ಭಾನುವಾರ, 16 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಂಟ್ವಾಳ: ವಾರಕ್ಕೆ 40 ಕೋಲ, 10 ಸಾವಿರ ಅಗೇಲು ಸೇವೆ

23 ಸಾವಿರಕ್ಕೂ ಮಿಕ್ಕಿ ಕೋಲ ಮುಂಗಡ ಕಾಯ್ದಿರಿಸುವಿಕೆ
Published 23 ಮೇ 2024, 8:13 IST
Last Updated 23 ಮೇ 2024, 8:13 IST
ಅಕ್ಷರ ಗಾತ್ರ

ಬಂಟ್ವಾಳ: ಜಿಲ್ಲೆಯಲ್ಲೇ ಗರಿಷ್ಠ  ಆದಾಯ ತಂದು ಕೊಡುವ ಕಾರಣಿಕ ಪ್ರಸಿದ್ಧ ಪಣೋಲಿಬೈಲು ಕಲ್ಲುರ್ಟಿ ದೈವಸ್ಥಾನದಲ್ಲಿ  23 ಸಾವಿರಕ್ಕೂ ಹೆಚ್ಚಿನ ಕೋಲ ಸೇವೆಗೆ ಭಕ್ತರು ಮುಂಗಡ ಕಾದಿರಿಸಿದ್ದು, ವಾರದಲ್ಲಿ ಸರಾಸರಿ 40 ಕೋಲ ಮತ್ತು 10 ಸಾವಿರಕ್ಕೂ ಹೆಚ್ಚು ಅಗೇಲು ಸೇವೆ ನಡೆಯುತ್ತಿದೆ.

ವಾರದಲ್ಲಿ 5 ದಿನ ಕೋಲ ಸೇವೆ ಮತ್ತು ಮೂರು ದಿನ ಅಗೇಲು ಸೇವೆ ನಡೆಯುತ್ತಿದೆ. ಈ ಹಿಂದೆ ದಿನಕ್ಕೆ 4 ಕೋಲ ಮಾತ್ರ ಸಂಜೆ ನಡೆಯುತ್ತಿತ್ತು. ಆದರೆ, ಈಗ ದೈವದ ಒಪ್ಪಿಗೆ ಪಡೆದು ಮೇ.3ರಿಂದ ದಿನಕ್ಕೆ 8 ಕೋಲ ಸೇವೆ ಆರಂಭಗೊಂಡಿದೆ. ಸೋಮವಾರ ಮತ್ತು ಶನಿವಾರ ಹೊರತುಪಡಿಸಿ ವಾರದಲ್ಲಿ 5 ದಿನ ಕೋಲ ಸೇವೆಗೆ ಅವಕಾಶವಿದ್ದು, ಆಟಿ ತಿಂಗಳು, ಅಮಾವಾಸ್ಯೆ, ಷಷ್ಠಿ, ಸಜಿಪ ಮಾಗಣೆ ಜಾತ್ರೆ, ಉತ್ಸವ ಮತ್ತಿತರ ವಿಶೇಷ ಸಂದರ್ಭದಲ್ಲಿ ಕೊಲ ಸೇವೆ ಇರುವುದಿಲ್ಲ.

ಗರಿಷ್ಟ ಅಗೇಲು ಸೇವೆ: ಪ್ರತೀ ವರ್ಷ ಮೇ ತಿಂಗಳು ಶಾಲಾ ಕಾಲೇಜಿಗೆ ರಜೆ ಇರುವ ಕಾರಣ  ದಿನವೊಂದಕ್ಕೆ 5 ಸಾವಿರಕ್ಕೂ ಮಿಕ್ಕಿ ಅಗೇಲು ಸೇವೆ ನೀಡಿರುವ ದಾಖಲೆ ಇದೆ. ಈ ವರ್ಷ ಕಳೆದ ಭಾನುವಾರ ಒಟ್ಟು 3,666 ಅಗೇಲು ಸೇವೆ ಸಲ್ಲಿಕೆಯಾಗಿದೆ. ಮುಂಬೈ, ಬೆಂಗಳೂರು ಮತ್ತಿತರ ಕಡೆಗಳಿಂದ ಭಕ್ತರು ಬಂದು ಅಗೇಲು ಸೇವೆ ನೀಡುತ್ತಿದ್ದಾರೆ. ಕೋಳಿ, ಅಕ್ಕಿ, ಬಾಳೆ ಎಲೆ ಮತ್ತಿತರ ವಸ್ತುಗಳನ್ನು ಸಮರ್ಪಿಸುವ ಮೂಲಕ ಅಗೇಲು ಸೇವೆ ನೀಡಲಾಗುತ್ತದೆ. ಪ್ರತಿ ಭಕ್ತರ ಸಮ್ಮುಖದಲ್ಲಿ ಅಲ್ಲಿನ ಕುಲಾಲ ಸಮುದಾಯದ ಅರ್ಚಕರು ದೈವಕ್ಕೆ ವಿಶೇಷ ಪ್ರಾರ್ಥನೆ ಸಲ್ಲಿಸಿದ ಬಳಿಕ ವಿಶೇಷ ಪ್ರಸಾದ ರೂಪದಲ್ಲಿ ಅನ್ನ ಮತ್ತು ಕೋಳಿ ಪದಾರ್ಥ ವಿತರಣೆ ಮಾಡಲಾಗುತ್ತಿದೆ.

ಇಲ್ಲಿನ ತೀರಾ ಕಿರಿದಾದ ರಸ್ತೆ ವಾಹನ ಸಂಚಾರಕ್ಕೆ ತೊಡಕಾಗಿದ್ದು, ಹಂತ ಹಂತವಾಗಿ ಮೂಲಸೌಕರ್ಯ ಅಭಿವೃದ್ಧಿ ಕಾರ್ಯ ನಡೆಯುತ್ತಿದೆ. ನೂತನ ಅನ್ನಛತ್ರ ನಿರ್ಮಾಣ ಕಾಮಗಾರಿ ಪ್ರಗತಿಯಲ್ಲಿದೆ  ಭಕ್ತರು ತಿಳಿಸಿದ್ದಾರೆ.

ತಾಯಿ-ಮಕ್ಕಳ ಸಂಬಂಧ
ಕಲ್ಲುರ್ಟಿ ಮತ್ತು ಭಕ್ತರ ನಡುವೆ ತಾಯಿ-ಮಕ್ಕಳ ಅವಿನಭಾವ ಸಂಬಂಧವಿದ್ದು ಮಾತೆಯ ಆಣತಿಯಂತೆ ಭಕ್ತರ ಅಭೀಷ್ಟಗಳು ನೆರವೇರುತ್ತಿದೆ ಎಂದು ದೈವಸ್ಥಾನದ ಪ್ರಭಾರ ಕಾರ್ಯನಿರ್ವಹಣಾಧಿಕಾರಿ ದಿವಾಕರ ಮುಗುಳ್ಯ ಹೇಳಿದರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT