ಸೋಮವಾರ, ಜನವರಿ 27, 2020
15 °C
ಇಂದಿನಿಂದ ಮೂಡುಬಿದಿರೆ ಸ್ವರಾಜ್ ಮೈದಾನದಲ್ಲಿ ಕ್ರೀಡಾ ಕಲರವ

80ನೇ ಅಖಿಲ ಭಾರತ್‌ ಅಂತರ ವಿವಿ ಅಥ್ಲೆಟಿಕ್‌ ಚಾಂಪಿಯನ್‌ ಷಿಪ್‌

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮಂಗಳೂರು: ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯ ಹಾಗೂ ಮೂಡುಬಿದಿರೆ ಆಳ್ವಾಸ್ ಶಿಕ್ಷಣ ಪ್ರತಿಷ್ಟಾನದ ಆಶ್ರಯದಲ್ಲಿ 80 ನೇ ಅಖಿಲ ಭಾರತ ಅಂತರ ವಿಶ್ವವಿದ್ಯಾಲಯ ಅಥ್ಲೆಟಿಕ್ ಚಾಂಪಿಯನ್‌ ಷಿಪ್ ಜನವರಿ 2ರಿಂದ 6 ರವರೆಗೆ ಮೂಡುಬಿದಿರೆ ಸ್ವರಾಜ್ಯ ಮೈದಾನದಲ್ಲಿ ನಡೆಯಲಿದೆ ಎಂದು ರಾಜೀವ್‌ಗಾಂಧಿ ವಿಶ್ವವಿದ್ಯಾಲಯದ ಕುಲಪತಿ ಡಾ.ಎಸ್.ಸಚ್ಚಿದಾನಂದ ಬುಧವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ರಾಜೀವ್‌ ಗಾಂಧಿ ವಿಶ್ವವಿದ್ಯಾಲಯಕ್ಕೆ ಮೂಡುಬಿದಿರೆಯಲ್ಲಿ ಮೂರನೇ ಬಾರಿಗೆ ಅಖಿಲ ಭಾರತ ಅಂತರ ವಿಶ್ವವಿದ್ಯಾಲಯ ಅಥ್ಲೆಟಿಕ್ ಚಾಂಪಿಯನ್‌ ಷಿಪ್ ಆಯೋಜಿಸುವ ಅವಕಾಶ ಸಿಕ್ಕಿದೆ. 2013 ಹಾಗೂ 2015 ರಲ್ಲಿ ಕೂಡಾ ವಿವಿ ಸಮರ್ಥವಾಗಿ ಜವಾಬ್ದಾರಿ ನಿರ್ವಹಿಸಿತ್ತು ಎಂದು ಅವರು ತಿಳಿಸಿದರು.

ಗುರುವಾರ ಬೆಳೀಗ್ಗೆ 6.30 ಕ್ಕೆ ಸ್ಪರ್ಧೆಗಳು ಆರಂಭವಾಗಲಿವೆ. ಸಂಜೆ 5.45 ಕ್ಕೆ ಪಥಸಂಚಲನದ ಬಳಿಕ ಕ್ರೀಡಾಕೂಟಕ್ಕೆ ವಿಧ್ಯುಕ್ತ ಚಾಲನೆ ದೊರೆಯಲಿದೆ. ಕೇಂದ್ರ ಯುವ ಸಬಲೀಕರಣ ಮತ್ತು ಕ್ರೀಡಾ ಸಚಿವ ಕಿರಣ್ ರಿಜಿಜು ಕ್ರೀಡಾಕೂಟಕ್ಕೆ ಚಾಲನೆ ನೀಡಲಿದ್ದಾರೆ. ಜ.6 ರಂದು ಮಧ್ಯಾಹ್ನ 3 ಗಂಟೆಗೆ ಸಮಾರೋಪ ನಡೆಯಲಿದೆ ಎಂದು ಅವರು ತಿಳಿಸಿದರು.

4494 ಅಥ್ಲೀಟ್‌ಗಳು ಭಾಗಿ:  ಈ ಬಾರಿ ಕ್ರೀಡಾಕೂಟದಲ್ಲಿ ದೇಶದ 300 ಕ್ಕೂ ಅಧಿಕ ವಿಶ್ವವಿದ್ಯಾಲಯಗಳ  4494 ಅಥ್ಲೀಟ್‌ಗಳು, 1200 ಮಂದಿ  ಕ್ರೀಡಾಧಿಕಾರಿಗಳು, 200 ಮಂದಿ ತಾಂತ್ರಿಕ ಅಧಿಕಾರಿಗಳು ಹಾಗೂ 500 ಮಂದಿ ಸ್ವಯಂ ಸೇವಕರು, 2890 ಪುರುಷರು, 1578 ಮಂದಿ ಮಹಿಳೆಯರು ಕ್ರೀಡಾಕೂಟದಲ್ಲಿ ಪಾಲ್ಗೊಳ್ಳಲಿದ್ದಾರೆ. ಪುರುಷರಿಗೆ 23 ವಿಭಾಗಗಳಲ್ಲಿ ಹಾಗೂ ಮಹಿಳೆಯರಿಗೆ 23 ವಿಭಾಗಗಳಲ್ಲಿ ಸ್ಪರ್ಧೆಗಳು ನಡೆಯಲಿವೆ. ಮೊಟ್ಟ ಮೊದಲ ಬಾರಿಗೆ 3 ಹೊಸ ಸ್ಪರ್ಧೆಗಳನ್ನು ಆಯೋಜಿಸಲಾಗಿದೆ. ಪುರುಷರಿಗೆ ಮತ್ತು ಮಹಿಳೆಯರಿಗಾಗಿ ಪ್ರತ್ಯೇಕ ವಿಭಾಗದಲ್ಲಿ 32 ಕಿಲೋ ಮೀಟರ್‌ ಮ್ಯಾರಾಥಾನ್‌ ಹಾಗೂ ಜಂಟಿ ರಿಲೇ ಆಯೋಜಿಸಲಾಗಿದೆ ಎಂದು ಅವರು ತಿಳಿಸಿದರು.

ಸ್ಪರ್ಧಿಗಳಿಗೆ ಅನುಕೂಲವಾಗುವಂತೆ ಇದೇ ಮೊದಲ ಬಾರಿಗೆ ಆನ್‌ಲೈನ್ ಮೂಲಕ ನೋಂದಣಿ ಮಾಡಲು ಸೌಲಭ್ಯ ಕಲ್ಪಿಸಲಾಗಿದೆ. ಐದು ದಿನ ರಾತ್ರಿ ಮತ್ತು ಹಗಲು ಹೊತ್ತಿನ ಸ್ಪರ್ಧೆಗಳು ನಡೆಯಲಿವೆ. ಅಂತರರಾಷ್ಟ್ರೀಯ ಮಟ್ಟದ ಅತ್ಯಾಧುನಿಕ ಪೋಟೊ ಫಿನಿಷಿಂಗ್ ತಂತ್ರಜ್ಞಾನದ ವ್ಯವಸ್ಥೆ ಮಾಡಲಾಗಿದೆ ಎಂದು ಅವರು ತಿಳಿಸಿದರು.

ಜೀವ ರಕ್ಷಾ ತರಬೇತಿ ಯೋಜನೆ: ರಾಜೀವ್ ಗಾಂಧಿ ಆರೋಗ್ಯ ವಿವಿ ವತಿಯಿಂದ 2019–20ನೇ ಸಾಲಿನ ವೈದ್ಯಕೀಯ ವಿದ್ಯಾರ್ಥಿಗಳ ಇಂಟರ್ನ್‌ಶಿಪ್ ವೇಳೆ 8 ಬಗೆ ಜೀವರಕ್ಷಾ ತರಬೇತಿ ಪಡೆಯುವುದನ್ನು ಕಡ್ಡಾಯ ಮಾಡಲಾಗಿದೆ. ಪ್ರತಿ ವರ್ಷ ವಿವಿಯಿಂದ 6 ಸಾವಿರದಷ್ಟು ವಿದ್ಯಾರ್ಥಿಗಳು ವೈದ್ಯಕೀಯ ಪದವಿ ಪೂರೈಸುತ್ತಿದ್ದಾರೆ. ಇಷ್ಟು ಮಂದಿ ಈ ವರ್ಷ ಜೀವರಕ್ಷಾ ತರಬೇತಿ ಪಡೆಯಲಿದ್ದಾರೆ ಎಂದು ಕುಲಪತಿ ಡಾ.ಸಚ್ಚಿದಾನಂದ ತಿಳಿಸಿದರು.

ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯದ ಕುಲಸಚಿವ ಶಿವಾನಂದ ಕಪಾಶಿ, ಮೌಲ್ಯಮಾಪನ ವಿಭಾಗದ ಕುಲಸಚಿವ ಡಾ.ಕೆ.ಪಿ.ಲಿಂಗೇಗೌಡ, ಸಿಂಡಿಕೇಟ್ ಸದಸ್ಯರಾದ ಡಾ.ರವಿಶಂಕರ ಶೆಟ್ಟಿ, ಡಾ.ಉಮೇಶ್, ಡಾ.ಶಿವಶರಣ್ ಶೆಟ್ಟಿ, ಡಾ. ಇಫ್ತಿಕಾರ್ ಆಲಿ, ಡಾ.ಕಿರಣ್, ಪ್ರೊ. ರಾಜೇಶ್, ಡಾ.ಶರಣ್ ಇದ್ದರು.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು