ಮಂಗಳೂರು: ಮಹಿಳೆಯನ್ನು (ಅತ್ತಾವರದ ಶ್ರೀಮತಿ ಶೆಟ್ಟಿ) ಕೊಂದು ದೇಹವನ್ನು 29 ತುಂಡು ಮಾಡಿ ಚೀಲದಲ್ಲಿ ತುಂಬಿಸಿ ನಗರದ ಬೇರೆ ಬೇರೆ ಕಡೆ ಬಿಸಾಡಿದ್ದ ಪ್ರಕರಣದಲ್ಲಿ ದಂಪತಿಗೆ ಮಂಗಳೂರಿನ ಒಂದನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯವು ಜೀವಾವಧಿ ಶಿಕ್ಷೆ ಹಾಗೂ ಮೂರನೇ ಅಪರಾಧಿಗೆ ಆರೂವರೆ ತಿಂಗಳು ಸಜೆಯನ್ನು ವಿಧಿಸಿದೆ.
ಈ ಪ್ರಕರಣದ ಅಪರಾಧಿಗಳಾದ ನಗರದ ಸೂಟರ್‌ಪೇಟೆಯ ಜೋನಸ್ ಸ್ಯಾಮ್ಸನ್ ಅಲಿಯಾಸ್ ಜೋನಸ್ ಜೌಲಿನ್ ಸ್ಯಾಮ್ಸನ್ (40) ಆತನ ಪತ್ನಿ ವಿಕ್ಟೋರಿಯಾ ಮಥಾಯಿಸ್ (47) ಹಾಗೂ ಮರಕಡ ತಾರಿಪಾಡಿ ಗುಡ್ಡೆಯ ರಾಜು (34) ವಿರುದ್ಧದ ಆರೋಪ ಮೊದಲೇ ಸಾಬೀತಾಗಿತ್ತು.
ತೀರ್ಪನ್ನು ಮಂಗಳವಾರ ಪ್ರಕಟಿಸಿದ ಒಂದನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯದ ನ್ಯಾಯಾಧೀಶರಾದ ಮಲ್ಲಿಕಾರ್ಜುನ ಸ್ವಾಮಿ ಎಚ್.ಎಸ್. ಅವರು, ಜೋನಸ್ ಜೌಲಿನ್ ಸ್ಯಾಮ್ಸನ್ ಹಾಗೂ ವಿಕ್ಟೋರಿಯಾ ಮಥಾಯಿಸ್‌ಗೆ ಭಾರತೀಯ ದಂಡ ಸಂಹಿತೆ (ಐಪಿಸಿ) ಸೆಕ್ಷನ್ 302 (ಕೊಲೆ) ಹಾಗೂ ಸೆಕ್ಷನ್ 34 (ಸಮಾನ ಉದ್ದೇಶದ ಕೊಲೆ) ಅಡಿ ಜೀವಾವಧಿ ಶಿಕ್ಷೆ ಹಾಗೂ ತಲಾ 25 ಸಾವಿರ ದಂಡ ವಿಧಿಸಿದ್ದಾರೆ.
ದಂಡ ತೆರಲು ತಪ್ಪಿದಲ್ಲಿ ಅಪರಾಧಿಗಳು ಮತ್ತೆ 1 ವರ್ಷ ಸಾದಾ ಸಜೆ ಅನುಭವಿಸಬೇಕು. ಐಪಿಸಿ ಸೆಕ್ಷನ್ 201 (ಸುಳ್ಳು ಸಾಕ್ಷ್ಯ ಹಾಗೂ ಸಾಕ್ಷ್ಯನಾಶ) ಮತ್ತು ಸೆಕ್ಷನ್ 34ರ ಅಡಿ 7 ವರ್ಷಗಳ ಸಾದಾ ಸಜೆ ಮತ್ತು ತಲಾ ₹ 5 ಸಾವಿರ ದಂಡ ವಿಧಿಸಿದ್ದಾರೆ. ದಂಡ ತೆರಲು ವಿಫಲವಾದಲ್ಲಿ 3 ತಿಂಗಳ ಸಾದಾ ಸಜೆ ಅನುಭವಿಸಬೇಕು.
ಐಪಿಸಿ ಸೆಕ್ಷನ್ 392 (ಸುಲಿಗೆ) ಮತ್ತು 34ರ ಅಡಿಯಲ್ಲಿ 5 ವರ್ಷಗಳ ಸಾದಾ ಶಿಕ್ಷೆ ಹಾಗೂ ತಲಾ ₹ 5 ಸಾವಿರ ದಂಡ ವಿಧಿಸಿದ್ದಾರೆ. ದಂಡ ಪಾವತಿಸಲು ವಿಫಲರಾದರೆ 6 ತಿಂಗಳ ಸಾದಾ ಸಜೆ ಅನುಭವಿಸಬೇಕು ಎಂದು ಆದೇಶ ಮಾಡಿದ್ದಾರೆ. ರಾಜುಗೆ ಐಪಿಸಿ ಸೆಕ್ಷನ್ 414ರ ಅಡಿ (ಕದ್ದ ಸ್ವತ್ತು ಬಚ್ಚಿಡಲು ನೆರವು) ಆರೂವರೆ ತಿಂಗಳು ಸಾದಾ ಸಜೆ ಮತ್ತು₹ 5ಸಾವಿರ ದಂಡ ವಿಧಿಸಿದ್ದಾರೆ.
ದಂಡದ ಮೊತ್ತದಲ್ಲಿ ಶ್ರೀಮತಿ ಶೆಟ್ಟಿ ಅವರ ತಾಯಿಗೆ ₹ 75 ಸಾವಿರ ಪರಿಹಾರ ನೀಡಬೇಕು ಹಾಗೂ ಕಾನೂನು ಸೇವಾ ಪ್ರಾಧಿಕಾರ ವತಿಯಿಂದಲೂ ಪರಿಹಾರ ನೀಡಬೇಕೆಂದು ತೀರ್ಪಿನಲ್ಲಿ ನಿರ್ದೇಶನ ನೀಡಿದ್ದಾರೆ.
ವಿಕ್ಟೋರಿಯಾ ಮಥಾಯಿಸ್
ಜೋನಸ್ ಸ್ಯಾಮ್ಸನ್
ಪ್ರಕರಣವೇನು?
ಶ್ರೀಮತಿ ಶೆಟ್ಟಿ (42) ಅವರು ಅತ್ತಾವರದಲ್ಲಿ ನಡೆಸುತ್ತಿದ್ದ ಚಿಟ್‌ಫಂಡ್ ವ್ಯವಹಾರದಲ್ಲಿ ಜೋನಸ್ ಸ್ಯಾಮ್ಸನ್ ಎರಡು ಸದಸ್ಯತ್ವ ಹೊಂದಿದ್ದ. ತಿಂಗಳ ಕಂತಿನ ಹಣ ಕಟ್ಟದ್ದನ್ನು ಪ್ರಶ್ನಿಸಲು ಶ್ರೀಮತಿ ಶೆಟ್ಟಿಯವರು 2019ರ ಮೇ 11ರಂದು ಬೆಳಿಗ್ಗೆ ಆತನ ಮನೆಗೆ ತೆರಳಿದ್ದರು. ಅಲ್ಲಿ ಆತ ಮರದ ಪಟ್ಟಿಯಿಂದ ತಲೆಗೆ ಹೊಡೆದು ಶ್ರೀಮತಿ ಶೆಟ್ಟಿ ಅವರ ಕೊಲೆ ಮಾಡಿದ್ದ. ಬಳಿಕ ಜೋನಸ್ ಮತ್ತು ವಿಕ್ಟೋರಿಯಾ ದಂಪತಿ ಸೇರಿ ಶವವನ್ನು ಬಚ್ಚಲು ಕೋಣೆಗೆ ಒಯ್ದು ಅದರ ಮೇಲಿದ್ದ ಚಿನ್ನಾಭರಣಗಳನ್ನು ಕಿತ್ತುಕೊಂಡಿದ್ದರು. ದೇಹವನ್ನು 29 ತುಂಡು ಮಾಡಿ, ಪ್ಲಾಸ್ಟಿಕ್ ಗೋಣಿಚೀಲದಲ್ಲಿ ತುಂಬಿಸಿ ನಗರದ ನಾನಾ ಕಡೆ ಬಿಸಾಡಿದ್ದರು.
ಅವರು ಶವದಿಂದ ಕದ್ದಿದ್ದ ಚಿನ್ನವನ್ನು ರಾಜು ಖರೀದಿಸಿದ್ದ. ದಂಪತಿ ಕೊಲೆ ಮಾಡಿರುವ ವಿಷಯ ಗೊತ್ತಿದ್ದೂ ಅವರಿಗೆ ಮನೆಯಲ್ಲಿ ಆಶ್ರಯ ನೀಡಿದ್ದಲ್ಲದೇ ತಲೆಮರೆಸಿಕೊಳ್ಳಲು ನೆರವಾಗಿದ್ದ. ಜೋನಸ್‌ನ ಸ್ಕೂಟರನ್ನು ತನ್ನ ಸುಪರ್ದಿಯಲ್ಲಿಟ್ಟುಕೊಂಡಿದ್ದ.
ಕದ್ರಿ ಠಾಣೆಯ ಇನ್‌ಸ್ಪೆಕ್ಟರ್ ಮಹೇಶ್ ಎಂ. ಪ್ರಕರಣದ ತನಿಖೆ ನಡೆಸಿದ್ದರು. ವಿಧಿವಿಜ್ಞಾನ ವಿಭಾಗದ ವೈದ್ಯಾಧಿಕಾರಿ ಡಾ.ಜಗದೀಶ್ ರಾವ್ ಮೃತದೇಹದ ಮರಣೋತ್ತರ ವರದಿ ನೀಡಿದ್ದರು. ಸರ್ಕಾರಿ ವಕೀಲರಾದ ಜುಡಿತ್ ಓಲ್ಗಾ ಮಾರ್ಗರೇಟ್ ಕ್ರಾಸ್ತಾ ಸಾಕ್ಷಿಗಳ ವಿಚಾರಣೆ ಮಾಡಿ ವಾದ ಮಂಡಿಸಿದ್ದರು.
ಮೇಲ್ಮನವಿ
‘ಈ ಕೊಲೆ ಪ್ರಕರಣ ಭೀಭತ್ಸವಾದುದು. ಶವವನ್ನು 29 ತುಂಡು ಮಾಡಿ ಬಿಸಾಡಿದ್ದರು. ಈ ಪ್ರಕರಣದಲ್ಲಿ ಜೋನಸ್ ಸ್ಯಾಮ್ಸನ್‌ಗೆ ಮರಣ ದಂಡನೆಯಾಗುವ ನಿರೀಕ್ಷೆ ಇತ್ತು. ಅಪರಾಧಿಗಳಿಗೆ ಹೆಚ್ಚುವರಿ ಶಿಕ್ಷೆಗೆ ಒತ್ತಾಯಿಸಿ ಸರ್ಕಾರದ ಮೂಲಕ ಹೈಕೋರ್ಟ್ ಗೆ ಮೇಲ್ಮನವಿ ಸಲ್ಲಿಸುತ್ತೇವೆ’ ಎಂದು ವಕೀಲರಾದ ಮಾರ್ಗರೇಟ್ ಕ್ರಾಸ್ತಾ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.