ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಿಟಿಟಿಸಿಯಲ್ಲಿ ಪ್ರವೇಶ ಪ್ರಕ್ರಿಯೆ ಆರಂಭ

ಸಂಸ್ಥೆಯ ದಕ್ಷಿಣ ವಲಯ ಅಧಿಕಾರಿ ಲಿಂಗರಾಜ ಸಣ್ಣಮಣಿ
Last Updated 7 ಸೆಪ್ಟೆಂಬರ್ 2021, 12:29 IST
ಅಕ್ಷರ ಗಾತ್ರ

ಮಂಗಳೂರು: ಉದ್ಯೋಗಾವಕಾಶದ ಸಾಧ್ಯತೆಗಳು ನಿಚ್ಚಳವಾಗಿರುವ ನಗರದ ಸರ್ಕಾರಿ ಉಪಕರಣಾಗಾರ ಮತ್ತು ತರಬೇತಿ ಕೇಂದ್ರದಲ್ಲಿ ಪ್ರಸಕ್ತ ಸಾಲಿನ ಡಿಪ್ಲೊಮಾ ಕೋರ್ಸ್‌ಗಳಿಗೆ ಪ್ರವೇಶ ಪ್ರಕ್ರಿಯೆ ಆರಂಭವಾಗಿದೆ ಎಂದು ಸಂಸ್ಥೆಯ ದಕ್ಷಿಣ ವಲಯ ಅಧಿಕಾರಿ ಲಿಂಗರಾಜ ಸಣ್ಣಮಣಿ ತಿಳಿಸಿದರು.

ಹೊರವಲಯದ ಬೈಕಂಪಾಡಿ ಕೈಗಾರಿಕಾ ವಲಯದಲ್ಲಿರುವ ಕೇಂದ್ರದ ಕಚೇರಿಯಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ತೇರ್ಗಡೆ ಹೊಂದಿರುವ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಬಹುದು. ಡಿಪ್ಲೊಮಾ ಇನ್ ಟೂಲ್ ಅಂಡ್ ಡೈ ಮೇಕಿಂಗ್ (ಡಿಟಿಡಿಎಂ) ಮತ್ತು ಡಿಪ್ಲೊಮಾ ಇನ್ ಪ್ರಿಸಿಷನ್ ಮ್ಯಾನ್ಯುಫ್ಯಾಕ್ಚರಿಂಗ್ (ಡಿಪಿಎಂ) ಹೀಗೆ ಎರಡು ವಿಭಾಗಗಳಲ್ಲಿ ನೇರ ಪ್ರವೇಶ ಪಡೆಯಲು ಅವಕಾಶವಿದೆ. ದ್ವಿತೀಯ ಪಿಯುಸಿ (ವಿಜ್ಞಾನ, ತಾಂತ್ರಿಕ) ಅಥವಾ ಐಟಿಐ ತೇರ್ಗಡೆಯಾದ ವಿದ್ಯಾರ್ಥಿಗಳು ದ್ವಿತೀಯ ವರ್ಷಕ್ಕೆ ನೇರ ಪ್ರವೇಶ ಪಡೆಯಬಹುದು’ ಎಂದರು.

ಮತ್ತೆ 4 ಹೊಸ ಕೇಂದ್ರ

ಕೊಪ್ಪಳ, ಯಾದಗಿಡಿ, ಚಳ್ಳಕೆರೆ, ಚಿತ್ರದುರ್ಗಗಳಲ್ಲಿ ಈ ವರ್ಷ ಕೇಂದ್ರಗಳು ಆರಂಭವಾಗಿವೆ. ಮುಂದಿನ ವರ್ಷ ಮಡಿಕೇರಿ, ಹುಣಸೂರು, ಹಾವೇರಿ, ಹಾನಗಲ್‌ನಲ್ಲಿ ಕೇಂದ್ರ ಪ್ರಾರಂಭಿಸಲಾಗುವುದು ಎಂದು ಸಂಸ್ಥೆಯ ದಕ್ಷಿಣ ವಲಯ ಅಧಿಕಾರಿ ಲಿಂಗರಾಜ ಸಣ್ಣಮಣಿ ತಿಳಿಸಿದರು.

‘ನಾಲ್ಕು ವರ್ಷಗಳ ಈ ಡಿಪ್ಲೊಮಾ ಪಠ್ಯಕ್ರಮದಲ್ಲಿ ಶೇ 60ರಷ್ಟು ಪ್ರಾಯೋಗಿಕ ತರಗತಿಗಳು, ಶೇ 40ರಷ್ಟು ತರಗತಿ ಪಾಠಗಳು ಇರುತ್ತವೆ. 4ನೇ ವರ್ಷದ ಅಪ್ರೆಂಟಿಸ್‌ಷಿಪ್ ಅವಧಿಯಲ್ಲಿ ₹ 10 ಸಾವಿರದಿಂದ ₹ 15 ಸಾವಿರ ಸ್ಟೈಫಂಡ್ ಸಿಗುತ್ತದೆ’ ಎಂದು ಪ್ರಾಚಾರ್ಯ ಮೃತ್ಯುಂಜಯ ಗೌಡ ತಿಳಿಸಿದರು.

‘ಡಿಟಿಡಿಎಂ ವಿಭಾಗದಲ್ಲಿ 60 ಮತ್ತು ಡಿಪಿಎಂ ವಿಭಾಗದಲ್ಲಿ 30 ವಿದ್ಯಾರ್ಥಿಗಳಿಗೆ ಪ್ರವೇಶಕ್ಕೆ ಅವಕಾಶವಿದೆ. ಕಳೆದ ವರ್ಷ ಕೋವಿಡ್ ಕಾರಣಕ್ಕೆ ಕ್ರಮವಾಗಿ 37 ಮತ್ತು 18 ವಿದ್ಯಾರ್ಥಿಗಳು ಪ್ರವೇಶ ಪಡೆದಿದ್ದರು. ಪ್ರಥಮ ವರ್ಷದ ಪ್ರವೇಶಕ್ಕೆ ₹ 34 ಸಾವಿರ ಶುಲ್ಕ ಇದೆ. ನಂತರದ ವರ್ಷಗಳಲ್ಲಿ ಸ್ಕಾಲರ್‌ಷಿಪ್‌ ಪಡೆದರೆ ವಿದ್ಯಾರ್ಥಿಗಳಿಗೆ ಶುಲ್ಕ ಹೊರೆಯಾಗುವುದಿಲ್ಲ. ತಜ್ಞ ಉಪನ್ಯಾಸಕರು ಕೇಂದ್ರದಲ್ಲಿದ್ದಾರೆ. ಸಿಎನ್‌ಸಿ ಟರ್ನಿಂಗ್ ಮಷಿನ್ ಸೇರಿದಂತೆ ಆಧುನಿಕ ಉತ್ಪಾದನಾ ಸೌಲಭ್ಯಗಳು ಪ್ರಾಯೋಗಿಕ ತರಬೇತಿ ಪಡೆಯಲು ವಿದ್ಯಾರ್ಥಿಗಳಿಗೆ ಅನುಕೂಲವಾಗಿವೆ’ ಎಂದು ಎಂಜಿನಿಯರ್ ಕುಮಾರಸ್ವಾಮಿ ಹೇಳಿದರು.

ಹಿರಿಯ ಅಧಿಕಾರಿ ಸುಧಾಕರ ನಾಯ್ಕ, ಉಪನ್ಯಾಸಕ ಯತೀಶ್ ರಾವ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT