ಶುಕ್ರವಾರ, ಮಾರ್ಚ್ 24, 2023
27 °C

ಶೂನ್ಯ ನೆರಳಿಗೆ ಸಾಕ್ಷಿಯಾದ ಮಕ್ಕಳು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಚಿತ್ರದುರ್ಗ: ಸೂರ್ಯನು ಉತ್ತರ ದಿಕ್ಕಿನ ಪಥದಲ್ಲಿ ಚಲಿಸಿದ್ದರಿಂದ ನಗರದಲ್ಲಿ ಬುಧವಾರ ಮಧ್ಯಾಹ್ನ 12.30ಕ್ಕೆ ನೆರಳು ಕಾಣಿಸಿಕೊಳ್ಳಲಿಲ್ಲ. ಶೂನ್ಯ ನೆರಳಿನ ದಿನಕ್ಕೆ ಶಾಲಾ ಮಕ್ಕಳು ಸಾಕ್ಷಿಯಾದರು.

ಚಿತ್ರದುರ್ಗ ತಾಲ್ಲೂಕಿನ ಇಂಗಳದಾಳ್‌ ಹಾಗೂ ನಗರದ ಚಿಕ್ಕಪೇಟೆಯ ಮಹರ್ಷಿ ಯೋಗ ಶಿಕ್ಷಣ ಸಂಸ್ಥೆಯಲ್ಲಿ ಶೂನ್ಯ ನೆರಳಿನ ದಿನದ ವಿಸ್ಮಯವನ್ನು ತಿಳಿಸಿಕೊಡಲಾಯಿತು.

ಒಂದು ಅಡಿ ಎತ್ತರದ ಪೈಪ್‌ ಅಥವಾ ಗಾಜಿನ ಲೋಟವನ್ನು ಬಿಸಿಲಲ್ಲಿ ಇಟ್ಟು ಪರೀಕ್ಷಿಸಲಾಯಿತು. ಮಧ್ಯಾಹ್ನ 12.15ರಿಂದ 12.35ರ ಅವಧಿಯ ಒಂದು ನಿಮಿಷ ನೆರಳು ಕಾಣಿಸಿಕೊಳ್ಳುವುದಿಲ್ಲವೆಂದು ವಿಜ್ಞಾನಿಗಳು ಅಂದಾಜು ಮಾಡಿದ್ದರು. ಮಧ್ಯಾಹ್ನ 12.30ಕ್ಕೆ ಇದು ಋಜುವಾತು ಆಯಿತು. ಮಕ್ಕಳು ಪರಸ್ಪರ ಕೈಕೈ ಹಿಡಿದು ಬಿಸಿಲಲ್ಲಿ ನಿಂತು ದೃಢಪಡಿಸಿಕೊಂಡರು.

ವಿಜ್ಞಾನ ಲೇಖಕ ಎಚ್.ಎಸ್.ಟಿ.ಸ್ವಾಮಿ, ‘ಇಂಗಳದಾಳ್‌ ಗ್ರಾಮದಲ್ಲಿ ಶೂನ್ಯ ನೆರಳಿನ ದಿನವನ್ನು ಸಾಂಕೇತಿಕವಾಗಿ ಆಚರಿಸಲಾಯಿತು. ಬೆರಳೆಣಿಕೆಯ ಮಕ್ಕಳು ಇದಕ್ಕೆ ಸಾಕ್ಷಿಯಾದರು. ಮಧ್ಯಾಹ್ನ 12.30ಕ್ಕೆ ನೆರಳು ಕಣ್ಮರೆಯಾಗಿತ್ತು. ಸೂರ್ಯ ನಡುನೆತ್ತಿಯ ಮೇಲಿದ್ದ ಕಾರಣ ಲಂಬಾಕಾರದ ವಸ್ತುಗಳ ಕೆಳಗೆ ನೆರಳು ಇರುತ್ತದೆ. ಅದು ನಮಗೆ ಗೋಚರಿಸುವುದಿಲ್ಲ’ ಎಂದು ಹೇಳಿದರು.

ಚಿಕ್ಕಪೇಟೆಯ ಮಹರ್ಷಿ ಯೋಗ ಶಿಕ್ಷಣ ಸಂಸ್ಥೆಯಲ್ಲಿ ನಡೆದ ದಿನಾಚರಣೆಯಲ್ಲಿ ಶಿಕ್ಷಕಿ ಪೂರ್ಣಿಮಾ ಮಂಜುನಾಥ್, ‘ಸೂರ್ಯನು ಉತ್ತರ ದಿಕ್ಕಿನ ಪಥದಲ್ಲಿ ಚಲಿಸುತ್ತಾನೆ. ಹೀಗಾಗಿ, ಶೂನ್ಯ ನೆರಳು ಉಂಟಾಗುತ್ತದೆ. ಈ ಕ್ರಿಯೆ ಒಂದು ಸ್ಥಳದಿಂದ ಮತ್ತೊಂದಕ್ಕೆ ಸ್ಥಳಕ್ಕೆ ಬೇರೆ ಬೇರೆಯಾಗಿರುತ್ತದೆ. ನಾವು ಬಿಸಿಲಿನಲ್ಲಿ ನಿಂತಾಗ ನಮ್ಮ ದೇಹದ ನರಳು ಸರಿಯಾಗಿ ನಮ್ಮ ಪಾದದ ಕೆಳಗೆ ಇರುತ್ತದೆ’ ಎಂದು ಹೇಳಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು