ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನರೇಗಾ ಅನುಪಾತ ನಿರಂತರ ಉಲ್ಲಂಘನೆ

ಜಿಲ್ಲಾ ಪಂಚಾಯಿತಿ ಸಾಮಾನ್ಯ ಸಭೆಯಲ್ಲಿ ಬಹಿರಂಗ, ಅಧಿಕಾರಿಗಳ ಅಮಾನತಿಗೆ ಪಟ್ಟು
Last Updated 4 ಸೆಪ್ಟೆಂಬರ್ 2020, 12:05 IST
ಅಕ್ಷರ ಗಾತ್ರ

ಚಿತ್ರದುರ್ಗ: ಗ್ರಾಮೀಣ ಪ್ರದೇಶದಲ್ಲಿ ವಲಸೆ ತಪ್ಪಿಸಿ ಜನರ ಕೈಗೆ ಕೆಲಸ ನೀಡುವ ಮಹಾತ್ಮ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತರಿ ಯೋಜನೆ (ನರೇಗಾ) ನಿಯಮಗಳು ಜಿಲ್ಲೆಯಲ್ಲಿ ಮೂರು ವರ್ಷದಿಂದ ನಿರಂತರವಾಗಿ ಉಲ್ಲಂಘನೆ ಆಗುತ್ತಿರುವುದು ಶುಕ್ರವಾರ ಜಿಲ್ಲಾ ಪಂಚಾಯಿತಿ ಸಾಮಾನ್ಯ ಸಭೆಯಲ್ಲಿ ಬೆಳಕಿಗೆ ಬಂದಿತು.

ಅಧ್ಯಕ್ಷೆ ಶಶಿಕಲಾ ಸುರೇಶಬಾಬು ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ನರೇಗಾ ಯೋಜನೆಯ ಬಗ್ಗೆ ಬಹುಹೊತ್ತು ಚರ್ಚೆ ನಡೆಯಿತು. ನರೇಗಾ ಕಾಮಗಾರಿಯ ಸಾಮಗ್ರಿ ಹಾಗೂ ಮಾನವ ದಿನದ ಅನುಪಾತದಲ್ಲಿ ವ್ಯತ್ಯಾಸ ಉಂಟಾಗಿರುವುದು ಸದಸ್ಯರ ಆಕ್ರೋಶಕ್ಕೆ ಕಾರಣವಾಯಿತು.

ನಿಯಮ ಉಲ್ಲಂಘಿಸಿ ಕಾಮಗಾರಿಗೆ ಕಾರ್ಯಾದೇಶ ನೀಡಿದ ಅಧಿಕಾರಿಗಳನ್ನು ಅಮಾನತು ಮಾಡಬೇಕು ಎಂದು ಸದಸ್ಯರು ಪಟ್ಟುಹಿಡಿದರು. ರಾಜಕೀಯ ಪಕ್ಷಗಳ ಮುಖಂಡರು, ಜನಪ್ರತಿನಿಧಿಗಳು ಹಾಗೂ ಅವರ ಬೆಂಬಲಿಗರು ಕಾಮಗಾರಿ ನಡೆಸುತ್ತಿರುವ ಸಂಗತಿ ಕೂಡ ಬಹಿರಂಗಗೊಂಡಿತು.

‘ನರೇಗಾ ಕಾಮಗಾರಿಯಲ್ಲಿ ಶೇ 60ರಷ್ಟು ಮಾನವ ದಿನ ಹಾಗೂ ಶೇ 40ರಷ್ಟು ಸಾಮಗ್ರಿ ಬಳಕೆ ಮಾಡಬೇಕು. ಈ ಅನು‍ಪಾತ 2017–18, 2018–19 ಹಾಗೂ 2019–20ರಲ್ಲಿ ಉಲ್ಲಂಘನೆ ಆಗಿದೆ. ಸತತ ಮೂರು ವರ್ಷ ನಿಯಮ ಉಲ್ಲಂಘನೆ ಆಗಿರುವುದನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿದೆ. ಕಾರ್ಯಾದೇಶ ನೀಡಿದ ಅಧಿಕಾರಿಗಳ ಪಟ್ಟಿ ಕೊಡುವಂತೆ ಸೂಚನೆ ನೀಡಿದೆ’ ಎಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹನಾಧಿಕಾರಿ ಟಿ.ಯೋಗೇಶ್ ಸಭೆಗೆ ಮಾಹಿತಿ ನೀಡಿದರು.

ಬಿಲ್‌ ಬಾಕಿಗೆ ಅಸಮಾಧಾನ:ಸದಸ್ಯ ನಾಗೇಂದ್ರನಾಯ್ಕ್‌ ಮಾತನಾಡಿ, ‘ನರೇಗಾ ಯೋಜನೆಯಡಿ ಕೆಲಸ ಮಾಡಿದ ಗುತ್ತಿಗೆದಾರರಿಗೆ ಎರಡು ವರ್ಷದಿಂದ ಹಣ ಬಿಡುಗಡೆಯಾಗಿಲ್ಲ. ಗ್ರಾಮ ಪಂಚಾಯಿತಿ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲು ಇದರಿಂದ ತೊಡಕಾಗಿದೆ. ಸಕಾಲಕ್ಕೆ ಅನುದಾನ ಬಿಡುಗಡೆಯಾಗುತ್ತಿಲ್ಲವೆಂದು ಗುತ್ತಿಗೆದಾರರು ಹಿಂದೇಟು ಹಾಕುತ್ತಿದ್ದಾರೆ. ಇದು ರಾಜಕಾರಣಿಗಳ ಮೇಲೆ ಒತ್ತಡ ಸೃಷ್ಟಿಸಿದೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಇದಕ್ಕೆ ಧ್ವನಿಗೂಡಿಸಿದ ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿ ಅಧ್ಯಕ್ಷ ನರಸಿಂಹರಾಜು, ‘2007ರಲ್ಲಿ ನರೇಗಾ ಅನುಷ್ಠಾನ ಆದಾಗ ಇಷ್ಟು ನಿರ್ಬಂಧ ಇರಲಿಲ್ಲ. ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ (ಪಿಡಿಒ) ಕಾರ್ಯಾದೇಶ ನೀಡುವ ಅಧಿಕಾರ ಹೊಂದಿದ್ದರು. ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಕಾರ್ಯಾದೇಶದ ಅಧಿಕಾರ ಪಡೆದರು. ಈಗ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿಗೆ ಅಧಿಕಾರ ವರ್ಗಾವಣೆಯಾಗಿದೆ. ಇದು ತೊಂದರೆಯುಂಟು ಮಾಡಿದೆ’ ಎಂದು ಆರೋಪಿಸಿದರು.

‘ನಿಯಮ ಉಲ್ಲಂಘನೆ ಆಗದಂತೆ ತಡೆಯುವ ಜವಾಬ್ದಾರಿ ಅಧಿಕಾರಿಗಳ ಮೇಲಿದೆ. ಕಾರ್ಯಾದೇಶ ಸಿಕ್ಕ ಬಳಿಕ ನಡೆದ ಕಾಮಗಾರಿಗೆ ಆಕ್ಷೇಪ ಎತ್ತುವುದು ತಪ್ಪು. ಗೊತ್ತಿದ್ದು ತಪ್ಪು ಮಾಡಿದ ಅಧಿಕಾರಿಗಳನ್ನು ಪತ್ತೆ ಮಾಡಿ. ಅವರ ವಿರುದ್ಧ ಶಿಸ್ತುಕ್ರಮ ಜರುಗಿಸಿ’ ಎಂದು ಒತ್ತಾಯಿಸಿದರು. ಸದಸ್ಯರಾದ ಡಿ.ಕೆ.ಶಿವಮೂರ್ತಿ, ಡಾ.ಯೋಗೇಶಬಾಬು ಸೇರಿ ಅನೇಕರು ಇದಕ್ಕೆ ಧ್ವನಿಗೂಡಿಸಿದರು.

‘ಕೋರಂ’ ಗದ್ದಲ:ಸಾಮಾನ್ಯ ಸಭೆಯ ಆರಂಭಕ್ಕೂ ಮೊದಲೇ ಸದಸ್ಯೆ ಸೌಭಾಗ್ಯ ಬಸವರಾಜನ್‌ ಅವರು ಕೋರಂ ಬಗ್ಗೆ ಎತ್ತಿದ ಪ್ರಶ್ನೆ ಗದ್ದಲ ಸೃಷ್ಟಿಸಿತು. ಆಡಳಿತ ಪಕ್ಷದ ಸದಸ್ಯರೊಂದಿಗೆ ತೀವ್ರ ವಾಗ್ವಾದಕ್ಕೆ ಎಡೆಮಾಡಿಕೊಟ್ಟಿತು.

ನಾಡಗೀತೆ ಮುಗಿಯುತ್ತಿದ್ದಂತೆ ಎದ್ದುನಿಂತ ಸೌಭಾಗ್ಯ, ‘ಸಭೆ ಆರಂಭಕ್ಕೆ ಕೋರಂ ಇದೆಯೇ ಎಂಬುದನ್ನು ಖಚಿತಪಡಿಸಿ’ ಎಂದು ಏರುಧ್ವನಿಯಲ್ಲಿ ಮಾತನಾಡಿದರು. ‘ಕೋರಂ ಇಲ್ಲದೇ ಸಭೆ ಆರಂಭಿಸುತ್ತಿರುವುದು ಸರಿಯೇ’ ಎಂದು ಅಧ್ಯಕ್ಷೆ ಶಶಿಕಲಾ ಅವರನ್ನು ಪ್ರಶ್ನಿಸಿದರು.

37 ಸದಸ್ಯರ ಪೈಕಿ 25 ಸದಸ್ಯರು ಹಾಜರಾದರೆ ಸಭೆಗೆ ಕೋರಂ ಸಿಗುತ್ತದೆ. ಸಭೆಯಲ್ಲಿ ಕೋರಂಗೆ ಅಗತ್ಯವಿರುವಷ್ಟು ಸದಸ್ಯರು ಹಾಜರಾಗಿದ್ದಾರೆ ಎಂದು ಅಧಿಕಾರಿಗಳು ಉತ್ತರಿಸಲು ಪ್ರಯತ್ನಿಸಿದರು. ಅಧಿಕಾರಿಗಳಿಗೆ ಮಾತನಾಡಲು ಅವಕಾಶ ನೀಡುತ್ತಿಲ್ಲವೆಂದು ಕಾಂಗ್ರೆಸ್‌ ಸದಸ್ಯರು ಸೌಭಾಗ್ಯ ವಿರುದ್ಧ ಹರಿಹಾಯ್ದರು.

ಗುತ್ತಿಗೆ ನೇಮಕಾತಿ ವಿರುದ್ಧ ಆಕ್ರೋಶ:ಪಂಚಾಯತ್‌ ರಾಜ್‌ ಇಲಾಖೆಯ ಎಂಜಿನಿಯರುಗಳನ್ನು ಗುತ್ತಿಗೆ ಆಧಾರದ ನೇಮಕಾತಿ ಮಾಡಿಕೊಂಡಿರುವ ಕ್ರಮಕ್ಕೆ ಜಿಲ್ಲಾ ಪಂಚಾಯಿತಿ ಸದಸ್ಯರು ಅಸಮಾಧಾನ ವ್ಯಕ್ತಪಡಿಸಿದರು.

ವಿಷಯ ಪ್ರಸ್ತಾಪಿಸಿದ ಕಾಂಗ್ರೆಸ್‌ ಸದಸ್ಯ ಕೃಷ್ಣಮೂರ್ತಿ, ‘ಗುತ್ತಿಗೆ ಆಧಾರದ ಮೇಲೆ ನೇಮಕಾತಿ ಹೊಂದಿದ ಎಂಜಿನಿಯರ್‌ ಯಾವುದೇ ಚೌಕಟ್ಟಿಗೆ ಒಳಪಡುತ್ತಿಲ್ಲ. ಹೀಗಾಗಿ, ಅಕ್ರಮಗಳನ್ನು ಈ ಎಂಜಿನಿಯರ್ ಮೂಲಕ ಮಾಡಿಸಲಾಗುತ್ತಿದೆ. ಏಳು ವರ್ಷದಿಂದ ಒಂದೇ ಏಜೆನ್ಸಿ ಮೂಲಕ ನೇಮಕಾತಿ ನಡೆಯುತ್ತಿದೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಇದಕ್ಕೆ ಇತರ ಸದಸ್ಯರು ಧ್ವನಿಗೂಡಿಸಿದರು. ಗುತ್ತಿಗೆ ಆಧಾರದ ನೇಮಕಾತಿ ಪದ್ಧತಿಯನ್ನು ಕೈಬಿಡಬೇಕು, ಇಲ್ಲವೇ ಅವರ ಸೇವೆಯನ್ನು ಕಾಯಂಗೊಳಿಸಿ ಚೌಕಟ್ಟಿಗೆ ಒಳಪಡಿಸಬೇಕು ಎಂದು ಒತ್ತಾಯಿಸಿದರು.

ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷೆ ವಿಜಯಲಕ್ಷ್ಮಿ ಪ್ರಕಾಶ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT