ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಾದಯಾತ್ರೆ ನಡೆಯುವುದು ಖಚಿತ

658 ಕಿ.ಮೀ ಕಾಲ್ನಡಿಗೆ: ಪ್ರಣವಾನಂದ ಸ್ವಾಮೀಜಿ
Last Updated 5 ಜನವರಿ 2023, 12:29 IST
ಅಕ್ಷರ ಗಾತ್ರ

ಮಂಗಳೂರು: ಬಿಲ್ಲವ, ಈಡಿಗ, ನಾಮಧಾರಿ ಸಮುದಾಯಗಳ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ, ಹಮ್ಮಿಕೊಂಡಿರುವ 41 ದಿನಗಳ ಪಾದಯಾತ್ರೆ ನಡೆದೇ ನಡೆಯುತ್ತದೆ ಎಂದು ಕರದಾಳು ಬ್ರಹ್ಮಶ್ರೀ ನಾರಾಯಣ ಗುರು ಶಕ್ತಿ ಪೀಠದ ಪ್ರಣವಾನಂದ ಸ್ವಾಮೀಜಿ ಸ್ಪಷ್ಟಪಡಿಸಿದರು.

ಗುರುವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಶುಕ್ರವಾರ (ಜ.6) ಬೆಳಿಗ್ಗೆ 10.30 ಗಂಟೆಗೆ ಕುದ್ರೋಳಿ ಗೋಕರ್ಣನಾಥ ಕ್ಷೇತ್ರದಲ್ಲಿ ಸಭಾ ಕಾರ್ಯಕ್ರಮ ನಡೆದು, ಮಧ್ಯಾಹ್ನ 12.30ಕ್ಕೆ ಪಾದಯಾತ್ರೆ ಆರಂಭವಾಗಲಿದೆ. ಸಮುದಾಯದ ಮುಖಂಡ ಬಿ. ಜನಾರ್ದನ ಪೂಜಾರಿ, ತೆಲಂಗಾಣದ ಸಚಿವ ಶ್ರೀನಿವಾಸ ಗೌಡ್ ಚಾಲನೆ ನೀಡಲಿದ್ದಾರೆ. ಅಲ್ಲಿಂದ 13 ಕಿ.ಮೀ ಪಾದಯಾತ್ರೆ ನಡೆಸಿ, ಕುಳಾಯಿ ಬಿಲ್ಲವ ಸಂಘದಲ್ಲಿ ಸಂಜೆ ವಸತಿ ಮಾಡಿ, ಅಲ್ಲಿಂದ ಹೆಜಮಾಡಿ ಮಾರ್ಗವಾಗಿ ಒಟ್ಟು 658 ಕಿ.ಮೀ ಪಾದಯಾತ್ರೆ ನಡೆಯಲಿದೆ. ಕುದ್ರೋಳಿ ಕ್ಷೇತ್ರದಲ್ಲಿ 10ಸಾವಿರ ಜನರು ಸೇರುವ ನಿರೀಕ್ಷೆ ಇದೆ’ ಎಂದರು.

ರಾಯಚೂರು, ಬೀದರ್, ಕಲಬುರಗಿ ಭಾಗಗಳಿಂದ 160ಕ್ಕೂ ಹೆಚ್ಚು ವಾಹನಗಳಲ್ಲಿ ಮಂಗಳೂರಿಗೆ ಬಂದು ಪಾದಯಾತ್ರೆಯಲ್ಲಿ ಭಾಗಿಯಾಗುತ್ತಾರೆ. ನಾರಾಯಣಗುರು ಅಭಿವೃದ್ಧಿ ನಿಗಮದ ಬೇಡಿಕೆ ಈಡೇರಿಕೆಗಾಗಿ ಮಾತ್ರ ಪಾದಯಾತ್ರೆ ನಡೆಸುತ್ತಿಲ್ಲ, 10 ವಿವಿಧ ಬೇಡಿಕೆಗಳ ಈಡೇರಿಸುವ ಸಂಬಂಧ ಸರ್ಕಾರದ ಗಮನ ಸೆಳೆಯಲಾಗುತ್ತದೆ. ಸಮಾಜದ ಜಾಗೃತಿಗಾಗಿ ಪಾದಯಾತ್ರೆ ನಡೆಯಲಿದೆ. ಲಂಬಾಣಿ, ಕುಂಬಾರ, ಮಡಿವಾಳ ಸೇರಿದಂತೆ ಆರು ಸಮುದಾಯಗಳ ಸ್ವಾಮೀಜಿಗಳು ನಮ್ಮ ಜೊತೆ ಸೇರಲಿದ್ದಾರೆ. ಇದು ಯಾವುದೇ ಪಕ್ಷದ ವಿರುದ್ಧ ನಡೆಯುವ ಪಾದಯಾತ್ರೆ ಅಲ್ಲ. ಅಂದಾಜು ₹ 1.5 ಕೋಟಿ ಖರ್ಚಾಗಲಿದ್ದು, ಯಾವುದೇ ರಾಜಕೀಯ ನಾಯಕರು, ಪಕ್ಷಗಳಿಂದ ಪಾದಯಾತ್ರೆಗೆ ಹಣ ಪಡೆದಿಲ್ಲ ಎಂದು ತಿಳಿಸಿದರು.

ಯಾವುದೇ ರಾಜಕೀಯ ಉದ್ದೇಶ, ಹುದ್ದೆಗಾಗಿ ಪಾದಯಾತ್ರೆ ನಡೆಸುತ್ತಿಲ್ಲ. ಸಾಕಷ್ಟು ಒತ್ತಡ, ಬೆದರಿಕೆಗಳು ಬಂದಿದ್ದು, ಅದಕ್ಕೆ ಬೆದರುವುದಿಲ್ಲ. ಸಮುದಾಯದ ಕಟ್ಟಕಡೆಯ ಜನರಿಗೆ ನ್ಯಾಯ ಸಿಗಬೇಕು ಎಂಬುದು ಪಾದಯಾತ್ರೆಯ ಉದ್ದೇಶ ಎಂದು ವಿವರಿಸಿದರು.

‘ಆನೆ ಹೋಗುವಾಗ ನಾಯಿ ಬೊಗಳುತ್ತದೆ. ಆದರೆ, ಆನೆ ಇದನ್ನು ಲೆಕ್ಕಿಸದೆ ನಡೆಯುತ್ತಿರುತ್ತದೆ. ಹಾಗೆಯೇ, ಯಾರ ಟೀಕೆಗಳಿಗೂ ನಾನು ಪ್ರತಿಕ್ರಿಯಿಸುವುದಿಲ್ಲ’ ಎಂದು ಸ್ವಾಮೀಜಿಯೊಬ್ಬರ ಹೇಳಿಕೆಗೆ ಸಂಬಂಧಿಸಿದ ಪ್ರಶ್ನೆಗೆ ಪ್ರಣವಾನಂದ ಸ್ವಾಮೀಜಿ ಉತ್ತರಿಸಿದರು.

ಬ್ರಹ್ಮಶ್ರೀ ನಾರಾಯಣಗುರುಗಳ ಶಿವಗಿರಿ ಮಠದ ವಿಶ್ರುತಾನಂದ ಸ್ವಾಮೀಜಿ, ಆರ್ಯ, ಈಡಿಗ ರಾಷ್ಟ್ರೀಯ ಮಹಾಮಂಡಳಿ ಮಹಿಳಾ ಘಟಕದ ಅಧ್ಯಕ್ಷೆ ಅರ್ಚನಾ ಜೈಸ್ವಾಲ್, ಪಾದಯಾತ್ರೆ ಸಮಿತಿ ಜಿಲ್ಲಾ ಘಟಕದ ಅಧ್ಯಕ್ಷ ಪದ್ಮನಾಭ ಕೋಟ್ಯಾನ್, ಜಿತೇಂದ್ರ ಸುವರ್ಣ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT