ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಪಘಾತದಲ್ಲಿ ಅತಿಶ್ ಸಾವು: ನ್ಯಾಯಕ್ಕೆ ಸ್ನೇಹಿತನ ಮೊರೆ

ಆಡಳಿತ ವ್ಯವಸ್ಥೆಯ ವಿರುದ್ಧ ಯುವಕ ಮೌನ ಪ್ರತಿಭಟನೆ
Last Updated 11 ಆಗಸ್ಟ್ 2022, 14:23 IST
ಅಕ್ಷರ ಗಾತ್ರ

ಮಂಗಳೂರು: ನಗರದ ಬಿಕರ್ನಕಟ್ಟೆ ಕಂಡೆಟ್ಟು ಕ್ರಾಸ್ ಬಳಿ ಶುಕ್ರವಾರ ರಸ್ತೆ ಅಪಘಾತದಲ್ಲಿ ಮೃತಪಟ್ಟ ಕೊಂಚಾಡಿಯ ಆತಿಶ್ (20) ಸಾವಿಗೆ ನ್ಯಾಯಕ್ಕಾಗಿ ಆತನ ಸ್ನೇಹಿತ ಲಿಖಿತ್ ರೈ ಗುರುವಾರ ನಗರದ ಮಹಾನಗರ ಪಾಲಿಕೆ ಕಚೇರಿ ಎದುರು ಏಕಾಂಗಿಯಾಗಿ ಮೌನ ಪ್ರತಿಭಟನೆ ನಡೆಸಿದರು.

ನಂತೂರು ಜಂಕ್ಷನ್ ಕಡೆಯಿಂದ ಬಿಕರ್ನಕಟ್ಟೆ ಕೈಕಂಬ ಕಡೆಗೆ ಹಾದು ಹೋಗಿರುವ ಹೆದ್ದಾರಿಯಲ್ಲಿ ಸ್ಕೂಟರ್‌ನಲ್ಲಿ ಆತಿಶ್ ಶುಕ್ರವಾರ ಸಂಜೆ ಸಾಗುತ್ತಿದ್ದರು. ಆ ವೇಳೆ ರಸ್ತೆಯಲ್ಲಿದ್ದ ಹೊಂಡವನ್ನು ತಪ್ಪಿಸುವ ಭರದಲ್ಲಿ ಸ್ಕೂಟರ್‌ ರಸ್ತೆ ವಿಭಜಕಕ್ಕೆ ಡಿಕ್ಕಿ ಹೊಡೆದಿತ್ತು. ಮಳೆ ಬರುತ್ತಿದ್ದುದರಿಂದ ಹೆದ್ದಾರಿಯಲ್ಲಿ ಹೊಂಡ ಇದ್ದುದು ಸವಾರನ ಗಮನಕ್ಕೆ ಬಂದಿರಲಿಲ್ಲ. ರಸ್ತೆ ವಿಭಜಕದಲ್ಲಿ ಅಳವಡಿಸಲಾಗಿದ್ದ ರಿಫ್ಲೆಕ್ಟರ್ ರೇಲಿಂಗ್‌ಗೆ ಅವರ ತಲೆ ಬಡಿದಿದೆ. ತಕ್ಷಣ ಅವರನ್ನು ಆಸ್ಪತ್ರೆಗೆ ದಾಖಲಿಸಲಾಯಿತಾದರೂ ದಾರಿ ಮಧ್ಯೆ ಮೃತಪಟ್ಟಿದ್ದರು. ‌ಘಟನೆ ಬಳಿಕ ರಸ್ತೆ ಗುಂಡಿಗಳನ್ನು ಮುಚ್ಚದ ಹೆದ್ದಾರಿ ಇಲಾಖೆ, ಮಹಾನಗರ ಪಾಲಿಕೆ ವಿರುದ್ಧ ಆಕ್ರೋಶ ವ್ಯಕ್ತವಾಗಿದೆ.

ಸ್ನೇಹಿತನನ್ನು ಕಳೆದುಕೊಂಡ ನೋವನ್ನು ಲಿಖಿತ್‌ ರೈ ಮೌನ ಪ್ರತಿಭಟನೆಯ ಮೂಲಕ ವ್ಯಕ್ತಪಡಿಸಿದ್ದಾರೆ. ಆಶಿತ್‌ಗೆ ಸಾವಿಗೆ ನ್ಯಾಯ ಕೊಡಿ. ‘ಮಂಗಳೂರು ರೋಡ್ ನೀಡ್ಸ್ ಸುರಕ್ಷಾ ಬಂಧನ್’ (ಮಂಗಳೂರು ರಸ್ತೆಗೆ ಸುರಕ್ಷಾ ಬಂಧನ ಬೇಕಾಗಿದೆ) ಎಂದು ಬರೆದ ಫಲಕವನ್ನು ಅವರು ಪ್ರದರ್ಶಿಸಿದರು.

‘ಪ್ರಜಾವಾಣಿ’ ಜತೆ ಮಾತನಾಡಿದ ಲಿಖಿತ್‌ ರೈ, ‘ಆಡಳಿತ ವ್ಯವಸ್ಥೆಯ ಲೋಪದಿಂದಾಗಿ ನಾನು ಸ್ನೇಹಿತನನ್ನು ಕಳೆದುಕೊಂಡಿದ್ದೇನೆ. ಹೋದ ಪ್ರಾಣವನ್ನು ಮತ್ತೆ ತರಲು ಸಾಧ್ಯವಿಲ್ಲ. ಆದರೆ, ಇನ್ನಾದರೂ ಆಡಳಿತ ನಡೆಸುವವರು ಎಚ್ಚೆತ್ತುಕೊಂಡು ಲೋಪಗಳನ್ನು ಸರಿಪಡಿಸಬೇಕು. ಇಂತಹ ಪರಿಸ್ಥಿತಿ ಇನ್ನು ಯಾರಿಗೂ ಬರಬಾರದು ಎಂಬ ಉದ್ದೇಶದಿಂದ ಏಕಾಂಗಿಯಾಗಿ ಮೌನ ಪ್ರತಿಭಟನೆ ನಡೆಸಿದ್ದೇನೆ’ ಎಂದು ಹೇಳಿದರು.

‘ಎಂಜಿನಿಯರಿಂಗ್‌ ಪದವಿಯಲ್ಲಿ ಅತಿಶ್‌ ನನಗೆ ಜೂನಿಯರ್‌ ಆಗಿದ್ದ. ಪ್ರಾಜೆಕ್ಟ್‌ ಕೆಲಸಗಳನ್ನು ನಾವು ಒಟ್ಟಾಗಿ ಮಾಡುತ್ತಿದ್ದೆವು. ಆತನ ಎಂಜಿನಿಯರಿಂಗ್‌ ಪದವಿಯ ಫಲಿತಾಂಶ ಬುಧವಾರ ಬಂತು. ಎಲ್ಲ ವಿಷಯಗಳಲ್ಲೂ ಉತ್ತೀರ್ಣನಾಗಿದ್ದ. ಆತ ಉನ್ನತ ಶಿಕ್ಷಣದ ಕನಸು ಹೊತ್ತಿದ್ದ. ಆದರೆ, ಯಾರೋ ಮಾಡಿದ ತಪ್ಪಿಗೆ ಆತ ಪ್ರಾಣ ತೆರಬೇಕಾಯಿತು. ಆತನ ಸಾವಿಗೆ ನ್ಯಾಯ ಸಿಗಬೇಕು. ಈ ನಿಟ್ಟಿನಲ್ಲಿ ಡಿಜಿಟಲ್‌ ವೇದಿಕೆಯಲ್ಲಿ ಹೋರಾಟ ಮುಂದುವರಿಸುತ್ತೇನೆ’ ಎಂದು ಪ್ರತಿಕ್ರಿಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT