ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಯರ್‌ಗೂ ತಟ್ಟಿದ ‘ಶೀತ’ ಭೀತಿ

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಶೇ 50 ರಷ್ಟು ಮಾರಾಟ ಇಳಿಕೆ
Last Updated 10 ಅಕ್ಟೋಬರ್ 2020, 2:50 IST
ಅಕ್ಷರ ಗಾತ್ರ

ಮಂಗಳೂರು: ಕೋವಿಡ್–19 ನಿಂದಾಗಿ ಜನರು ಸಾಕಷ್ಟು ಮುಂಜಾಗ್ರತೆ ಕೈಗೊಳ್ಳುತ್ತಿದ್ದು, ಕರಿದ ತಿಂಡಿಗಳು, ತಂಪು ಪಾನೀಯಗಳಿಂದ ದೂರ ಉಳಿದಿದ್ದಾರೆ. ಇದೀಗ ಇದರ ಪರಿಣಾಮ ಬಿಯರ್‌ ಮಾರಾಟದ ಮೇಲೂ ಆಗಿದೆ.

ಅಬಕಾರಿ ಇಲಾಖೆಯ ಅಂಕಿ–ಅಂಶಗಳೂ ಇದಕ್ಕೆ ಪುಷ್ಠಿ ನೀಡುತ್ತಿವೆ. ಕಳೆದ ವರ್ಷ ಏಪ್ರಿಲ್‌ನಿಂದ ಸೆಪ್ಟೆಂಬರ್‌ವರೆಗೆ 93,610 ಕೇಸ್‌ ಬಿಯರ್‌ ಮಾರಾಟವಾಗಿದ್ದರೆ, ಈ ವರ್ಷ ಬಿಯರ್‌ ಮಾರಾಟ 50,828 ಕೇಸ್‌ಗೆ ಇಳಿದಿದೆ. ಇದರಿಂದಾಗಿ ಜಿಲ್ಲೆಯಲ್ಲಿ ಬಿಯರ್ ಮಾರಾಟದಲ್ಲಿ ಶೇ 50 ರಷ್ಟು ಇಳಿಕೆ ಕಂಡು ಬಂದಿದೆ.

‘ಮಂಗಳೂರಿನಂತಹ ನಗರದಲ್ಲಿ ಜನರು ಬಿಯರ್‌ ಅನ್ನೇ ಹೆಚ್ಚಾಗಿ ಇಷ್ಟಪಡುತ್ತಾರೆ. ಆದರೆ, ತಂಪಾದ ಬಿಯರ್‌ ಸೇವನೆಯಿಂದ ಶೀತ ಬರುವ ಭೀತಿ ಆರಂಭವಾಗಿದ್ದು, ಇದರಿಂದ ತಲೆನೋವು, ಗಂಟಲು ಕಿರಿಕಿರಿಯೂ ಆರಂಭವಾಗಬಹುದು ಎನ್ನುವ ಆತಂಕವೂ ಇದೆ. ಇವೆಲ್ಲವೂ ಕೋವಿಡ್–19 ನ ಲಕ್ಷಣಗಳಾಗಿದ್ದರಿಂದ ಅನಗತ್ಯ ಕಿರಿಕಿರಿ ಮಾಡಿಕೊಳ್ಳುವುದು ಬೇಡ ಎನ್ನುವ ನಿರ್ಧಾರಕ್ಕೆ ಜನರು ಬಂದಂತಿದೆ. ಇದರಿಂದಾಗಿ ಬಿಯರ್‌ ಮಾರಾಟದಲ್ಲಿ ಇಳಿಕೆಯಾಗಿದೆ. ಜತೆಗೆ ಕೋವಿಡ್–19 ನಿಂದಾಗಿ ಜಿಲ್ಲೆಗೆ ಬರುವ ಪ್ರವಾಸಿಗರ ಸಂಖ್ಯೆಯೂ ಕಡಿಮೆಯಾಗಿರುವುದು ಇದಕ್ಕೆ ಮತ್ತೊಂದು ಕಾರಣ’ ಎಂದು ಅಬಕಾರಿ ಅಧಿಕಾರಿಗಳು ಹೇಳುತ್ತಾರೆ.

‘ಕೆಲವು ನಿಯಮಿತ ಗ್ರಾಹಕರು ಹೇಳುವ ಪ್ರಕಾರ, ಮುಂಜಾಗ್ರತಾ ಕ್ರಮವಾಗಿ ಬಿಯರ್‌ ಸೇವನೆ ಬಿಟ್ಟಿದ್ದಾರೆ. ಬಿಯರ್‌ ಬದಲು ಮದ್ಯ ಸೇವನೆಗೆ ಹೆಚ್ಚಿನ ಆಸಕ್ತಿ ತೋರುತ್ತಿದ್ದಾರೆ. ನಮ್ಮಲ್ಲಿ ಬಿಯರ್‌ ಮಾರಾಟ ಸ್ಥಿರವಾಗಿದೆ, ಆದರೆ ಆಶಾದಾಯವಾಗಿಲ್ಲ. ಬರುವ ದಿನಗಳಲ್ಲಿ ಮತ್ತಷ್ಟು ಬಾರ್‌ಗಳು ಆರಂಭವಾಗಲಿದ್ದು, ಮಾರಾಟ ಇನ್ನಷ್ಟು ಕಡಿಮೆಯಾಗುವ ಸಾಧ್ಯತೆ ಇದೆ’ ಎನ್ನುತ್ತಾರೆ ನಗರದ ಮೈಕ್ರೋಬ್ರೇವರಿಯ ಮಾಲೀಕ ಅಶ್ವಿನ್‌ ರೈ ಹೇಳುತ್ತಾರೆ.

‘ಜನರು ತಂಪು ಪಾನೀಯಗಳಿಗಿಂತ ಬಿಸಿ ಪದಾರ್ಥಗಳಿಗೆ ಹೆಚ್ಚು ಆಸಕ್ತಿ ತೋರುತ್ತಿದ್ದಾರೆ. ಮೊದಲಿಗೆ ಮಾರಾಟವಾಗುತ್ತಿದ್ದ ಬಿಯರ್‌ನ ಅರ್ಧದಷ್ಟೂ ಈಗ ಮಾರಾಟ ಆಗುತ್ತಿಲ್ಲ’ ಎಂದು ತಂದೂರ್‌ ಬಾರ್‌ ಆಂಡ್‌ ರೆಸ್ಟೊರೆಂಟ್‌ನ ವಾದಿ ಶೆಣೈ ಹೇಳುತ್ತಾರೆ.

‘ಕೋವಿಡ್‌–19 ನಿಂದ ದೂರ ಉಳಿಯಲು ಮಾಸ್ಕ್‌, ಸ್ಯಾನಿಟೈಸರ್‌ ಬಳಕೆ ಮಾಡುತ್ತಿದ್ದೇವೆ. ಅನೇಕ ಮುಂಜಾಗ್ರತೆ ಕೈಗೊಳ್ಳುತ್ತಿದ್ದೇವೆ. ಅದೇ ರೀತಿ ಬಿಯರ್‌ನಿಂದ ದೂರ ಉಳಿಯುವುದೂ ಒಂದು ಮುಂಜಾಗ್ರತಾ ಕ್ರಮವೇ ಆಗಿದೆ’ ಎಂದು ಬಿಯರ್‌ ಪ್ರಿಯರೊಬ್ಬರು ಸಮರ್ಥಿಸಿಕೊಳ್ಳುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT