ಗುರುವಾರ , ಫೆಬ್ರವರಿ 25, 2021
19 °C
ಐಟಿ ಉದ್ಯಮದಲ್ಲಿ ಉದ್ಯೋಗ: ಕೆಸಿಸಿಐ ಸಮೀಕ್ಷೆಯಲ್ಲಿ ಬಹಿರಂಗ

ಕರಾವಳಿಯಲ್ಲಿ ಕೆಲಸಕ್ಕೆ ಶೇ 96 ವೃತ್ತಿಪರರು ಸಿದ್ಧ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮಂಗಳೂರು: ಕರಾವಳಿಯಲ್ಲಿ ಮಾಹಿತಿ ತಂತ್ರಜ್ಞಾನ ಉದ್ಯಮವನ್ನು ಅಭಿವೃದ್ಧಿಪಡಿಸುವ ನಿಟ್ಟಿನಲ್ಲಿ ಕಾರ್ಯಪ್ರವೃತ್ತವಾಗಿರುವ ಕೆನರಾ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆ (ಕೆಸಿಸಿಐ), ಇದೀಗ ಹೊಸ ಸಮೀಕ್ಷೆ ನಡೆಸಿದೆ. ದೇಶದ ವಿವಿಧೆಡೆ ಹಾಗೂ ವಿದೇಶದಲ್ಲಿ ನೆಲೆಸಿರುವ ಶೇ 96 ರಷ್ಟು ಐಟಿ ಉದ್ಯೋಗಿಗಳು ಕರಾವಳಿಯಲ್ಲಿ ಕೆಲಸ ಮಾಡಲು ಸಿದ್ಧರಿರುವುದು ಸಮೀಕ್ಷೆಯಿಂದ ಬಹಿರಂಗವಾಗಿದೆ.

ಮಂಗಳೂರು ಮತ್ತು ಉಡುಪಿ ನಗರ ವ್ಯಾಪ್ತಿಯಲ್ಲಿ ಐಟಿ ಉದ್ಯಮಕ್ಕೆ ಪೂರಕವಾಗಿ ಮೂಲಸೌಕರ್ಯ ಹೆಚ್ಚಿಸಿದಲ್ಲಿ, ಬಹುತೇಕ ಜನರು ಇಲ್ಲಿಯೇ ಕೆಲಸ ಮಾಡಲು ಆಸಕ್ತಿ ಹೊಂದಿದ್ದಾರೆ. ಕೆಸಿಸಿಐ ವಿಶ್ವದ ಒಟ್ಟು 2,240 ಐಟಿ ಉದ್ಯೋಗಿಗಳನ್ನು ಸಮೀಕ್ಷೆಗೆ ಒಳಪಡಿಸಿತ್ತು. ಅದರಲ್ಲಿ ಬಹುತೇಕರು ಕರಾವಳಿಯವರಾಗಿದ್ದಾರೆ.

ಮಾಹಿತಿ ತಂತ್ರಜ್ಞಾನ ಕಂಪನಿಗಳು ಮಂಗಳೂರು ಮತ್ತು ಉಡುಪಿ ಭಾಗದಲ್ಲಿ ಹೂಡಿಕೆ ಮಾಡುವ ಮೂಲಕ ಐಟಿ ಉದ್ಯಮದ ಅಭಿವೃದ್ಧಿಗೆ ಮುಂದಾದಲ್ಲಿ ನಾವು ಕರಾವಳಿಯಲ್ಲಿ ಕೆಲಸ ಮಾಡಲು ಸಿದ್ಧ ಎನ್ನುವ ಅಭಿಪ್ರಾಯವನ್ನು ಉದ್ಯೋಗಿಗಳು ವ್ಯಕ್ತಪಡಿಸಿದ್ದಾರೆ.

ಪದವೀಧರರು ಮಂಗಳೂರಿನಲ್ಲಿ ಉಳಿಯಲು ಬಯಸುವುದಿಲ್ಲ, ವಿವಿಧ ಕ್ಷೇತ್ರಗಳ ಪರಿಣತರು ಇಲ್ಲಿ ಕೆಲಸ ಮಾಡಲು ಬಯಸುವುದಿಲ್ಲ, ಇಲ್ಲಿ ಪಾರ್ಟಿ, ಪಬ್‌ ಸಂಸ್ಕೃತಿ ಇಲ್ಲದಿರುವುದರಿಂದ ಬಹುತೇಕರು ಕರಾವಳಿಗೆ ಬರಲು ಹಿಂದೇಟು ಹಾಕುತ್ತಾರೆ ಎಂಬೆಲ್ಲ ತಪ್ಪು ಮಾಹಿತಿಯನ್ನು ಅಲ್ಲಗಳೆದಿರುವ ಶೇ 95 ರಷ್ಟು ಐಟಿ ಉದ್ಯೋಗಿಗಳು, ವೃತ್ತಿ ಮತ್ತು ಕೆಲಸವನ್ನು ನಿರ್ವಹಿಸಲು ಅನುಕೂಲಕರವಾಗಿದ್ದಲ್ಲಿ, ಕರಾವಳಿಯಲ್ಲಿ ಕೆಲಸ ಮಾಡುತ್ತೇವೆ ಎನ್ನುವ ಮಾತುಗಳನ್ನು ಹೇಳಿದ್ದಾರೆ.

ಐಟಿ ಉದ್ಯಮದ ಅಭಿವೃದ್ಧಿಗೆ ಹಲವಾರು ತೊಡಕುಗಳಿವೆ ಎನ್ನುವ ಸುಳ್ಳು ಸುದ್ದಿಗಳನ್ನು ಹಬ್ಬಿಸಲಾಗುತ್ತಿದೆ. ಈ ಸಮೀಕ್ಷೆಯಲ್ಲಿ ಭಾಗವಹಿಸಿದವರು ಅದಕ್ಕೆ ಸ್ಪಷ್ಟ ಉತ್ತರ ನೀಡಿದ್ದಾರೆ ಎಂದು ಕೆಸಿಸಿಐಯ ಐಟಿ ಉಪ ಸಮಿತಿ ಸದಸ್ಯ ಅಶಿತ್ ಹೆಗ್ಡೆ ಹೇಳಿದ್ದಾರೆ.

ಕೇವಲ ಶೇ 34 ರಷ್ಟು ಜನರು ಮಾತ್ರ ತಮ್ಮ ಉದ್ಯೋಗದ ಸ್ಥಳವನ್ನು ನಿರ್ಧರಿಸಲು ರಿಕ್ರಿಯೇಷನ್‌ ಸೌಲಭ್ಯಗಳನ್ನು ಪರಿಗಣಿಸುವುದಾಗಿ ತಿಳಿಸಿದ್ದಾರೆ. ಯುರೋಪ, ಅಮೆರಿಕ, ಕೆನಡಾ, ಆಸ್ಟ್ರೇಲಿಯ, ಸಿಂಗಪುರಗಳಲ್ಲಿ ನೆಲೆಸಿರುವ ಶೇ 53 ರಷ್ಟು ಐಟಿ ಉದ್ಯೋಗಿಗಳು, ಅಲ್ಲಿನ ಜೀವನ ನಿರ್ವಹಣೆಯಿಂದ ಸಂತುಷ್ಟರಾಗಿಲ್ಲ. ಅದಕ್ಕಾಗಿ ಅವರು ಉತ್ತಮ ಸ್ಥಳಗಳ ನಿರೀಕ್ಷೆಯಲ್ಲಿದ್ದಾರೆ.

ನಗರದ ಹಲವು ವಾಣಿಜ್ಯ ಸಂಕೀರ್ಣಗಳಲ್ಲಿರುವ ಐಟಿ ಕಂಪನಿಗಳು ಸುಗಮವಾಗಿ ಕೆಲಸ ಮಾಡಲು ಸಾಧ್ಯವಾಗುತ್ತಿಲ್ಲ. ಅದಕ್ಕಾಗಿಯೇ ಅವರು ಬೇರೆ ನಗರಗಳಿಗೆ ಹೋಗುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ನಗರದಲ್ಲಿ ಐಟಿ ಉದ್ಯಮಕ್ಕೆ ಪೂರಕವಾದ ಸೌಲಭ್ಯಗಳನ್ನು ಒದಗಿಸುವುದು ಅಗತ್ಯವಾಗಿದೆ. ಸಮೀಕ್ಷೆಯ ವರದಿಯೊಂದಿಗೆ ಉಪ ಮುಖ್ಯಮಂತ್ರಿ ಡಾ.ಸಿ.ಎನ್‌. ಅಶ್ವತ್ಥನಾರಾಯಣ ಅವರಿಗೆ ಕೆಸಿಸಿಐ ಮನವಿ ಸಲ್ಲಿಸಲಿದೆ ಎಂದು ಕೆಸಿಸಿಐ ಅಧ್ಯಕ್ಷ ಐಸಾಕ್‌ ವಾಸ್‌ ತಿಳಿಸಿದ್ದಾರೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು