ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಬಾಲ ಹಿತೈಷಿ’: ಅನುಷ್ಠಾನವೇ ತೊಡಕು

ಜಿಲ್ಲೆಯಲ್ಲಿ ಕೋವಿಡ್‌ನಿಂದ ಪಾಲಕರನ್ನು ಕಳೆದುಕೊಂಡಿರುವ ಮಕ್ಕಳು 232
Last Updated 9 ಸೆಪ್ಟೆಂಬರ್ 2021, 4:07 IST
ಅಕ್ಷರ ಗಾತ್ರ

ಮಂಗಳೂರು: ಪಾಲಕರನ್ನು ಕಳೆದುಕೊಂಡು ಮಾನಸಿಕ ಆಘಾತಕ್ಕೆ ಒಳಗಾಗಿರುವ ಮಕ್ಕಳಿಗೆ ಸಾಂತ್ವನ ಹೇಳಿ, ಅವರಲ್ಲಿ ಆತ್ಮವಿಶ್ವಾಸ ತುಂಬುವ ಮಹತ್ವಾಕಾಂಕ್ಷೆಯ ‘ಬಾಲ ಹಿತೈಷಿ’ ಯೋಜನೆ, ಅನುಷ್ಠಾನಕ್ಕೆ ಮುನ್ನವೇ ಮುಗ್ಗರಿಸಿದೆ. ತಾಂತ್ರಿಕ ತೊಡಕುಗಳು ಯೋಜನೆ ಜಾರಿಗೆ ಅಡ್ಡಿಯಾಗಿವೆ.

ಕೋವಿಡ್‌ ಸಾಂಕ್ರಾಮಿಕ ಕಾಯಿಲೆಯಿಂದ ಪಾಲಕರನ್ನು ಕಳೆದಕೊಂಡ 18 ವರ್ಷದೊಳಗಿನ ಮಗುವನ್ನು ಮಾನಸಿಕ ಆಘಾತದಿಂದ ಹೊರತರಲು ಹಾಗೂ ಮಗುವಿನ ದೀರ್ಘಕಾಲಿಕ ಸಕಾರಾತ್ಮಕ ಬೆಳವಣಿಗೆ ಮತ್ತು ಸರ್ವತೋಮುಖ ಅಭಿವೃದ್ಧಿಗೆ ಅನುವಾಗುವಂತೆ
ಮಕ್ಕಳ ರಕ್ಷಣಾ ನಿರ್ದೇಶನಾಲಯವು ಜೂನ್‌ ತಿಂಗಳಿನಲ್ಲಿ ಈ ಯೋಜನೆಯನ್ನು ಜಾರಿಗೆ ತಂದಿತ್ತು.

ಇಬ್ಬರು ಪೋಷಕರು ಅಥವಾ ಪೋಷಕರಲ್ಲಿ ಒಬ್ಬರನ್ನು ಕಳೆದುಕೊಂಡು ಆಘಾತಕ್ಕೆ ಒಳಗಾಗಿರುವ ಮಕ್ಕಳು ಶೈಕ್ಷಣಿಕ ಮತ್ತು ಸಾಮಾಜಿಕವಾಗಿ ಸಾಧನೆ ಮಾಡಲು ಅನುಕೂಲವಾಗುವಂತೆ ಅವರಿಗೆ ಮಾರ್ಗದರ್ಶನ ನೀಡಲು, ವ್ಯಕ್ತಿ ಅಥವಾ ಸಂಸ್ಥೆಯ ಪ್ರಮುಖರ ನಿಯೋಜಿಸಲು ಅರ್ಜಿ ಆಹ್ವಾನಿಸಲಾಗಿತ್ತು. ಆದರೆ, ಎರಡು ತಿಂಗಳು ಕಳೆದರೂ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಯಾರೂ ಅರ್ಜಿ ಸಲ್ಲಿಸಿಲ್ಲ.

ತೊಡಕುಗಳು ಏನು?: ‘ಸಮಸ್ಯೆಗೆ ಒಳಗಾದ ಮಗುವಿಗೆ ಮಾರ್ಗದರ್ಶನ ಮಾಡಲು ಬಯಸುವವರು ಪ್ರಮಾಣಪತ್ರ ಸಲ್ಲಿಸಬೇಕು. ಜತೆಗೆ, ಪೊಲೀಸ್ ತನಿಖಾ ವರದಿ ಮೂಲಕ ಅವರ ವ್ಯಕ್ತಿತ್ವದ ಬಗ್ಗೆ ದೃಢೀಕರಣ ಇರಬೇಕು. ಇವೆರಡು ಷರತ್ತುಗಳು ಪೂರ್ಣಗೊಂಡ ನಂತರ, ಅರ್ಜಿ ಸಲ್ಲಿಸಿದ ನಿರ್ದಿಷ್ಟ ವ್ಯಕ್ತಿಗಳಿಗೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ತರಬೇತಿ ನೀಡಿ, ಮಗುವಿನ ಕೌನ್ಸೆಲಿಂಗ್‌ಗೆ ಅವರನ್ನು ಅಣಿಗೊಳಿಸುತ್ತದೆ. ಆದರೆ, ಈ ಷರತ್ತುಗಳ ಕಾರಣ ಅರ್ಜಿ ಸಲ್ಲಿಸಲು ಯಾರೂ ಮುಂದೆ ಬಂದಿಲ್ಲ’ ಎನ್ನುತ್ತವೆ ಇಲಾಖೆ ಮೂಲಗಳು.

‘ವಿವಿಧ ಇಲಾಖೆಗಳು, ಸಂಸ್ಥೆಗಳು, ವ್ಯಕ್ತಿಗಳು ಸೇರಿದಂತೆ 100ಕ್ಕೂ ಹೆಚ್ಚು ಜನರಿಗೆ ಯೋಜನೆ ಬಗ್ಗೆ ಮಾಹಿತಿ ರವಾನಿಸಲಾಗಿದೆ. ಅನೇಕ ಸರ್ಕಾರಿ ಸಭೆಗಳಲ್ಲಿ ವಿಷಯ ಪ್ರಸ್ತಾಪಿಸಲಾಗಿದೆ. ಆದರೆ, ಯಾರಿಂದಲೂ ಪ್ರತಿಕ್ರಿಯೆ ಬಂದಿಲ್ಲ. ಹೀಗಾಗಿ, ಬರುವ ದಿನಗಳಲ್ಲಿ ಸಾಮಾಜಿಕ ಕಾರ್ಯದಲ್ಲಿ ಗುರುತಿಸಿಕೊಂಡಿರುವ
ವ್ಯಕ್ತಿಗಳನ್ನು ಸಂಪರ್ಕಿಸಿ, ಅವರನ್ನು ವಿನಂತಿಸಲು ಯೋಚಿಸಲಾಗಿದೆ’ ಎಂದು ಅಧಿಕಾರಿಯೊಬ್ಬರು ತಿಳಿಸಿದರು.

‘ಮಗುವಿಗೆ ಮಾರ್ಗದರ್ಶನ ಮಾಡುವ ವ್ಯಕ್ತಿಯ ವೈಯಕ್ತಿಕ ವರ್ಚಸ್ಸಿನ ಬಗ್ಗೆ ಸ್ಪಷ್ಟತೆ ಇರಬೇಕು. ಇಲ್ಲವಾದಲ್ಲಿ ಕೆಲವು ಸಂದರ್ಭಗಳಲ್ಲಿ ದುರ್ಬಳಕೆಯಾಗುವ ಆತಂಕವೂ ಇರುತ್ತದೆ. ನೇಮಕ ಮಾಡಿಕೊಳ್ಳುವ ಮುನ್ನ ಈ ಬಗ್ಗೆ ನಿಗಾವಹಿಸಬೇಕಾಗುತ್ತದೆ’ ಎಂದು ಕೌನ್ಸೆಲರ್ ಒಬ್ಬರು ಅಭಿಪ್ರಾಯಪಟ್ಟರು.

‘ಬಾಲಸೇವಾ’ ಯೋಜನೆ ನೆರವು

ಕೋವಿಡ್‌ನಿಂದ ತಂದೆ– ತಾಯಿ ಇಬ್ಬರನ್ನೂ ಕಳೆದುಕೊಂಡು ಅನಾಥರಾದ ಐವರು ಮಕ್ಕಳಿಗೆ ‘ಬಾಲಸೇವಾ’ ಯೋಜನೆ ಅಡಿಯಲ್ಲಿ ತಿಂಗಳಿಗೆ ₹ 3,500 ಆರ್ಥಿಕ ನೆರವನ್ನು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ನೀಡುತ್ತಿದೆ. ಆದರೆ, ಕೋವಿಡೇತರ ಕಾರಣಕ್ಕೆ ಪಾಲಕರನ್ನು ಕಳೆದುಕೊಂಡಿರುವ ಮಕ್ಕಳು ಈ ಸೌಲಭ್ಯದಿಂದ ವಂಚಿತರಾಗಿದ್ದಾರೆ.

‘ಬಾಲ ಹಿತೈಷಿ’ ಉತ್ತಮ ಯೋಜನೆ. ಇದಕ್ಕೆ ಹೆಚ್ಚು ಪ್ರಚಾರ ದೊರೆತರೆ, ಮಗುವಿನ ರಕ್ಷಣೆಗೆ ಆಸಕ್ತ ಕಾರ್ಯಕರ್ತರು ಮುಂದೆ ಬರಬಹುದು.
ರೆನ್ನಿ ಡಿಸೋಜ, ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿ ಅಧ್ಯಕ್ಷ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT