾರು ಜನರು ಕೆರೆಯತ್ತ ಧಾವಿಸಿದರು. ಮಹಿಳೆಯರು ಗಂಗೆ ಪೂಜೆ ನೆರವೇರಿಸಿದರು. ಯುವಕರು ಪಟಾಕಿ ಸಿಡಿಸಿ, ಸಿಹಿ ಹಂಚಿ ಸಂಭ್ರಮಿಸಿದರು. ಕೆಲವರು ಕೇಕೆ ಹಾಕಿ ಸಂಭ್ರಮಿಸಿದರು.

ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲಿ ಧರ್ಮಪುರ ಏತ ನೀರಾವರಿ ಯೋಜನೆಗೆ ₹90 ಕೋಟಿ ಅನುದಾನ ಮಂಜೂರಾಗಿತ್ತು. ಹೊಸಹಳ್ಳಿ ಬಳಿ ವೇದಾವತಿ ನದಿಗೆ ಬ್ಯಾರೇಜ್ ನಿರ್ಮಾಣ ಮಾಡಿ, ಗೂಳ್ಯ, ಅಬ್ಬಿನಹೊಳೆ, ಮುಂಗುಸುವಳ್ಳಿ-1, ಮುಂಗುಸುವಳ್ಳಿ-2, ಈಶ್ವರಗೆರೆ, ಸೂಗೂರು, ಶ್ರವಣಗೆರೆ, ಅಜ್ಜಿಕಟ್ಟೆ, ಧರ್ಮಪುರ ಕೆರೆಗಳಿಗೆ ನೀರು ಹರಿಸುವ ಯೋಜನೆಯ ಕಾಮಗಾರಿಗೆ 2022ರ ಜೂನ್‌ನಲ್ಲಿ ಅಂದಿನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಶಂಕುಸ್ಥಾಪನೆ ನೆರವೇರಿಸಿದ್ದರು.

ಮೊದಲ ಹಂತದ ಯೋಜನೆಗೆ ₹40 ಕೋಟಿ ಮೀಸಲಿಟ್ಟಿದ್ದು, ಪಂಪ್‌ಹೌಸ್, 1.5 ಕಿ.ಮೀ, ರೈಸಿಂಗ್ ಮೈನ್, ಜಾಕ್ವೆಲ್, ಪವರ್ ಸ್ಟೇಷನ್, 900 ಎಚ್‌ಪಿ ಸಾಮರ್ಥ್ಯದ 4 ಮೋಟಾರ್ ಪಂಪ್ ಅಳವಡಿಸಲಾಗಿತ್ತು.

ಎರಡನೇ ಹಂತದ ಯೋಜನೆಗೆ ₹50 ಕೋಟಿ ಅನುದಾನ ಬಿಡುಗಡೆಯಾಗಿ ರೈಸಿಂಗ್ ಮೈನ್ 16 ಕಿ.ಮೀ, ನಂತರ ಎಚ್‌ಡಿಪಿಇ 17 ಕಿ.ಮೀ, ಒಟ್ಟು 40 ಕಿ.ಮೀ. ಕಾಮಗಾರಿ ಪೂರ್ಣಗೊಂಡಿದ್ದು, ಶುಕ್ರವಾರ ಪ್ರಯೋಗಾರ್ಥವಾಗಿ ನೀರು ಹರಿಸಲಾಗಿದೆ. ಇದರಿಂದ ಒಟ್ಟು 0.30 ಟಿಎಂಸಿ ಅಡಿ ನೀರು ಸಿಗಲಿದೆ ಎಂದು ಸಹಾಯಕ ಎಂಜಿನಿಯರ್ ಜಿ.ಭೀಮರಾಜು ಮತ್ತು ಸೈಟ್ ಎಂಜಿನಿಯರ್ ರಾಜಶೇಖರ್ ತಿಳಿಸಿದ್ದಾರೆ.

ಶತಮಾನದ ಕನಸು: 1919ರಲ್ಲಿ ನಾಲ್ವಡಿ ಕೃಷ್ಣರಾಜ ಒಡೆಯರ್ ಕಾಲದಲ್ಲಿ ಧರ್ಮಪುರ ಕೆರೆಗೆ ಪೂರಕನಾಲೆ ಕಲ್ಪಿಸಲು ಅಂದಿನ ದಿವಾನರು ಪ್ರಸ್ತಾವ ಸಲ್ಲಿಸಿದ್ದರು. ಸ್ವಾತಂತ್ರ್ಯಾ ನಂತರ ಬಂದ ಸರ್ಕಾರಗಳು ಬರೀ ಆಶ್ವಾಸನೆಯನ್ನು ನೀಡುತ್ತಾ ಬಂದಿದ್ದವು. ಇತ್ತ ರೈತ ಹೋರಾಟವೂ ನಿರಂತರವಾಗಿ ಮುಂದುವರಿಯಿತು. ಧರ್ಮಪುರ ಹೋಬಳಿಯ ರೈತರು 200 ದಿನಗಳವರೆಗೆ ಸರದಿಯ ಮೇಲೆ ನಾಡಕಚೇರಿ ಮುಂದೆ ಧರಣಿ ಸತ್ಯಾಗ್ರಹ ನಡೆಸಿದ್ದರು. ಆದರೂ, ನೀರಾವರಿ ಸೌಕರ್ಯ ಬರೀ ಮರೀಚಿಕೆಯಾಗಿಯೇ ಉಳಿದಿತ್ತು.

‘ನಮ್ಮ ತಂದೆ ಕೃಷ್ಣಪ್ಪ ಅವರ ಅಭಿಲಾಷೆಯಂತೆ ಮತ್ತು ಮಾಜಿ ಮುಖ್ಯಮಂತ್ರಿಗಳಾದ ಬಿ.ಎಸ್.ಯಡಿಯೂರಪ್ಪ, ಬಸವರಾಜ ಬೊಮ್ಮಾಯಿ ಅವರ ಇಚ್ಛಾಶಕ್ತಿಯಿಂದ ಐತಿಹಾಸಿಕ ಧರ್ಮಪುರ ಕೆರೆ ಸೇರಿದಂತೆ ಒಂಬತ್ತು ಕೆರೆಗಳಿಗೆ ನೀರು ಹರಿಯಲು ಸಾಧ್ಯವಾಗಿದೆ. ನಾನು ಮಹಿಳಾ ಶಾಸಕಿಯಾಗಿ ಮೊದಲ ಯತ್ನದಲ್ಲಿಯೇ ಮತದಾರರ ಋಣ ತೀರಿಸಿದೆ’ ಎಂದು ಮಾಜಿ ಶಾಸಕಿ ಕೆ.ಪೂರ್ಣಿಮಾ ಶ್ರೀನಿವಾಸ್ ತಿಳಿಸಿದರು.

ಉಳಿದ ಕೆರೆಗಳಿಗೂ ನೀರು ಸೌಲಭ್ಯ: ಈ ಯೋಜನೆಯಿಂದ ಹೋಬಳಿಯ ಬಹುತೇಕ ಕೆರೆಗಳಿಗೆ ನೀರುಣಿಸುವ ಕಾಯಕ ದೊರೆತಂತಾಗುತ್ತದೆ. ಉಳಿದ ಗಡಿ ಭಾಗದ ಹಲಗಲದ್ದಿ, ಖಂಡೇನಹಳ್ಳಿ, ಹೊಸಕೆರೆ, ಅರಳೀಕೆರೆ, ಬೇತೂರು ಕೆರೆಗಳಿಗೆ ನೀರುಣಿಸುವ ಕಾಮಗಾರಿ ನಡೆಯಬೇಕು ಎಂದು ನೀರಾವರಿ ಹೋರಾಟ ಸಮಿತಿಯ ಮಾಜಿ ಅಧ್ಯಕ್ಷ ಎಂ.ಶಿವಣ್ಣ ಒತ್ತಾಯಿಸಿದರು.

ಧಮರ್ಪುರದ ಕೆರೆಯಲ್ಲಿ ಗಂಗಾ ಪೂಜೆ ನೆರವೇರಿಸಿದ ಮಹಿಳೆಯರು
ಧಮರ್ಪುರದ ಕೆರೆಯಲ್ಲಿ ಗಂಗಾ ಪೂಜೆ ನೆರವೇರಿಸಿದ ಮಹಿಳೆಯರು
ಕೆರೆಗಳಿಗೆ ನೀರು ಹರಿಸುವ ಕಾಮಗಾರಿ ಪೂರ್ಣಗೊಂಡಿದ್ದು ಮುಂದಿನ ವಾರ ಕಾಮಗಾರಿ ವೀಕ್ಷಣೆ ಮಾಡಲಿದ್ದೇನೆ. 9 ಕೆರೆಗಳಿಗೂ ನೀರುಣಿಸುವ ಕಾರ್ಯಕ್ರಮಕ್ಕೆ ಶೀಘ್ರವೇ ಹಸಿರು ನಿಶಾನೆ ಸಿಗಲಿದೆ 
ಡಿ.ಸುಧಾಕರ್‌ ಜಿಲ್ಲಾ ಉಸ್ತುವಾರಿ ಸಚಿವ
‘ಧರ್ಮಪುರ ಕೆರೆಗೆ ನೀರು ಹರಿಸುವ ಬೇಡಿಕೆ ನೂರು ವರ್ಷದಿಂದಲೂ ನನೆಗುದಿಗೆ ಬಿದ್ದಿತ್ತು. ಅಂದಿನಿಂದಲೂ ರೈತರ ಹೋರಾಟದಿಂದ ಯೋಜನೆ ಸಾಕಾರಗೊಂಡಿದೆ. ಇದಕ್ಕೆ ಪ್ರಯತ್ನಿಸಿದ ಮಾಜಿ ಶಾಸಕಿ ಕೆ.ಪೂರ್ಣಿಮಾ ಶ್ರೀನಿವಾಸ್ ಅವರಿಗೆ ಧನ್ಯವಾದ
ಕೆ.ಟಿ.ತಿಪ್ಪೇಸ್ವಾಮಿ ಅಧ್ಯಕ್ಷ ರೈತ ಸಂಘದ ತಾಲ್ಲೂಕು ಘಟಕ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT