ಶನಿವಾರ, ಸೆಪ್ಟೆಂಬರ್ 18, 2021
24 °C
ಬೆಳ್ತಂಗಡಿಯಲ್ಲಿ ಭಜನಾ ತಂಡಗಳ ಅಧ್ಯಕ್ಷ, ಕಾರ್ಯದರ್ಶಿಗಳ ಸಭೆ

ಭಜನಾ ಸ್ಪರ್ಧೆ: ₹12.5 ಲಕ್ಷ ಬಹುಮಾನ- ಶಾಸಕ ಹರೀಶ್ ಪೂಂಜ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಳ್ತಂಗಡಿ: ‘ಹಿಂದೂ ಸಮಾಜಕ್ಕೆ ಶಕ್ತಿ ನೀಡುವ ಕಾರ್ಯ ಭಜನಾ ಮಂಡಳಿ ಗಳಿಂದಾಗಿದೆ. ಭಜನಾ ಮಂದಿರಗಳ ಅಸ್ತಿತ್ವ ಉಳಿಸುವ ನಿಟ್ಟಿನಲ್ಲಿ ಸರ್ಕಾರಿ ದಾಖಲೆಗಳ ಸರಿಪಡಿಸುವ ಜತೆಗೆ ಮೂಲ ಸೌಕರ್ಯ ಅಭಿವೃದ್ಧಿಗೆ ಕಂದಾಯ ಸಚಿವರಾಗಿದ್ದ ಆರ್. ಅಶೋಕ್ ಅವರೊಂದಿಗೆ ಮಾತುಕತೆ ನಡೆಸಲಾಗಿದೆ’ ಎಂದು ಶಾಸಕ ಹರೀಶ್ ಪೂಂಜ ಹೇಳಿದರು.

ಭಾನುವಾರ ತಾಲ್ಲೂಕಿನ ಭಜನಾ ಮಂದಿರಗಳ ಮೂಲ ಸೌಕರ್ಯಗಳ ಕುರಿತು ಮಂದಿರಗಳ ಅಧ್ಯಕ್ಷರ ಹಾಗೂ ಕಾರ್ಯದರ್ಶಿಗಳ ಜೊತೆ ಬೆಳ್ತಂಗಡಿ ಮಂಜುನಾಥ ಸ್ವಾಮಿ ಸಭಾಭವನದಲ್ಲಿ ನಡೆಸಲಾದ ಸಭೆಯಲ್ಲಿ ಅವರು ಮಾತನಾಡಿದರು.

‘ಮಂದಿರಗಳಿಗೆ ಹಕ್ಕುಪತ್ರ ನೀಡುವ ಸಲುವಾಗಿ ಮೂರು ವರ್ಷದ ನೋಂದಣಿ ಸೇರಿದಂತೆ ಕೆಲವು ದಾಖಲೆ ಅಗತ್ಯವಾಗಿದೆ. ಪೈಲಟ್ ಯೋಜನೆಯಂತೆ ಸರ್ಕಾರದ ಮಟ್ಟದಲ್ಲಿ ಸೂಕ್ತ ದಾಖಲೆಯೊಂದಿಗೆ ಸರ್ಕಾರಿ ಸ್ಥಳದಲ್ಲಿ ಈಗ ಕಟ್ಟಿರುವ ಭಜನಾ ಮಂಡಳಿಯನ್ನು ಸಕ್ರಮಗೊಳಿಸಲು ಸಾಧ್ಯವಾಗಲಿದೆ. ಇದಕ್ಕಾಗಿ ವಕೀಲರಲ್ಲಿ ಹಾಗೂ ಕಂದಾಯ ಅಧಿಕಾರಿಗಳಲ್ಲಿ ಚರ್ಚೆ ನಡೆಸಲಾಗಿದೆ’ ಎಂದರು.

ವಿಶ್ವ ಹಿಂದೂ ಪರಿಷತ್ ತಾಲ್ಲೂಕು ಮಾಜಿ ಅಧ್ಯಕ್ಷ ಸುಬ್ರಹ್ಮಣ್ಯ ಕುಮಾರ್ ಅಗರ್ತ, ಬಿಜೆಪಿ ಮಂಡಲ ಅಧ್ಯಕ್ಷ ಜಯಂತ್ ಕೋಟ್ಯಾನ್, ಪ್ರಧಾನ ಕಾರ್ಯದರ್ಶಿ ಗಣೇಶ್ ಗೌಡ ನಾವೂರು, ಕಾರ್ಯದರ್ಶಿ ಪ್ರಶಾಂತ್ ಪಾರೆಂಕಿ, ಧರ್ಮಸ್ಥಳ ಮಂಜುನಾಥೇಶ್ವರ ಭಜನಾ ಪರಿಷತ್ ಜಿಲ್ಲಾ ಉಪಾಧ್ಯಕ್ಷ ಮಂಜು ನಾಥ ಶೆಟ್ಟಿ, ಭಜನಾ ಪರಿಷತ್ ತಾಲ್ಲೂಕು ಕಾರ್ಯದರ್ಶಿ ಜನಾರ್ದನ ಇದ್ದರು.

ಮಂಡಲ ಪ್ರಧಾನ ಕಾರ್ಯದರ್ಶಿ ಶ್ರೀನಿವಾಸ ರಾವ್ ಕಾರ್ಯಕ್ರಮ ನಿರ್ವಹಿಸಿದರು.

ಸಭೆಯಲ್ಲಿ ತಾಲ್ಲೂಕಿನ 100ಕ್ಕೂ ಅಧಿಕ ಭಜನಾ ಮಂಡಳಿಗಳ ಪ್ರಮುಖರು ಭಾಗವಹಿಸಿದ್ದರು.

ಹಲವು ವಿಚಾರ ಚರ್ಚೆ: ಸರ್ಕಾರಿ ಜಾಗದಲ್ಲಿರುವ ಭಜನಾ ಮಂಡಳಿಗೆ ದಾಖಲೆ, ಶೌಚಾಲಯ ವ್ಯವಸ್ಥೆ, ನವೀಕರಣ ಹಾಗೂ ತಾಂತ್ರಿಕ ಸಮಸ್ಯೆ ಸರಿಪಡಿಸುವ ಕುರಿತು ಸಭೆಯಲ್ಲಿ ಚರ್ಚಿಸಲಾಯಿತು.

ಸರ್ಕಾರಿ ಸ್ಥಳದಲ್ಲಿ ಕಟ್ಟಿದ ಭಜನಾ ಮಂಡಳಿಗಳ ದಾಖಲೆ ಸರಿಪಡಿಸಿ ಹಕ್ಕುಪತ್ರ ನೀಡುವ ಕುರಿತು, ನೀರಿನ ಸೌಕರ್ಯ, ವಿದ್ಯುತ್ ಸಂಪರ್ಕ, ಮಂದಿರಗಳ ಕಟ್ಟಡ ನವೀಕರಣ ಮೊದಲಾದ ವಿಷಯದಲ್ಲಿ ಶಾಸಕರು ಚರ್ಚೆ ನಡೆಸಿದರು.

ಭಜನಾ ಸ್ಪರ್ಧೆ: ₹ 12.5 ಲಕ್ಷ ಬಹುಮಾನ

‘ಕೋವಿಡ್‌ ನಡುವೆ ಭಜನಾ ಕಾರ್ಯಗಳು ಸ್ಥಗಿತವಾಗಿದೆ. ತಾಲ್ಲೂಕಿನ ಭಜನಾ ತಂಡಗಳ ಬಲವರ್ಧನೆಗೆ 15 ದಿನಗಳ ಒಳಗಾಗಿ ಭಜನಾ ಸ್ಪರ್ಧೆಗೆ ನೋಂದಣಿ ನಡೆಸಲು ಅವಕಾಶ ಕಲ್ಪಿಸಲಾಗುವುದು. ಭಜನಾ ಮಂಡಳಿಗಳು ಇದ್ದಲ್ಲಿಯೇ ನೇರಪ್ರಸಾರ ನಡೆಸಿ ವಿಜಯಿ ತಂಡವನ್ನು ಆಯ್ಕೆ ಮಾಡಲಾಗುತ್ತದೆ. ಪ್ರಥಮ ₹ 5 ಲಕ್ಷ , ದ್ವಿತೀಯ ₹ 2.5 ಲಕ್ಷ ಹಾಗೂ ಐದು ತಂಡಗಳಿಗೆ ತಲಾ ₹ 1 ಲಕ್ಷ ಬಹುಮಾನ ನೀಡಲಾಗುವುದು. 15 ವರ್ಷದ ಕೆಳಗಿನ ಮಕ್ಕಳಿಗೂ ನಿಯಮ ರೂಪಿಸಿ, ಸ್ಪರ್ಧೆ ನಡೆಸಲು ಚಿಂತಿಸಲಾಗಿದೆ’ ಎಂದು ಶಾಸಕ ಹರೀಶ್ ಪೂಂಜ ಘೋಷಿಸಿದರು.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.