ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮನೆ ತಲುಪಿದ ಉಕ್ರೇನ್‌ನಲ್ಲಿ ಸಿಲುಕಿದ್ದ ಜಿಲ್ಲೆಯ 15 ವಿದ್ಯಾರ್ಥಿಗಳು

ಉಕ್ರೇನ್‌ನಲ್ಲಿದ್ದ ಎಲ್ಲರೂ ಭಾರತಕ್ಕೆ ವಾಪಸ್‌
Last Updated 9 ಮಾರ್ಚ್ 2022, 6:02 IST
ಅಕ್ಷರ ಗಾತ್ರ

ಮಂಗಳೂರು: ಯುದ್ಧಪೀಡಿತ ಉಕ್ರೇನ್‌ನಲ್ಲಿ ಸಿಲುಕಿದ್ದ ಜಿಲ್ಲೆಯ ಎಲ್ಲ 18 ವಿದ್ಯಾರ್ಥಿಗಳು ಸುರಕ್ಷಿತವಾಗಿ ದೇಶಕ್ಕೆ ಮರಳಿದ್ದಾರೆ. ಈ ಪೈಕಿ 15 ವಿದ್ಯಾರ್ಥಿಗಳು ತಮ್ಮ ಮನೆಗಳಿಗೆ ಸೇರಿದ್ದು, ಮೂವರು ನವದೆಹಲಿ ಹಾಗೂ ಮುಂಬೈ ತಲುಪಿದ್ದಾರೆ.

ಮೂಡುಬಿದಿರೆ ತಾಲ್ಲೂಕಿನ ನಿಮಿಷಾ, ಶಾಲ್ವಿನ್‌ ಪ್ರೀತಿ ಅರಾನ್ಹ ಹಾಗೂ ಪ್ರಣವಕುಮಾರ್‌ ಎಸ್‌., ಬೆಳ್ತಂಗಡಿ ತಾಲ್ಲೂಕಿನ ಹೀನಾ ಫಾತಿಮಾ, ನಗರದ ಡೇಲ್‌ ಆಂಡ್ರಿನಾ ಲೂಯಿಸ್‌, ಜೆ. ಅನುಷಾ ಶೆಟ್ಟಿ, ಲಾಯ್ಡ್‌ ಆಂಟನಿ ಪಿರೇರಾ, ಅನೈನಾ ಅನ್ನಾ, ಕ್ಲೇಟನ್‌ ಒಸ್ಮಂಡ್ ಡಿಸೋಜ, ಅಹ್ಮದ್‌ ಸಾದ್‌ ಅರ್ಶದ್‌, ಪೃಥ್ವಿರಾಜ್‌ ಭಟ್‌, ಸಾಕ್ಷಿ ಸುಧಾಕರ್‌, ಪ್ರೀತಿ ಪೂಜಾರಿ, ಲಕ್ಷಿತಾ ಪುರುಷೋತ್ತಮ್‌, ಪೂಜಾ ಮಲ್ಲಪ್ಪ ಐತವಾಳ ಅವರು ತಮ್ಮ ಮನೆಗಳಿಗೆ ತೆರಳಿದ್ದಾರೆ.

ಶೇಖ್‌ ಮೊಹಮ್ಮದ್ ತಾಹ, ಮೊಹಮ್ಮದ್‌ ಮಿಶಾಲ್‌ ಆರೀಫ್‌ ಅವರು ನವದೆಹಲಿಗೆ ಬಂದಿಳಿದಿದ್ದು, ಅಂಶಿತಾ ರೇಶಲ್‌ ಪದ್ಮಶಾಲಿ ಮುಂಬೈ ತಲುಪಿದ್ದಾರೆ ಎಂದು ಜಿಲ್ಲಾಧಿಕಾರಿ ಡಾ.ಕೆ.ವಿ. ರಾಜೇಂದ್ರ ತಿಳಿಸಿದ್ದಾರೆ.

ಧೈರ್ಯಗೆಡುವ ಸ್ಥಿತಿ:‘ಎಲ್ಲವೂ ಭಯಾನಕ, ನಾವು ಎಷ್ಟೇ ಧ್ಯೆರ್ಯ ಮಾಡಿಕೊಂಡರೂ ಕ್ಷಣ ಕ್ಷಣವೂ ಧೈರ್ಯಗೆಡುವಂತಹ ಸ್ಥಿತಿ ನಮ್ಮ ಕಣ್ಣೆದುರು ಸೃಷ್ಟಿಯಾಗುತ್ತಿತ್ತು. ರೊಮೇನಿಯಾ ತಲುಪಿದ ಬಳಿಕ ನಾವು ಸ್ವಲ್ಪ ನಿಟ್ಟುಸಿರು ಬಿಟ್ಟೆವು’ ಎಂದು ಗುರಪುರದ ತಮ್ಮ ಮನೆಗೆ ತಲುಪಿದ ವಿದ್ಯಾರ್ಥಿ ಲಾಯ್ಡ್‌ ಆಂಟನಿ ಪಿರೇರಾ ಹೇಳಿದರು.

‘ಫೆ. 24ರ ಬಳಿಕ ಉಕ್ರೇನ್ ಸ್ಥಿತಿ ಗಂಭೀರವಾಗಿದ್ದು, ಮಾರ್ಚ್ 1ರಂದು ಉಕ್ರೇನ್‌ನ ಮಿಕೋಲೈವ್ ಪೆಟ್ರೋಮೊಹಿಲಾ ಬ್ಲ್ಯಾಕ್ ಸೀ ನ್ಯಾಶನಲ್ ಯೂನಿವರ್ಸಿಟಿಯಿಂದ 4 ಬಸ್‌ಗಳಲ್ಲಿ ಮಲ್ಡೋವಾಗೆಪ್ರಯಾಣಿಸಿದೆವು. ನಾವು 300 ವಿದ್ಯಾರ್ಥಿಗಳಿದ್ದೆವು. ದಾರಿಯುದ್ದಕ್ಕೂ ಭಯಾನಕ ಶೆಲ್‌ಗಳು ಉದುರುತ್ತಿದ್ದವು. ಅಲ್ಲಲ್ಲಿ ವೈಮಾನಿಕ ದಾಳಿ ಕಂಡು ಬರುತ್ತಿದ್ದವು. ನಾವು ಪ್ರಯಾಣಿಸುತ್ತಿದ್ದ ಬಸ್ 4 ಗಂಟೆ ಸ್ಥಗಿತಗೊಂಡರೂ, ಸುಮಾರು 18 ಗಂಟೆಗಳ ಪ್ರಯಾಣದ ಬಳಿಕ ಮಾಲ್ಡೋವಾ ತಲುಪಿತು. ಅಲ್ಲಿಂದ ಮತ್ತೆ 16 ಗಂಟೆ ಪ್ರಯಾಣಿಸಿ ರೊಮೇನಿಯಾ ತಲುಪಿದೆವು’ ಎಂದು ವಿವರಿಸಿದರು.

ಮಾ.6ರಂದು ರೊಮೇನಿಯಾದ ರಾಜಧಾನಿ ಬುಕಾರೆಸ್ಟ್‌ನಿಂದ ನವದೆಹಲಿಗೆ, ಅಲ್ಲಿಂದ ಮಾ.7ರಂದು ಬೆಂಗಳೂರು ಮೂಲಕ ಮಂಗಳೂರಿಗೆ ಬಂದೆವು. ನನ್ನೊಂದಿಗೆ ಎಂಬಿಬಿಎಸ್ ಬ್ಯಾಚ್‌ ಮೇಟ್ ನಗರದ ಬಿಜೈಯ ಸಾಕ್ಷಿ ಎಸ್. ಕೂಡ ಇದ್ದರು’ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT