ಗುರುವಾರ , ಆಗಸ್ಟ್ 5, 2021
27 °C
ಮತ್ತೆ ಐವರು ಕೋವಿಡ್‌ ಸೋಂಕಿತರ ಸಾವು

237 ಜನರಲ್ಲಿ ಸೋಂಕು ದೃಢ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 237 ಜನರಲ್ಲಿ ಕೋವಿಡ್‌ ಸೋಂಕು ಇರುವುದು ಶನಿವಾರ ದೃಢಪಟ್ಟಿದೆ. ಜಿಲ್ಲೆಯಲ್ಲಿ ಒಟ್ಟು ಸೋಂಕಿತರ ಸಂಖ್ಯೆ 3,311ಕ್ಕೇರಿದ್ದು, ಸಕ್ರಿಯ ಪ್ರಕರಣಗಳ ಸಂಖ್ಯೆ 1,848ಕ್ಕೆ ತಲುಪಿದೆ.

ಕೆಲವು ದಿನಗಳಿಂದ ಜಿಲ್ಲೆಯಲ್ಲಿ ಕೋವಿಡ್‌ ಸೋಂಕಿನ ಪ್ರಕರಣಗಳ ಸಂಖ್ಯೆ ತೀವ್ರಗತಿಯಲ್ಲಿ ಏರುತ್ತಿದೆ. ಶುಕ್ರವಾರ 311 ಪ್ರಕರಣಗಳು ದೃಢಪಟ್ಟಿದ್ದವು. ಶನಿವಾರ ಕೂಡ ಸೋಂಕು ದೃಢಪಟ್ಟಿರುವ ಪ್ರಕರಣಗಳ ಸಂಖ್ಯೆ ದ್ವಿಶತಕದ ಗಡಿ ದಾಟಿದೆ.

ಉಳ್ಳಾಲ ನಗರಸಭೆ ವ್ಯಾಪ್ತಿಯಲ್ಲಿ 15, ಕಡಬದಲ್ಲಿ ಏಳು, ಪುತ್ತೂರಿನಲ್ಲಿ ಒಂಭತ್ತು ಸೇರಿದಂತೆ ಜಿಲ್ಲೆಯ ವಿವಿಧ ಭಾಗಗಳಲ್ಲಿ ಕೋವಿಡ್‌ ಸೋಂಕಿನ ಹೊಸ ಪ್ರಕರಣಗಳು ಶನಿವಾರ ದೃಢಪಟ್ಟಿವೆ. ಸೋಂಕಿತ ವ್ಯಕ್ತಿಗಳಿಗೆ ಚಿಕಿತ್ಸೆ ನೀಡಿದ್ದ ಕಡಬದ ಸಮುದಾಯ ಆರೋಗ್ಯ ಕೇಂದ್ರವನ್ನು ಸೀಲ್‌ಡೌನ್‌ ಮಾಡಲಾಗಿದೆ.

ಜ್ವರ, ಶೀತ, ತಲೆನೋವು ಸೇರಿದಂತೆ ಸೋಂಕಿನ ಲಕ್ಷಣಗಳುಳ್ಳ ವ್ಯಕ್ತಿಗಳನ್ನು ಮಾತ್ರವೇ ಆಸ್ಪತ್ರೆಗಳಿಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಸೋಂಕಿನ ಲಕ್ಷಣಗಳಿಲ್ಲದ 147 ಜನರನ್ನು ಕೊಣಾಜೆಯ ವಿದ್ಯಾರ್ಥಿ ನಿಲಯದಲ್ಲಿ ಪ್ರತ್ಯೇಕವಾಗಿ ಇರಿಸಲಾಗಿದೆ. ಸೋಂಕಿನ ಲಕ್ಷಣಗಳಿಲ್ಲದ 500ಕ್ಕೂ ಹೆಚ್ಚು ಜನರನ್ನು ಅವರ ಮನೆಗಳಲ್ಲೇ ಪ್ರತ್ಯೇಕಿಸಿ ಇರಿಸಿದ್ದು, ವೈದ್ಯಕೀಯ ನೆರವು ಒದಗಿಸಲಾಗುತ್ತಿದೆ ಎಂದು ಆರೋಗ್ಯ ಇಲಾಖೆ ಮೂಲಗಳು ತಿಳಿಸಿವೆ.

ಕೋವಿಡ್‌ ಸೋಂಕಿನಿಂದ ಗುಣಮುಖರಾಗಿರುವ 109 ಜನರು ವಿವಿಧ ಆಸ್ಪತ್ರೆಗಳಿಂದ ಶನಿವಾರ ಬಿಡುಗಡೆಯಾಗಿದ್ದಾರೆ. ಈವರೆಗೆ ಒಟ್ಟು 1,387 ಜನರು ಗುಣಮುಖರಾಗಿದ್ದಾರೆ.

ಐದು ಸಾವು: ಶುಕ್ರವಾರ ತಡರಾತ್ರಿ ಒಬ್ಬರು ಮತ್ತು ಶನಿವಾರ ನಾಲ್ವರು ಕೋವಿಡ್‌ ಸೋಂಕಿತರು ಮೃತಪಟ್ಟಿದ್ದಾರೆ. ಈ ಪೈಕಿ ಎರಡು ತಿಂಗಳ ಹಸುಗೂಸಿನ ಸಾವನ್ನು ಜಿಲ್ಲಾಡಳಿತ ಇನ್ನೂ ಅಧಿಕೃತವಾಗಿ ಘೋಷಿಸಿಲ್ಲ. ಜಿಲ್ಲೆಯಲ್ಲಿ ಕೋವಿಡ್‌ ಸೋಂಕಿತರ ಸಾವಿನ ಸಂಖ್ಯೆ 76ಕ್ಕೆ ತಲುಪಿದೆ.

‘ಮಧುಮೇಹ, ಅಧಿಕ ರಕ್ತದೊತ್ತಡ, ಹೃದ್ರೋಗ ಮತ್ತಯ ಆಸ್ತಮಾ ಕಾಯಿಲೆಗಳಿಂದ ಬಳಲುತ್ತಿದ್ದ ಪುತ್ತೂರು ತಾಲ್ಲೂಕಿನ 74 ವರ್ಷದ ಮಹಿಳೆಗೆ ಕೋವಿಡ್‌ ಸೋಂಕು ತಗುಲಿತ್ತು. ಚಿಕಿತ್ಸೆಗೆ ಸ್ಪಂದಿಸದೇ ಗುರುವಾರ ಮೃತಪಟ್ಟಿದ್ದಾರೆ’ ಎಂದು ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಸಿಂಧೂ ಬಿ.ರೂಪೇಶ್‌ ತಿಳಿಸಿದ್ದಾರೆ.

ಪಾರ್ಶ್ವವಾಯು ಪೀಡಿತರಾಗಿದ್ದು, ನ್ಯುಮೋನಿಯಾದಿಂದ ಬಳಲುತ್ತಿದ್ದ ಮಂಗಳೂರು ತಾಲ್ಲೂಕಿನ 67 ವರ್ಷದ ಪುರುಷನಿಗೆ ಕೋವಿಡ್‌ ಸೋಂಕು ತಗುಲಿತ್ತು. ತೀವ್ರ ನಿಗಾ ಘಟಕದಲ್ಲಿ ಇರಿಸಿದ್ದ ಅವರು ಚಿಕಿತ್ಸೆಗೆ ಸ್ಪಂದಿಸದೇ ಶನಿವಾರ ಮೃತಪಟ್ಟಿದ್ದಾರೆ. ಮೂತ್ರಪಿಂಡದ ತೀವ್ರವಾದ ಸಮಸ್ಯೆಯಿಂದ ಬಳಲುತ್ತಿದ್ದು, ಹೃದಯಾಘಾತಕ್ಕೊಳಗಾಗಿದ್ದ ಮಂಗಳೂರು ತಾಲ್ಲೂಕಿನ 49 ವರ್ಷದ ಮಹಿಳೆಯೂ ಶನಿವಾರ ಮೃತಪಟ್ಟಿದ್ದಾರೆ. ಅವರಲ್ಲೂ ಸೋಂಕು ದೃಢಪಟ್ಟಿದೆ ಎಂದು ಜಿಲ್ಲಾಧಿಕಾರಿ ಮಾಹಿತಿ ನೀಡಿದ್ದಾರೆ.

ಶ್ವಾಸಕೋಶದ ಸೋಂಕು ಮತ್ತು ಅಧಿಕ ರಕ್ತದೊತ್ತಡದಿಂದ ಬಳಲುತ್ತಿದ್ದ ಮಂಗಳೂರು ತಾಲ್ಲೂಕಿನ 61 ವರ್ಷ ವಯಸ್ಸಿನ ಮಹಿಳೆ ಹೃದಯಾಘಾತದಿಂದ ಶನಿವಾರ ಮೃತಪಟ್ಟಿದ್ದಾರೆ. ಅವರಿಗೂ ಕೋವಿಡ್‌ ಸೋಂಕು ತಗುಲಿರುವುದು ಖಚಿತವಾಗಿದೆ ಎಂದು ತಿಳಿಸಿದ್ದಾರೆ.

ಪುತ್ತೂರು ತಾಲ್ಲೂಕಿನ ಎರಡು ತಿಂಗಳ ಮಗುವೊಂದು ಶನಿವಾರ ಮೃತಪಟ್ಟಿದೆ. ಮಗುವಿಗೆ ಕೋವಿಡ್‌ ಸೋಂಕು ತಗುಲಿರುವುದು ದೃಢಪಟ್ಟಿದೆ. ಬಜರಂಗದಳ ಕಾರ್ಯಕರ್ತರು ನಗರದ ನಂದಿಗುಡ್ಡೆ ಸ್ಮಶಾನದಲ್ಲಿ ಮಗುವಿನ ಮೃತದೇಹದ ಅಂತ್ಯಸಂಸ್ಕಾರ ನೆರವೇರಿಸಿದರು.

‘ಮಗುವಿನಲ್ಲಿ ಕೋವಿಡ್‌ ಪತ್ತೆಯಾಗಿದೆ. ತಂದೆ ಮತ್ತು ತಾಯಿಯ ವರದಿಗಳು ನೆಗೆಟಿವ್‌ ಆಗಿವೆ. ಶಿಶು ಮರಣ ಸಮಿತಿಯ ಪರಿಶೀಲನಾ ವರದಿ ಬರಬೇಕಿರುವುದರಿಂದ ಮರಣವನ್ನು ಜಿಲ್ಲಾಡಳಿತ ಇನ್ನೂ ಘೋಷಿಸಿಲ್ಲ’ ಎಂದು ಜಿಲ್ಲಾಧಿಕಾರಿ ‘ಪ್ರಜಾವಾಣಿ’ಗೆ ತಿಳಿಸಿದರು.

13 ಅಂಚೆ ಕಚೇರಿಗಳು ಸೀಲ್‌ಡೌನ್‌

ಮಂಗಳೂರು: ಪಾಂಡೇಶ್ವರದಲ್ಲಿರುವ ಪ್ರಧಾನ ಅಂಚೆ ಕಚೇರಿಯ ಇಬ್ಬರು ಸಿಬ್ಬಂದಿಗೆ ಕೋವಿಡ್‌ ಸೋಂಕು ತಗುಲಿದ್ದು, ಅವರು ಭೇಟಿ ನೀಡಿರುವ ನಗರದ 13 ಅಂಚೆ ಕಚೇರಿಗಳನ್ನು ಸೋಮವಾರದವರೆಗೂ ಸೀಲ್‌ಡೌನ್‌ ಮಾಡಲಾಗಿದೆ.

ಈ ಇಬ್ಬರೂ ಸಿಬ್ಬಂದಿ ನಗದು ನಿರ್ವಹಣಾ ಕೆಲಸ ಮಾಡುತ್ತಿದ್ದರು. ಅವರು ಪಾಂಡೇಶ್ವರದ ಪ್ರಧಾನ ಅಂಚೆ ಕಚೇರಿ, ಹಂಪನಕಟ್ಟೆ, ಅಶೋಕನಗರ, ಗಾಂಧಿನಗರ, ಬೋಳೂರು, ಕೂಳೂರು, ಕೊಂಚಾಡಿ, ಕಾವೂರು, ಬಿಜೈ, ಕೊಡಿಯಾಲ್‌ಬೈಲ್, ಫಳ್ನೀರ್, ಫಿಶರೀಸ್ ಕಾಲೇಜ್, ಮಂಗಳೂರು ಕಲೆಕ್ಟರ್ಸ್‌ ಗೇಟ್‌, ಎಸ್.ಒ. ಅಂಚೆ ಕಚೇರಿಗಳಿಗೆ ಭೇಟಿ ನೀಡಿದ್ದರು.

‘ಈ ಎಲ್ಲ ಅಂಚೆ ಕಚೇರಿಗಳನ್ನು ಸ್ಯಾನಿಟೈಸ್‌ ಮಾಡಲಾಗಿದೆ. ಸೋಮವಾರ ಸಂಜೆಯವರೆಗೂ ಈ ಕಚೇರಿಗಳು ಬಂದ್‌ ಆಗಲಿವೆ. ಈ ಅವಧಿಯಲ್ಲಿ ಸಾರ್ವಜನಿಕ ಸೇವೆ ಲಭ್ಯವಿರುವುದಿಲ್ಲ’ ಎಂದು ಮಂಗಳೂರು ವಿಭಾಗದ ಹಿರಿಯ ಅಂಚೆ ಅಧೀಕ್ಷಕ ಶ್ರೀಹರ್ಷ ತಿಳಿಸಿದ್ದಾರೆ.

ಇಂದು ಸಂಪೂರ್ಣ ಲಾಕ್‌ಡೌನ್‌

‘ರಾಜ್ಯ ಸರ್ಕಾರದ ಆದೇಶದಂತೆ ಭಾನುವಾರ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸಂಪೂರ್ಣ ಲಾಕ್‌ಡೌನ್‌ ಜಾರಿಯಲ್ಲಿರಲಿದೆ. ಜಿಲ್ಲೆಯಲ್ಲಿ ವಾರದ ಲಾಕ್‌ಡೌನ್‌ ಜಾರಿಗೆ ಹೊರಡಿಸಿರುವ ಮಾರ್ಗಸೂಚಿ ಭಾನುವಾರಕ್ಕೆ ಅನ್ವಯಿಸುವುದಿಲ್ಲ’ ಎಂದು ಜಿಲ್ಲಾಧಿಕಾರಿ ಸಿಂಧೂ ಬಿ.ರೂಪೇಶ್‌ ತಿಳಿಸಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು