ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಳದಿ ರೋಗ: ಸರ್ಕಾರಕ್ಕೆ ಪ್ರಸ್ತಾವ

ವರದಿ ಬಿಡುಗಡೆಗೊಳಿಸಿದ ಜೀವ ವೈವಿಧ್ಯ ಮಂಡಳಿ ಅಧ್ಯಕ್ಷ ಅನಂತ ಅಶೀಸರ
Last Updated 4 ಅಕ್ಟೋಬರ್ 2020, 10:41 IST
ಅಕ್ಷರ ಗಾತ್ರ

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಕೆಲವೆಡೆ ಅಡಿಕೆಗೆ ವ್ಯಾಪಿಸಿರುವ ಹಳದಿ ರೋಗ ಪರಿಹಾರಕ್ಕೆ ಈಗಾಗಲೇ ನಡೆದಿರುವ ಸಂಶೋಧನೆ, ಬೆಳೆ ಕಳೆದುಕೊಂಡ ರೈತರಿಗೆ ಅಗತ್ಯ ಪ್ಯಾಕೇಜ್, ಬದಲಿ ತೋಟ ರೂಪಿಸುವ ಯೋಜನೆಯನ್ನೊಳಗೊಂಡ ಸಮಗ್ರ ಪ್ರಸ್ತಾವ ಸಿದ್ಧಪಡಿಸಿ, ಸರ್ಕಾರಕ್ಕೆ ಸಲ್ಲಿಸಲಾಗುವುದು ಎಂದು ರಾಜ್ಯ ಜೀವ ವೈವಿಧ್ಯ ಮಂಡಳಿ ಅಧ್ಯಕ್ಷ ಅನಂತ ಹೆಗಡೆ ಅಶೀಸರ ಹೇಳಿದರು.

ಶನಿವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಸುಳ್ಯ ಭಾಗದಲ್ಲಿ 1,500 ಹೆಕ್ಟೇರ್‌ಗೂ ಅಧಿಕ ಪ್ರದೇಶದಲ್ಲಿ ಅಡಿಕೆಗೆ ಹಳದಿ ರೋಗ ವ್ಯಾಪಿಸಿದೆ. ಚಿಕ್ಕಮಗಳೂರು ಜಿಲ್ಲೆಯಲ್ಲೂ ಈ ಸಮಸ್ಯೆ ರೈತರನ್ನು ಕಾಡುತ್ತಿದೆ. ಇದಕ್ಕೆ ಬದಲಿ ಬೆಳೆ ಅಥವಾ ಬದಲಿ ತೋಟ ನಿರ್ಮಾಣ ಸಂಬಂಧ ರೈತರಿಗೆ ಸಲಹೆ ನೀಡಬೇಕಾದ ಅಗತ್ಯವಿದೆ. ಈ ನಿಟ್ಟಿನಲ್ಲಿ ಸಂಬಂಧಪಟ್ಟ ಎಲ್ಲ ಇಲಾಖೆಗಳು, ವಿಜ್ಞಾನಿಗಳಿಂದ ಮಾಹಿತಿ ಸಂಗ್ರಹಿಸಿ, ಸರ್ಕಾರ ಮಟ್ಟದಲ್ಲಿ ಚರ್ಚಿಸಲಾಗುವುದು’ ಎಂದರು.

ಸುಳ್ಯ ಗ್ರಾಮದ ನಾಲ್ಕು ಕಡೆಗಳಲ್ಲಿರುವ ರಾಂಪತ್ರೆ ಜಡ್ಡಿ (ಮಿರಿಸ್ಟಿಕಾ ಸ್ವಾಂಪ್) ಗುರುತಿಸಿ, ಪಾರಂಪರಿಕ ಜೀವವೈವಿಧ್ಯ ತಾಣವನ್ನಾಗಿ ಘೋಷಿಸುವ ನಿಟ್ಟಿನಲ್ಲಿ ಚರ್ಚಿಸಲಾಗಿದೆ. ಶಿಶಿಲ ಮತ್ತು ಸೀತಾನದಿ ಪ್ರದೇಶಗಳನ್ನು ವಿಶಿಷ್ಟ ಜಾತಿಯ ಮೀನು ವೈವಿಧ್ಯ ತಾಣವನ್ನಾಗಿ ಘೋಷಿಸಿದ್ದು, ಇನ್ನಷ್ಟು ಮೀನು ವೈವಿಧ್ಯ ತಾಣಗಳನ್ನು ಗುರುತಿಸಲಾಗುವುದು ಎಂದು ತಿಳಿಸಿದರು.

ಕರಾವಳಿ ಪರಿಸರ ರಕ್ಷಣೆ, ಮಾಲಿನ್ಯ ತಡೆ, ಆಮೆಗಳು, ಡಾಲ್ಫಿನ್‌ಗಳಂಥ ಅಪರೂಪದ ಜೀವಿಗಳ ರಕ್ಷಣೆಗೆ ವಿಶೇಷ ಯೋಜನೆಯನ್ನು ಕೇಂದ್ರ ಸರ್ಕಾರಕ್ಕೆ ಸಲ್ಲಿಸಲಾಗಿದೆ. ನಿಷೇಧಿತ 28 ರೀತಿಯ ಕ್ರಿಮಿನಾಶಕಗಳನ್ನು ಗೊಬ್ಬರದ ಅಂಗಡಿಗಳಲ್ಲಿ ಮಾರಾಟ ಮಾಡದಂತೆ ಕೃಷಿ ಇಲಾಖೆಗೆ ಸ್ಪಷ್ಟ ಸೂಚನೆ ನೀಡಲಾಗಿದೆ. ಕಳೆದ 10 ವರ್ಷಗಳಿಂದ ನಡೆಯುತ್ತಿರುವ ಕುಮಾರಧಾರಾ ನದಿ ಸಂರಕ್ಷಣಾ ಅಭಿಯಾನಕ್ಕೆ
ಪೂರಕವಾಗಿ ಭಾನುವಾರ ಕಡಬದಲ್ಲಿ ನದಿಪೂಜೆ ನೆರವೇರಿಸಲಾಗುವುದು ಎಂದು ಅನಂತ ಹೆಗಡೆ ಅಶೀಸರ ವಿವರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT