ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಕರಾವಳಿಯ ರೂಪಕ ಅಮೃತ ಸೋಮೇಶ್ವರ

‘ಅಮೃತಾನುಸಂಧಾನ’ ರಾಷ್ಟ್ರೀಯ ವಿಚಾರ ಸಂಕಿರಣದಲ್ಲಿ ಪ್ರೊ.ಬಿ.ಎ.ವಿವೇಕ ರೈ ಪ್ರತಿಪಾದನೆ
Published 11 ಮಾರ್ಚ್ 2024, 5:54 IST
Last Updated 11 ಮಾರ್ಚ್ 2024, 5:54 IST
ಅಕ್ಷರ ಗಾತ್ರ

ಮಂಗಳೂರು: ‘ಸಮುದ್ರ ಮತ್ತು ಸೋಮೇಶ್ವರವನ್ನು ಬಿಟ್ಟು ಅಮೃತರಿಲ್ಲ. ಅಲ್ಲಿನ ರುದ್ರ ಶಿಲೆಗೆ ಹಾಗೂ ಕರಾವಳಿಗೆ ಅಮೃತ ಸೋಮೇಶ್ವರ ಅವರು ರೂಪಕ. ಅವರ ಮನಮಾಲೆ‌, ಭ್ರಮಣದಂತಹ ಕವನ ಸಂಕಲನಗಳು, ಕತೆಗಳು ಹಾಗೂ ‘ತೀರದ ತೆರೆ’ ಕಾದಂಬರಿಯಲ್ಲಿ ಕರಾವಳಿ ಜನರ ಬದುಕನ್ನು ನೋಡಬಹುದು’ ಎಂದು ವಿದ್ವಾಂಸ ಪ್ರೊ.ಬಿ.ಎ.ವಿವೇಕ ರೈ ಹೇಳಿದರು.

ಸೋಮೇಶ್ವರ ಉಚ್ಚಿಲದ ಕಲಾಗಂಗೋತ್ರಿ ಯಕ್ಷಗಾನ ಕೇಂದ್ರ ಮತ್ತು ನಗರದ ಸೇಂಟ್‌ ಅಲೋಷಿಯಸ್ ಕಾಲೇಜಿನ ಕನ್ನಡ ವಿಭಾಗದ ಆಶ್ರಯದಲ್ಲಿ ಇಲ್ಲಿ ಭಾನುವಾರ ಏರ್ಪಡಿಸಿದ್ದ ‘ಅಮೃತಾನುಸಂಧಾನ’ ರಾಷ್ಟ್ರೀಯ ವಿಚಾರಸಂಕಿರಣವನ್ನು ಉದ್ಘಾಟಿಸಿ ಅವರು ಮಾತನಾಡಿದರು.

‘ಆಯ್ಕೆ ಮಾಡಿಕೊಂಡ ಭಾಷೆ, ಸಾಹಿತ್ಯ ಪ್ರಭೇದ, ಮಾಧ್ಯಮ, ಓದುಗ ಮತ್ತು ಕೇಳುಗ ವರ್ಗ ಪರಿಮಾಣಗಳಿಂದಾಗಿ ಅಮೃತ ಸೋಮೇಶ್ವರರು ಆದ್ಯ ಮತ್ತು ಮುಖ್ಯರಾಗುತ್ತಾರೆ. ಅವರ ಸಾಹಿತ್ಯ, ಅದರಲ್ಲೂ ಅವರ ನಾಟಕಗಳು ಊಳಿಗಮಾನ್ಯ ಪದ್ಧತಿಗೆ ಪ್ರತಿರೋಧವಾಗಿ ಬಂದವುಗಳು. ಪ್ರತಿರೋಧವನ್ನು ನೇರ ಹೇಳಿದ್ದು ಕಡಿಮೆ. ಆದರೆ, ಅವರ ಕತೆ,  ಕವನ‌, ನಾಟಕಗಳಲ್ಲಿ ಅದನ್ನು ಕಾಣಬಹುದು’ ಎಂದರು.

‘ಮೋಯ–ಮಲಯಾಳ ಹಾಗೂ ಮೊಯ– ಕನ್ನಡ ಪದಕೋಶ ರಚಿಸುವ ಮೂಲಕ ಅವರು ಮಾತೃ ಭಾಷೆಯ ಋಣವನ್ನೂ ತೀರಿಸಿದ್ದಾರೆ. ಭಗವತಿ ಆರಾಧನೆ, ಕಳಿಯಾಟ್ಟಂಗಳನ್ನು ಬೇರೆ ಬೇರೆ ಸಮುದಾಯಗಳು ಹೇಗೆ ವೈವಿಧ್ಯಮಯವಾಗಿ ಆಚರಿಸುತ್ತವೆ ಎಂಬುದನ್ನು ದಾಖಲಿಸಿದ್ದಾರೆ. ಅಂತಹ ಶಾಸ್ತ್ರೀಯ ದಾಖಲೀಕರಣ ಮತ್ತೊಂದಿಲ್ಲ. ಅಂತಹ ಪ್ರದರ್ಶನ ಕಲೆಗಳ ದಾಖಲೀಕರಣ ಒಂದು ತಪಸ್ಸು’ ಎಂದು ಸ್ಮರಿಸಿದರು.

‘ಕನ್ನಡದ ಕವನ, ಕತೆ, ಕಾದಂಬರಿ ನಾಟಕ ಹೀಗೆ ಅನೇಕ ಪ್ರಭೇದಗಳಲ್ಲಿ ಅಮೃತರು ತೊಡಗಿಸಿಕೊಂಡಿದ್ದರು. ತಮ್ಮ ಸಾಹಿತ್ಯಕ್ಕೆ ಪರಿಸರದ ಭಾಷೆ‌ಯನ್ನೇ ಆಯ್ಕೆ‌ ಮಾಡಿಕೊಂಡಿದ್ದರು. ತುಳುವಿಗೆ ಪ್ರಚಾರ‌ವೇ ಇಲ್ಲದ 1960ರ ದಶಕದಲ್ಲೇ ಅವರು ತುಳುವಿನಲ್ಲೂ ಕವಿತೆ, ನಾಟಕ ಬರೆದರು. ಕಾಲೇಜು ಅಧ್ಯಾಪಕರಾಗುವ ಮುನ್ನವೇ ಸಂಧಿ– ಪಾಡ್ದನ‌ ಸಂಗ್ರಹಿಸಿದ್ದರು. ಈಗ ತುಳು ಪಾಡ್ದ‌ನ‌ ಸಂಗ್ರಹಿಸುವುದು ಕೃತಕ ಹೂವು ತಂದಿಟ್ಟಂತೆ.‌ ಅವರು 1960–80ರ ದಶಕಗಳಲ್ಲಿ  ಪರವ, ಪಾಣಾರ, ನಲಿಕೆಯವರೊಂದಿಗೆ ಕಾಲ ಕಳೆದು ಅವುಗಳನ್ನು ಸಂಗ್ರಹಿಸಿದ್ದಾರೆ. ಕನ್ನಡದಲ್ಲಿ ಕ್ಯಾಸೆಟ್‌ ಹೊರತಂದವರ ಮೊದಲ‌ ಸಾಲಿನಲ್ಲಿ ಅಮೃತರೂ ಒಬ್ಬರು’ ಎಂದರು.

‘ಗೋಂದೊಲು, ಸೇರಿದಂತೆ ಅಮೃತರ ಕೆಲವು ತುಳು ನಾಟಕಗಳು ಜನಪ್ರಿಯವಾಗಿದ್ದವು. ಆದರೆ, ತುಳುನಾಡ‌ ಕಲ್ಕುಡೆ, ಕೊಡಿಮರ, ಆಟೊ ಮುಗಿಂಡ್ ಮುಂತಾದ ನಾಟಕಗಳಿಗೆ ಪ್ರದರ್ಶನ ಭಾಗ್ಯ ಸಿಗಲಿಲ್ಲ. ಇದಕ್ಕೆ ಪ್ರಚಾರದ ಕೊರತೆಯೂ ಕಾರಣ.‌ ಅಮೃತರ‌ ಎಲ್ಲ ನಾಟಕಗಳನ್ನು ಮತ್ತೆ ಪ್ರದರ್ಶನ‌ ಕಾಣುವಂತಾಗಬೇಕು. ಸಾಹಿತಿಗಳಿಗೆ ವಯಸ್ಸಾದಂತೆ ಹಾರ ಹಾಕಿ ಸನ್ಮಾನ‌ ಮಾಡುತ್ತಾರೆ. ಅಂತಹವರಲ್ಲಿ ಆ ಸಾಹಿತಿಯ ಕೃತಿಗಳನ್ನು ಓದದವರೇ ಜಾಸ್ತಿ. ‌‘ನಿಮ್ಮ ಇಂತಹ ಪುಸ್ತಕ ಓದಿದೆ, ಈ ಲೇಖನ ಓದಿದೆ’ ಎಂದರೆ ಸಾಹಿತಿಗಳಿಗೆ ಆಗುವ ಸಂತೋಷವೇ ಬೇರೆ. ಅಮೃತ ಸೋಮೇಶ್ವರ ಅವರ ಪುಸ್ತಕಗಳನ್ನು ಓದುವುದೇ ಅವರಿಗೆ ನೀಡುವ ಗೌರವ’ ಎಂದರು.

ವಿದ್ವಾಂಸರಾದ ಪುರುಷೋತ್ತಮ ಬಿಳಿಮಲೆ, ಪ್ರಭಾಕರ ಜೋಶಿ, ಕಲಾ ಗಂಗೋತ್ರಿಯ ಯು.ಸತೀಶ ಕಾರಂತ, ಅಮೃತ ಸೋಮೇಶ್ವರ ಅವರ ಪುತ್ರ ಚೇತನ‌್ ಸೋಮೇಶ್ವರ ಹಾಗೂ ಸೊಸೆ ರಾಜೇಶ್ವರಿ ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT