ಶನಿವಾರ, 13 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೊಂಡಾಣ ಕ್ಷೇತ್ರ: ನೂತನ ಭಂಡಾರ ಮನೆ ಧ್ವಂಸ– ಮೂವರು ಬಂಧನ

Published 3 ಮಾರ್ಚ್ 2024, 12:23 IST
Last Updated 3 ಮಾರ್ಚ್ 2024, 12:23 IST
ಅಕ್ಷರ ಗಾತ್ರ

ಉಳ್ಳಾಲ (ದಕ್ಷಿಣ ಕನ್ನಡ) : ಇಲ್ಲಿನ ಠಾಣೆಯ ವ್ಯಾಪ್ತಿಯ ಕೋಟೆಕಾರು ಗ್ರಾಮದ ಕಾರಣಿಕ ಕೊಂಡಾಣ ಕ್ಷೇತ್ರದಲ್ಲಿ ಪಿಲಿಚಾಮುಂಡಿ ಬಂಟ, ವೈದ್ಯನಾಥ ಪರಿವಾರ ದೈವಗಳ ಕ್ಷೇತ್ರಕ್ಕೆ ತಾಗಿಕೊಂಡು ನೂತನವಾಗಿ ನಿರ್ಮಿಸಿದ್ದ ಭಂಡಾರ ಮನೆಯನ್ನು ಜೆಸಿಬಿಯಿಂದ ಭಾನುವಾರ ನೆಲಸಮಗೊಳಿಸಲಾಗಿದೆ. ಈ ಸಂಬಂಧ ಪೊಲೀಸರು ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ.

‘ಸ್ಥಳೀಯರಾದ ಮುತ್ತಣ್ಣ ಶೆಟ್ಟಿ, ಧೀರಜ್‌ ಮತ್ತು ಶಿವರಾಜ್‌ ಬಂಧಿತರು. ಈ ಕೃತ್ಯವನ್ನು ತಾವೇ ಎಸಗಿದ್ದಾಗಿ ಆರೋಪಿಗಳು ಒಪ್ಪಿಕೊಂಡಿದ್ದಾರೆ. ಕೋಟೆಕಾರು ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಆನಂದ್‌ ಅವರು ಈ ಬಗ್ಗೆ ದೂರು ನೀಡಿದ್ದು ಉಳ್ಳಾಲ ಠಾಣೆಯಲ್ಲಿ ಎಫ್‌ಐಆರ್‌ ದಾಖಲಾಗಿದೆ’ ಎಂದು ಪೊಲೀಸರು ತಿಳಿಸಿದ್ದಾರೆ.

ಮುಜರಾಯಿ ಇಲಾಖೆ ಈ ದೇವಸ್ಥಾನದ ಅಧೀನದ ಈ ಕಾರಣಿಕ ಕ್ಷೇತ್ರದಲ್ಲಿ ಈಚೆಗಷ್ಟೇ ಭಂಡಾರ ಮನೆಯನ್ನು ನೂತನವಾಗಿ ನಿರ್ಮಿಸಲಾಗಿತ್ತು. ಭಾನುವಾರ ಬೆಳಿಗ್ಗೆ 8 ಗಂಟೆ ಬಳಿಕ ಜೆಸಿಬಿಯನ್ನು ಸ್ಥಳಕ್ಕೆ ತಂದ ಅಪರಿಚಿತ ವ್ಯಕ್ತಿಗಳು ಭಂಡಾರ ಮನೆಯನ್ನು ನೆಲಸಮಗೊಳಿಸಿದರು ‌ಎಂದು ಸ್ಥಳೀಯರು ದೂರಿದ್ದಾರೆ.

‘ಈ ಕ್ಷೇತ್ರದ ಹಿಂದಿನ ಭಂಡಾರಮನೆ ಖಾಸಗಿ ಗುತ್ತಿನಮನೆಯ ಒಡೆತನದಲ್ಲಿತ್ತು. ಅದರಲ್ಲಿ ಕ್ಷೇತ್ರದ ದೈವಗಳ ಬೆಲೆಬಾಳುವ ಒಡವೆಗಳಿದ್ದವು. ಭಂಡಾರಮನೆಯನ್ನೂ ಮುಜರಾಯಿ ಇಲಾಖೆಗೆ ಸೇರಿಸಲು ಕ್ಷೇತ್ರದ ವ್ಯವಸ್ಥಾಪನಾ ಸಮಿತಿಯ ನಿಕಟಪೂರ್ವ ಅಧ್ಯಕ್ಷ ಕೃಷ್ಣ ಶೆಟ್ಟಿ ತಾಮಾರ್‌ ಪ್ರಯತ್ನಿಸಿದ್ದರು. ಇದಕ್ಕೆ ಗುತ್ತಿನ ಮನೆಯವರ ಸಮ್ಮತಿ ಇರಲಿಲ್ಲ’ ಎಂದು ಸ್ಥಳೀಯ ಮೂಲಗಳು ತಿಳಿಸಿವೆ.

‘ಈ ಕ್ಷೇತ್ರಕ್ಕೆ ಬೇರೆಯೇ ಭಂಡಾರಮನೆ ನಿರ್ಮಿಸಬೇಕು ಎಂದು ಪ್ರಶ್ನಾ ಚಿಂತನೆಯಲ್ಲಿ ಕಂಡುಬಂದಿತ್ತು. ಬಳಿಕ ಕ್ಷೇತ್ರದ ಪಕ್ಕದ ಜಮೀನನ್ನು ಖರೀದಿಸಿ ಅಲ್ಲಿ ನೂತನ ಭಂಡಾರ ಮನೆ ನಿರ್ಮಿಸಲು ಜನವರಿಯಲ್ಲಿ ಶಿಲಾನ್ಯಾಸ ಮಾಡಲಾಗಿತ್ತು. ದಾನಿಗಳ ದೇಣಿಗೆಯಿಂದಭಂಡಾರ ಮನೆಯ ಬಹುತೇಕ ಪೂರ್ಣಗೊಂಡಿತ್ತು. ಕ್ಷೇತ್ರದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಕೃಷ್ಣ ಶೆಟ್ಟಿ ತಾಮಾರ್‌ ಎರಡು ದಿನಗಳ ಹಿಂದಷ್ಟೇ ಆಡಳಿತವನ್ನು ಮುಜರಾಯಿ ಇಲಾಖೆಗೆ ಹಸ್ತಾಂತರಿಸಿದ್ದರು. ಅವರು ಅಧ್ಯಕ್ಷ ಸ್ಥಾನದಿಂದ ಕೆಳಗಿಳಿದ ಬೆನ್ನಲ್ಲೇ ನಿರ್ಮಾಣ ಹಂತದಲ್ಲಿದ್ದ ಭಂಡಾರ ಮನೆಯನ್ನು ನೆಲಸಮಗೊಳಿಸಲಾಗಿದೆ’ ಎಂದು ಸ್ಥಳೀಯ ಮೂಲಗಳು ತಿಳಿಸಿವೆ

’ಇಲ್ಲಿ ಮತ್ತೆ ನೂತನ ಭಂಡಾರದ ಮನೆಯನ್ನು ನಿರ್ಮಿಸಬೇಕು. ಯಾರು ಈ ಭಂಡಾರ ಮನೆಯನ್ನು ಕೆಡವಿದ್ದಾರೊ, ಅವರಿಂದಲೇ ಅದರ ವೆಚ್ಚ ಭರಿಸಬೇಕು. ದೈವಗಳ ಬೆಲೆ ಬಾಳುವ ಒಡವೆಗಳನ್ನು ಲಾಕರ್‌ನಲ್ಲಿ ಭದ್ರವಾಗಿ ಇಡುವ ವ್ಯವಸ್ಥೆ ಜಾರಿಯಾಗಬೇಕು‘ ಎಂದು ಸ್ಥಳೀಯರು ಒತ್ತಾಯಿಸಿದ್ದಾರೆ.

‘ಈ ದೈವಸ್ಥಾನಕ್ಕೆ 16 ಗುರಿಕಾರರು ಇದ್ದಾರೆ. ಹೊಸ ಭಂಡಾರ ಮನೆ ನಿರ್ಮಿಸುವ ಬಗ್ಗೆ ಎಲ್ಲ ಗುರಿಕಾರರ ಸಮ್ಮತಿ ಇರಲಿಲ್ಲ. ಅವರ ಒಪ್ಪಿಗೆ ಇಲ್ಲದೆಯೇ ಹೊಸಭಂಡಾರದ ಮನೆಯನ್ನು ಅಕ್ರಮವಾಗಿ ನಿರ್ಮಿಸಲಾಗಿದೆ. ಈ ಬಗ್ಗೆ ತಹಶೀಲ್ದಾರ್‌ ಹಾಗೂ ಉಪವಿಭಾಗಾಧಿಕಾರಿಗೆ ದೂರು ನೀಡಿದ್ದರೂ ಕ್ರಮಕೈಗೊಂಡಿರಲಿಲ್ಲ. ಹಾಗಾಗಿ ಭಂಡಾರ ಮನೆಯನ್ನು ಒಡೆದುಹಾಕಿರುವುದಾಗಿ ಆರೋಪಿಗಳು ತಿಳಿಸಿದ್ದಾರೆ’ ಎಂದು ಪೊಲೀಸ್‌ ಮೂಲಗಳು ಹೇಳಿವೆ.

ಆರೋಪಿಗಳ ವಿರುದ್ಧ ಅಕ್ರಮ ಕೂಟ ರಚನೆ, ಮಾರಕಾಸ್ತ್ರ ಬಳಸಿ ದಾಂಧಲೆ ಸೃಷ್ಟಿ, ಧಾರ್ಮಿಕ ಸ್ಥಳ ಧ್ವಂಸಗೊಳಿಸಿ ಧಾರ್ಮಿಕ ಭಾವನೆಗೆ ಧಕ್ಕೆ ಉಂಟುಮಾಡುವುದು, ಸ್ವತ್ತು ನಾಶ ಸಂಬಂಧ ಭಾರತೀಯ ದಂಡ ಸಂಹಿತೆಯ ವಿವಿಧ ಸೆಕ್ಷನ್‌ಗಳಡಿ ಹಾಗೂ ಕರ್ನಾಟಕ ಸ್ವತ್ತು ನಾಶ ಮತ್ತು ಆಸ್ತಿ ಹಾನಿ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಸ್ಥಳಕ್ಕೆ ತಹಶೀಲ್ದಾರ್‌ ಪುಟ್ಟರಾಜು, ಕೋಟೆಕಾರು ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಆನಂದ್‌, ಸಹಾಯಕ ಪೊಲೀಸ್‌ ಕಮಿಷನರ್‌ ಧನ್ಯಾ ನಾಯಕ್‌ ಭೇಟಿ ನೀಡಿ ಪರಿಶೀಲಿಸಿದರು.

ಬೇಸರ ವ್ಯಕ್ತಪಡಿಸಿದ ಖಾದರ್: ಕೊಂಡಾಣ ಕ್ಷೇತ್ರದ ಭಂಡಾರ ಮನೆಯ ನೂತನ ಕಟ್ಟಡ ಧ್ವಂಸಗೊಳಿಸಿದ ಘಟನೆಗೆ ಸಂಬಂಧಿಸಿದಂತೆ ಮಂಗಳೂರು ಕ್ಷೇತ್ರದ ಶಾಸಕರೂ ಆಗಿರುವ ವಿಧಾನ ಸಭಾಧ್ಯಕ್ಷ ಯು.ಟಿ.ಖಾದರ್ ಬೇಸರ ವ್ಯಕ್ತ ಪಡಿಸಿದ್ದಾರೆ.

‘ಈ ಘಟನೆಯು ಇಡೀ ಜಿಲ್ಲೆಗೆ ಕಪ್ಪು ಚುಕ್ಕೆ. ಇದು ಅತ್ಯಂತ ನೋವಿನ ವಿಚಾರ. ಈ ಘಟನೆಯ ಕುರಿತಾಗಿ ಯಾವುದೇ ರೀತಿಯ ಧಾರ್ಮಿಕ ಭಾವನೆಗೆ ದಕ್ಕೆ ಬಾರದ ರೀತಿಯಲ್ಲಿ ಶೀಘ್ರ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಪೊಲೀಸ್ ಇಲಾಖೆಗೆ ಸೂಚನೆ ನೀಡಿದ್ದೇನೆ’ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT