ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೇಂದ್ರದ ವಿರುದ್ಧ ಕಾಂಗ್ರೆಸ್ ಪ್ರತಿಭಟನಾ ರ್‍ಯಾಲಿ

ಗೋಪಿ ವೃತ್ತದಲ್ಲಿ ಬಹಿರಂಗ ಸಭೆ, ಅಗತ್ಯ ವಸ್ತುಗಳ ಬೆಲೆ ಏರಿಕೆಗೆ ಆಕ್ರೋಶ
Last Updated 3 ಡಿಸೆಂಬರ್ 2018, 12:46 IST
ಅಕ್ಷರ ಗಾತ್ರ

ಶಿವಮೊಗ್ಗ:ಕೇಂದ್ರ ಸರ್ಕಾರದ ಜನ ವಿರೋಧಿ ನೀತಿ ಖಂಡಿಸಿ ಕಾಂಗ್ರೆಸ್ ಮುಖಂಡರು ಹಾಗೂ ಕಾರ್ಯಕರ್ತರು ಸೋಮವಾರ ಗಾಂಧಿ ಬಜಾರ್‌ನಿಂದ ಗೋಪಿ ವೃತ್ತದವರೆಗೆ ಪ್ರತಿಭಟನಾ ರ್‍ಯಾಲಿ ನಡೆಸಿದರು.

ಕೇಂದ್ರ ಸರ್ಕಾರ ನಾಲ್ಕೂವರೆ ವರ್ಷಗಳ ಅವಧಿಯಲ್ಲಿ ಜನರಿಗೆ ನೀಡಿದ್ದ ಒಂದೂ ಭರವಸೆ ಈಡೇರಿಸಿಲ್ಲ. ಬೆಲೆ ಏರಿಕೆಯಿಂದ ಸಾಮಾನ್ಯ ಜನರು ಬದುಕು ನಡೆಸುವುದೇ ದುಸ್ತರವಾಗಿದೆ. ಪ್ರಧಾನಿ ನರೇಂದ್ರ ಮೋದಿ ಅವರನ್ನು ಇಡೀ ರಾಷ್ಟ್ರ ತಿರಸ್ಕರಿಸಬೇಕು. ಈ ಅಭಿಯಾನ ಶಿವಮೊಗ್ಗದಿಂದಲೇ ಆರಂಭವಾಗುತ್ತಿದೆ ಎಂದು ಗುಡುಗಿದರು.

ದೇಶದಲ್ಲಿ ರಾಜಕೀಯ ಅಸ್ಥಿರತೆ ಸೃಷ್ಟಿಯಾಗಿದೆ. ಕೇಂದ್ರ ಸರ್ಕಾರ ಎಲ್ಲ ಕ್ಷೇತ್ರಗಳಲ್ಲೂ ವಿಫಲವಾಗಿದೆ. ಜನರ ನಂಬಿಕೆ ಸಂಪೂರ್ಣ ಕಳೆದುಕೊಂಡಿದೆ. ಸ್ವಾಮಿನಾಥನ್ ವರದಿ ಸೇರಿದಂತೆ ಚುನಾವಣಾ ಪ್ರಣಾಳಿಕೆಯಲ್ಲಿ ನೀಡಿದ್ದ ಯಾವುದೇ ಭರವಸೆ ಈಡೇರಿಸಿಲ್ಲ. ಮೋದಿ ಆಡಳಿತದಲ್ಲಿ ಸಾಮಾಜಿಕ ನ್ಯಾಯದ ಚಿಂತನೆಯೇ ಇಲ್ಲ. ಜನರ ಧಾರ್ಮಿಕ ಭಾವನೆ ಕೆರಳಿಸಿ, ಅಧಿಕಾರದ ಗದ್ದುಗೆ ಏರಲು ಮತ್ತೆ ಪ್ರಯತ್ನಿಸುತ್ತಿದೆ ಎಂದು ಆರೋಪಿಸಿದರು.

‘ದೇೇಶ ರಕ್ಷಿಸಿ, ಮೋದಿ ಓಡಿಸಿ’ ಎನ್ನುವುದು ಕಾಂಗ್ರೆಸ್‌ನ ಮುಂದಿನ ಧ್ಯೇಯವಾಕ್ಯ. ಕಾಂಗ್ರೆಸ್‌ನ ಈ ಹೋರಾಟ ದೇಶಾದ್ಯಂತ ಆಂದೋಲನವಾಗಿ ರೂಪುಗೊಳ್ಳುತ್ತದೆ. ಮೋದಿ ಸರ್ಕಾರದ ಪತನಕ್ಕೆ ಮುನ್ನುಡಿ ಬರೆಯಲಿದೆ. ದೇಶದ ಸಾಮಾನ್ಯ ಜನರು ಕಾಂಗ್ರೆಸ್ ಜತೆ ಸೇರಿ ಈ ಕೆಲಸ ಮಾಡುತ್ತಾರೆ. ರೈತರು, ಮಹಿಳೆಯರು, ಕಾರ್ಮಿಕ ವರ್ಷ ರಕ್ಷಿಸುತ್ತಾರೆ ಎಂದರು.

ಲೋಕಸಭಾ ಚುನಾವಣೆ ಹತ್ತಿರಬರುವಾಗ ಬಿಜೆಪಿ ರಾಮಮಂದಿರ, ಅಯೋಧ್ಯೆ, ಅಯ್ಯಪ್ಪಸ್ವಾಮಿ ವಿಷಯಗಳನ್ನು ಇಟ್ಟುಕೊಂಡು ದೇಶಕ್ಕೆ ಬೆಂಕಿ ಹಚ್ಚುವ ಕೆಲಸ ಮಾಡುತ್ತಿದೆ ಎಂದು ಆರೋಪಿಸಿದರು.

ಬಿಜೆಪಿ ರೈತ ವಿರೋಧಿ ಸರ್ಕಾರ. ಯಡಿಯೂರಪ್ಪ ಅವರು ರೈತರ ಶಾಲು ಹೊದ್ದುಕೊಂಡು ಪ್ರಮಾಣ ವಚನ ಸ್ವೀಕರಿಸಿದ್ದರು. ಅವರಿಗೆ ಆ ಯೋಗ್ಯತೆಯೇ ಇಲ್ಲ. ಅವರು ಮತ್ತೆಂದು ಹಸಿರು ಶಾಲು ಹಾಕಬಾರದು ಎಂದು ಎಚ್ಚರಿಸಿದರು.

ರಾಜ್ಯ ಸರ್ಕಾರ ರೈತರ ಸಾಲ ಮನ್ನಾ ಮಾಡಿದರೆ ಕೇಂದ್ರದ ನಾಯಕರ ಮೂಗು ಹಿಡಿದು ರಾಷ್ಟ್ರೀಕೃತ ಬ್ಯಾಂಕ್‌ಗಳಲ್ಲಿನ ರೈತರ ಸಾಲ ಮನ್ನಾ ಮಾಡಿಸುವುದಾಗಿ ಯಡಿಯೂರಪ್ಪ ಕೊಚ್ಚಿಕೊಂಡಿದ್ದರು. ರಾಜ್ಯ ಸರ್ಕಾರ ₨ 43 ಸಾವಿರ ಕೋಟಿ ಸಾಲ ಮನ್ನಾ ಮಾಡಿದೆ. ಆದರೂ, ರಾಷ್ಟ್ರೀಕೃತ ಬ್ಯಾಂಕ್‌ಗಳ ಸಾಲ ಮನ್ನಾ ಕುರಿತು ಅವರು ತುಟಿಬಿಚ್ಚುತ್ತಿಲ್ಲ ಎಂದು ಛೇಡಿಸಿದರು.

ಸಿಲಿಂಡರ್, ಡೀಸೆಲ್, ಪೆಟ್ರೋಲ್, ದಿನಬಳಕೆ ವಸ್ತುಗಳ ಬೆಲೆ ಗಗನಕ್ಕೇರಿದೆ. ಕೊಟ್ಟ ಭರವಸೆಯಂತೆ ಉದ್ಯೋಗ ಸೃಷ್ಟಿಸಿಲ್ಲ. ಕಪ್ಪು ಹಣ ತಂದಿಲ್ಲ. ರಾಜ್ಯದ ಅಭಿವೃದ್ಧಿ ವಿಷಯದಲ್ಲಿ ಮಲತಾಯಿ ಧೋರಣೆ ತಾಳಿದೆ. ಸಿಗಂದೂರು ಸೇತುವೆ ವಿಷಯದಲ್ಲೂ ಸುಳ್ಳು ಹೇಳುತ್ತಿದ್ದಾರೆ. ಜನತಂತ್ರ ವ್ಯವಸ್ಥೆ ಹಾಳು ಮಾಡುತ್ತಿದ್ದಾರೆ ಎಂದು ದೂರಿದರು.

ರ‍್ಯಾಲಿ ವೇಳೆ ಕಾರ್ಯಕರ್ತರು ಕೈಯಲ್ಲಿ ಪೊರಕೆ ಹಿಡಿದು ಕೇಂದ್ರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಕೆಲವರು ಎತ್ತಿನ ಗಾಡಿಯಲ್ಲಿ ಸಾಗಿ ಪೆಟ್ರೋಲ್ ಬೆಲೆ ಏರಿಕೆ ಖಂಡಿಸಿದರು.

ಮಾಜಿ ಸಚಿವ ಕಾಗೋಡು ತಿಮ್ಮಪ್ಪ, ಕಾಂಗ್ರೆಸ್ ಜಿಲ್ಲಾ ಘಟಕದ ಅಧ್ಯಕ್ಷ ತೀ.ನಾ. ಶ್ರೀನಿವಾಸ್, ವಿಧಾನ ಪರಿಷತ್ ಸದಸ್ಯ ಆರ್. ಪ್ರಸನ್ನಕುಮಾರ್, ಮಾಜಿ ಶಾಸಕರಾದ ಗೋಪಾಲಕೃಷ್ಣ ಬೇಳೂರು, ಕೆ.ಬಿ. ಪ್ರಸನ್ನಕುಮಾರ್, ಮುಖಂಡರಾದ ಇಸ್ಮಾಯಿಲ್ ಖಾನ್, ಎಚ್.ಎಸ್. ಸುಂದರೇಶ್, ಎಸ್.ಪಿ. ಶೇಷಾದ್ರಿ, ವಿಜಯಲಕ್ಷ್ಮಿ ಪಾಟೀಲ್, ಕಲಗೋಡು ರತ್ನಾಕರ ಪ್ರತಿಭಟನೆಯ ನೇತೃತ್ವ ವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT