ಮಂಗಳೂರು: ಬೆಂಗಳೂರಿನಿಂದ ಮೈಸೂರು ಮಾರ್ಗವಾಗಿ ಮಂಗಳೂರಿಗೆ ಬರುವ ರೈಲನ್ನು ಮುರ್ಡೇಶ್ವರದವರೆಗೆ ವಿಸ್ತರಿಸಿ ಭಾರತೀಯ ರೈಲ್ವೆ ಸಚಿವಾಲಯ ಆದೇಶ ಹೊರಡಿಸಿದೆ.
ಬೆಂಗಳೂರು– ಮೈಸೂರು ಮಾರ್ಗವಾಗಿ ಮಂಗಳೂರಿಗೆ ಬರುತ್ತಿದ್ದ ಎಕ್ಸ್‌ಪ್ರೆಸ್ ರೈಲು (16585) ಉತ್ತರ ಕನ್ನಡ ಜಿಲ್ಲೆಯ ಮುರ್ಡೇಶ್ವರದವರೆಗೆ ಸಂಚರಿಸುತ್ತದೆ. ಮಂಗಳೂರಿನಿಂದ ಹೊರಡುತ್ತಿದ್ದ ರೈಲು ಇನ್ನು ಮುರ್ಡೇಶ್ವರದಿಂದ ಆರಂಭವಾಗಿ ಭಟ್ಕಳ, ಬೈಂದೂರು, ಬಾರ್ಕೂರು, ಕುಂದಾಪುರ, ಉಡುಪಿ, ಮೂಲ್ಕಿ, ಸುರತ್ಕಲ್ ಮಾರ್ಗವಾಗಿ ಮಂಗಳೂರು ತಲುಪಿ (16586) ಮೈಸೂರು ಮೂಲಕ ಬೆಂಗಳೂರು ತಲುಪುತ್ತದೆ. ಇದು ಮಧ್ಯಾಹ್ನ 3.30ಕ್ಕೆ ಮುರ್ಡೇಶ್ವರದಿಂದ ಹೊರಟು, ಮಂಗಳೂರಿಗೆ ಸಂಜೆ 6.35ಕ್ಕೆ ಬಂದು, ಬೆಳಿಗ್ಗೆ 6ಕ್ಕೆ ಬೆಂಗಳೂರು ತಲುಪುತ್ತದೆ. ಬೆಂಗಳೂರಿನಿಂದ ರಾತ್ರಿ 9 ಗಂಟೆಗೆ ಹೊರಟು ಮೈಸೂರು ಮೂಲಕ ಬೆಳಿಗ್ಗೆ 9.05ಕ್ಕೆ ಮಂಗಳೂರು ಸೆಂಟ್ರಲ್ ರೈಲ್ವೆ ನಿಲ್ದಾಣ ತಲುಪುತ್ತದೆ.
ಪಂಚಗಂಗಾ ಎಕ್ಸ್‌ಪ್ರೆಸ್ ರೈಲು ಬೆಂಗಳೂರಿನಿಂದ ಬೇಗ ಹೊರಡುತ್ತದೆ, ಅಲ್ಲದೆ ಇದರಲ್ಲಿ ಟಿಕೆಟ್ ಸಿಗದು ಎಂಬ ಪ್ರಯಾಣಿಕರ ದೂರಿಗೆ ಪರಿಹಾರವಾಗಿ ರೈಲ್ವೆ ಸಚಿವಾಲಯವು ಈ ಹೊಸ ವ್ಯವಸ್ಥೆ ಕಲ್ಪಿಸಿದೆ. ರೈಲು ಸಂಚಾರದ ವಿಸ್ತರಣೆಯ ದಿನಾಂಕ, ಇನ್ನಿತರ ವಿವರಗಳ ಬಗ್ಗೆ ರೈಲ್ವೆ ಇಲಾಖೆ ಇನ್ನಷ್ಟೇ ನೋಟಿಫಿಕೇಷನ್ ಹೊರಡಿಸಬೇಕಾಗಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.