ಶನಿವಾರ, 13 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ನಾಟಿ ಮಾಡಿರುವ ಗಿಡಗಳ ಆಡಿಟ್: ಈಶ್ವರ ಖಂಡ್ರೆ

ದಶಲಕ್ಷ ಗಿಡಗಳ ನಾಟಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಅರಣ್ಯ ಸಚಿವ ಈಶ್ವರ ಖಂಡ್ರೆ
Published 2 ಜುಲೈ 2024, 16:14 IST
Last Updated 2 ಜುಲೈ 2024, 16:14 IST
ಅಕ್ಷರ ಗಾತ್ರ

ಬಂಟ್ವಾಳ (ದಕ್ಷಿಣ ಕನ್ನಡ): ಕಳೆದ ವರ್ಷ ಸರ್ಕಾರದ ವತಿಯಿಂದ 5.43 ಕೋಟಿ ಸಸಿ ನೆಡಲಾಗಿದ್ದು, ಅವುಗಳಲ್ಲಿ ಎಷ್ಟು ಸಸಿಗಳು ಬದುಕಿವೆ ಎಂಬುದನ್ನು ತಿಳಿಯಲು ಜಿಯೊ ಟ್ಯಾಗಿಂಗ್, ಆಡಿಟ್ ತಪಾಸಣೆ ಮಾಡಿ ಆಗಸ್ಟ್ ಒಳಗಾಗಿ ಸಾರ್ವಜನಿಕರಿಗೆ ವರದಿ ನೀಡಲಾಗುವುದು ಎಂದು ಅರಣ್ಯ ಸಚಿವ ಈಶ್ವರ ಖಂಡ್ರೆ ಹೇಳಿದರು.

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಮಂಗಳೂರು ಪ್ರಾದೇಶಿಕ ಅರಣ್ಯ ವಿಭಾಗ, ಮಂಗಳೂರು ಉಪವಿಭಾಗದ ಬಂಟ್ವಾಳ ವಲಯದ ಆಶ್ರಯದಲ್ಲಿ ನಡೆದ ಧರ್ಮಸ್ಥಳ ಯೋಜನೆಯ ‘ರಾಜ್ಯದಾದ್ಯಂತ ದಶಲಕ್ಷ ಗಿಡಗಳ ನಾಟಿ’ ಕಾರ್ಯಕ್ರಮಕ್ಕೆ ತಾಲ್ಲೂಕಿನ ಕಾವಳಪಡೂರು ಆಲಂಪುರಿಯ ಸಾಲುಮರದ ತಿಮ್ಮಕ್ಕ ವೃಕ್ಷೋದ್ಯಾನದಲ್ಲಿ ಚಾಲನೆ ನೀಡಿ ಅವರು ಮಾತನಾಡಿದರು.

ವರ್ಷಕ್ಕೆ 5 ಕೋಟಿಯಂತೆ ಐದು ವರ್ಷಗಳಲ್ಲಿ 25 ಕೋಟಿ ಸಸಿ ನೆಡುವ ಗುರಿ ಹೊಂದಲಾಗಿದೆ. ಸಸಿ ನೆಟ್ಟರೆ ಸಾಲದು ಅವುಗಳಲ್ಲಿ ಎಷ್ಟು ಬದುಕಿ ಉಳಿದಿವೆ ಎಂಬುದನ್ನು ನೋಡಬೇಕು ಎಂದು ಮುಖ್ಯಮಂತ್ರಿ ಹೇಳಿದ್ದರು. ಈ ಕಾರಣಕ್ಕೆ ಸಾರ್ವಜನಿಕರ ಪಾರದರ್ಶಕ ವರದಿ ನೀಡುವ ನಿಟ್ಟಿನಲ್ಲಿ ಆಡಿಟ್ ತಪಾಸಣೆ ಮಾಡಿಸಲಾಗುತ್ತಿದ್ದು, ಸದ್ಯ ದೊರೆತಿರುವ ಮಾಹಿತಿ ಪ್ರಕಾರ ಶೇ 85ರಿಂದ 90ರಷ್ಟು ಸಸಿಗಳು ಬದುಕಿವೆ ಎಂದರು.

ಶೇ 33ರಷ್ಟು ಇರಬೇಕಾಗಿದ್ದ ಅರಣ್ಯ ಇಂದು ಶೇ 21ರಷ್ಟು ಇದೆ. ಕಲ್ಯಾಣ ಕರ್ನಾಟಕ ಭಾಗದಲ್ಲಿ ಶೇ 3ರಿಂದ 4ರಷ್ಟು ಮಾತ್ರ ಅರಣ್ಯ ಪ್ರದೇಶ ಇದೆ. ಇದರಿಂದಾಗಿ ಹವಾಮಾನ ವ್ಯತ್ಯಾಸ ಆಗುತ್ತಿದೆ. ಹಸಿರು ಹೊದಿಕೆ ಹೆಚ್ಚಿಸಲು ವರ್ಷಕ್ಕೆ 10 ಕೋಟಿ ಸಸಿ ನೆಟ್ಟರೂ ಕಡಿಮೆಯೇ. ಸರ್ಕಾರದ ಜೊತೆ ಸಂಘ–ಸಂಸ್ಥೆಗಳು ಕೈ ಜೋಡಿಸಿ, ಹಸಿರು ಹೆಚ್ಚಿಸಲು ಕೊಡುಗೆ ನೀಡಬೇಕು. ಧರ್ಮಸ್ಥಳ ಕ್ಷೇತ್ರದಿಂದ ಈ ಕೆಲಸ ಆಗುತ್ತಿದೆ ಎಂದರು.

ಶಾಸಕ ರಾಜೇಶ್ ನಾಯ್ಕ ಉಳಿಪ್ಪಾಡಿಗುತ್ತು ಮಾತನಾಡಿ, ‘ರಸ್ತೆ ಬದಿಯಲ್ಲಿ ಗಿಡಗಳನ್ನು ಬೆಳೆಸಿ, ಅದಕ್ಕೆ ನಗರಗಳಲ್ಲಿ ಉತ್ಪತ್ತಿಯಾಗುವ ತ್ಯಾಜ್ಯ ನೀರನ್ನು ಸಂಸ್ಕರಿಸಿ ಬಳಕೆ ಮಾಡಿದರೆ, ಮಾಲಿನ್ಯ ನಿಯಂತ್ರಣದ ಜೊತೆಗೆ ಹಸಿರು ಹೊದಿಕೆ ಹೆಚ್ಚುತ್ತದೆ, ಸ್ವಾವಲಂಬಿ ಗ್ರಾಮ ರೂಪಿಸಲು ಸಾಧ್ಯವಾದರೆ, ಸ್ವಾವಲಂಬಿ ರಾಜ್ಯ ನಿರ್ಮಾಣ ಮಾಡಲು ಸಾಧ್ಯ’ ಎಂದರು.

ಮಾಜಿ ಸಚಿವ ರಮಾನಾಥ ರೈ ಮಾತನಾಡಿ, ಜನರ ಸಹಭಾಗಿತ್ವದಲ್ಲಿ ಹಸಿರು ಹೆಚ್ಚಿಸಲು ಆದ್ಯತೆ ನೀಡಬೇಕಾಗಿದೆ ಎಂದರು.

ಅಧ್ಯಕ್ಷತೆ ವಹಿಸಿದ್ದ ಧರ್ಮಸ್ಥಳದ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆ ಮಾತನಾಡಿ, ‘ಸಸಿ ನೆಡುವ ಜೊತೆಗೆ ಇರುವ ಕಾಡಿನ ರಕ್ಷಣೆಗೆ ಆದ್ಯತೆ ನೀಡಬೇಕಾಗಿದೆ. ನಾವು ಸುಖವಾಗಿ ಬದುಕಲು ನಮ್ಮ ಹಿರಿಯರು ಅರಣ್ಯ ಉಳಿಸಿದಂತೆ, ನಮ್ಮ ಮುಂದಿನ ಪೀಳಿಗೆಗಾಗಿ ನಾವು ಅರಣ್ಯವನ್ನು ಬೆಳೆಸಬೇಕಾಗಿದೆ’ ಎಂದರು.

ಗೇರು ಅಭಿವೃದ್ಧಿ ನಿಗಮದ ಅಧ್ಯಕ್ಷೆ ಮಮತಾ ಗಟ್ಟಿ, ಗ್ರಾಮ ಪಂಚಾಯಿತಿ ಅಧ್ಯಕ್ಷ ಲಕ್ಷ್ಮಿನಾರಾಯಣ ಶರ್ಮ, ಮಂಗಳೂರು‌ ವೃತ್ತ ಅರಣ್ಯ ಸಂರಕ್ಷಣಾಧಿಕಾರಿ  ವಿ.‌ಕರಿಕಾಲನ್, ಗೇರು ಅಭಿವೃದ್ಧಿ ನಿಗಮದ ವ್ಯವಸ್ಥಾಪಕ ನಿರ್ದೇಶಕಿ ಕಮಲಾ ಕರಿಕಾಲನ್, ಡಿಸಿಎಫ್ ಆ್ಯಂಟನಿ ಮರಿಯಪ್ಪ ಇದ್ದರು. ವಿವೇಕ್ ಪಾಯಸ್, ಗಣೇಶ್ ಆಚಾರ್ಯ ನಿರೂಪಿಸಿದರು. ಬಾಲಕೃಷ್ಣ ವಂದಿಸಿದರು.

ಬಂಟ್ವಾಳ ತಾಲ್ಲೂಕಿನ ಆಲಂಪುರಿ ಸಾಲು ಮರದ ತಿಮ್ಮಕ್ಕ ಉದ್ಯಾನದಲ್ಲಿ ನಡೆದ ದಶಲಕ್ಷ ಗಿಡಗಳ ನಾಟಿ ಕಾರ್ಯಕ್ರಮದಲ್ಲಿ ಶಾಸಕ ರಾಜೇಶ್ ನಾಯ್ಕ್ ಸಚಿವ ಈಶ್ವರ ಖಂಡ್ರೆ ಶಾಲಾ ಮಕ್ಕಳಿಗೆ ಸಸಿ ವಿತರಿಸಿದರು

ಬಂಟ್ವಾಳ ತಾಲ್ಲೂಕಿನ ಆಲಂಪುರಿ ಸಾಲು ಮರದ ತಿಮ್ಮಕ್ಕ ಉದ್ಯಾನದಲ್ಲಿ ನಡೆದ ದಶಲಕ್ಷ ಗಿಡಗಳ ನಾಟಿ ಕಾರ್ಯಕ್ರಮದಲ್ಲಿ ಶಾಸಕ ರಾಜೇಶ್ ನಾಯ್ಕ್ ಸಚಿವ ಈಶ್ವರ ಖಂಡ್ರೆ ಶಾಲಾ ಮಕ್ಕಳಿಗೆ ಸಸಿ ವಿತರಿಸಿದರು

‘72 ಕೋಟಿ ಸಸಿ ನಾಟಿ’

2021ರಲ್ಲಿ ಡಿ. ವೀರೇಂದ್ರ ಹೆಗ್ಗಡೆ ಅವರ ಕಲ್ಪನೆಯಲ್ಲಿ ರೂಪಿಸಿರುವ ಯೋಜನೆಯಡಿ  ಕೆರೆಯಂಚು ಖಾಲಿ ಜಾಗಗಳು ದೇವರ ಕಾಡು ಶಾಲಾ ಆವರಣಗಳಲ್ಲಿ ಸಸಿ ನೆಡಲಾಗಿದೆ. ಹೆಬ್ಬಲಸು ಹಲಸು ಮಾವು ಪುನರ್ಪುಳಿ ನೆಲ್ಲಿ ಅರ್ತಿಹಣ್ಣು ನೇರಳೆ ಹುಣಸೆ ಗೇರು ಮತ್ತಿತ್ತರ ಹಣ್ಣಿನ ಗಿಡಗಳ ನಾಟಿಗೆ ಒತ್ತು ನೀಡಲಾಗಿದೆ. ಈವರೆಗೆ ನಾಟಿ ಮಾಡಿದ ಹಣ್ಣಿನ ಗಿಡಗಳ ಸಂಖ್ಯೆ  3.70 ಲಕ್ಷ ಇತರ ಗಿಡಗಳ ಸಂಖ್ಯೆ 7.33 ಲಕ್ಷ ದಾಟಿದೆ. ಇದಕ್ಕಾಗಿ ರಚನೆಯಾಗಿರುವ ಶೌರ್ಯ ಸ್ವಯಂ ಸೇವಕರ ತಂಡ ಈ ಕಾರ್ಯವನ್ನು ಮುತುವರ್ಜಿಯಿಂದ ನಿರ್ವಹಿಸುತ್ತಿದೆ. ರಾಜ್ಯದ 91 ತಾಲ್ಲೂಕುಗಳಲ್ಲಿ 10300 ರಷ್ಟು ಸ್ವಯಂ ಸೇವಕರು ಇದ್ದಾರೆ. 20 ವರ್ಷಗಳಲ್ಲಿ 17 ಸಾವಿರ ಕಾರ್ಯಕ್ರಮ ನಡೆಸಿ 72 ಕೋಟಿ ಗಿಡಗಳನ್ನು ನೆಡಲಾಗಿದೆ ಎಂದು ಧರ್ಮಸ್ಥಳ ಯೋಜನೆಯ ಕಾರ್ಯನಿರ್ವಾಹಕ ನಿರ್ದೇಶಕ ಅನಿಲ್‌ಕುಮಾರ್ ಎಸ್.ಎಸ್. ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT