ಶುಕ್ರವಾರ, ಜನವರಿ 22, 2021
27 °C

ಕೋವಿಡ್ ವಾಸಿಯಾದ ಬಳಿಕ ಲಸಿಕೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ‘ಕೋವಿಡ್ ಪೀಡಿತರು ಹಾಗೂ ಸೋಂಕು ಶಂಕಿತರು ಲಸಿಕೆ ಪಡೆಯಲು ಆರೋಗ್ಯ ಕೇಂದ್ರಗಳಿಗೆ ಬಂದಲ್ಲಿ ಅವರಿಂದ ಬೇರೆಯವರಿಗೆ ಸೋಂಕು ಹರಡುವ ಸಾಧ್ಯತೆ ಇರುತ್ತದೆ. ಹಾಗಾಗಿ ಇಂತಹವರು ರೋಗ ಲಕ್ಷಣಗಳು ಸಂಪೂರ್ಣವಾಗಿ ಕಡಿಮೆಯಾದ ಬಳಿಕವೇ ಲಸಿಕೆ ಪಡೆದುಕೊಳ್ಳಬೇಕು’ ಎಂದು ಆರೋಗ್ಯ ಇಲಾಖೆ ತಿಳಿಸಿದೆ.

ಕೋವಿಡ್ ಲಸಿಕೆಗೆ ಸಂಬಂಧಿಸಿ ನಾಗರಿಕರಲ್ಲಿ ಮೂಡಿರುವ ಗೊಂದಲಕ್ಕೆ ಇಲಾಖೆ ಈ ಸ್ಪಷ್ಟನೆ ನೀಡಿದೆ.

‘ರೋಗದ ವಿರುದ್ಧ ರಕ್ಷಿಸಿಕೊಳ್ಳಲು ಹಾಗೂ ಸೋಂಕು ಬೇರೆಯವರಿಗೆ ಹರಡುವುದನ್ನು ತಡೆಯಲು ಲಸಿಕೆ ಸಹಾಯಕ. ಕೊರೊನಾ ಸೋಂಕಿತ ವ್ಯಕ್ತಿಗಳು ಹಾಗೂ ಜ್ವರ ಸೇರಿದಂತೆ ವಿವಿಧ ಲಕ್ಷಣಗಳನ್ನು ಎದುರಿಸುತ್ತಿರುವವರು ಲಸಿಕೆ ಪಡೆಯುವುದು ಸುರಕ್ಷಿತವಲ್ಲ. ಲಕ್ಷಣಗಳು ವಾಸಿಯಾದ 14 ದಿನಗಳ ಬಳಿಕ ಲಸಿಕೆ ಪಡೆಯಬಹುದಾಗಿದೆ’ ಎಂದು ತಿಳಿಸಲಾಗಿದೆ.

‘ಹೆಸರು ನೋಂದಾಯಿಸಿಕೊಂಡ ವೈದ್ಯಾಧಿಕಾರಿಗಳು, ಶುಶ್ರೂಷಕರು ಮತ್ತು ಮೇಲ್ವಿಚಾರಕರು, ಪ್ಯಾರಾಮೆಡಿಕಲ್ ಸಿಬ್ಬಂದಿ, ವೈದ್ಯಕೀಯ ವಿದ್ಯಾರ್ಥಿಗಳು, ಮುಂಚೂಣಿ ಆರೋಗ್ಯ ಕಾರ್ಯಕರ್ತರು, ಸಮಗ್ರ ಶಿಶು ಅಭಿವೃದ್ಧಿ ಯೋಜನೆಯ ಕಾರ್ಯಕರ್ತರು, ಸಹಾಯಕ ಸಿಬ್ಬಂದಿ, ವಿಜ್ಞಾನಿಗಳು ಸೇರಿದಂತೆ ಕೋವಿಡ್ ವಿರುದ್ಧದ ಹೋರಾಟದಲ್ಲಿ ಮುಂಚೂಣಿಯಲ್ಲಿರುವವರಿಗೆ ಆದ್ಯತೆ ನೀಡಲಾಗಿದೆ. ಕಾರಣಾಂತರಗಳಿಂದ ಹೆಸರು ನೋಂದಾಯಿಸಲು ಸಾಧ್ಯವಾಗದವರು ಜಿಲ್ಲಾ ಸಂತಾನೋತ್ಪತ್ತಿ ಮತ್ತು ಮಕ್ಕಳ ಆರೋಗ್ಯ ಅಧಿಕಾರಿಕಾರಿಗಳನ್ನು ಸಂಪರ್ಕಿಸಿ, ಹೆಸರು ಸೇರ್ಪಡೆ ಮಾಡಿಕೊಳ್ಳಬೇಕು’ ಎಂದು ವಿವರಿಸಲಾಗಿದೆ.

ಅಡ್ಡ ಪರಿಣಾಮವಿಲ್ಲ

‘ಮುಂಚಿತವಾಗಿ ಹೆಸರು ನೋಂದಾಯಿಸಿದವರಿಗೆ ಮಾತ್ರ ಲಸಿಕೆಯನ್ನು ನೀಡಲಾಗುತ್ತದೆ. ಲಸಿಕೆಯನ್ನು ಕಡಿಮೆ ಅವಧಿಯಲ್ಲಿಯೇ ಪರೀಕ್ಷಿಸಿ, ವಿತರಿಸಲಾಗುತ್ತಿದೆ. ಲಸಿಕೆಯ ಸುರಕ್ಷತೆ ಮತ್ತು ಫಲಿತಾಂಶದ ಬಗ್ಗೆ ವೈದ್ಯಕೀಯ ಸಂಶೋಧನಾ ಸಂಸ್ಥೆಗಳು ಪ್ರಮಾಣೀಕರಿಸಿದ ಬಳಿಕವೇ ಫಲಾನುಭವಿಗಳಿಗೆ ಕೊಡಲಾಗುತ್ತಿದೆ. ಇದು ಯಾವುದೇ ಅಡ್ಡ ಪರಿಣಾಮವನ್ನು ಬೀರುವುದಿಲ್ಲ ಎನ್ನುವುದು ಕೂಡ ಪ್ರಯೋಗಗಳಿಂದ ದೃಢಪಟ್ಟಿದೆ’ ಎಂದು ತಿಳಿಸಲಾಗಿದೆ.

‘ಯಾವುದೇ ಚುಚ್ಚುಮದ್ದನ್ನು ಪಡೆದ ಬಳಿಕ ಕೆಲವರಿಗೆ ಸಾಮಾನ್ಯವಾಗಿ ಸಣ್ಣ ಪ್ರಮಾಣದಲ್ಲಿ ಜ್ವರ, ದೇಹದಲ್ಲಿ ನೋವು ಸೇರಿದಂತೆ ಕೆಲವೊಂದು ಸಾಮಾನ್ಯ ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ’ ಎಂದು ಇಲಾಖೆಯ ಅಧಿಕಾರಿಯೊಬ್ಬರು ತಿಳಿಸಿದರು.

 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.