ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ನಮ್ಮ ಜಯಣ್ಣ ಇದ್ದಾನೆ ನಮಗೆ’

ಮೊಳಕಾಲ್ಮುರಿನ ಜತೆ ಅವಿನಾಭಾವ ನಂಟು
Last Updated 11 ನವೆಂಬರ್ 2020, 6:03 IST
ಅಕ್ಷರ ಗಾತ್ರ

ಮೊಳಕಾಲ್ಮುರು: ಜಿಲ್ಲಾ ನೀರಾವರಿ ಹೋರಾಟ ಸಮಿತಿ ಕಾರ್ಯಾಧ್ಯಕ್ಷ ಹಾಗೂ ದಸಂಸ ಮುಖಂಡ ಎಂ.ಜಯಣ್ಣ ತಾಲ್ಲೂಕಿನ ಜತೆ ಹತ್ತಾರು ವರ್ಷಗಳಿಂದ ಅವಿನಾಭಾವ ಸಂಬಂಧ ಹೊಂದಿದ್ದರು.

‘30ಕ್ಕೂ ಹೆಚ್ಚು ವರ್ಷಗಳಿಂದ ತಾಲ್ಲೂಕಿನ ‘ದಲಿತ’ ಸಮುದಾಯದ ಜತೆಗೆ ಹಾಗೂ ಎಲ್ಲ ಜನಾಂಗಗಳ ಜತೆ ಉತ್ತಮ ಬಂಧುತ್ವ ಹೊಂದಿದ್ದ ಅವರು ಹತ್ತಾರು ಹೋರಾಟಗಳ ನೇತೃತ್ವವನ್ನು ವಹಿಸಿಕೊಂಡಿದ್ದರು. ಪಟ್ಟಣದಲ್ಲಿ ಸರ್ಕಾರಿ ಪದವಿ ಕಾಲೇಜು ಆರಂಭಕ್ಕೆ ಹಾಗೂ ಎಸ್‌ಸಿ, ಎಸ್‌ಟಿ ವಿದ್ಯಾರ್ಥಿ ನಿಲಯಗಳ ಸಂಖ್ಯೆ ಹೆಚ್ಚಳಕ್ಕೆ ನಡೆದ ಹೋರಾಟಗಳಲ್ಲಿ ಪ್ರಮುಖ ಪಾತ್ರ ವಹಿಸಿದ್ದರು’ ಎಂದು ನೆನ‍ಪಿಕೊಳ್ಳುವರು ದಲಿತ ಸಂಘರ್ಷ ಸಮಿತಿಯ ಮುಖಂಡ ಡಿ.ಒ.ಮೊರಾರ್ಜಿ.

‘ದಲಿತ’ ಕೇರಿಗಳಿಗೆ ನಿರಂತರ ಭೇಟಿ ನೀಡುತ್ತಿದ್ದ ಅವರು, ದಲಿತರ ಸಮಸ್ಯೆಗಳನ್ನು ತಮ್ಮ ಸಮಸ್ಯೆಗಳು ಎಂಬ ರೀತಿಯಲ್ಲಿ ಜವಾಬ್ದಾರಿಯುತವಾಗಿ ನಿಭಾಯಿಸುತ್ತಿದ್ದರು. ಅನೇಕರು ‘ನಮ್ಮ ಜಯಣ್ಣ ಇದ್ದಾನೆ ನಮಗೆ’ ಎನ್ನುವಷ್ಟು ಸ್ಪಂದಿಸಿದ್ದರು.

ಜಿಲ್ಲೆಯಲ್ಲಿ ಚಿತ್ರದುರ್ಗ ಬಿಟ್ಟರೆ ಹೆಚ್ಚಿನ ಒಡನಾಟ ಹೊಂದಿದ್ದು ಮೊಳಕಾಲ್ಮುರಿನ ಜತೆಗೆ. ಮೊಳಕಾಲ್ಮುರು ವಿಧಾನಸಭಾ ಕ್ಷೇತ್ರ ಸಾಮಾನ್ಯಕ್ಕೆ ಮೀಸಲಾಗಿದ್ದ ವೇಳೆ 2003 ಹಾಗೂ 2008ರಲ್ಲಿ ನಡೆದ ವಿಧಾನಸಭಾ ಚುನಾವಣೆಯಲ್ಲಿ ಅವರು ಈ ಕ್ಷೇತ್ರದಿಂದ ಬಿಎಸ್‌ಪಿಯಿಂದ ಸ್ಪರ್ಧಿಸಿದ್ದರು. ಕ್ರಮವಾಗಿ 11,000 ಹಾಗೂ 18,000 ಮತಗಳನ್ನು ಪಡೆದಿದ್ದರು. 2003ರಲ್ಲಿ ಹಿರಿಯ ಮುಖಂಡ ಕಾನ್ಷಿರಾಂ ಬಂದು ಜಯಣ್ಣ ಪರವಾಗಿ ಪ್ರಚಾರ ನಡೆಸಿದ್ದನ್ನು ಸ್ಮರಿಸಬಹುದು.

ಕ್ಷೇತ್ರ ಎಸ್‌ಟಿಗೆ ಮೀಸಲಾದ ಕಾರಣ ಇಲ್ಲಿ ರಾಜಕೀಯ ಮುಂದುವರಿಸಲಿಲ್ಲ. ನಿರಂತರವಾಗಿ ಬರಗಾಲಕ್ಕೆ ತುತ್ತಾಗುತ್ತಿರುವ ಮೊಳಕಾಲ್ಮುರಿಗೆ ಭದ್ರಾ ಮೇಲ್ದಂಡೆ ಯೋಜನೆಯಲ್ಲಿ ನೀರು ಹರಿಸಬೇಕು ಎಂಬ ಹೋರಾಟದಲ್ಲಿ ಸಕ್ರಿಯವಾಗಿದ್ದರು. ಈ ಸಂಬಂಧ ನಡೆದ ಬೃಹತ್ ಪಾದಯಾತ್ರೆಗೆ ತಾಲ್ಲೂಕಿನ ರಾಂಪುರದಲ್ಲಿ ಚಾಲನೆ ಸಿಕ್ಕಿತ್ತು.

ಮೊಳಕಾಲ್ಮುರು ಯೋಜನೆ ‘ಎ’ ಸ್ಕೀಂನಲ್ಲಿ ಬಿಟ್ಟು ಹೋಗಿರುವ ಬಗ್ಗೆ ಬೇಸರ ಹೊಂದಿದ್ದ ಅವರು, ಅನೇಕ ನೀರಾವರಿ ಹೋರಾಟ ಸಭೆಗಳಲ್ಲಿ ಸೇರ್ಪಡೆಗೆ ಆಗ್ರಹಿಸಿ ಮಾತನಾಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT