ಶುಕ್ರವಾರ, ಜನವರಿ 24, 2020
17 °C

ಕಾಂಗ್ರೆಸ್ ಧರ್ಮ, ದೇಶ ದ್ರೋಹಿ: ಶಂಕರಮೂರ್ತಿ ಟೀಕೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಶಿವಮೊಗ್ಗ: ಪೌರತ್ವ ಕಾಯ್ದೆ ವಿರೋಧಿಸುವ ಮೂಲಕ ಕಾಂಗ್ರೆಸ್‌ ಧರ್ಮದ್ರೋಹ, ದೇಶದ್ರೋಹದ ಕೆಲಸ ಮಾಡುತ್ತಿದೆ ಎಂದು ಮಾಜಿ ಸಭಾಪತಿ ಡಿ.ಹೆಚ್.ಶಂಕರಮೂರ್ತಿ ಆರೋಪಿಸಿದರು.

ಸ್ವಾತಂತ್ರ್ಯ ನಂತರ ದೇಶದಲ್ಲಿ ಉಳಿದ ಎಲ್ಲ ಮುಸ್ಲಿಮರನ್ನೂ ರಕ್ಷಿಸಲಾಗಿದೆ. ಅದಕ್ಕೂ ಮೊದಲು ಹಿಂದು ಮತ್ತು ಮುಸ್ಲಿಮರು ಒಗ್ಗಟ್ಟಾಗಿಯೇ ಇದ್ದರು. ಬ್ರಿಟಿಷರ ಒಡೆದಾಳುವ ನೀತಿ ಪರಿಣಾಮ ಭಾರತ ವಿಭಜನೆಯಾಯಿತು. ಪಾಕಿಸ್ತಾನ ಹುಟ್ಟಿಕೊಂಡಿತು. ಅಂದಿನಿಂದಲೇ ಪೌರತ್ವದ ಸಮಸ್ಯೆಯೂ ಆರಂಭವಾಯಿತು. ಆಗ ಲಕ್ಷಾಂತರ ಹಿಂದೂಗಳ ಕೊಲೆಯೂ ಆಗಿತ್ತು. ಮಹಾತ್ಮ ಗಾಂಧೀಜಿಯವರೇ ಮುಂದೆ ನಿಂತು ಅಲ್ಪಸಂಖ್ಯಾತರಿಗೆ ರಕ್ಷಣೆ ಕೊಡಿಸಿದ್ದರು ಎಂದು ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಇತಿಹಾಸ ತೆರೆದಿಟ್ಟರು.

ಬಿಜೆಪಿ ಈಗ ದಿಟ್ಟ ನಿರ್ಧಾರ ತೆಗೆದುಕೊಂಡಿದೆ. 2014ಕ್ಕಿಂತ ಹಿಂದೆ ಭಾರತಕ್ಕೆ ಬಂದವರಿಗೆ ಪೌರತ್ವ ನೀಡಲು ಕಾಯ್ದೆಗೆ ತಿದ್ದುಪಡಿ ತಂದಿದೆ. ಧಾರ್ಮಿಕವಾಗಿ ದೌರ್ಜನ್ಯಕ್ಕೆ ಒಳಗಾದವರಿಗೆ ರಕ್ಷಣೆ ನೀಡುವುದು ಭಾರತೀಯರ ಆದ್ಯತೆ. ಜಾತ್ಯತೀತದ ಮುಖವಾಡ ಹೊತ್ತಿರುವ ಕಾಂಗ್ರೆಸ್ಸಿಗರು ಕಾಯ್ದೆಯನ್ನೇ ತಪ್ಪಾಗಿ ಅರ್ಥೈಸುತ್ತಿದ್ದಾರೆ ಎಂದು ದೂರಿದರು.

ಕಾಂಗ್ರೆಸ್ಸಿಗರಿಗೆ ಧೈರ್ಯವಿದ್ದರೆ ಪಾಕಿಸ್ತಾನದ ಮುಸ್ಲಿಮರಿಗೆ ಭಾರತದಲ್ಲಿ ಜಾಗ ನೀಡುವುದಾಗಿ ಘೋಷಿಸಲಿ. ಈ ಕಾಯ್ದೆಯಿಂದ ಭಾರತದ ಯಾವ ಮುಸ್ಲಿಮರಿಗೂ ತೊಂದರೆಯಾಗುವುದಿಲ್ಲ. ಇಂದಿರಾ ಗಾಂಧಿಯವರೇ ಬಾಂಗ್ಲಾ ದೇಶ ಹುಟ್ಟುಹಾಕಿದರು. ಅಲ್ಲಿನವರಿಗೆ ಬೆಂಬಲ ಕೊಟ್ಟರು. ಬಾಂಗ್ಲಾದಿಂದ ಬಂದ ಮುಸ್ಲಿಮರು ತಮ್ಮ ದೇಶಕ್ಕೆ ವಾಪಾಸ್ಸಾದರೂ, ಅಲ್ಲಿನ ಹಿಂದೂಗಳು ವಾಪಸ್‌ ಬರಲಿಲ್ಲ. ಅಂಥವರಿಗೆ ಪೌರತ್ವ ನೀಡುವುದಾಗಿ ಬಿಜೆಪಿ ಹೇಳಿತ್ತು. ಅದರಂತೆ ನಡೆದುಕೊಂಡಿದೆ ಎಂದು ಸಮರ್ಥಿಸಿಕೊಂಡರು.

ಪೌರತ್ವ ಕಾಯ್ದೆಗೆ ವಿರೋಧ ವ್ಯಕ್ತವಾಗುತ್ತಿರುವುದು ದುರದೃಷ್ಟಕರ. ವಿಶ್ವವಿದ್ಯಾಲಯದ ವಿದ್ಯಾರ್ಥಿಗಳು ಹಿಂಸಾಚಾರಕ್ಕೆ ಇಳಿದಿರುವುದು. ಅದನ್ನು ಪೋಷಿಸುತ್ತಿರುವುದು ಅಪಾಯಕಾರಿ ಬೆಳವಣಿಗೆ. ಕಾಯ್ದೆ ಜಾರಿಗೆ ಬಂದರೆ ಮುಸ್ಲಿಮರಿಗೆ ರೇಷನ್ ಕಾರ್ಡ್ ಕೊಡುವುದಿಲ್ಲ. ಮೂಲ ಸೌಲಭ್ಯ ಕಡಿತ ಮಾಡಲಾಗುತ್ತಿದೆ ಎಂದು ಸುಳ್ಳು ಸುದ್ದಿ ಹಬ್ಬಿಸಲಾಗುತ್ತಿದೆ. ವೋಟ್‌ ಬ್ಯಾಂಕ್ ರಾಜಕಾರಣ ಮಾಡಲಾಗುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಬಿಜೆಪಿ ಮುಖಂಡರಾದ ಪದ್ಮನಾಭ ಭಟ್, ಶಂಕರ್, ಮಧು, ಅಣ್ಣಪ್ಪ, ಜಗದೀಶ್, ಮಂಜುನಾಥ್ ಇದ್ದರು. 

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು