ಬ್ಯಾರಿ: ಲಿಪ್ಯಂತರ ತಂತ್ರಜ್ಞಾನ ಅಳವಡಿಕೆ

ಮಂಗಳೂರು: ಬ್ಯಾರಿ ಭಾಷೆಗೆ ಲಿಪಿಯನ್ನು ರೂಪಿಸಿರುವ ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿಯು, ಇನ್ನೊಂದು ಪ್ರಯತ್ನವಾಗಿ, ಮೊಬೈಲ್ ಮತ್ತು ಕಂಪ್ಯೂಟರ್‌ನಲ್ಲಿ ಗೂಗಲ್ ಮತ್ತು ಎಲ್ಲ ಬ್ರೌಸರ್‌ಗಳಲ್ಲಿ ಹೊಂದಿಕೆಯಾಗುವ ರೀತಿಯಲ್ಲಿ ಬ್ಯಾರಿ ಲಿಪಿಯನ್ನು ಇಂಗ್ಲಿಷ್ ಭಾಷೆಗೆ ಲಿಪ್ಯಂತರ ಮಾಡುವ ತಂತ್ರಜ್ಞಾನವನ್ನು ಅಳವಡಿಸಿದೆ.
ಬುಧವಾರ ಇಲ್ಲಿ ನಡೆದ ಕಾರ್ಯಕ್ರಮದಲ್ಲಿ ಅಕಾಡೆಮಿ ಅಧ್ಯಕ್ಷ ರಹೀಂ ಉಚ್ಚಿಲ್ ಈ ತಂತ್ರಜ್ಞಾನವನ್ನು ಬಿಡುಗಡೆಗೊಳಿಸಿದರು. ನಂತರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ರಾಜ್ಯ, ಹೊರರಾಜ್ಯ, ವಿದೇಶಗಳಲ್ಲಿರುವ ಸುಮಾರು 30 ಲಕ್ಷ ಜನರು ಬ್ಯಾರಿ ಭಾಷೆಯಲ್ಲಿ ಮಾತನಾಡುತ್ತಾರೆ. ಈ ಭಾಷೆಗೆ ಲಿಪಿ ಇಲ್ಲ ಎಂಬ ಕೊರಗನ್ನು 10 ತಿಂಗಳ ಹಿಂದೆ ನೀಗಿಸಲಾಗಿದೆ. 11 ಮಂದಿಯ ತಂಡ ಲಿಪಿ ರಚನೆಯಲ್ಲಿ ಯಶಸ್ವಿಯಾಗಿದೆ’ ಎಂದರು.
ಲಿಪಿ ಕಲಿಕಾ ವಿಧಾನದ ಭಾಗವಾಗಿ ಸ್ವರಾಕ್ಷರ, ವ್ಯಂಜನಾಕ್ಷರ, ಒತ್ತಕ್ಷರಗಳು ಮತ್ತು ಸಂಖ್ಯೆಗಳನ್ನು ಹೊಂದಿರುವ ಸಿ.ಡಿ.ಯನ್ನು ಈಗಾಗಲೆ ಬಿಡುಗಡೆಗೊಳಿಸಲಾಗಿದೆ. ಇದರ ಮುಂದುವರಿದ ಭಾಗವಾಗಿ, ಆಧುನಿಕ ತಂತ್ರಜ್ಞಾನಕ್ಕೆ ಹೊಂದಿಕೊಳ್ಳುವ ರೀತಿಯಲ್ಲಿ ಬ್ಯಾರಿ ಲಿಪಿಯನ್ನು ಇಂಗ್ಲಿಷ್ ಭಾಷೆಗೆ ಲಿಪ್ಯಂತರ ಮಾಡುವ ತಂತ್ರಜ್ಞಾನ ಅಳವಡಿಸಲಾಗಿದೆ. ಮುಂದಿನ ದಿನಗಳಲ್ಲಿ ಕನ್ನಡ, ಮಲೆಯಾಳಿ ಭಾಷೆಯಲ್ಲೂ ಈ ರೀತಿ ಲಿಪ್ಯಂತರ ಮಾಡುವ ತಂತ್ರಜ್ಞಾನ ಅಳವಡಿಸಲಾಗುವುದು ಎಂದು ಹೇಳಿದರು.
ಬ್ಯಾರಿ ಲಿಪಿಯನ್ನು ಈ ಹೊಸ ತಂತ್ರಜ್ಞಾನದ ಮೂಲಕ ಟೈಪ್ ಮಾಡುವಾಗ ಶೇ 80ರಷ್ಟು ಪದಗಳು ಯುನಿಕೋಡ್ ಇಲ್ಲದೆ ಬಳಕೆಯಾಗುತ್ತವೆ. ಯುನಿಕೋಡ್ ದೊರಕಿದ ಬಳಿಕ ಶೇ 100ರಷ್ಟು ಬ್ಯಾರಿ ಲಿಪಿಯನ್ನು ಅಂತರ್ಜಾಲದಲ್ಲಿ ಬಳಕೆಯಾಗುವಂತೆ ವ್ಯವಸ್ಥೆ ಮಾಡಲಾಗುವುದು. ಅಂತರ್ಜಾಲದಲ್ಲಿ bearyscript.in ಕ್ಲಿಕ್ಕಿಸಿದರೆ ಈ ಲಿಪಿ ಬರೆಯುವ ಪುಟ ತೆರೆಯುತ್ತದೆ. ಇಲ್ಲಿ ವಿಷಯವನ್ನು ಟೈಪ್ ಮಾಡಿ, ಲಿಪ್ಯಂತರ ಬಟನ್ ಒತ್ತಿದರೆ, ಬ್ಯಾರಿ ಅಕ್ಷರ ಬರುತ್ತದೆ ಎಂದು ವಿವರಿಸಿದರು.
ಅಕಾಡೆಮಿ ರಿಜಿಸ್ಟ್ರಾರ್ ಪೂರ್ಣಿಮಾ, ಲಿಪಿ ಸಂಶೋಧನಾ ಸಮಿತಿಯ ಸದಸ್ಯರಾದ ಡಾ. ಅಬೂಬಕರ್ ಸಿದ್ದೀಕ್, ಹೈದರಲಿ ಕೆ, ಅಬ್ದುಲ್ ರಹಿಮಾನ್ ಕುತ್ತೆತ್ತೂರು, ಸಂತ ಅಲೋಶಿಯಸ್ ಕಾಲೇಜಿನ ರಿಜಿಸ್ಟ್ರಾರ್ ಡಾ.ಅಲ್ವಿನ್ ಡೇಸಾ ಇದ್ದರು.
ಲಿಪ್ಯಂತರಕ್ಕೆ ವಿದ್ಯಾರ್ಥಿಗಳ ಶ್ರಮ
ಸೇಂಟ್ ಅಲೋಶಿಯಸ್ ಕಾಲೇಜಿನ ವಿದ್ಯಾರ್ಥಿಗಳಾದ ಯು.ಟಿ. ಮೊಹಮ್ಮದ್ ಮಶ್ಫೂಕ್ ಹುಸೈನ್, ಕೆ.ಎ. ಇಸ್ಮಾಯಿಲ್ ಶಫೀಕ್, ಮೆಲ್ರಾಯ್ ಪಿಂಟೊ ಅವರು ನಾಲ್ಕು ತಿಂಗಳು ನಿರಂತರ ಶ್ರಮವಹಿಸಿ, ಈ ತಂತ್ರಜ್ಞಾನ ರೂಪಿಸಿದ್ದಾರೆ ಎಂದು ರಹೀಂ ಉಚ್ಚಿಲ್ ತಿಳಿಸಿದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.