ಶುಕ್ರವಾರ, ಅಕ್ಟೋಬರ್ 23, 2020
27 °C

966 ಮಂದಿ ಮಾಸಾಶನ ಸ್ಥಗಿತ; ತಾಳೆಯಾಗದ ಬ್ಯಾಂಕ್‌ ಖಾತೆ ಸಂಖ್ಯೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮಂಗಳೂರು: ಸಾಮಾಜಿಕ ಭದ್ರತಾ ಯೋಜನೆಗಳ ಅಡಿಯಲ್ಲಿ ಬಡತನ ರೇಖೆಗಿಂತ ಕೆಳಗಿರುವ ಅಸಹಾಯಕ, ಅಶಕ್ತ ವ್ಯಕ್ತಿ, ವಿಧವೆಯರು ಹಾಗೂ ಅಂಗವಿಕಲರಿಗೆ ಮಾಸಿಕ ಪಿಂಚಣಿ ನೀಡಲಾಗುತ್ತಿದ್ದು, ಜಿಲ್ಲೆಯಲ್ಲಿ 966 ಫಲಾನುಭವಿಗಳ ಬ್ಯಾಂಕ್ ಖಾತೆ ಸಂಖ್ಯೆ ತಾಳೆಯಾಗದೇ ಇರುವುದರಿಂದ ಪಿಂಚಣಿಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ.

ಪಿಂಚಣಿ ಯೋಜನೆಗಳಲ್ಲಿ ಒಟ್ಟು 1,46,610 ಫಲಾನುಭವಿಗಳು ಪ್ರತಿ ತಿಂಗಳು ಮಾಸಾಶನ ಪಡೆಯುತ್ತಿದ್ದಾರೆ. ಈ ವರ್ಷದ ಸೆಪ್ಟೆಂಬರ್ ಅಂತ್ಯಕ್ಕೆ ಜಿಲ್ಲೆಯಲ್ಲಿ 2,197 ಫಲಾನುಭವಿಗಳಿಗೆ ಪಿಂಚಣಿ ಪಾವತಿಯಾಗದೇ ಇರುವುದು ಕಂಡುಬಂದಿದೆ. ಇದರಲ್ಲಿ 1,231 ಪ್ರಕರಣಗಳು ಸರ್ಕಾರದ ಹಂತದಲ್ಲಿ ಅನುಮೋದನೆಗೆ ಬಾಕಿಯಾಗಿವೆ ಎಂದು ಜಿಲ್ಲಾಧಿಕಾರಿ ಡಾ.ಕೆ.ವಿ. ರಾಜೇಂದ್ರ ತಿಳಿಸಿದ್ದಾರೆ.

ಪಿಂಚಣಿಗೆ ಸಂಬಂಧಿಸಿದಂತೆ ತೊಂದರೆಗಳು ಇದ್ದಲ್ಲಿ, ಫಲಾನುಭವಿಗಳು ತಮ್ಮ ಆಧಾರ್ ಕಾರ್ಡ್ ಪ್ರತಿ, ಬ್ಯಾಂಕ್ ಖಾತೆಯ ಪ್ರತಿ, ಹಾಗೂ ಪಿಂಚಣಿ ಮಂಜೂರಾತಿ ಆದೇಶದ ಪ್ರತಿಯನ್ನು ಸಂಬಂಧಪಟ್ಟ ಗ್ರಾಮಕರಣಿಕರಿಗೆ ಅಥವಾ ತಾಲ್ಲೂಕು ಕಚೇರಿಯ ವಿಷಯ ನಿರ್ವಾಹಕರಲ್ಲಿ ನೀಡಬೇಕು. ರಾಷ್ಟ್ರೀಯ ಕುಟುಂಬ ಸಹಾಯಧನ ಯೋಜನೆ, ಅಂತ್ಯಸಂಸ್ಕಾರ ಸಹಾಯಧನ ಯೋಜನೆಗಳಲ್ಲಿ ಅನುದಾನ ಮಂಜೂರಾಗಿರುವ ಪ್ರಕರಣಗಳಿಗೆ ಅನುದಾನ ಬಿಡುಗಡೆ ಮಾಡುವಂತೆ ಸರ್ಕಾರಕ್ಕೆ ಈಗಾಗಲೇ ಪ್ರಸ್ತಾವ ಸಲ್ಲಿಸಲಾಗಿದೆ ಎಂದು ತಿಳಿಸಿದ್ದಾರೆ.

ಪಿಂಚಣಿ ಪಾವತಿಯಾಗದೇ ಇರುವ ಫಲಾನುಭವಿಗಳ ಮಾಹಿತಿ ಸಂಗ್ರಹಿಸಿ ತಂತ್ರಾಂಶದಲ್ಲಿ ಅಳವಡಿಸಿ, ಸರ್ಕಾರಕ್ಕೆ ಸಲ್ಲಿಸಲಾಗುವುದು. ಪ್ರತಿಯೊಬ್ಬ ಫಲಾನುಭವಿಗೂ ಪಿಂಚಣಿ ಸಿಗುವಂತೆ ಕ್ರಮ ಕೈಗೊಳ್ಳಲಾಗುವುದೆಂದು ಭರವಸೆ ನೀಡಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.