ಹಸಿರು ವಿದ್ಯುತ್ ಯೋಜನೆ ಅಡಿ 1 ಸಾವಿರ ಮೆಗಾ ವಾಟ್ ವಿದ್ಯುತ್ ಉತ್ಪಾದನೆ: ಸಚಿವ

ಸುಬ್ರಹ್ಮಣ್ಯ: ರಾಜ್ಯದಲ್ಲಿ ವಿದ್ಯುತ್ ನಿರ್ವಹಣೆಗೆ ವಿಶೇಷ ಯೋಜನೆ ಹಮ್ಮಿಕೊಂಡಿದ್ದು, ಹಸಿರು ವಿದ್ಯುತ್ ಯೋಜನೆ ಅಡಿಯಲ್ಲಿ 1 ಸಾವಿರ ಮೆಗಾ ವಾಟ್ ವಿದ್ಯುತ್ ಉತ್ಪಾದನೆ ಮಾಡಲಾಗುವುದು. ಅದಕ್ಕಾಗಿ ಹೈಬ್ರಿಡ್ ಪಾರ್ಕ್ ನಿರ್ಮಿಸಲಾಗುವುದು ಎಂದು ಇಂಧನ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಸುನಿಲ್ ಕುಮಾರ್ ಹೇಳಿದರು.
ರಾಜ್ಯದಾದ್ಯಂತ ಗುಣ ಮಟ್ಟದ ಮತ್ತು ನಿರಂತರ ವಿದ್ಯುತ್ ಒದಗಿಸಲು ಉಪವಿಭಾಗ ತೆರೆಯಲಾಗಿದೆ. ಅನೇಕ ಕಡೆ ಸಬ್ ಸ್ಟೇಷನ್ ನಿರ್ಮಾಣಗೊಂಡಿದ್ದು ನಿರಂತರ ವಿದ್ಯುತ್ ಒದಗಿಸಲಾಗುತ್ತಿದೆ. ಗುತ್ತಿಗೆ ಆಧಾರದಲ್ಲಿ ಪವರ್‌ಮನ್‌ಗಳನ್ನು ನೇಮಕ ಮಾಡಲಾಗಿದೆ. ನೇಮಕಾತಿ ಪ್ರಕ್ರಿಯೆ ಮುಂದುವರೆಯಲಿದೆ ಎಂದರು.
ತಕ್ಷಣ ಪರಿಹಾರ: 39 ವರ್ಷಗಳ ನಂತರ ಬಂದ ಮಹಾಮಳೆಯ ಕಾರಣ ಜಿಲ್ಲೆಯಲ್ಲಿ ಅಪಾರ ಹಾನಿ ಸಂಭವಿಸಿದೆ. ನೆರೆ ಸಂತ್ರಸ್ತರಿಗೆ ಶೀಘ್ರ ಪರಿಹಾರ ಒದಗಿಸಲಾಗಿದೆ ಎಂದು ಸಚಿವರು ತಿಳಿಸಿದರು.
ಈಗಾಗಲೇ ಮುಖ್ಯಮಂತ್ರಿ ಗಳು ವಿಡಿಯೊ ಕಾನ್ಫರೆನ್ಸ್ ಮೂಲಕ ಪರಿಸ್ಥಿತಿ ಅವಲೋಕನ ಮಾಡಿದ್ದಾರೆ. ಕಾನೂನು ಪ್ರಕಾರ ಸಾಧ್ಯವಿದ್ದಷ್ಟು ಪರಿಹಾರ ವಿತರಿಸಲಾಗಿದೆ. ತುರ್ತು ಕ್ರಮ, ರಕ್ಷಣೆಗೆ ಜಿಲ್ಲಾಡಳಿತ ತಯಾರಾಗಿದೆ ಎಂದರು.
ಅಂಗಡಿಗೂ ಪರಿಹಾರ: ಮಳೆಯಿಂದ ಅಂಗಡಿ ಮುಂಗಟ್ಟಿಗೆ ನೀರು ನುಗ್ಗಿ ನಷ್ಟವಾದವರಿಗೆ ಪರಿಹಾರ ನೀಡಲು ವಿಶೇಷ ಪ್ಯಾಕೇಜ್ ನೀಡಬೇಕೆಂದು ಮುಖ್ಯಮಂತ್ರಿ ಅವರಲ್ಲಿ ವಿನಂತಿಸಲಾಗಿದೆ ಎಂದರು.
ಕೃಷಿ ಮತ್ತು ತೋಟಗಳಿಗೆ ಮಳೆ ಮತ್ತು ನೆರೆಯಿಂದ ಉಂಟಾದ ಹಾನಿಗೆ ಪರಿಹಾರ ಒದಗಿಸಲಾಗುವುದು. ಅಲ್ಲದೆ ತಡೆಗೋಡೆ, ರಸ್ತೆ, ಸೇತುವೆ, ಕಾಲುಸೇತುವೆ ದುರಸ್ತಿಗೆ ಶೀಘ್ರ ಅನುದಾನ ಒದಗಿಸಲಾಗುವುದು. ಮಳೆಯಿಂದ ಹಾನಿಗೊಳಗಾದ ಸೇತುವೆಯ ಪ್ರದೇಶದಲ್ಲಿ ಹೊಸ ಸೇತುವೆ ನಿರ್ಮಾಣಕ್ಕೆ ಅನುದಾನ ನೀಡಲಾಗುವುದು ಎಂದು ತಿಳಿಸಿದರು.
₹5 ಲಕ್ಷ ಪರಿಹಾರ: ಆ.1ರ ವರೆಗೆ ಜಿಲ್ಲೆಯಲ್ಲಿ ಸುಮಾರು 543 ಮನೆಗಳು ಭಾಗಶಃ ಹಾನಿಯಾಗಿವೆ. 53 ಮನೆಗಳು ಸಂಪೂರ್ಣವಾಗಿ ಹಾನಿಯಾಗಿದೆ. ಸಂಪೂರ್ಣ ಹಾನಿಯಾದ ಮನೆಗಳಿಗೆ ₹5 ಲಕ್ಷ ಪರಿಹಾರ ನೀಡಲಾಗಿದೆ ಎಂದರು.
ಜಿಲ್ಲಾಧಿಕಾರಿ ಡಾ.ರಾಜೇಂದ್ರ ಕೆ.ವಿ, ಜಿ.ಪಂ. ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಡಾ.ಕುಮಾರ್, ಉಪ ವಿಭಾಗಧಿಕಾರಿ ಗಿರೀಶ್ ನಂದನ್ ಇದ್ದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.