ಮಂಗಳವಾರ, 18 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಂಗಳೂರು | ಬಿ.ಕಾಂ.ನಲ್ಲಿ ಎಇಡಿ‍ಪಿ: ಉದ್ಯೋಗದ ಬಾಗಿಲು

ಹೊಸ ಕೋರ್ಸ್ ಅನುಷ್ಠಾನಕ್ಕೆ ರಥಬೀದಿ ಕಾಲೇಜು ಆಯ್ಕೆ
Published 21 ಮೇ 2024, 6:06 IST
Last Updated 21 ಮೇ 2024, 6:06 IST
ಅಕ್ಷರ ಗಾತ್ರ

ಮಂಗಳೂರು: ವಾಣಿಜ್ಯ ಪದವಿಯಲ್ಲಿ ಅಪ್ರೆಂಟಿಸ್‌ಷಿಪ್ ಎಂಬೆಡೆಡ್‌ ಡಿಗ್ರಿ ಪ್ರೋಗ್ರಾಮ್ (ಎಇಡಿ‍ಪಿ) ಅನುಷ್ಠಾನಕ್ಕೆ ಆಯ್ಕೆಯಾಗಿರುವ ರಾಜ್ಯದ 40 ಕಾಲೇಜುಗಳಲ್ಲಿ ನಗರದ ರಥಬೀದಿಯ ಡಾ. ಪಿ. ದಯಾನಂದ ಪೈ– ಪಿ. ಸತೀಶ ಪೈ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಒಂದಾಗಿದೆ.

ಬಿ.ಎಸ್ಸಿ, ಬಿ.ಎ, ಬಿ.ಸಿ.ಎ, ಬಿ.ಬಿ.ಎ, ಬಿ.ಎಸ್.ಡಬ್ಲ್ಯು ಜೊತೆಗೆ ಹಾಲಿ ಇರುವ ಮೂರು ವರ್ಷಗಳ ಬಿ.ಕಾಂ. ಕೋರ್ಸ್‌ನಲ್ಲಿ ಎಇಡಿ‍ಪಿ ಆಯ್ಕೆ ಮಾಡಿಕೊಳ್ಳಬಹುದಾಗಿದೆ. ಪದವಿ ಪ್ರಥಮ ವರ್ಷಕ್ಕೆ ಪ್ರವೇಶ ಪಡೆಯುವ ವಿದ್ಯಾರ್ಥಿಗಳು ಬಿ.ಕಾಂ ಇನ್ ಬ್ಯಾಂಕಿಂಗ್, ಬಿ.ಕಾಂ ಇನ್ ಫೈನಾನ್ಸ್, ಬಿ.ಕಾಂ ಇನ್ ಇನ್ಶುರೆನ್ಸ್ ಈ ಮೂರು ವಿಷಯಗಳಲ್ಲಿ ಯಾವುದಾದರೂ ಒಂದನ್ನು ಆಯ್ಕೆ ಮಾಡಿಕೊಳ್ಳಲು ಅವಕಾಶ ಇದೆ. ಈ ಕೋರ್ಸ್ ಪ್ರಕಾರ ಎರಡು ವರ್ಷ ಕಾಲೇಜಿನಲ್ಲಿ ವ್ಯಾಸಂಗ ಮಾಡಿ, ನಂತರ ಒಂದು ವರ್ಷ ಯಾವುದಾದರೂ ಕಂಪನಿಯಲ್ಲಿ ಅಪ್ರೆಂಟಿಷಿಪ್ ಮಾಡಬೇಕಾಗುತ್ತದೆ. ಈ ವೇಳೆ ವಿದ್ಯಾರ್ಥಿಗಳಿಗೆ ಸ್ಟೈಫಂಡ್ ಕೂಡ ಸಿಗುತ್ತದೆ. 60 ವಿದ್ಯಾರ್ಥಿಗಳಿಗೆ ಪ್ರವೇಶಕ್ಕೆ ಅವಕಾಶ ಇದೆ.

ರಾಷ್ಟ್ರೀಯ ಕೌಶಲ ಅಭಿವೃದ್ಧಿ ನಿಗಮದ ಸೆಕ್ಟರ್‌ ಸ್ಕಿಲ್ ಕೌನ್ಸಿಲ್‌, ಉನ್ನತ ಶಿಕ್ಷಣ ಇಲಾಖೆ ಹಾಗೂ ಕ್ರಿಸ್ಪ್ ಸೇರಿ ವಿದ್ಯಾರ್ಥಿಗಳು ಅಪ್ರೆಂಟಿಸ್‌ಷಿಪ್ ಮಾಡುವ ಕಂಪನಿಗಳನ್ನು ಗುರುತಿಸುತ್ತವೆ. ಉತ್ತಮ ಪ್ರತಿಭೆ ತೋರುವ ವಿದ್ಯಾರ್ಥಿಗಳಿಗೆ ಅದೇ ಕಂಪನಿಯಲ್ಲಿ ಉದ್ಯೋಗ ಪಡೆಯುವ ಸಾಧ್ಯತೆಗಳೂ ಇರುತ್ತವೆ. ಕಾಲೇಜಿನಲ್ಲಿ ಹಾಲಿ ಇರುವ ಬಿ.ಕಾಂ. ಕೋರ್ಸ್‌ನಲ್ಲಿ ರಿಟೇಲ್ ಮ್ಯಾನೇಜ್‌ಮೆಂಟ್, ಲಾಜಿಸ್ಟಿಕ್ಸ್ ಆಯ್ಕೆಗೆಯ ಅವಕಾಶ ಈ ಹಿಂದಿನಿಂದ ಇದೆ ಎನ್ನುತ್ತಾರೆ ಕಾಲೇಜಿನ ಪ್ರಾಂಶುಪಾಲ ಜಯಕರ ಭಂಡಾರಿ.

ಬಿ.ಎ. ಪದವಿಯಲ್ಲಿ ಸಾಮಾನ್ಯ ಕಾಂಬಿನೇಷನ್‌ಗಳ ಜೊತೆಗೆ ಸೈಕಾಲಜಿ, ಪತ್ರಿಕೋದ್ಯಮ, ಇಂಗ್ಲಿಷ್ ಮತ್ತು ಕನ್ನಡ ಐಚ್ಛಿಕ ವಿಷಯಗಳು ಇವೆ. ಈ ರೀತಿ ವಿಭಿನ್ನ ಕಾಂಬಿನೇಷನ್‌ಗಳು ಕೆಲವೇ ಪದವಿ ಕಾಲೇಜುಗಳಲ್ಲಿ ಇವೆ. ಸ್ನಾತಕೋತ್ತರ ಪದವಿಯಲ್ಲಿ ಎಂ.ಕಾಂ, ಎಂಎಸ್‌ಡಬ್ಲ್ಯು, ರಾಜಕೀಯ ವಿಜ್ಞಾನ ಕೋರ್ಸ್‌ಗಳು ಇವೆ ಎಂದು ಅವರು ತಿಳಿಸಿದರು.

ನ್ಯಾಕ್‌ ‘ಎ’ ಗ್ರೇಡ್ ಪಡೆದಿರುವ ಕಾಲೇಜಿನಲ್ಲಿ 38 ಕಾಯಂ ಉಪನ್ಯಾಸಕರು, 60 ಅತಿಥಿ ಉಪನ್ಯಾಸಕರು ಇದ್ದಾರೆ. ಪ್ರತಿ ಕೊಠಡಿಯೂ ಸ್ಮಾರ್ಟ್‌ ಕ್ಲಾಸ್‌ ಆಗಿದ್ದು, ಎಲ್ಲ ಕಡೆಗಳಲ್ಲಿ ಸಿಸಿಟಿವಿ ಕ್ಯಾಮೆರಾ ಭದ್ರತೆ ಇದೆ. ಆಟದ ಮೈದಾನ ಇಲ್ಲದಿರುವುದೊಂದೇ ಕಾಲೇಜಿನ ಕೊರತೆಯಾಗಿದೆ. ಇದರಿಂದಾಗಿ, ಕ್ರೀಡಾಕೂಟಗಳಿಗೆ ಮಂಗಳಾ ಕ್ರೀಡಾಂಗಣ ಅವಲಂಬಿಸಬೇಕಾಗಿದೆ.

ಮಂಗಳೂರಿನ ಡಾ. ಪಿ. ದಯಾನಂದ ಪೈ– ಸತೀಶ ಪೈ ಸರ್ಕಾರಿ ಪ್ರಥಮ ದರ್ಜೆ ಕಾಲೇಜು
ಮಂಗಳೂರಿನ ಡಾ. ಪಿ. ದಯಾನಂದ ಪೈ– ಸತೀಶ ಪೈ ಸರ್ಕಾರಿ ಪ್ರಥಮ ದರ್ಜೆ ಕಾಲೇಜು

ಬಿಬಿಎಗೆ ಹೆಚ್ಚಿದ ಬೇಡಿಕೆ

ಈ ವರ್ಷ ಬಿಸಿಎ ಬಿ.ಕಾಂ ಜೊತೆಗೆ ಬಿಬಿಎಗೂ ಬೇಡಿಕೆ ಹೆಚ್ಚಿದೆ. ಕಳೆದ ಎರಡು ವರ್ಷಗಳಿಂದ ಬಿಸಿಎ ಬಿ.ಕಾಂ ಕೋರ್ಸ್‌ಗಳಿಗೆ ನಿಗದಿತ ಸೀಟ್‌ಗಳಿಂತ ಎರಡು ಪಟ್ಟು ಹೆಚ್ಚು ಅರ್ಜಿಗಳು ಬರುತ್ತಿದ್ದವು. ಈ ಬಾರಿ ಬಿಬಿಎ ಆಯ್ಕೆ ಮಾಡಿಕೊಳ್ಳಲು ವಿದ್ಯಾರ್ಥಿಗಳು ಆಸಕ್ತಿ ತೋರಿದ್ದಾರೆ ಎಂದು ಪ್ರಾಂಶುಪಾಲ ಜಯಕರ ಭಂಡಾರಿ ‘ಪ್ರಜಾವಾಣಿ’ಗೆ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT