ಶನಿವಾರ, ಜೂನ್ 19, 2021
22 °C
ವಧು–ವರನ ಹತ್ತು ಸಂಬಂಧಿಕರ ಬಂಧನ

ಚಿತ್ರದುರ್ಗ: ಕರ್ಫ್ಯೂ ಉಲ್ಲಂಘಿಸಿ ಮದುವೆ, ಪೊಲೀಸ್‌ ವಾಹನದ ಮೇಲೆ ಕಲ್ಲು ತೂರಾಟ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಚಿತ್ರದುರ್ಗ: ತಾಲ್ಲೂಕಿನ ಬ್ಯಾಲಹಾಳು ಗ್ರಾಮದ ಮದುವೆ ಮನೆಯಲ್ಲಿ ಸೇರಿದ್ದ ಅಪಾರ ಜನರಿಗೆ ಬುದ್ಧಿಹೇಳಲು ಹೋಗಿದ್ದ ಪೊಲೀಸರ ವಾಹನದ ಮೇಲೆ ಕಲ್ಲುತೂರಾಟ ನಡೆಸಲಾಗಿದೆ. ಕರ್ಫ್ಯೂ ನಿಯಮ ಉಲ್ಲಂಘಿಸಿದ ಹಾಗೂ ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸಿದ ಆರೋಪದ ಮೇರೆಗೆ ವರನ ಸಹೋದರ ಸೇರಿ ಹತ್ತು ಜನರನ್ನು ಪೊಲೀಸರು ಬಂಧಿಸಿದ್ದಾರೆ.

ವಾರಾಂತ್ಯದ ಕರ್ಫ್ಯೂ ಸಂದರ್ಭದಲ್ಲಿಯೂ ಮದುವೆ ನಡೆಸಲು ಸರ್ಕಾರ ಅನುಮತಿ ನೀಡಿದೆ. ಅದಕ್ಕೆ ಅನುಮತಿ ಪಡೆದು ಮಾರ್ಗಸೂಚಿ ಪಾಲನೆ ಮಾಡುವಂತೆ ಷರತ್ತು ವಿಧಿಸಿದೆ. ಅನುಮತಿ ಪಡೆಯದೇ ನಡೆಯುತ್ತಿದ್ದ ಮದುವೆ ಮನೆ ಪತ್ತೆಹಚ್ಚಿ ಮಾರ್ಗಸೂಚಿ ಉಲ್ಲಂಘಿಸಿದವರ ವಿರುದ್ಧ ಕ್ರಮಕ್ಕೆ ಮುಂದಾದಾಗ ಈ ಘಟನೆ ನಡೆದಿದೆ. ಬಂಧಿತರನ್ನು ಭಾನುವಾರ ಸಂಜೆ ಜೈಲಿಗೆ ಕಳುಹಿಸಲಾಗಿದೆ.

‘ಭರಮಸಾಗರ ಪೊಲೀಸ್ ಠಾಣಾ ವ್ಯಾಪ್ತಿಯ ಬ್ಯಾಲಹಾಳು ಗ್ರಾಮದಲ್ಲಿ ಶನಿವಾರ ರಾತ್ರಿ ವಿವಾಹವೊಂದು ನಡೆಯುತ್ತಿತ್ತು. ನಿಯಮ ಬಾಹಿರವಾಗಿ ಜನ ಸೇರಿರುವ ಬಗ್ಗೆ ಸಹಾಯವಾಣಿ 112ಗೆ ಮಾಹಿತಿ ಬಂದಿತ್ತು. ಪರಿಶೀಲನೆಗೆ ಪೊಲೀಸರು ಸ್ಥಳಕ್ಕೆ ತೆರಳಿದಾಗ ಗುಂಪೊಂದು ಕಲ್ಲುತೂರಾಟ ನಡೆಸಿದೆ’ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಇದನ್ನು ಗಂಭೀರವಾಗಿ ಪರಿಗಣಿಸಿದ ಪೊಲೀಸರು, ಚಿತ್ರದುರ್ಗ ಉಪವಿಭಾಗದ ಡಿವೈಎಸ್‌ಪಿ ಪಾಂಡುರಂಗಪ್ಪ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಪತ್ತೆ ಮಾಡಿದ್ದಾರೆ. ಹತ್ತು ಜನರ ವಿರುದ್ಧ ಕರ್ನಾಟಕ ವಿಪತ್ತು ನಿರ್ವಹಣಾ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

ಸ್ತಬ್ಧವಾದ ಕೋಟೆನಾಡು: ವಾರಾಂತ್ಯದ ಕರ್ಫ್ಯೂಗೆ ಎರಡನೇ ದಿನವಾದ ಭಾನುವಾರವೂ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಇದರಿಂದ ಇಡೀ ಜಿಲ್ಲೆ ಸ್ತಬ್ಧವಾಗಿತ್ತು.

ಬೆಳಿಗ್ಗೆ 6ರಿಂದ 10ಗಂಟೆಯವರೆಗೆ ಅಗತ್ಯ ವಸ್ತುಗಳನ್ನು ಖರೀದಿಸಲು ಅವಕಾಶ ಕಲ್ಪಿಸಲಾಗಿತ್ತು. ತರಕಾರಿ ಮಾರುಕಟ್ಟೆ, ದಿನಸಿ ಅಂಗಡಿ, ಹಾಲಿನ ಮಳಿಗೆ ಸೇರಿ ಇತರ ಅಂಗಡಿಗಳು ಬಾಗಿಲು ತೆರೆದಿದ್ದವು. ಈ ಸಂದರ್ಭದಲ್ಲಿ ಮನೆಯಿಂದ ಹೊರಗೆ ಬಂದ ಜನರು ತರಕಾರಿ ಹಾಗೂ ದಿನಸಿ ಸಾಮಗ್ರಿಗಳನ್ನು ಖರೀದಿಸಿದರು.

ಜನದಟ್ಟಣೆ ಸೇರದಂತೆ ಎಚ್ಚರಿಕೆ ವಹಿಸಿದ್ದ ಪೊಲೀಸರು ಅಂಗಡಿಗಳು ಕಾಲಮಿತಿಯಲ್ಲಿ ಬಾಗಿಲು ಹಾಕುವಂತೆ ನೋಡಿಕೊಂಡರು. ಧ್ವನಿವರ್ಧಕದಲ್ಲಿ ಸೂಚನೆಗಳನ್ನು ನೀಡುತ್ತಿದ್ದ ದೃಶ್ಯ ತರಕಾರಿ ಮಾರುಕಟ್ಟೆಯಲ್ಲಿ ಕಂಡುಬಂದಿತು. ನಿಗದಿಯಂತೆ ಬೆಳಿಗ್ಗೆ 10ಕ್ಕೆ ಬಹುತೇಕ ಎಲ್ಲರೂ ಮನೆ ಸೇರಿದರು. ಚಿತ್ರದುರ್ಗ ನಗರವೂ ಸೇರಿ ಜಿಲ್ಲೆಯ ಎಲ್ಲೆಡೆ ನೀರವ ಮೌನ ಆವರಿಸಿತ್ತು.

ನಿರಾಸೆಯಿಂದ ಮರಳಿದರು: ಮಹಾವೀರ ಜಯಂತಿಯ ಅಂಗವಾಗಿ ಭಾನುವಾರ ಮಾಂಸದ ಮಾರುಕಟ್ಟೆಗೆ ನಿರ್ಬಂಧ ವಿಧಿಸಲಾಗಿತ್ತು. ವಾರಾಂತ್ಯದ ಬಾಡೂಟ ಸವಿಯುವ ಆಸೆಯಿಂದ ಮಾರುಕಟ್ಟೆಗೆ ಬಂದಿದ್ದವರು ಮಾಂಸ ಮಾರಾಟಕ್ಕೆ ನಿರ್ಬಂಧ ವಿಧಿಸಿದ್ದನ್ನು ಗಮನಿಸಿ ಮನೆಗೆ ಮರಳಿದರು.

ಅನಗತ್ಯವಾಗಿ ಸಂಚರಿಸುತ್ತಿದ್ದವರಿಗೆ ಪೊಲೀಸರು ಎಚ್ಚರಿಕೆ ನೀಡಿದರು. ಮಾಸ್ಕ್ ಧರಿಸದ ಹಾಗೂ ಅಂತರ ಕಾಪಾಡಿಕೊಳ್ಳದವರಿಗೆ ದಂಡದ ಬಿಸಿ ಮುಟ್ಟಿಸಿದರು. ಆಟೊ, ದ್ವಿಚಕ್ರ ವಾಹನ ಸಂಚಾರವೂ ವಿರಳವಾಗಿತ್ತು. ಅನಿವಾರ್ಯವಾಗಿ ಸಂಚರಿಸುತ್ತಿದ್ದವರು ಪೊಲೀಸರಿಗೆ ಕಾರಣ ನೀಡುತ್ತಿದ್ದರು. ಸಂಜೆಯ ಬಳಿಕ ಪ್ರಮುಖ ರಸ್ತೆಗಳು ನಿರ್ಜನ ಪ್ರದೇಶಗಳಂತೆ ಗೋಚರಿಸುತ್ತಿದ್ದವು.

26 ಜನರ ಬಂಧನ: ವಾರಾಂತ್ಯದ ಕರ್ಫ್ಯೂ ಉಲ್ಲಂಘಿಸಿ ಸಂಚರಿಸುತ್ತಿದ್ದ ಹಾಗೂ ಮಾರ್ಗಸೂಚಿ ಪಾಲಿಸದ 26 ಜನರನ್ನು ಪೊಲೀಸರು ಬಂಧಿಸಿದ್ದಾರೆ. ಮಾಸ್ಕ್‌ ಧರಿಸದವರು, ಅಂತರ ಕಾಯ್ದುಕೊಳ್ಳದವರು ಹಾಗೂ ಅನಗತ್ಯವಾಗಿ ಓಡಾಡುತ್ತಿದ್ದವರು ಜೈಲು ಪಾಲಾಗಿದ್ದಾರೆ.

ಮೆದೇಹಳ್ಳಿ ರಸ್ತೆಯ ಬಂಬೂಬಜಾರಿನಲ್ಲಿ ಗುಂಪು ಸೇರಿದ್ದ ಐವರು ಹಮಾಲಿ ಕಾರ್ಮಿಕರನ್ನು ಕೋಟೆ ಠಾಣೆಯ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಅನಗತ್ಯವಾಗಿ ದ್ವಿಚಕ್ರ ವಾಹನದಲ್ಲಿ ಸಂಚರಿಸುತ್ತಿದ್ದ ಇಬ್ಬರು ಯುವಕರನ್ನು ಗ್ರಾಮಾಂತರ ಠಾಣೆಯ ಪೊಲೀಸರು ಬಂಧಿಸಿದ್ದಾರೆ. ಭರಮಸಾಗರದ ಡಾಬಾವೊಂದರ ಬಳಿ ಅಂತರ ಕಾಯ್ದುಕೊಳ್ಳದವರನ್ನು ವಶಕ್ಕೆ ಪಡೆಯಲಾಗಿದೆ.

ಮೊಳಕಾಲ್ಮುರು ಠಾಣಾ ವ್ಯಾಪ್ತಿಯಲ್ಲಿ ಮೂವರು, ರಾಂಪುರ ಠಾಣಾ ವ್ಯಾಪ್ತಿಯಲ್ಲಿ ಇಬ್ಬರು, ಪರಶುರಾಂಪುರ ಠಾಣಾ ವ್ಯಾಪ್ತಿಯ ದೊಡ್ಡಬಾದಿಹಳ್ಳಿಯಲ್ಲಿ ಆರು, ಹೊಸದುರ್ಗದಲ್ಲಿ ಇಬ್ಬರು, ಶ್ರೀರಾಂಪುರ ಠಾಣಾ ವ್ಯಾಪ್ತಿಯಲ್ಲಿ ಒಬ್ಬರು ಹಾಗೂ ಐಮಂಗಲದಲ್ಲಿ ಇಬ್ಬರನ್ನು ಬಂಧಿಸಲಾಗಿದೆ ಎಂದು ಪೊಲೀಸರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

***

ಕರ್ಫ್ಯೂ ಉಲ್ಲಂಘಿಸಿ ಕರ್ತವ್ಯಕ್ಕೆ ಅಡ್ಡಿಪಡಿಸಿದರೆ ಕರ್ನಾಟಕ ವಿಪತ್ತು ನಿರ್ವಹಣಾ ಕಾಯ್ದೆಯಡಿ ಪ್ರಕರಣ ದಾಖಲು ಮಾಡಲಾಗುತ್ತದೆ. ಏಳು ವರ್ಷ ಜೈಲು ಹಾಗೂ ₹ 5 ಲಕ್ಷದವರೆಗೆ ದಂಡ ವಿಧಿಸಲು ಅವಕಾಶವಿದೆ.

–ಜಿ.ರಾಧಿಕಾ, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು