ಮಂಗಳವಾರ, 23 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ದಕ್ಷಿಣ ಕನ್ನಡ: ಇಂಗ್ಲಿಷ್ ಮಾಧ್ಯಮ ಕಲಿಕೆಯ ಕನಸು ನನಸು

ಜಿಲ್ಲೆಯ 30 ಸರ್ಕಾರಿ ಶಾಲೆಗಳಲ್ಲಿ ದ್ವಿಭಾಷಾ ಮಾಧ್ಯಮದ ಬೋಧನೆ
Published 20 ಜೂನ್ 2024, 23:30 IST
Last Updated 20 ಜೂನ್ 2024, 23:30 IST
ಅಕ್ಷರ ಗಾತ್ರ

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಹೊಸ ಶೈಕ್ಷಣಿಕ ವರ್ಷದಲ್ಲಿ 30 ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗಳಲ್ಲಿ ಇಂಗ್ಲಿಷ್ ಮಾಧ್ಯಮ ತರಗತಿಗಳು ಆರಂಭವಾಗಿವೆ. ಇವುಗಳಲ್ಲಿ ಬಂಟ್ವಾಳ ಬ್ಲಾಕ್‌ಗೆ ಸಿಂಹಪಾಲು ದೊರೆತಿದೆ.

ರಾಜ್ಯದಲ್ಲಿ ಒಟ್ಟು 1,419 ಶಾಲೆಗಳಲ್ಲಿ ದ್ವಿಭಾಷಾ ಮಾಧ್ಯಮ (ಕನ್ನಡ ಮತ್ತು ಇಂಗ್ಲಿಷ್) ಶಿಕ್ಷಣಕ್ಕೆ ರಾಜ್ಯ ಸರ್ಕಾರ ಅನುಮತಿ ನೀಡಿದೆ. ಅವುಗಳಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ 30 ಶಾಲೆಗಳನ್ನು ಆಯ್ಕೆ ಮಾಡಲಾಗಿದೆ.

ಈ ಶಾಲೆಗಳಿಗೆ ಗಣಿತ ಮತ್ತು ಇಂಗ್ಲಿಷ್ ವಿಷಯಗಳನ್ನು ಎನ್‌ಸಿಇಆರ್‌ಟಿ ಪಠ್ಯಕ್ರಮದಂತೆ, ಪರಿಸರ ಅಧ್ಯಯನ ಮತ್ತು ಕನ್ನಡ ವಿಷಯಗಳನ್ನು ಕರ್ನಾಟಕ ಪಠ್ಯಪುಸ್ತಕ ಸಂಘದ ಪಠ್ಯಕ್ರಮದಂತೆ ಪಾಠ ಮಾಡಲು ಸರ್ಕಾರ ಸೂಚಿಸಿದೆ.

ಇಂಗ್ಲಿಷ್ ಭಾಷೆ ತರಬೇತಿ ಸಂಸ್ಥೆ ಮತ್ತು ಅಜೀಂ ಪ್ರೇಮ್‌ ಜೀ ಪ್ರತಿಷ್ಠಾನದೊಂದಿಗೆ ಕೈಜೋಡಿಸಿ ಪಠ್ಯಪುಸ್ತಕದೊಂದಿಗೆ ಶಿಕ್ಷಕರ ಕೈಪಿಡಿ, ಕಲಿಕಾ ಬೋಧನಾ ಸಾಮಗ್ರಿ, ಇ–ಪಠ್ಯವಸ್ತು ಒದಗಿಸಲಾಗುತ್ತದೆ.

ಜಿಲ್ಲೆಯ 30 ಶಾಲೆಗಳಲ್ಲಿ ಬಂಟ್ವಾಳ ಬ್ಲಾಕ್‌ಗೆ ಗರಿಷ್ಠ ಅವಕಾಶ ದೊರೆತಿದ್ದು, 13 ಶಾಲೆಗಳು ದ್ವಿಭಾಷಾ ಮಾಧ್ಯಮ ಬೋಧನೆಗೆ ಆಯ್ಕೆಗೊಂಡಿವೆ. ಮಂಗಳೂರು ಉತ್ತರದಲ್ಲಿ ಆರು, ಮಂಗಳೂರು ದಕ್ಷಿಣದಲ್ಲಿ ನಾಲ್ಕು, ಸುಳ್ಯದಲ್ಲಿ ನಾಲ್ಕು, ಪುತ್ತೂರಿನಲ್ಲಿ  ಎರಡು ಹಾಗೂ ಬೆಳ್ತಂಗಡಿ ಬ್ಲಾಕ್‌ನಲ್ಲಿ ಒಂದು ಶಾಲೆಯಲ್ಲಿ ದ್ವಿಭಾಷಾ ಮಾಧ್ಯಮ ಬೋಧನೆ ಆರಂಭವಾಗಿದೆ.

ಸರ್ಕಾರಿ ಶಾಲೆಗಳಿಗೆ ಮಕ್ಕಳನ್ನು ಸೆಳೆಯುವ ನಿಟ್ಟಿನಲ್ಲಿ ರೂಪಿಸಿರುವ ಈ ಕಾರ್ಯಕ್ರಮಕ್ಕೆ ಗ್ರಾಮೀಣ ಭಾಗಗಳಲ್ಲಿ ಉತ್ತಮ ಪ್ರತಿಕ್ರಿಯೆ ದೊರೆಯುವ ನಿರೀಕ್ಷೆ ಇದೆ. ಜಿಲ್ಲೆಯಲ್ಲಿ ಕೆಪಿಎಸ್‌ಗಳಲ್ಲೂ ಪ್ರತಿವರ್ಷ ಗರಿಷ್ಠ ದಾಖಲಾತಿಗಳು ನಡೆಯುತ್ತಿವೆ ಎಂದು ಡಿಡಿಪಿಐ ವೆಂಕಟೇಶ ಪಟಗಾರ್ ತಿಳಿಸಿದರು.

ಜಿಲ್ಲೆಯಲ್ಲಿ ಈಗಾಗಲೇ 82 ಶಾಲೆಗಳಲ್ಲಿ ಇಂಗ್ಲಿಷ್ ಮಾಧ್ಯಮ ಬೋಧನೆ ನಡೆಯುತ್ತಿದೆ. ಇದಕ್ಕೆ ಉತ್ತಮ ಪ್ರತಿಕ್ರಿಯೆಯೂ ಇದ್ದು, ಕಳೆದ ವರ್ಷ ಒಟ್ಟು 2,834 ಮಕ್ಕಳು ದಾಖಲಾಗಿದ್ದಾರೆ. ಹೊಸದಾಗಿ ದೊರೆತ 30 ಶಾಲೆಗಳಲ್ಲಿ ಈಗಾಗಲೇ ಇರುವ ಕನ್ನಡ ಮಾಧ್ಯಮದ ಜೊತೆಗೆ ಇಂಗ್ಲಿಷ್ ಮಾಧ್ಯಮ ಬೋಧಿಸಲು ಹಾಲಿ ಇರುವ ಶಿಕ್ಷಕರನ್ನೇ ತರಬೇತುಗೊಳಿಸಲಾಗುತ್ತದೆ. ಈಗಾಗಲೇ ಡಯಟ್ ಮೂಲಕ ಶಿಕ್ಷಕರಿಗೆ ತರಬೇತಿ ನೀಡಲಾಗಿದೆ. ಅವರೇ ಇಂಗ್ಲಿಷ್ ಮಾಧ್ಯಮ ಬೋಧಿಸುತ್ತಾರೆ. ವಿದ್ಯಾರ್ಥಿಗಳ ದಾಖಲಾತಿಗೆ ಮಿತಿ ಇಲ್ಲ. ಪ್ರಸ್ತುತ ಪ್ರವೇಶ ಪ್ರಕ್ರಿಯೆ ನಡೆಯುತ್ತಿದ್ದು, ಶಿಕ್ಷಕರು, ಕೊಠಡಿ ಲಭ್ಯತೆ ಆಧರಿಸಿ ದಾಖಲಾತಿ ಮಿತಿಗೊಳಿಸಲಾಗುತ್ತದೆ ಎಂದು ಅವರು ತಿಳಿಸಿದರು.

ಸೊರಗಿದ ಕನ್ನಡ ಮಾಧ್ಯಮ: ಇಂಗ್ಲಿಷ್ ಮಾಧ್ಯಮಕ್ಕೆ ಅನುಮತಿ ದೊರೆತ ಶಾಲೆಗಳಲ್ಲಿ ಕನ್ನಡ ಹಾಗೂ ಇಂಗ್ಲಿಷ್ ಮಾಧ್ಯಮ ಎರಡೂ ತರಗತಿಗಳು ಇರುತ್ತವೆ. ಆದರೆ, ಇಂಗ್ಲಿಷ್ ಮಾಧ್ಯಮ ಇರುವಲ್ಲಿ ಕನ್ನಡ ಮಾಧ್ಯಮಕ್ಕೆ ದಾಖಲಾತಿ ತೀವ್ರ ಕುಸಿತವಾಗುತ್ತಿದೆ. ಬೆರಳೆಣಿಕೆಯಷ್ಟು ವಿದ್ಯಾರ್ಥಿಗಳು ಮಾತ್ರ ಕನ್ನಡ ಮಾಧ್ಯಮ ವಿಭಾಗದಲ್ಲಿದ್ದಾರೆ ಎಂದು ಶಿಕ್ಷಕರೊಬ್ಬರು ತಿಳಿಸಿದರು.

ಇಂಗ್ಲಿಷ್ ಮಾಧ್ಯಮ ಬೋಧನೆಗೆ ಆ‌ಯ್ಕೆಯಾದ ಶಾಲೆಗಳು

ಬಂಟ್ವಾಳ ಬ್ಲಾಕ್: ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಮೂಡುಪಡುಕೋಡಿ, ಜಿಎಚ್‌ಪಿ ಮಾದರಿ ಶಾಲೆ ಒಕ್ಕೆತ್ತೂರು, ಜಿಎಚ್‌ಪಿ ಮಾದರಿ ಶಾಲೆ ಕಡೇಶ್ವಾಲ, ಜಿಎಚ್‌ಪಿಎಸ್‌ ಶಾಲೆ ಶಂಭೂರು, ಜಿಎಚ್‌ಪಿ ಮಾದರಿ ಶಾಲೆ ಮಾಣಿ, ಜಿಎಚ್‌ಪಿಎಸ್ ಕವಳಕಟ್ಟೆ (ಉರ್ದು), ಜಿಎಚ್‌ಪಿಎಸ್ ಕೋಡಂಗೆ, ಜಿಎಚ್‌ಪಿ ಮಾದರಿ ಶಾಲೆ ತುಂಬೆ, ಜಿಎಚ್‌ಪಿಎಸ್ ಬ್ರಹ್ಮರಕೂಟ್ಲು, ಜಿಎಚ್‌ಪಿಎಸ್ ಮಿಥೂರ್, ಜಿಎಚ್‌ಪಿಎಸ್ ಮೂಳರಪಟ್ಣ (ಉರ್ದು), ಜಿಎಚ್‌ಪಿಎಸ್ ನಲ್ಕೆಮಾರ್.

ಬೆಳ್ತಂಗಡಿ ಬ್ಲಾಕ್: ಜಿಎಚ್‌ಪಿಎಸ್ ಕಾಶಿಪಟ್ಣ.

ಮಂಗಳೂರು ಉತ್ತರ ಬ್ಲಾಕ್: ಜಿಎಚ್‌ಪಿ ಮಾದರಿ ಶಾಲೆ ಮರಕಡ, ಜಿಎಚ್‌ಪಿಎಸ್ ಕರಂಬಾರ, ಜಿಎಚ್‌ಪಿಎಸ್ ಸ್ಯಾಂಡ್ಸ್‌ಪಿಟ್, ಜಿಎಚ್‌ಪಿಎಸ್ ಮನಂಪಾಡಿ, ಜಿಎಚ್‌ಪಿಎಸ್‌ ಕೆಂಜಾರು, ಜಿಎಚ್‌ಪಿಎಸ್ ಕರ್ನಿರೆ.

ಮಂಗಳೂರು ದಕ್ಷಿಣ ಬ್ಲಾಕ್: ಜಿಎಚ್‌ಪಿಎಸ್ ರಾಜಗುಡ್ಡೆ, ಜಿಎಚ್‌ಪಿಎಸ್ ನ್ಯೂಪಡ್ಪು, ಜಿಎಚ್‌ಪಿಎಸ್ ಕಿನ್ಯಾ, ಜಿಎಚ್‌ಪಿಎಸ್ ಉರುಮನೆ.

ಪುತ್ತೂರು ಬ್ಲಾಕ್: ಜಿಎಚ್‌ಪಿಎಸ್ ಕೋಡಿಂಬಾಡಿ, ಜಿಎಚ್‌ಪಿಎಸ್ ಸಾಮೆತಡ್ಕ.

ಸುಳ್ಯ ಬ್ಲಾಕ್: ಜಿಎಚ್‌ಪಿಎಸ್ ದೇವಚಲ್ಲ, ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆ ಪಂಜ, ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆ ಆರಂತೋಡು, ಜಿಎಚ್‌ಪಿಎಸ್ ಅಜ್ಜಾವರ.

2023–24ನೇ ಸಾಲಿನಲ್ಲಿ ಇಂಗ್ಲಿಷ್ ಮಾಧ್ಯಮಕ್ಕೆ ದಾಖಲಾದವರು

ಬ್ಲಾಕ್; ಒಟ್ಟು ಶಾಲೆ; ಒಂದನೇ ತರಗತಿ

ಬಂಟ್ವಾಳ;15;682

ಬೆಳ್ತಂಗಡಿ;21;558

ಮಂಗಳೂರು ಉತ್ತರ;09;261

ಮಂಗಳೂರು ದಕ್ಷಿಣ;16;505

ಮೂಡುಬಿದಿರೆ;05;193

ಪುತ್ತೂರು;12;443

ಸುಳ್ಯ;04;192

ಒಟ್ಟು;82;2,834

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT