ಶುಕ್ರವಾರ, ಸೆಪ್ಟೆಂಬರ್ 17, 2021
25 °C

ಜನಜಾಗೃತಿ ವೇದಿಕೆ ವಾರ್ಷಿಕ ವರದಿ ಬಿಡುಗಡೆಗೊಳಿಸಿದ ವೀರೇಂದ್ರ ಹೆಗ್ಗಡೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಉಜಿರೆ: ಜನಜಾಗೃತಿ ವೇದಿಕೆಯ ಬೆಳ್ತಂಗಡಿ ಪ್ರಾದೇಶಿಕ ವಿಭಾಗದ ವಾರ್ಷಿಕ ವರದಿ ಮತ್ತು ಪ್ರಾಕೃತಿಕ ದುರಂತಗಳು ಹಾಗೂ ನಿರ್ವಹಣೆ ಬಗ್ಗೆ ಮಾಹಿತಿ ಕೈಪಿಡಿಯನ್ನು ಧರ್ಮಸ್ಥಳದಲ್ಲಿ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆ ಬಿಡುಗಡೆಗೊಳಿಸಿದರು.

ಮದ್ಯವರ್ಜನ ಶಿಬಿರಗಳ ಮೂಲಕ ವ್ಯಸನಮುಕ್ತ ಆರೋಗ್ಯಪೂರ್ಣ ಸಮಾಜ ರೂಪಿಸುವಲ್ಲಿ ಜನಜಾಗೃತಿ ವೇದಿಕೆಯ ಸೇವೆಯನ್ನು ಹೆಗ್ಗಡೆಯವರು ಶ್ಲಾಘಿಸಿದರು. ವಿಪತ್ತು ನಿರ್ವಹಣಾ ಸ್ವಯಂ ಸೇವಕರ ಸೇವಾ ಕಾರ್ಯ, ಪರಿಸರ ಸಂರಕ್ಷಣಾ ಕಾರ್ಯಕ್ರಮಗಳು ಕೂಡ ಸ್ಥಳೀಯರ ಸಹಕಾರದೊಂದಿಗೆ ಉತ್ತಮವಾಗಿ ಮೂಡಿ ಬರುತ್ತಿವೆ. ಕೋವಿಡ್‌ ಕಾರಣಕ್ಕೆ ಮದ್ಯವರ್ಜನ ಶಿಬಿರಗಳು ಸ್ಥಗಿತಗೊಂಡರೂ ನವಜೀವನ ಸಮಿತಿಗಳನ್ನು ಬಲಪಡಿಸಬೇಕು ಎಂದು ಹೆಗ್ಗಡೆ ಸಲಹೆ ನೀಡಿದರು.

ಜನಜಾಗೃತಿ ವೇದಿಕೆಯ ಆಡಳಿತ ಸಮಿತಿ ಸದಸ್ಯ ಬೆಂಗಳೂರಿನ ವಿ. ರಾಮಸ್ವಾಮಿ, ಗ್ರಾಮಾಭಿವೃದ್ಧಿ ಯೋಜನೆಯ ಕಾರ್ಯನಿರ್ವಾಹಕ ನಿರ್ದೇಶಕ ಡಾ. ಎಲ್.ಎಚ್. ಮಂಜುನಾಥ್, ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಅನಿಲ್ ಕುಮಾರ್, ಎಸ್.ಎನ್. ಯೋಜನಾಧಿಕಾರಿಗಳಾದ ಮೋಹನ್ ಮತ್ತು ಜೈವಂತ ಪಟಗಾರ, ಸಹಾಯಕ ಪ್ರಬಂಧಕಿ ಭಾಗೀರಥಿ ಎನ್ ಉಪಸ್ಥಿತರಿದ್ದರು.

ಸ್ವ-ಉದ್ಯೋಗ ತರಬೇತಿ

ಉಜಿರೆ: ಕಳೆದ ಆರ್ಥಿಕ ವರ್ಷದಲ್ಲಿ ಗ್ರಾಮಾಭಿವೃದ್ಧಿ ಮತ್ತು ಸ್ವ-ಉದ್ಯೋಗ ತರಬೇತಿ ಕೇಂದ್ರಗಳ ವತಿಯಿಂದ 525 ತರಬೇತಿ ಕಾರ್ಯಕ್ರಮಗಳ ಮೂಲಕ 13,061 ನಿರುದ್ಯೋಗಿ ಯುವಕ-ಯುವತಿಯರಿಗೆ ಸ್ವ-ಉದ್ಯೋಗ ತರಬೇತಿ ನೀಡಲಾಗಿದೆ ಎಂದು ಉಜಿರೆ
ಯಲ್ಲಿರುವ ಗ್ರಾಮಾಭಿವೃದ್ಧಿ ಮತ್ತು ಸ್ವ-ಉದ್ಯೋಗ ತರಬೇತಿ ಸಂಸ್ಥೆಗಳ ಕೇಂದ್ರೀಯ ಆಡಳಿತ ಮಂಡಳಿಯ ಕಾರ್ಯನಿರ್ವಾಹಕ ನಿರ್ದೇಶಕರು ತಿಳಿಸಿದ್ದಾರೆ.
ಅವರಲ್ಲಿ ಶೇ 71ರಷ್ಟು ಮಂದಿ, ಅಂದರೆ 9,237 ಮಹಿಳೆಯರು. 1982ರಲ್ಲಿ ತರಬೇತಿ ಸಂಸ್ಥೆ ಆರಂಭವಾದ ಬಳಿಕ ಒಟ್ಟು 16,390 ತರಬೇತಿ ಕಾರ್ಯಕ್ರಮಗಳ ಮೂಲಕ 5,02,720 ಮಂದಿಗೆ ಸ್ವ-ಉದ್ಯೋಗ ತರಬೇತಿ ನೀಡಿದೆ ಅವರಲ್ಲಿ ಶೇ 45ರಷ್ಟು ಮಹಿಳೆಯರು.

ಕಳೆದ ವರ್ಷದಲ್ಲಿ ತರಬೇತಿ ಪಡೆದ 9,568 ಮಂದಿ ನಿರುದ್ಯೋಗಿಗಳು ಸ್ವ-ಉದ್ಯೋಗ ಪ್ರಾರಂಭಿಸಿದ್ದು, ಸ್ವಾವಲಂಬಿ ಜೀವನ ನಡೆಸುತ್ತಿದ್ದಾರೆ. ಅವರಲ್ಲಿ 4,391 ಮಂದಿಗೆ ವಿವಿಧ ಬ್ಯಾಂಕ್‌ಗಳು ₹ 88.76 ಕೋಟಿ ಆರ್ಥಿಕ ನೆರವು ನೀಡಿ ಪ್ರೋತ್ಸಾಹಿಸಿವೆ.

1982ರಲ್ಲಿ ಧರ್ಮಸ್ಥಳದ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆ ನೇತೃತ್ವ ಮತ್ತು ಮಾರ್ಗದರ್ಶನದಲ್ಲಿ ಉಜಿರೆಯಲ್ಲಿ ಸಿದ್ಧವನ ಗುರುಕುಲದಲ್ಲಿ ಪ್ರಾಯೋಗಿಕವಾಗಿ ಪ್ರಾರಂಭಿಸಿದ ತರಬೇತಿ ಸಂಸ್ಥೆಯ ಶಾಖೆಗಳು ದೇಶದೆಲ್ಲೆಡೆ ನಿರುದ್ಯೋಗಿ ಯುವ ಜನರಿಗೆ ತರಬೇತಿ ನೀಡಿ ಸ್ವ-ಉದ್ಯೋಗ ಆರಂಭಿಸಲು ಪ್ರೋತ್ಸಾಹ ಮಾರ್ಗದರ್ಶನ ನೀಡುತ್ತಿವೆ ಎಂದು ಅವರು ತಿಳಿಸಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು