ಶನಿವಾರ, ಫೆಬ್ರವರಿ 27, 2021
27 °C
ಗೌರವಧನ ಹೆಚ್ಚಳ, ತಾಂತ್ರಿಕ ಸಮಸ್ಯೆ ನಿವಾರಣೆಗೆ ಆಗ್ರಹ

ಆಶಾ ಕಾರ್ಯಕರ್ತೆಯರಿಂದ ಪ್ರತಿಭಟನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮಂಗಳೂರು: ಮಾಸಿಕ ಗೌರವಧನದ ಮೊತ್ತವನ್ನು ₹ 12,000ಕ್ಕೆ ಹೆಚ್ಚಿಸುವಂತೆ ಮತ್ತು ಗೌರವಧನ ಪಾವತಿಗೆ ಹೊಸ ಸಾಫ್ಟ್‌ವೇರ್‌ ಬಳಕೆ ಕೈಬಿಡುವಂತೆ ಆಗ್ರಹಿಸಿ ಕರ್ನಾಟಕ ರಾಜ್ಯ ಸಂಯುಕ್ತ ಆಶಾ ಕಾರ್ಯಕರ್ತೆಯರ ಸಂಘದ ದಕ್ಷಿಣ ಕನ್ನಡ ಜಿಲ್ಲಾ ಸಮಿತಿ ನೇತೃತ್ವದಲ್ಲಿ ಆಶಾ ಕಾರ್ಯಕರ್ತೆಯರು ಇಲ್ಲಿನ ಜಿಲ್ಲಾಧಿಕಾರಿ ಕಚೇರಿ ಎದುರು ಶನಿವಾರ ಪ್ರತಿಭಟನೆ ನಡೆಸಿದರು.

ಆಲ್‌ ಇಂಡಿಯಾ ಯುನೈಟೆಡ್‌ ಟ್ರೇಡ್‌ ಯೂನಿಯನ್‌ ಸೆಂಟರ್‌ (ಎಐಟಿಯುಸಿ) ಮತ್ತು ರಾಜ್ಯ ಸಂಯುಕ್ತ ಆಶಾ ಕಾರ್ಯಕರ್ತೆಯರ ಸಂಘದ ಸಹಭಾಗಿತ್ವದಲ್ಲಿ ಪ್ರತಿಭಟನೆ ಮನಡೆಯಿತು. ಪುರಭವನದ ಎದುರಿನಿಂದ ಜಿಲ್ಲಾಧಿಕಾರಿ ಕಚೇರಿವರೆಗೆ ಜಾಥಾ ನಡೆಸಿದ ಆಶಾ ಕಾರ್ಯಕರ್ತೆಯರು ತಮ್ಮ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಘೋಷಣೆಗಳನ್ನು ಕೂಗಿದರು.

ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ನೀಡುವ ಗೌರವಧನವನ್ನು ಒಟ್ಟು ಸೇರಿಸಿ ಕನಿಷ್ಠ ಮಾಸಿಕ ₹ 12,000 ನಿಗದಿಪಡಿಸಬೇಕು. ನಿವೃತ್ತರಾಗುವ ಆಶಾ ಕಾರ್ಯಕರ್ತೆಯರಿಗೆ ಪಿಂಚಣಿ ನೀಡುವ ವ್ಯವಸ್ಥೆ ಜಾರಿಗೊಳಿಸಬೇಕು. ಪ್ರತಿ ತಿಂಗಳು ನಿಗದಿತ ದಿನದಂದು ಗೌರವಧನ ಪಾವತಿಸಬೇಕು. ಸಮೀಕ್ಷೆ ಮತ್ತು ಸಭೆಗಳಿಗೆ ಪ್ರತ್ಯೇಕ ಭತ್ಯೆ ನೀಡಬೇಕು ಎಂಬುದು ಸೇರಿದಂತೆ 12 ಬೇಡಿಕೆಗಳನ್ನು ಮುಂದಿರಿಸಿಕೊಂಡು ಪ್ರತಿಭಟನೆ ನಡೆಸಿದರು.

ಸಂಘ ರಾಜ್ಯ ಸಮಿತಿಯ ಕಾರ್ಯದರ್ಶಿ ಡಿ.ನಾಗಲಕ್ಷ್ಮಿ ಮಾತನಾಡಿ, ‘ರಾಜ್ಯದಲ್ಲಿ ಆಶಾ ಕಾರ್ಯಕರ್ತೆಯರ ಶೋಷಣೆ ನಡೆಯುತ್ತಿದೆ. ಎರಡು ಗಂಟೆ ಕೆಲಸ ಮಾಡಿದರೆ ಸಾಕು ಎಂಬ ಭರವಸೆಯಲ್ಲಿ ನೇಮಕಾತಿ ಮಾಡಲಾಗಿತ್ತು. ಈಗ ಎರಡು ಗಂಟೆ ವಿಶ್ರಾಂತಿಯೂ ಇಲ್ಲವಾಗಿದೆ. ಕೆಲಸಕ್ಕೆ ತಕ್ಕ ಗೌರವಧನ ಕೂಡ ನೀಡುತ್ತಿಲ್ಲ. ಕಾರ್ಮಿಕ ಇಲಾಖೆ ನಿಗದಿಪಡಿಸಿರುವ ಕನಿಷ್ಠ ವೇತನವನ್ನೂ ನಮಗೆ ನೀಡುತ್ತಿಲ್ಲ’ ಎಂದು ದೂರಿದರು.

ಆಶಾ ಕಾರ್ಯಕರ್ತೆಯರ ನೇಮಕಾತಿಯ ಬಳಿಕ ತಾಯಿ ಮತ್ತು ಶಿಶುಗಳ ಮರಣ ಪ್ರಮಾಣ ಇಳಿದಿದೆ. ಆರೋಗ್ಯಕ್ಕೆ ಸಂಬಂಧಿಸಿದ ಸೂಚ್ಯಂಕಗಳಲ್ಲಿ ಏರಿಕೆಯಾಗಿದೆ. ತಿಂಗಳಲ್ಲಿ ಮೂರರಿಂದ ನಾಲ್ಕು ಸಮೀಕ್ಷೆ ಮಾಡಿಸುತ್ತಿದ್ದಾರೆ. ಕುಟುಂಬ ಮತ್ತು ಮಕ್ಕಳಿಗೆ ಸಮಯ ನೀಡಲಾಗದ ಪರಿಸ್ಥಿತಿ ಇದೆ. ಸಾಂಕ್ರಾಮಿಕ ರೋಗಗಳ ಸಂದರ್ಭದಲ್ಲಿ ಜೀವವನ್ನು ಪಣಕ್ಕಿಟ್ಟು ಕೆಲಸ ಮಾಡಬೇಕಾದ ಸ್ಥಿತಿ ಇದೆ. ಆಶಾ ಕಾರ್ಯಕರ್ತೆಯರ ಸುರಕ್ಷತೆಯ ಬಗ್ಗೆ ಸರ್ಕಾರ ಯಾವ ಕ್ರಮಗಳನ್ನೂ ಕೈಗೊಳ್ಳುತ್ತಿಲ್ಲ ಎಂದು ಆರೋಪಿಸಿದರು.

ಜನರ ಜೀವ ಮತ್ತು ಆರೋಗ್ಯ ರಕ್ಷಣೆಗೆ ಸದಾ ಶ್ರಮಿಸುವ ಆಶಾ ಕಾರ್ಯಕರ್ತೆಯರಿಗೆ ಗೌರವಧನ ಪಾವತಿಸುವ ತಂತ್ರಾಂಶಗಳನ್ನು ಆಗಾಗ ಬದಲಾವಣೆ ಮಾಡಲಾಗುತ್ತದೆ. ಈಗ ‘ಆಶಾ ಸಾಫ್ಟ್‌’ ಎಂಬ ಹೊಸ ತಂತ್ರಾಂಶ ತರಲು ಹೊರಟಿದ್ದಾರೆ. ಹಲವು ತಿಂಗಳ ಕಾಲ ಮಾಡಿದ ಕೆಲಸಗಳ ವಿವರಗಳನ್ನು ಆಶಾ ಕಾರ್ಯಕರ್ತೆಯರೇ ದಾಖಲಿಸಬೇಕೆಂಬ ಸೂಚನೆ ನೀಡಿದ್ದಾರೆ. ಹೊಸ ತಂತ್ರಾಂಶ ಅಳವಡಿಕೆಯ ನಿರ್ಧಾರವನ್ನು ತಕ್ಷಣವೇ ಆರೋಗ್ಯ ಇಲಾಖೆ ವಾಪಸು ಪಡೆಯಬೇಕು ಎಂದು ಒತ್ತಾಯಿಸಿದರು.

‘ಶನಿವಾರ ರಾಜ್ಯದ ಎಲ್ಲ ಜಿಲ್ಲೆಗಳಲ್ಲೂ ಸಾಂಕೇತಿಕ ಹೋರಾಟ ನಡೆದಿದೆ. ನಮ್ಮ ಬೇಡಿಕೆಗಳ ಈಡೇರಿಕೆಗೆ ಇದೇ 10ರವರೆಗೆ ಗಡುವು ನೀಡಿದ್ದೇವೆ. ಜುಲೈ 18ರಂದು ರಾಜ್ಯದ ಎಲ್ಲ ಆಶಾ ಕಾರ್ಯಕರ್ತೆಯರು ಬೆಂಗಳೂರಿನಲ್ಲಿ ಧರಣಿ ಆರಂಭಿಸುತ್ತೇವೆ. ಬೇಡಿಕೆ ಈಡೇರಿಸುವರೆಗೂ ಕದಲುವುದಿಲ್ಲ’ ಎಂದು ಹೇಳಿದರು.

ಸಂಘಟನೆಯ ಜಿಲ್ಲಾ ಸಲಹೆಗಾರ ಕೆ.ವಿ.ಭಟ್‌ ಸಭೆಯನ್ನುದ್ದೇಶಿಸಿ ಮಾತನಾಡಿದರು. ಜಿಲ್ಲಾ ಸಮಿತಿ ಅಧ್ಯಕ್ಷೆ ಶೋಭಾ, ಕಾರ್ಯದರ್ಶಿ ಹರಿಣಿ, ಮುಖಂಡರಾದ ಸುಜಾತಾ ಶೆಟ್ಟಿ, ಜಯಲಕ್ಷ್ಮಿ, ಸರಸ್ವತಿ, ಮಂಜುಳಾ, ಭಾರತಿ, ಮೀನಾಕ್ಷಿ, ಹೇಮಲತಾ, ಬಬಿತಾ, ಗಾಯತ್ರಿ ಶೆಟ್ಟಿ ಪ್ರತಿಭಟನೆಯ ನೇತೃತ್ವ ವಹಿಸಿದ್ದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು