ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ದೇವಳದ ಅಭಿವೃದ್ಧಿಗೆ ₹ 50 ಕೋಟಿಯ ಮಾಸ್ಟರ್ ಪ್ಲ್ಯಾನ್: ಅಶೋಕ್‌ಕುಮಾರ್ ರೈ

Published 3 ಫೆಬ್ರುವರಿ 2024, 14:11 IST
Last Updated 3 ಫೆಬ್ರುವರಿ 2024, 14:11 IST
ಅಕ್ಷರ ಗಾತ್ರ

ಪುತ್ತೂರು: ‘ಪುತ್ತೂರು ದೇವಳದ ಅನ್ನಛತ್ರದ ಕೆಲಸ ಇನ್ನೂ ಪೂರ್ತಿಯಾಗಿಲ್ಲ. ಆದರೂ, ಮೊದಲ ಹಂತವನ್ನು ಉದ್ಘಾಟಿಸಲು ವ್ಯವಸ್ಥಾಪನಾ ಸಮಿತಿ ನಿರ್ಧರಿಸಿದಾಗ ಸಂತೋಷದಿಂದ ಒಪ್ಪಿಕೊಂಡಿದ್ದೇನೆ. ದೇವಳದಲ್ಲಿ ಯಾವುದೇ ರಾಜಕೀಯ ಮಾಡಬಾರದು ಎಂಬುದು ನನ್ನ ಆಶಯ. ಚಪ್ಪಲಿ ಹೊರಗಿಟ್ಟು ಒಳ ಬರುವ ಹಾಗೆ ದೇವಸ್ಥಾನಕ್ಕೆ ಬರುವಾಗ ರಾಜಕೀಯ ಹೊರಗಿಟ್ಟು ಬರಬೇಕು’ ಎಂದು ಶಾಸಕ ಅಶೋಕ್‌ಕುಮಾರ್ ರೈ ಹೇಳಿದರು.

ಮಹಾಲಿಂಗೇಶ್ವರ ದೇವಳದ `ಅನ್ನಪೂರ್ಣೇಶ್ವರಿ’ ಅನ್ನಛತ್ರದ ನೆಲಮಹಡಿಯನ್ನು ಶನಿವಾರ ಉದ್ಘಾಟಿಸಿ ಅವರು ಮಾತನಾಡಿದರು.

ದೇವಳದ ಅಭಿವೃದ್ಧಿಗೆ ₹50 ಕೋಟಿ ವೆಚ್ಚದ ಸಮಗ್ರ ಮಾಸ್ಟರ್ ಪ್ಲ್ಯಾನ್ ರೂಪಿಸಲಾಗಿದ್ದು, ಈಗಾಗಲೇ ₹2 ಕೋಟಿ ಬಿಡುಗಡೆಯಾಗಿದೆ. ಈ ಯೋಜನೆಯನ್ನು ಹಂತ ಹಂತವಾಗಿ ಜಾರಿಗೊಳಿಸಲಾಗುವುದು. ಪುತ್ತೂರು ಮಹಾಲಿಂಗೇಶ್ವರ ದೇವಳದ ಜತೆಗೆ ಉಪ್ಪಿನಂಗಡಿ ಸಹಸ್ರಲಿಂಗೇಶ್ವರ ದೇವಳದ ಅಭಿವೃದ್ಧಿ ಕೆಲಸವೂ ಆಗಬೇಕು. ಧರ್ಮಸ್ಥಳ ಮತ್ತು ಸುಬ್ರಹ್ಮಣ್ಯ ಕ್ಷೇತ್ರಗಳಿಗೆ ಬರುವ ಯಾತ್ರಾರ್ಥಿಗಳ ಪೈಕಿ ಅರ್ಧದಷ್ಟು ಜನರಾದರೂ ಇಲ್ಲಿಗೆ ಬಂದು ಹೋಗುವಂತಾಗಬೇಕು. ಈ ನಿಟ್ಟಿನಲ್ಲಿ ಅಭಿವೃದ್ಧಿ ಕೆಲಸಗಳು ನಡೆಯಲಿದೆ’ ಎಂದರು.

ದೇವಳದ ತಂತ್ರಿ ಕುಂಟಾರು ರವೀಶ ತಂತ್ರಿ ನೇತೃತ್ವದಲ್ಲಿ ಬೆಳಿಗ್ಗೆ ನೂತನ ಅನ್ನಛತ್ರದಲ್ಲಿ ಗಣಪತಿ ಹೋಮ ನಡೆಯಿತು. ನಾನಾ ಬಗೆಯ ವಸ್ತುಗಳನ್ನು ಭಕ್ತರು ಮೆರವಣಿಗೆ ಮೂಲಕ ದೇವಳದಿಂದ ತಂದು ಛತ್ರ ತುಂಬಿಸಿದರು. ಮಾಣಿಲ ಶ್ರೀಧಾಮದ ಮೋಹನದಾಸ ಸ್ವಾಮೀಜಿ ಮಾತನಾಡಿದರು. ಕಳಸೆಗೆ ಅಕ್ಕಿ ಸುರಿದು ಅಕ್ಷಯಕ್ಕಾಗಿ ಪ್ರಾರ್ಥಿಸಲಾಯಿತು.

ಮಾಜಿ ಶಾಸಕ ಸಂಜೀವ ಮಠಂದೂರು, ಛನ್ನಛತ್ರಕ್ಕೆ ದೇಣಿಗೆ ನೀಡಿರುವ ಉದ್ಯಮಿ ಪುರುಷೋತ್ತಮ ಶೆಟ್ಟಿ ನುಳಿಯಾಲು, ದೇವಳದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಕೇಶವ ಪ್ರಸಾದ್ ಮುಳಿಯ, ದೇವಳದ ಕಾರ್ಯನಿರ್ವಹಣಾಧಿಕಾರಿ ಶ್ರೀನಿವಾಸ್, ದೇವಳದ ವ್ಯವಸ್ಥಾಪನಾ ಸಮಿತಿ ಸದಸ್ಯರಾದ ರಾಮಚಂದ್ರ ಕಾಮತ್, ರಾಮದಾಸ್ ಗೌಡ, ಡಾ.ಸುಧಾ ಎಸ್ ರಾವ್, ವೀಣಾ ಬಿ ಕೆ, ಬಿ ಐತ್ತಪ್ಪ ನಾಯ್ಕ , ಶೇಖರ್ ನಾರಾವಿ, ರವೀಂದ್ರನಾಥ ರೈ ಬಳ್ಳಮಜಲು ಮತ್ತಿತರರು ಇದ್ದರು.

ಪುತ್ತೂರು ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಹಾಗೂ ಈ ಹಿಂದೆ ಮಹಾಲಿಂಗೇಶ್ವರ ದೇವಳದಲ್ಲಿ ಕಾರ್ಯನಿರ್ವಹಣಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸಿದ್ದ ನವೀನ್ ಕುಮಾರ್ ಭಂಡಾರಿ ದಂಪತಿ ಮತ್ತು ಮನೆಯವರು ಮಹಾಲಿಂಗೇಶ್ವರ ದೇವಳದ ದೇವರ ಪ್ರಧಾನ ಗರ್ಭಗುಡಿಯ ದಾರಂದಕ್ಕೆ ಸುಮಾರು 8 ಕೆಜಿ ತೂಕದ ಬೆಳ್ಳಿಯ ಕವಚ ಸಮರ್ಪಣೆ ಮಾಡಿದರು. ಸಿದ್ಧಪಡಿಸಿದ್ದ ಬೆಳ್ಳಿಯ ದಾರಂದ ಕವಚವನ್ನು ಶನಿವಾರ ಮೆರವಣಿಗೆಯ ಮೂಲಕ ದೇವವಳಕ್ಕೆ ತಂದು ಬಳಿಕ ದೇವಳದ ಸತ್ಯಧರ್ಮ ನಡೆಯಲ್ಲಿಟ್ಟು ಸಮರ್ಪಣಾ ಪ್ರಾರ್ಥನೆ ನೆರವೇರಿಸಲಾಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT