ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಎಬಿವಿಪಿ ರಾಜ್ಯ ಸಮ್ಮೇಳನ ಫೆ7 ರಿಂದ’

ಸಮಾಜದ ಜಾಗೃತಿಗಾಗಿ ಫೆ.8 ರಂದು ಸಾರ್ವಜನಿಕ ಸಭೆ
Last Updated 16 ಜನವರಿ 2020, 12:58 IST
ಅಕ್ಷರ ಗಾತ್ರ

ಮಂಗಳೂರು: ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್‌ನ 39ನೇ ರಾಜ್ಯ ಸಮ್ಮೇಳನ ಫೆಬ್ರುವರಿ 7ರಿಂದ 9ರವರೆಗೆ ನಗರದ ಪುರಭವನದಲ್ಲಿ ನಡೆಯಲಿದೆ ಎಂದು ಎಬಿವಿಪಿ ರಾಷ್ಟ್ರೀಯ ಕಾರ್ಯದರ್ಶಿ ಹರ್ಷ ನಾರಾಯಣ ತಿಳಿಸಿದರು.

ಗುರುವಾರ ನಗರದ ಎಬಿವಿಪಿ ಕಚೇರಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಅವರು, ‘ಶಿಕ್ಷಣ, ರಾಷ್ಟ್ರೀಯತೆ ಮತ್ತು ತಂತ್ರಜ್ಞಾನ ಎಂಬ ಘೋಷವಾಕ್ಯದೊಂದಿಗೆ ಆಯೋಜಿಸಲಾಗಿರುವ ಸಮ್ಮೇಳನದಲ್ಲಿ ರಾಜ್ಯದ ಎಲ್ಲ ಭಾಗಗಳಿಂದ 1,200ಕ್ಕೂ ಅಧಿಕ ವಿದ್ಯಾರ್ಥಿ, ಅಧ್ಯಾಪಕ ಪ್ರತಿನಿಧಿಗಳು ಭಾಗವಹಿಸುವರು’ ಎಂದರು.

ಸಮ್ಮೇಳನದ ಭಾಗವಾಗಿ ಸಮಾಜದ ಜಾಗೃತಿಗಾಗಿ ಫೆ.8ರಂದು ಬೃಹತ್ ಸಾರ್ವಜನಿಕ ಸಭೆ ಆಯೋಜಿಸಲಾಗಿದೆ. ಸಭೆಗೂ ಮುನ್ನ ವಿವಿಧ ಜಿಲ್ಲೆಗಳ ಸಾಂಸ್ಕೃತಿಕ ವೈಶಿಷ್ಟ್ಯವನ್ನು ಸಾರುವ ಬೃಹತ್ ಶೋಭಾಯಾತ್ರೆ ನಡೆಯಲಿದೆ. ಸಭೆಯ ಸ್ಥಳ ಇನ್ನಷ್ಟೇ ನಿಗದಿಯಾಗಬೇಕಿದೆ ಎಂದರು.

ಉದ್ಘಾಟನಾ ಸಮಾರಂಭಕ್ಕೆ ಡಾ. ಕೆ. ಕಸ್ತೂರಿ ರಂಗನ್ ಅವರನ್ನು ಕರೆತರಲು ಪ್ರಕ್ರಿಯೆಗಳು ನಡೆಯುತ್ತಿವೆ. ವಿದ್ಯಾರ್ಥಿಗಳು, ಅಧ್ಯಾಪಕರು, ಶಿಕ್ಷಣ ತಜ್ಞರು, ಶೈಕ್ಷಣಿಕ ಆಡಳಿತಗಾರರು ಸಮ್ಮೇಳನದಲ್ಲಿ ಪಾಲ್ಗೊಂಡು, ಶೈಕ್ಷಣಿಕ-ಸಾಮಾಜಿಕ ಸಮಸ್ಯೆ, ಸವಾಲುಗಳ ಬಗ್ಗೆ ಚರ್ಚಿಸಿ ನಿರ್ಣಯ ಕೈಗೊಳ್ಳಲಾಗುವುದು ಎಂದು ತಿಳಿಸಿದರು.

ಎಬಿವಿಪಿ ಇದುವರೆಗೆ ಹೋರಾಟ ನಡೆಸಿದ ಸಂವಿಧಾನ 370ನೇ ವಿಧಿ ರದ್ದತಿ ಆಗಿದೆ. ಹೊಸ ಶಿಕ್ಷಣ ನೀತಿ, ಬಾಂಗ್ಲಾ ಅಕ್ರಮ ವಲಸಿಗರನ್ನು ದೇಶದಿಂದ ಹೊರಹಾಕುವ ಪ್ರಕ್ರಿಯೆಗಳು ನಡೆಯುತ್ತಿವೆ. ಶೈಕ್ಷಣಿಕ, ಸಾಮಾಜಿಕ, ಪರಿಸರ ವಿಷಯಗಳಿಗೆ ಸಂಬಂಧಿಸಿದ ಮೂರು ನಿರ್ಣಯಗಳನ್ನು ಸಮ್ಮೇಳನದಲ್ಲಿ ಕೈಗೊಳ್ಳಲಾಗುವುದು ಎಂದು ತಿಳಿಸಿದರು.

ಎಬಿವಿಪಿಯ 37ನೇ ರಾಜ್ಯ ಸಮ್ಮೇಳನ ಧಾರವಾಡದಲ್ಲಿ ನಡೆದಿದ್ದು, ಪ್ರಸ್ತುತ 39ನೇ ಸಮ್ಮೇಳನ ಮಂಗಳೂರಿನಲ್ಲಿ ನಡೆಯುತ್ತಿದೆ. ಎಬಿವಿಪಿ ರಾಜ್ಯ ಸಮ್ಮೇಳನ ಮಂಗಳೂರಿನಲ್ಲಿ ಮೂರನೇ ಬಾರಿಗೆ ನಡೆಯುತ್ತಿದೆ. 20 ವರ್ಷದ ಬಳಿಕ ಮಂಗಳೂರಿನಲ್ಲಿ ನಡೆಯುತ್ತಿರುವ ಕಾರ್ಯಕ್ರಮಕ್ಕೆ ಸಿದ್ಧತೆಗಳು ಆರಂಭಗೊಂಡಿವೆ. ಈಗಾಗಲೇ ಸ್ವಾಗತ ಸಮಿತಿ ರಚನೆಗೊಂಡಿದೆ ಎಂದು ಎಬಿವಿಪಿ ವಿಭಾಗ ಪ್ರಮುಖ ಕೇಶವ ಬಂಗೇರ ತಿಳಿಸಿದರು.

ಜಲಿಯನ್ ವಾಲಾಬಾಗ್‌ ದುರಂತ ನಡೆದು 100 ವರ್ಷವಾದ ಹಿನ್ನೆಲೆಯಲ್ಲಿ ಸಮ್ಮೇಳನದಲ್ಲಿ ಈ ಕುರಿತ ಪ್ರದರ್ಶಿನಿ ಇರಲಿದೆ. ಆಹಾರ ಪದಾರ್ಥಗಳನ್ನು ಪೋಲು ಮಾಡದಿರುವುದು, ಪ್ಲಾಸ್ಟಿಕ್ ಮುಕ್ತ ಸಮ್ಮೇಳನ ನಡೆಸುವ ಸಂಕಲ್ಪ ಮಾಡಲಾಗಿದೆ ಎಂದರು.

ಎಬಿವಿಪಿ ಮಂಗಳೂರು ಮಹಾನಗರ ಘಟಕದ ಅಧ್ಯಕ್ಷೆ ಭಾರತಿ ಪ್ರಭು, ನಗರ ಘಟಕದ ಕಾರ್ಯದರ್ಶಿ ಮಣಿಕಂಠ ಕಳಸ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT