ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಪುತ್ತೂರು | ಆಪತ್ಭಾಂಧವ ಯೋಜನೆಗೆ ಕಂಟಕ: ರೈತರಿಗೆ ಸಂಕಷ್ಟ

ಪುತ್ತೂರು ಎಪಿಎಂಸಿಯಲ್ಲಿ ಅಡಿಕೆ ಅಡಮಾನ ಯೋಜನೆಯ ಅರ್ಜಿ ವಿಲೇವಾರಿಯಲ್ಲಿ ವಿಳಂಬ
Published 30 ಮೇ 2024, 13:37 IST
Last Updated 30 ಮೇ 2024, 13:37 IST
ಅಕ್ಷರ ಗಾತ್ರ

ಪುತ್ತೂರು: ಇಲ್ಲಿನ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ (ಎಪಿಎಂಸಿ) ವತಿಯಿಂದ ರೈತರಿಗೆ ನೀಡಲಾಗುವ ಅಡಿಕೆ ಅಡಮಾನ ಯೋಜನೆಗೆ ಪ್ರಸ್ತುತ ಕಂಟಕವೊಂದು ಎದುರಾಗಿದೆ.

ಒಂದು ವರ್ಷದಿಂದ ಪುತ್ತೂರು ಎಪಿಎಂಸಿಯಲ್ಲಿ ಆಡಳಿತ ಮಂಡಳಿ ಇಲ್ಲದೆ ಅಧಿಕಾರಿಗಳೇ ಆಡಳಿತ ನಡೆಸುತ್ತಿದ್ದಾರೆ. ಹಲವು ವರ್ಷಗಳಿಂದ ಪುತ್ತೂರು ಎಪಿಎಂಸಿಗೆ ಕಾರ್ಯದರ್ಶಿಯೂ ಇರಲಿಲ್ಲ. ಇದೀಗ ಕೆಲ ಸಮಯದ ಹಿಂದೆ ಕಾರ್ಯದರ್ಶಿ ಹುದ್ದೆಗೆ ಖಾಯಂ ಅಧಿಕಾರಿ ಇದ್ದಾರೆ. ಆದರೆ, ಆಡಳಿತ ವ್ಯವಸ್ಥೆ ಇಲ್ಲದ ಕಾರಣ ಪುತ್ತೂರು ತಹಶೀಲ್ದಾರ್ ಕುಞಿ ಅಹಮ್ಮದ್ ಅವರನ್ನು ಆಡಳಿತಾಧಿಕಾರಿಯನ್ನಾಗಿ ಸರ್ಕಾರ ನೇಮಿಸಿದೆ. ಪ್ರಭಾರ ಕಾರ್ಯದರ್ಶಿಯಾಗಿದ್ದ ರಾಮಚಂದ್ರ ಅವರನ್ನು ಸೇವೆಯಿಂದ ಅಮಾನತುಗೊಳಿಸಲಾಗಿದೆ.

ಪುತ್ತೂರು ಎಪಿಎಂಸಿ ಈ ಹಿಂದೆ ಅಡಿಕೆ ಬೆಳೆಗಾರರಿಗೆ ನೆರವಾಗಲು ಅಡಿಕೆ ಅಡಮಾನ ಯೋಜನೆ ಜಾರಿಗೆ ತಂದಿತ್ತು. ಈ ಯೋಜನೆ ಪ್ರಕಾರ 8 ಕ್ವಿಂಟಲ್ ಅಡಿಕೆ ಅಡಮಾನ ಇಟ್ಟ ರೈತರು 3 ತಿಂಗಳವರೆಗೆ ಯಾವುದೇ ಬಡ್ಡಿ ಪಾವತಿಸದೆ ₹ 2 ಲಕ್ಷ ಸಾಲ ಪಡೆಯಲು ಅವಕಾಶ ಇದೆ. ಈ ಯೋಜನೆಯ ಸವಲತ್ತನ್ನು ಅವಿಭಜಿತ ಪುತ್ತೂರು ತಾಲ್ಲೂಕಿನ ಅಡಿಕೆ ಬೆಳೆಯುವ ರೈತರು ಪಡೆದುಕೊಳ್ಳಲು ಅವಕಾಶ ಕಲ್ಪಿಸಲಾಗಿದೆ.

ಆದರೆ, ಇದೀಗ ಈ ಯೋಜನೆಯಡಿಯ ಅರ್ಜಿ ಸಲ್ಲಿಸಿದ ರೈತರಿಗೆ ಹೊಸ ಸಂಕಷ್ಟ ಪ್ರಾರಂಭವಾಗಿದೆ. ಆಡಳಿತ ವ್ಯವಸ್ಥೆ ಇದ್ದಾಗ ಅಡಮಾನ ಸಾಲ ನೀಡುವ ಜವಾಬ್ದಾರಿ ಅಧ್ಯಕ್ಷರದ್ದಾಗಿತ್ತು. ಈಗ ಆಡಳಿತ ಅಧಿಕಾರಿಗಳ ಕೈಯಲ್ಲಿದೆ. ಆದರೆ, ಈ ಎಪಿಎಂಸಿಯಿಂದ ಅಮಾನತಾಗಿರುವ ಸಿಬ್ಬಂದಿಯೊಬ್ಬರ ಅಕ್ರಮದಿಂದಾಗಿ ರೈತರ ಅರ್ಜಿಗೆ ಆಡಳಿತಾಧಿಕಾರಿ ಸಹಿ ಬೇಕಾಗಿದೆ. ಪ್ರಸ್ತುತ ಆಡಳಿತಾಧಿಕಾರಿ, ಪುತ್ತೂರು ತಹಶೀಲ್ದಾರ್ ಆಗಿದ್ದು, ಚುನಾವಣೆ ಕಾರಣದಿಂದ ಒತ್ತಡ ಇರುವ ಕಾರಣ ಅಡಿಕೆ ಅಡಮಾನ ಸಾಲಕ್ಕೆ ಬಂದ ಅರ್ಜಿ ವಿಲೇವಾರಿ ತಡವಾಗುತ್ತಿದೆ. ಇದರಿಂದಾಗಿ ರೈತರು ಸಮಸ್ಯೆ ಎದುರಿಸುವಂತಾಗಿದೆ.

ಎಪಿಎಂಸಿಯಲ್ಲಿ ಕೆಲಸ ಮಾಡುತ್ತಿದ್ದ ಸಿಬ್ಬಂದಿ ಅಡಿಕೆ ಗುಣಮಟ್ಟವನ್ನು ನೋಡದೆ ಅಡಮಾನ ಇಡಲಾಗುತ್ತಿದೆ. ಇದರಿಂದ ನಿಯಮ ಉಲ್ಲಂಘನೆ ಮಾಡಲಾಗುತ್ತಿದೆ ಎಂದು ಆಡಳಿತಾಧಿಕಾರಿಯಲ್ಲಿ ಆರೋಪ ಮಾಡಿರುವ ಕಾರಣ, ಅಡಮಾನ ಸಾಲ ವಿಳಂಬಕ್ಕೆ ಕಾರಣ ಎಂದು ತಿಳಿದುಬಂದಿದೆ.

ಪುತ್ತೂರು ಎಪಿಂಎಸಿಯಲ್ಲಿ ರೈತರಿಗೆ ನೀಡಲಾದ ಯಾವುದೇ ಸೌಲಭ್ಯಗಳಿಂದ ಯಾವುದೇ ರೈತರು ವಂಚನೆಗೊಳಗಾಗಬಾರದು. ಸಿಬ್ಬಂದಿಯ ಸಮಸ್ಯೆಯಿಂದ ರೈತರಿಗೆ ಸಂಕಷ್ಟ ಉಂಟಾಗಬಾರದು. ಕಾನೂನು ಪ್ರಕಾರ ಇಲ್ಲಿನ ವ್ಯವಸ್ಥೆಯನ್ನು ಸುಧಾರಿಸಲು ಶುಕ್ರವಾರ ಪುತ್ತೂರು ಎಪಿಎಂಸಿ ಕಚೇರಿಗೆ ಭೇಟಿ ನೀಡಿ, ಆಡಿಟ್ ಮಾಡಿಸಿ ಅಲ್ಲಿರುವ ಕೊರತೆಗಳನ್ನು ನೀಗಿಸಲಾಗುವುದು. ಅಧಿಕಾರಿ ಹಾಗೂ ಸಿಬ್ಬಂದಿಗೆ ಕಟ್ಟುನಿಟ್ಟಿನ ಸೂಚನೆ ನೀಡಿ ವ್ಯವಸ್ಥೆ ಸರಿಪಡಿಸಿಕೊಳ್ಳುವಂತೆ ಸೂಚಿಸಲಾಗಿದೆ. ಅಮಾನತುಗೊಂಡಿರುವ ಸಿಬ್ಬಂದಿ ಪುತ್ತೂರು ಎಂಪಿಎಸಿ ವಿಚಾರದಲ್ಲಿ ಭಾಗಿಯಾಗದಂತೆ ಎಚ್ಚರಿಕೆ ನೀಡಿದ್ದೇನೆ’ ಎಂದು ಪುತ್ತೂರು ತಹಶೀಲ್ದಾರ್ ಕುಞಿ ಅಹ್ಮದ್ ಮಾಹಿತಿ ನೀಡಿದ್ದಾರೆ.

ತಹಶೀಲ್ದಾರ್ ಕುಞಿ ಅಹ್ಮದ್
ತಹಶೀಲ್ದಾರ್ ಕುಞಿ ಅಹ್ಮದ್

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT