ಗುರುವಾರ , ಮೇ 26, 2022
30 °C
ಹುತಾತ್ಮ ರೈತರಿಗೆ ಸಾಮಾನ್ಯ ಸಭೆಯಲ್ಲಿ ಶ್ರದ್ಧಾಂಜಲಿ

ಜಿ.ಪಂ. ಸಭೆಯಲ್ಲಿ ರೈತಪರ ಧ್ವನಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಚಿತ್ರದುರ್ಗ: ಕೇಂದ್ರ ಸರ್ಕಾರ ಜಾರಿಗೊಳಿಸಿದ ಕೃಷಿ ಕಾಯ್ದೆಗಳನ್ನು ವಿರೋಧಿಸಿ ದೆಹಲಿಯ ಸಿಂಘು ಗಡಿಯಲ್ಲಿ ಹೋರಾಟ ನಡೆಸುತ್ತಿರುವ ರೈತರಿಗೆ ಜಿಲ್ಲಾ ಪಂಚಾಯಿತಿ ಸದಸ್ಯರು ನೈತಿಕ ಬೆಂಬಲ ಸೂಚಿಸಿದರು. ಇದು ಆಡಳಿತಾರೂಢ ಕಾಂಗ್ರೆಸ್‌ ಹಾಗೂ ವಿರೋಧ ಪಕ್ಷವಾದ ಬಿಜೆಪಿ ಸದಸ್ಯರ ನಡುವಿನ ವಾಗ್ವಾದಕ್ಕೂ ಎಡೆಮಾಡಿಕೊಟ್ಟಿತು.

ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಶಶಿಕಲಾ ಸುರೇಶಬಾಬು ಅಧ್ಯಕ್ಷತೆಯಲ್ಲಿ ಹತ್ತನೇ ಸಾಮಾನ್ಯ ಸಭೆ ಗುರವಾರ ನಡೆಯಿತು. ಈ ಅವಧಿಯ ಸದಸ್ಯರ ಕೊನೆಯ ಸಭೆ ಎಂಬ ಕಾರಣಕ್ಕೆ ಕುತೂಹಲ ಮೂಡಿಸಿತ್ತು. ಆರಂಭದ ಕೆಲ ಸಮಯವನ್ನು ರೈತ ಹೋರಾಟ ಹಾಗೂ ಕೃಷಿ ಸಂಬಂಧಿ ಕಾಯ್ದೆಗಳ ಚರ್ಚೆಗೆ ಮೀಸಲಿಡಲಾಯಿತು.

ಸಭೆ ಆರಂಭವಾಗುತ್ತಿದ್ದಂತೆ ಮಾತು ಆರಂಭಿಸಿದ ಕಾಂಗ್ರೆಸ್ ಸದಸ್ಯ ಕೃಷ್ಣಮೂರ್ತಿ, ದೆಹಲಿಯಲ್ಲಿ ಹೋರಾಟ ನಡೆಸುತ್ತಿರುವ ರೈತರ ಬಗ್ಗೆ ಗಮನ ಸೆಳೆದರು. ‘ದೇಶದ ರೈತ ಚಳಿ, ಮಳೆ, ಬಿಸಿಲಿನಲ್ಲಿ ಸಾವನ್ನಪ್ಪುತ್ತಿದ್ದಾನೆ. ಇದನ್ನು ಕಂಡು ಬೇಸರವಾಗುತ್ತಿದೆ. ದೇಶಕ್ಕೆ ಅನ್ನ ನೀಡುವ ರೈತರಿಗೆ ಶ್ರದ್ಧಾಂಜಲಿ ಸಲ್ಲಿಸಿ ಸಭೆ ಮುಂದುವರಿಸುವುದು ಸೂಕ್ತ’ ಎಂದು ಹೆಗಲ ಮೇಲಿನ ಹಸಿರು ಟವೆಲ್‌ ಸರಿಪಡಿಸಿಕೊಂಡರು.

ಬಿಜೆಪಿಯ ಅಜ್ಜಪ್ಪ ಅವರು ಈ ಪ್ರಸ್ತಾವಕ್ಕೆ ಆಕ್ಷೇಪ ವ್ಯಕ್ತಪಡಿಸಿದರು. ‘ನಾನು ಕೂಡ ಒಬ್ಬ ರೈತ. ಶ್ರದ್ಧಾಂಜಲಿ ಸಲ್ಲಿಸಲು ವಿರೋಧ ಮಾಡುವುದಿಲ್ಲ. ಆದರೆ, ಕೃಷಿ ಕಾಯ್ದೆಗಳ ಬಗ್ಗೆ ಚರ್ಚೆ ನಡೆಸಿ ಮುಂದುವರಿದರೆ ಒಳಿತು’ ಎಂಬ ಅಭಿಪ್ರಾಯ ಹಂಚಿಕೊಂಡರು. ಇದರಿಂದ ಕೆರಳಿದ ಕಾಂಗ್ರೆಸ್‌ ಸದಸ್ಯರು, ಅಜ್ಜಪ್ಪ ವಿರುದ್ಧ ಹರಿಹಾಯ್ದರು. ‘ನೀವೊಬ್ಬ ನಿವೃತ್ತ ಅಧಿಕಾರಿ. ಪಿಂಚಣಿ ಪಡೆಯುತ್ತಿದ್ದೀರಿ. ನೀವು ಯಾವ ರೀತಿಯ ರೈತ’ ಎಂದು ಮುಗಿಬಿದ್ದರು.

ಮಧ್ಯಪ್ರವೇಶಿಸಿದ ಶಶಿಕಲಾ, ‘ರೈತ ದೇಶದ ಬೆನ್ನೆಲುಬು. ಕೃಷಿ ಸಂಬಂಧಿ ಕಾಯ್ದೆಯ ಬಗ್ಗೆ ರೈತರು ಆತಂಕಗೊಂಡಿದ್ದಾರೆ. ಹೋರಾಟದಲ್ಲಿ ಹುತಾತ್ಮರಾದವರನ್ನು ಗೌರವಿಸೋಣ. ಇದರಲ್ಲಿ ರಾಜಕೀಯ ಮಾಡುವುದು ಬೇಡ’ ಎಂದು ಮನವಿ ಮಾಡಿದರು.

‘ರೈತರ ಬಗ್ಗೆ ಗೌರವ ಇರುವವರು ಎದ್ದುನಿಂತುಕೊಳ್ಳಿ. ರೈತರ ಬಗ್ಗೆ ಕಾಳಜಿ ಇಲ್ಲದವರು ಕುಳಿತುಕೊಳ್ಳಿ’ ಎಂದು ಕಾಂಗ್ರೆಸ್‌ನ ಪ್ರಕಾಶಮೂರ್ತಿ ಏರುಧ್ವನಿಯಲ್ಲಿ ಹೇಳಿದರು. ಸಭಾಂಗಣದಲ್ಲಿದ್ದ ಎಲ್ಲರೂ ಎದ್ದುನಿಂತು ಮೌನಾಚರಣೆ ಮಾಡಿದರು.

ಬಿಜೆಪಿ ಗುರುಮೂರ್ತಿ ಮಾತನಾಡಿ, ‘ಜಿ.ಆರ್‌.ಹಳ್ಳಿಯಲ್ಲಿ ಪೂರ್ವಜನರು ಕೃಷಿ ಮಾಡುತ್ತಿದ್ದರು. ಎಲೆತೋಟಕ್ಕೆ ಗ್ರಾಮ ಹೆಸರುವಾಸಿಯಾಗಿತ್ತು. ಅನಿವಾರ್ಯ ಕಾರಣಕ್ಕೆ ಭೂಮಿ ಕೈತಪ್ಪಿತು. ಮತ್ತೆ ಕೃಷಿಯತ್ತ ಒಲವು ಬೆಳೆದಿದೆ. ಆದರೆ, ಕೃಷಿ ಭೂಮಿ ಖರೀದಿಸಲು ಕಾನೂನಿನಲ್ಲಿ ಅವಕಾಶವಿಲ್ಲ. ಇಂತಹ ಸಮಸ್ಯೆಗೆ ಪರಿಹಾರ ನೀಡಿದ ಕಾಯ್ದೆಯನ್ನು ವಿರೋಧಿಸುವುದು ತಪ್ಪಲ್ಲವೇ’ ಎಂದು ಪ್ರಶ್ನಿಸಿದರು.

‘ರೈತರ ಹೋರಾಟಕ್ಕೆ ವಿರೋಧವಿಲ್ಲ. ಆದರೆ, ಜ.26ರಂದು ನಡೆದ ಕೃತ್ಯದ ಬಗ್ಗೆ ಆಕ್ರೋಶವಿದೆ. ದೆಹಲಿಯ ಕೆಂಪುಕೋಟೆ ಮೇಲೆ ತ್ರಿವರ್ಣ ಧ್ವಜದ ಬದಲು ಬೇರೆ ಧ್ವಜ ಹಾರಿಸಿದ್ದನ್ನು ಸಹಿಸಲು ಸಾಧ್ಯವಿಲ್ಲ. ಹೋರಾಟದಲ್ಲಿ ವಿದೇಶಿಯರ ಕೈವಾಡವಿದೆ’ ಎಂದು ಆರೋಪಿಸಿದರು.

ಇದು ಸಭೆಯಲ್ಲಿ ಮತ್ತೆ ಗದ್ದಲ ಸೃಷ್ಟಿಸಿತು. ‘ಕೃಷಿ ಕಾಯ್ದೆಯ ಬಗ್ಗೆ ನಿಮಗೇನು ಗೊತ್ತು’ ಎಂದು ಎರಡೂ ಪಕ್ಷದ ಸದಸ್ಯರು ಪರಸ್ಪರ ಮಾತಿನ ಚಕಮಕಿ ನಡೆಸಿದರು. ಕೃಷಿ ಇಲಾಖೆಯ ಜಂಟಿ ನಿರ್ದೇಶಕರು ಕಾಯ್ದೆ ಬಗ್ಗೆ ಮಾಹಿತಿ ನೀಡಿದ ಬಳಿಕ ಚರ್ಚೆ ಮುಂದುವರಿಸುವುದ ಸೂಕ್ತ ಎಂಬ ನಿರ್ಧಾರಕ್ಕೆ ಬರಲಾಯಿತು. ಆದರೆ, ಕಾಯ್ದೆ ಬಗ್ಗೆ ಮಾತನಾಡಲು ಕೃಷಿ ಇಲಾಖೆ ಜಂಟಿ ನಿರ್ದೇಶಕ ವಿ.ಸದಾಶಿವ ಹಿಂದೇಟು ಹಾಕಿದರು.

ಶಶಿಕಲಾ ಸುರೇಶಬಾಬು ಮಾತನಾಡಿ, ‘ಸಭೆಯಲ್ಲಿ ನಡೆದ ಚರ್ಚೆಯನ್ನು ಸರ್ಕಾರಕ್ಕೆ ಕಳುಹಿಸಿಕೊಡೋಣ. ಕೃಷಿ ಕಾಯ್ದೆಯ ಸ್ವರೂಪದ ಬಗ್ಗೆ ರೈತರಿಗೆ ಅರಿವು ಮೂಡಿಸುವ ಅಗತ್ಯವಿದೆ. ಸರ್ಕಾರ ಈ ಕೆಲಸ ಮಾಡಲಿ’ ಎಂದು ಚರ್ಚೆಗೆ ತೆರೆ ಎಳೆದರು.

ತನಿಖೆಗೆ ಅಧ್ಯಕ್ಷರ ಸೂಚನೆ

ಅತಿವೃಷ್ಟಿಯಿಂದ ಆಗಿರುವ ಹಾನಿಯನ್ನು ಸರಿಪಡಿಸಲು ಜಿಲ್ಲಾ ಪಂಚಾಯಿತಿಯ ಪಂಚಾಯಿತಿರಾಜ್‌ ಎಂಜಿನಿಯರಿಂಗ್‌ ವಿಭಾಗ ಕೈಗೊಂಡಿರುವ ಕಾಮಗಾರಿಗಳ ಬಗ್ಗೆ ತನಿಖೆ ನಡೆಸಿ ವರದಿ ನೀಡುವಂತೆ ಅಧ್ಯಕ್ಷೆ ಶಶಿಕಲಾ ಸುರೇಶಬಾಬು ಸೂಚನೆ ನೀಡಿದರು.

ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿ ಅಧ್ಯಕ್ಷ ಆರ್.ನರಸಿಂಹರಾಜು,‘2019-20ನೇ ಸಾಲಿನಲ್ಲಿ ಆರು ತಾಲ್ಲೂಕುಗಳಲ್ಲಿ ಮಳೆಹಾನಿ ಉಂಟಾಗಿದೆ. 412 ರಸ್ತೆ, ಸೇತುವೆ ಹಾಗೂ ಕೆರೆ ಕಾಮಗಾರಿಗಳಿಗೆ ₹29 ಕೋಟಿ ಹಣ ಬಿಡುಗಡೆಯಾಗಿತ್ತು. ಕೈಗೊಂಡಿರುವ ಕಾಮಗಾರಿಗಳ ವಿವರವನ್ನು ಅಧಿಕಾರಿಗಳು ಪರಿಪೂರ್ಣವಾಗಿ ನೀಡುತ್ತಿಲ್ಲ. ಈ ಬಗ್ಗೆ ಜಿಲ್ಲಾಮಟ್ಟದ ಸಮಿತಿಯಿಂದ ತನಿಖೆ ಮಾಡಬೇಕು’ ಎಂದರು.

‘ಟೆಂಡರ್ ಪ್ರಕ್ರಿಯೆ ರದ್ದುಗೊಳಿಸಿ’

ನರೇಗಾ ಯೋಜನೆಯಡಿ ಹೊರಗುತ್ತಿಗೆ ಆಧಾರದ ಮೇಲೆ ಕರ್ತವ್ಯ ನಿರ್ವಹಿಸುತ್ತಿರುವ ಸಿಬ್ಬಂದಿಗೆ ವೇತನ ಪಾವತಿಸುತ್ತಿರುವ ಸಂಸ್ಥೆಯ ಟೆಂಡರ್ ರದ್ದುಗೊಳಿಸುವಂತೆ ಸೂಚಿಸಿದರೂ ಪಾಲನೆಯಾಗಿಲ್ಲ ಎಂದು ಜಿಲ್ಲಾ ಪಂಚಾಯಿತಿ ಸದಸ್ಯರಾದ ನಾಗೇಂದ್ರನಾಯ್ಕ್, ಡಿ.ಕೆ.ಶಿವಮೂರ್ತಿ ಸಭೆಯ ಗಮನ ಸೆಳೆದರು.

ಮುಖ್ಯ ಕಾರ್ಯನಿರ್ವಣಾಧಿಕಾರಿ ಡಾ.ಕೆ.ನಂದಿನಿದೇವಿ, ‘ಜಿಲ್ಲಾ ಪಂಚಾಯಿತಿಯಿಂದಲೇ ನೇರವಾಗಿ ಟೆಂಡರ್ ಕರೆದು ನೇಮಕಾತಿ ಮಾಡಿಕೊಳ್ಳಲು ಅನುಮತಿ ನೀಡುವಂತೆ ಕೋರಿ ಸರ್ಕಾರಕ್ಕೆ ಪತ್ರ ಬರೆಯಲಾಗಿದೆ’ ಎಂದು ಮಾಹಿತಿ ನೀಡಿದರು.

ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷೆ ವಿಜಯಲಕ್ಷ್ಮಿ ಪ್ರಕಾಶ್ ಇದ್ದರು. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು