ಬುಧವಾರ, ಸೆಪ್ಟೆಂಬರ್ 28, 2022
26 °C
ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಭೇಟಿ ಮಾಡಿದ ನಿಯೋಗ

ಫೈಬರ್‌ ದೋಟಿ ಸುಂಕ ಕಡಿತಕ್ಕೆ ಮನವಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮಂಗಳೂರು: ಅಡಿಕೆ ಬೆಳೆಗಾರರ ಕಾರ್ಯಪಡೆಯ ಅಧ್ಯಕ್ಷರೂ ಆಗಿರುವ ರಾಜ್ಯ ಗೃಹ ಸಚಿವ ಆರಗ ಜ್ಞಾನೇಂದ್ರ, ಕೇಂದ್ರ ಸಚಿವೆ ಶೋಭ ಕರಂದ್ಲಾಜೆ ಮತ್ತು ಕ್ಯಾಂಪ್ಕೊ ಅಧ್ಯಕ್ಷ ಎ.ಕಿಶೋರ್ ಕುಮಾರ್ ಕೊಡ್ಗಿ ನೇತೃತ್ವದಲ್ಲಿ ಅಡಿಕೆ ಬೆಳೆಗಾರರ ಸಹಕಾರಿ ಸಂಘಗಳ ಪ್ರಮುಖರನ್ನು ಒಳಗೊಂಡ ನಿಯೋಗವು ಗುರುವಾರ ಕೇಂದ್ರದ ವಿವಿಧ ಸಚಿವರನ್ನು ಭೇಟಿ ಮಾಡಿ, ಅಡಿಕೆ ಕೃಷಿಕರ ಸಮಸ್ಯೆಗಳು ಮತ್ತು ಮಾರುಕಟ್ಟೆ ವಿಷಯಗಳಲ್ಲಿ ಸರ್ಕಾರದ ನೀತಿಗಳಲ್ಲಿ ಆಗಬೇಕಾದ ಬದಲಾವಣೆಗಳ ಕುರಿತು ಮನವಿ ಸಲ್ಲಿಸಿತು.

ಕೇಂದ್ರದ ಹಣಕಾಸು ಸಚಿವೆ ನಿರ್ಮಲಾ ಸೀತಾರಮನ್ ಅವರಿಗೆ ಸಲ್ಲಿಸಿದ ಮನವಿಯಲ್ಲಿ, ಸಿಐಬಿ/ಎಫ್‌ಸಿಒ1985 ಪರವಾನಗಿ ಅಡಿಯಲ್ಲಿ ತಯಾರಿಸುವ ಕಾಪರ್‌ ಸಲ್ಫೇಟ್‌ಗಳ ಮೇಲೆ ಶೇ 5 ಜಿಎಸ್‌ಟಿ ವಿಧಿಸುವುದು, ರೈತರಿಗೆ ಅನುಕೂಲವಾಗುವಂತೆ ಕಾರ್ಬನ್ ಫೈಬರ್ ದೋಟಿಯ ಮೇಲಿನ ಆಮದು ಸುಂಕವನ್ನು ಕಡಿಮೆ ಮಾಡುವುದು ಮತ್ತು ಅಡಿಕೆಯ ಮೇಲಿನ ಜಿಎಸ್‌ಟಿ ಕಡಿಮೆ ಮಾಡುವಂತೆ ವಿನಂತಿಸಲಾಗಿದೆ.

ಕೇಂದ್ರ ಕೃಷಿ ಸಚಿವ ನರೇಂದ್ರ ಸಿಂಗ್ ತೋಮಾರ್ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಲಾಯಿತು. ಎಫ್‌ಎಸ್‌ಎಸ್‌ಎಐ ಈಗಾಗಲೇ ಅಡಿಕೆಯ ತೇವಾಂಶದ ಗರಿಷ್ಠ ಮಿತಿಯನ್ನು ಶೇ 7ಕ್ಕೆ ನಿಗದಿಪಡಿಸಿ ಮಾರ್ಗಸೂಚಿಯನ್ನು ಬಿಡುಗಡೆಗೊಳಿಸಿದ್ದು, ಹೊಸ ಅಡಿಕೆಯ ಪ್ರಾರಂಭದಲ್ಲಿ ಮತ್ತು ಮಳೆಗಾಲದಲ್ಲಿ ಅಡಿಕೆ ಮಾರಾಟಕ್ಕೆ ಸಮಸ್ಯೆಯಾಗುತ್ತಿದೆ. ತೇವಾಂಶದ ಗರಿಷ್ಠ ಮಿತಿಯನ್ನು ಶೇ 11ಕ್ಕೆ ಹೆಚ್ಚಿಸಿ ಮಾರ್ಗಸೂಚಿಯನ್ನು ಬಿಡುಗಡೆಗೊಳಿಸುವಂತೆ ಕ್ಯಾಂಪ್ಕೊದ ವ್ಯವಸ್ಥಾಪಕ ನಿರ್ದೇಶಕ ಕೃಷ್ಣ ಕುಮಾರ್ ವಿನಂತಿಸಿದ್ದಕ್ಕೆ, ಸಚಿವರು ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ.

ಕೇಂದ್ರದ ವಾಣಿಜ್ಯ ಸಚಿವ ಪಿಯೂಷ್‌ ಗೋಯಲ್ ಅವರನ್ನು ಭೇಟಿ ಮಾಡಿದ ನಿಯೋಗವು, ಅಡಿಕೆಯ ಆಮದಿನಿಂದ ದೇಶೀಯ ಅಡಿಕೆಯ ದರ ಏರಿಳಿತದ ಬಗ್ಗೆ ಚರ್ಚಿಸಿತು. ಹೆಚ್ಚಾದ ಅಡಿಕೆಯ ಉತ್ಪಾದನಾ ವೆಚ್ಚಕ್ಕೆ ಅನುಸರಿಸಿ ಅಡಿಕೆಯ ಕನಿಷ್ಠ ಆಮದು ದರವನ್ನು ಚಾಲಿ ಅಡಿಕೆಗೆ ಕೆ.ಜಿ ಗೆ ₹ 360, ಕೆಂಪಡಿಕೆ ಕೆ.ಜಿಗೆ ₹ 420ಕ್ಕೆ ಹೆಚ್ಚಿಸುವಂತೆ ಮನವಿ ಮಾಡಲಾಯಿತು. ಇದಕ್ಕೂ ಸಚಿವರು ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ ಎಂದು ಕಿಶೋರ್‌ಕುಮಾರ್ ಕೊಡ್ಗಿ ತಿಳಿಸಿದ್ದಾರೆ.

ನಿಯೋಗದಲ್ಲಿ ಮಂಜಪ್ಪ ಹೊಸಬಾಳೆ, ಮುಖ್ಯಮಂತ್ರಿ ರಾಜಕೀಯ ಕಾರ್ಯದರ್ಶಿ ಜೀವರಾಜ್, ಅಡಿಕೆ ಮಹಾಮಂಡಳದ ಅಧ್ಯಕ್ಷ ಸುಬ್ರಹ್ಮಣ್ಯ ಯಡಗೆರೆ, ಅಖಿಲ ಭಾರತ ಸಹಕಾರ ಭಾರತೀಯ ಸಂರಕ್ಷಕ್ ಸುರೇಶ್ ವೈದ್ಯ, ತುಮ್ಕೋಸ್ ಅಧ್ಯಕ್ಷ ಆರ್.ಎಂ.ರವಿ, ಸಹಕಾರ ಭಾರತಿಯ ರಾಜ್ಯ ಕಾರ್ಯದರ್ಶಿ  ಕೃಷ್ಣ ಪ್ರಸಾದ್ ಮಡ್ತಿಲ, ಟಿಎಸ್ಎಸ್ ನಿರ್ದೇಶಕ ಶಶಾಂಕ್ ಹೆಗಡೆ, ಮಹಾಮಂಡಳದ ನಿರ್ದೇಶಕ ಶಿವಕುಮಾರ್ ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು