ಮಂಗಳೂರು: ಪ್ರಸಕ್ತ ಹಣಕಾಸು ವರ್ಷದ ಮೊದಲ ತ್ರೈಮಾಸಿಕದಲ್ಲಿ ₹370.70 ಕೋಟಿ ನಿವ್ವಳ ಲಾಭ ದಾಖಲಿಸಿರುವುದಾಗಿ ಕರ್ಣಾಟಕ ಬ್ಯಾಂಕ್ ಘೋಷಿಸಿದೆ. ಕಳೆದ ವರ್ಷದ ಇದೇ ಅವಧಿಗೆ ಹೋಲಿಸಿದರೆ (₹114.18 ಕೋಟಿ) ಈ ವರ್ಷ ಲಾಭದಲ್ಲಿ ಶೇ 224.66ರಷ್ಟು ಏರಿಕೆಯಾಗಿದೆ.
ಮಂಗಳೂರಿನಲ್ಲಿರುವ ಬ್ಯಾಂಕ್‌ನ ಪ್ರಧಾನ ಕಚೇರಿಯಲ್ಲಿ ಗುರುವಾರ (ಆ.3) ನಡೆದ ಆಡಳಿತ ಮಂಡಳಿಯ ಸಭೆಯಲ್ಲಿ 2023-24ನೇ ಸಾಲಿನ ಮೊದಲ ತ್ರೈಮಾಸಿಕದ ಹಣಕಾಸು ವರದಿಯನ್ನು ಅಂಗೀಕರಿಸಲಾಯಿತು.
ಮೊದಲ ತ್ರೈಮಾಸಿಕದಲ್ಲಿ ಬ್ಯಾಂಕ್‌ನ ನಿರ್ವಹಣಾ ಲಾಭವು ₹601.17 ಕೋಟಿಗೆ ಹಾಗೂ ನಿವ್ವಳ ಬಡ್ಡಿ ಆದಾಯವು ₹814.68 ಕೋಟಿಗೆ ತಲುಪಿದೆ.
ಬ್ಯಾಂಕ್‌ನ ಒಟ್ಟು ವ್ಯವಹಾರವು ಶೇ 6.85ರಷ್ಟು ಏರಿಕೆಯಾಗಿ ₹1,48,449.27 ಕೋಟಿಗೆ ತಲುಪಿದೆ (ಕಳೆದ ವರ್ಷ ₹1,38,936.17 ಕೋಟಿ). ಠೇವಣಿಗಳ ಮೊತ್ತವು ಶೇ 7.92ರಷ್ಟು ಏರಿಕೆಯಾಗಿ ₹86,959.86 ಕೋಟಿಗಳಿಗೆ ಹಾಗೂ ಮುಂಗಡಗಳು ಶೇ 5.36ರಷ್ಟು ವೃದ್ಧಿಯಾಗಿ ₹61,489.41 ಕೋಟಿಗಳಿಗೆ ತಲುಪಿದೆ. ಸ್ಥೂಲ ಅನುತ್ಪಾದಕ ಆಸ್ತಿ ಶೇ 3.68ಕ್ಕೆ ಹಾಗೂ ನಿವ್ವಳ ಅನುತ್ಪಾದಕ ಆಸ್ತಿ ಶೇ 1.43ಕ್ಕೆ ಇಳಿಕೆಯಾಗಿದೆ ಎಂದು ಪ್ರಕಟಣೆ ತಿಳಿಸಿದೆ.
ಫಲಿತಾಂಶದ ಬಗ್ಗೆ ಸಂತಸ ವ್ಯಕ್ತಪಡಿಸಿರುವ ಬ್ಯಾಂಕಿನ ವ್ಯವಸ್ಥಾಪಕ ನಿರ್ದೇಶಕ ಹಾಗೂ ಸಿಇಒ ಶ್ರಿಕೃಷ್ಣನ್ ಎಚ್., ‘ಗ್ರಾಹಕರ ಆಶೋತ್ತರಗಳಿಗೆ ಸ್ಪಂದಿಸುತ್ತಾ ಬ್ಯಾಂಕ್ ಪ್ರಗತಿಯ ಪಥದಲ್ಲಿ ದೃಢವಾದ ಹೆಜ್ಜೆಯನ್ನು ಇಡುತ್ತಿದೆ. ನವೀನ ತಂತ್ರಜ್ಞಾನ ಅಳವಡಿಕೆಗೆ ಬ್ಯಾಂಕ್ ವಿಶೇಷ ಗಮನ ಹರಿಸುತ್ತಿದೆ’ ಎಂದು ಹೇಳಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.