ವಿ.ವಿ: ತುರ್ತು ಕ್ರಮಕ್ಕೆ ಎಬಿವಿಪಿ ಆಗ್ರಹ

ಮಂಗಳೂರು: ಕೋವಿಡ್ ಕಾರಣಕ್ಕೆ ಕಳೆದ ವರ್ಷದಂತೆ ಈ ವರ್ಷ ಸಹ ಶೈಕ್ಷಣಿಕ ವೇಳಾಪಟ್ಟಿಯು ಅನಿಶ್ಚಿತವಾಗಿದೆ. ಜುಲೈ ಅಂತ್ಯದಲ್ಲಿ ಕಾಲೇಜು ಪ್ರಾರಂಭಿಸುವುದಾಗಿ ಉನ್ನತ ಶಿಕ್ಷಣ ಸಚಿವ ಡಾ. ಅಶ್ವತ್ಥ ನಾರಾಯಣ ಹೇಳಿದ್ದಾರೆ. ಕಾಲೇಜು ಆರಂಭಿಸಿದ ಮೇಲೆ ತುರ್ತು ಕ್ರಮ ಕೈಗೊಂಡು ವಿದ್ಯಾರ್ಥಿಗಳ ಹಿತ ಕಾಪಾಡಬೇಕು ಎಂದು ಎಬಿವಿಪಿ ಘಟಕ ಒತ್ತಾಯಿಸಿದೆ.
ಈ ಸಂಬಂಧ ಮಂಗಳೂರು ವಿಶ್ವವಿದ್ಯಾಲಯದ ಕುಲಸಚಿವ ಕಿಶೋರ್‌ಕುಮಾರ್ ಹಾಗೂ ಪರೀಕ್ಷಾಂಗ ಕುಲಸಚಿವ ಪ್ರೊ.ಪಿ.ಎಲ್. ಧರ್ಮ ಅವರಿಗೆ ಮನವಿ ನೀಡಿದ ಎಬಿವಿಪಿ ಪ್ರಮುಖರು, ‘1,3 ಮತ್ತು 5ನೇ ಸೆಮಿಸ್ಟರ್‌ನ ಕೆಲವು ಪರೀಕ್ಷೆಗಳು ಬಾಕಿ ಇದ್ದು, ಅವುಗಳನ್ನು ಕಾಲೇಜು ಪ್ರಾರಂಭವಾದ ತಕ್ಷಣ ನಡೆಸಿ, ತುರ್ತಾಗಿ ಫಲಿತಾಂಶ ನೀಡಬೇಕು. ಪರೀಕ್ಷೆ ವೇಳಾಪಟ್ಟಿಯಿಂದ ವಿದ್ಯಾರ್ಥಿಗಳ ಮೇಲೆ ಯಾವುದೇ ಮಾನಸಿಕ ಒತ್ತಡವ ಉಂಟು ಮಾಡಬಾರದು. ವಿಶ್ವವಿದ್ಯಾಲಯದ ವ್ಯಾಪ್ತಿಯಲ್ಲಿನ ಕಾಲೇಜುವಾರು ನಡೆಯುತ್ತಿರುವ ಲಸಿಕೆ ಅಭಿಯಾನವನ್ನು ವಿಶ್ವವಿದ್ಯಾಲಯ ಗಮನಿಸಬೇಕು. ಈ ಬಾರಿ ದ್ವಿತೀಯ ಪಿಯುಸಿ ಫಲಿತಾಂಶ ಶೇ 100 ಬರುವುದರಿಂದ ವಿವಿ ವ್ಯಾಪ್ತಿಯಲ್ಲಿ ಯಾವುದೇ ತೊಂದರೆ ಇಲ್ಲದೆ, ವಿದ್ಯಾರ್ಥಿಗಳಿಗೆ ಸೀಟು ಲಭ್ಯವಾಗಲು ಕ್ರಮವಹಿಸಬೇಕು. ರಾಷ್ಟ್ರೀಯ ಶಿಕ್ಷಣ ನೀತಿ ಅನುಷ್ಠಾನದ ಕುರಿತು ಗಂಭೀರ ಚಿಂತನೆ ನಡೆಸಬೇಕು’ ಎಂದು ಒತ್ತಾಯಿಸಿದ್ದಾರೆ.
ಪ್ರೊ. ಕೆ. ಅಭಯ್ ಕುಮಾರ್ ಅವರನ್ನು ಪರೀಕ್ಷಾ ಸಂಬಂಧಿ ವಿಷಯಗಳಿಂದ ದೂರ ಇಡಬೇಕು ಎಂದು ಸೀಂಡಿಕೇಟ್ ಸಭೆಯಲ್ಲಿ ನಿರ್ಣಯವಾಗಿದೆ. ಆದರೆ, ಅವರನ್ನು ಕನ್ನಡ ಪಿ.ಎಚ್.ಡಿ ಆಯ್ಕೆ ಸಮಿತಿ ಅಧ್ಯಕ್ಷರಾಗಿ ಮಾಡಿದ್ದಾರೆ. ಅವರನ್ನು ಸಮಿತಿಯಿಂದ ಕೈಬಿಡಬೇಕು ಎಂದು ಎಬಿವಿಪಿ ನಗರ ಕಾರ್ಯದರ್ಶಿ ಶ್ರೇಯಸ್ ಶೆಟ್ಟಿ, ತಾಲ್ಲೂಕು ಸಂಚಾಲಕ ನಿಶಾನ್ ಆಳ್ವ, ನಗರ ಸಂಘಟನಾ ಕಾರ್ಯದರ್ಶಿ ಅಜಯ್ ಪ್ರಭು ಒತ್ತಾಯಿಸಿದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.